
ಪ್ರಿಯ ಓದುಗರೇ
ಮಾತು ಬರೀ ಗಾಳಿ ಅಂದುಕೊಂಡಿದ್ದೀರಾ,ಅಲ್ಲ! ಮಾತು ಒಂದು ಬೀಜ. ಯಾರ ಮನಸ್ಸಿನಲ್ಲಿ ಬಿತ್ತುತ್ತೀರೋ, ಅಲ್ಲಿ ಅದು ಮರವಾಗುತ್ತದೆ! ಹೂವಿನ ಮರವೋ, ಮುಳ್ಳಿನ ಮರವೋ, ಅದು ನೀವು ಬಿತ್ತಿದ ಮಾತಿನ ಮೇಲೆ ನಿಂತಿದೆ!
ನಾವು ದಿನಕ್ಕೆ ಸಾವಿರಾರು ಮಾತು ಆಡುತ್ತೇವೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ. ಮಕ್ಕಳಿಗೆ, ಹೆಂಡತಿಗೆ, ಗಂಡನಿಗೆ, ಕೆಲಸದವರಿಗೆ, ಅಂಗಡಿಯವನಿಗೆ. ಅದರಲ್ಲಿ ಎಷ್ಟು ಮಾತು ನಮಗೆ ನೆನಪಿರುತ್ತದೆ? ಒಂದೂ ಇಲ್ಲ! ಆದರೆ ಕೇಳಿಸಿಕೊಂಡವರ ಎದೆಯಲ್ಲಿ ಅವು ಎಷ್ಟು ವರ್ಷ ಉಳಿಯುತ್ತವೆ ಗೊತ್ತಾ? ಕೆಲವೊಮ್ಮೆ ಜೀವನಪೂರ್ತಿ!
ಈ ಸತ್ಯ ನನಗೆ ಅರ್ಥವಾದದ್ದು ಒಬ್ಬ ಹುಡುಗನ ಕಥೆಯಿಂದ. ಅವನ ಹೆಸರು ಬಸವರಾಜು!
ಹಳ್ಳಿಯ ಸರ್ಕಾರಿ ಶಾಲೆ!ಮಳೆಗಾಲದಲ್ಲಿ ಸೋರುವ ಹೆಂಚಿನ ಛಾವಣಿ! ಮುರಿದ ಕಿಟಕಿ1 ಆ ತರಗತಿಯ ಕೊನೆಯ ಬೆಂಚಿನ ಮೂಲೆಯಲ್ಲಿ ಬಸವ ಕೂರುತ್ತಿದ್ದ! ಹರಿದ ಅಂಗಿ!ಎಣ್ಣೆ ಕಾಣದ ಕೂದಲು! ಕೈಯಲ್ಲಿ ಯಾವಾಗಲೂ ಗ್ರೀಸ್‌ನ ಕಪ್ಪು ಕಲೆ! ಯಾಕೆಂದರೆ ಶಾಲೆ ಮುಗಿದ ಮೇಲೆ ಅವನು ಊರಿನ ಸೈಕಲ್ ಅಂಗಡಿಯಲ್ಲಿ ಕೂತು ಪಂಕ್ಚರ್ ಹಾಕುವುದನ್ನು ನೋಡುತ್ತಿದ್ದ!
ಗಣಿತ ಅಂದರೆ ಅವನಿಗೆ ಭಯ! ಅಂಕಿಗಳು ಬೋರ್ಡಿನ ಮೇಲೆ ಕುಣಿಯುತ್ತಿದ್ದವು. ಅವನ ತಲೆಯೊಳಗೆ ಮಾತ್ರ ಇಳಿಯುತ್ತಿರಲಿಲ್ಲ. ಪ್ರತಿ ವರ್ಷ ಫೇಲ್. ಪ್ರತಿ ವರ್ಷ ಕೆಂಪು ಶಾಯಿಯ ಗುರುತು!
ಮನೆಯಲ್ಲಿ ಅಪ್ಪ ಕೂಲಿ ಮಾಡುವ ಮನುಷ್ಯ. ದಿನವಿಡೀ ಬಿಸಿಲಿನಲ್ಲಿ ದುಡಿದು ಸುಸ್ತಾಗಿ ಬರುತ್ತಿದ್ದರು. ಮಗನ ಮಾರ್ಕ್ಸ್ ಕಾರ್ಡ್ ನೋಡಿದ ದಿನ ಸಿಟ್ಟು ಉಕ್ಕುತ್ತಿತ್ತು. “ದನ ಕಾಯೋಕೆ ಹೋಗು! ಓದು ನಿನ್ನ ತಲೆಗೆ ಹತ್ತಲ್ಲ… ನನ್ನ ಹಾಗೆ ಕೂಲಿ ಮಾಡಿ ಸಾಯ್ತೀಯ” ಅನ್ನುತ್ತಿದ್ದರು. ಅದು ಅವರ ನೋವಿನ ಮಾತು. ತಾನು ಅನುಭವಿಸಿದ ಕಷ್ಟ ಮಗನಿಗೆ ಬರಬಾರದು ಅನ್ನೋ ಭಯದ ಮಾತು. ಆದರೆ ಹತ್ತು ವರ್ಷದ ಹುಡುಗನಿಗೆ ಅದು ಭಯವಾಗಿ ಕೇಳಲಿಲ್ಲ. ಶಾಪವಾಗಿ ಕೇಳಿತು!
ಶಾಲೆಯಲ್ಲಿ ಗಣಿತದ ಮೇಷ್ಟ್ರು ಅವನನ್ನು ಹೆಸರಿಡಿದು ಕರೆಯುತ್ತಲೇ ಇರಲಿಲ್ಲ. “ಏ ಮಂಕು, ಎದ್ದು ನಿಲ್ಲು” ಅನ್ನುತ್ತಿದ್ದರು. ಇಡೀ ತರಗತಿ ಗೊಳ್ಳೆಂದು ನಗುತ್ತಿತ್ತು. ಬಸವ ತಲೆ ತಗ್ಗಿಸಿ ನಿಲ್ಲುತ್ತಿದ್ದ. ನೆಲ ನೋಡುತ್ತಿದ್ದ. ಆ ನೆಲ ಬಾಯಿ ಬಿಟ್ಟು ತನ್ನನ್ನು ನುಂಗಿಬಿಡಲಿ ಅಂತ ಆಸೆ ಪಡುತ್ತಿದ್ದ!
ಹೀಗೆ ವರ್ಷಗಟ್ಟಲೆ ಕೇಳಿ ಕೇಳಿ, ಅವನೂ ನಂಬಿಬಿಟ್ಟ. ತಾನು ಮಂಕು! ತಾನು ಯಾವುದಕ್ಕೂ ಲಾಯಕ್ಕಿಲ್ಲ. ತಾನು ಹುಟ್ಟಿದ್ದೇ ತಪ್ಪು!
ಪ್ರಿಯ ಓದುಗರೇ, ಇಲ್ಲಿ ಸ್ವಲ್ಪ ನಿಲ್ಲಿ! ಯೋಚಿಸಿ! ಯಾವ ಮಗುವೂ “ನಾನು ಮಂಕು” ಅಂತ ಹುಟ್ಟುವುದಿಲ್ಲ. ಆ ಮಾತನ್ನು ಅದಕ್ಕೆ ದೊಡ್ಡವರು ಕಲಿಸುತ್ತಾರೆ. ನಿಧಾನವಾಗಿ, ದಿನಾ ದಿನಾ, ಹನಿ ಹನಿಯಾಗಿ, ಬಂಡೆಯ ಮೇಲೆ ಬೀಳುವ ನೀರು ಒಂದೇ ದಿನದಲ್ಲಿ ಗುಂಡಿ ತೋಡುವುದಿಲ್ಲ. ವರ್ಷಗಟ್ಟಲೆ ಬಿದ್ದು ಬಿದ್ದು ಕಲ್ಲನ್ನೇ ಕೊರೆಯುತ್ತದೆ!ಕೆಟ್ಟ ಮಾತೂ ಹಾಗೇ. ಮಗುವಿನ ಮನಸ್ಸನ್ನು ಕೊರೆದು, ಅಲ್ಲಿ ತನ್ನ ಗುಂಡಿ ತೋಡುತ್ತದೆ!
ಆಗ ಶಾಲೆಗೆ ಒಬ್ಬ ಹೊಸ ಟೀಚರ್ ಬಂದರು. ಗೌರಮ್ಮ. ಕನ್ನಡ ಪಾಠ ಮಾಡುತ್ತಿದ್ದರು. ದೊಡ್ಡ ಕುಂಕುಮ. ಕಾಟನ್ ಸೀರೆ. ಮಾತು ಕಡಿಮೆ, ನಗು ಹೆಚ್ಚು. ಅವರು ಯಾವ ಮಗುವನ್ನೂ ಹೊಡೆಯುತ್ತಿರಲಿಲ್ಲ! ಬೈಯುತ್ತಲೂ ಇರಲಿಲ್ಲ!ಬರೀ ಗಮನಿಸುತ್ತಿದ್ದರು!
ಒಂದು ದಿನ ಶಾಲೆಯ ಹಳೆಯ ಗೋಡೆ ಗಡಿಯಾರ ನಿಂತುಹೋಯಿತು. ಮುಖ್ಯೋಪಾಧ್ಯಾಯರು ನೋಡಿ, “ಹೊಸದು ತರಿಸಬೇಕು, ಫಂಡ್ ಇಲ್ಲ” ಅಂತ ಸುಮ್ಮನಾದರು. ಎಲ್ಲರೂ ಅದನ್ನು ಮರೆತರು.
ಊಟದ ಬಿಡುವಿನಲ್ಲಿ ಎಲ್ಲ ಮಕ್ಕಳೂ ಆಟಕ್ಕೆ ಓಡಿದರು. ಬಸವ ಮಾತ್ರ ತರಗತಿಯಲ್ಲೇ ಉಳಿದ. ಒಂದು ಬೆಂಚು ಎಳೆದು, ಅದರ ಮೇಲೆ ಹತ್ತಿ ಗಡಿಯಾರ ಕೆಳಗಿಳಿಸಿದ. ಜೇಬಿನಿಂದ ಒಂದು ಚಿಕ್ಕ ಚಾಕು ತೆಗೆದ. ಹಿಂದಿನ ಮುಚ್ಚಳ ಬಿಚ್ಚಿದ. ಒಳಗಿನ ಸ್ಪ್ರಿಂಗ್ ಜಾರಿತ್ತು. ಒಂದು ಚಿಕ್ಕ ಹಲ್ಲಿನ ಚಕ್ರಕ್ಕೆ ಧೂಳು ಮೆತ್ತಿತ್ತು. ಅವನ ಕಣ್ಣು ಹೊಳೆಯಿತು. ಅಂಕಿಗಳು ಅವನಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ಈ ಚಕ್ರಗಳು ಅವನ ಜೊತೆ ಮಾತಾಡುತ್ತಿದ್ದವು!
ಹತ್ತು ನಿಮಿಷ. ಬರೀ ಹತ್ತು ನಿಮಿಷ. ಗಡಿಯಾರ ಮತ್ತೆ ಟಿಕ್ ಟಿಕ್ ಅನ್ನತೊಡಗಿತು.
ಬಾಗಿಲಲ್ಲಿ ನಿಂತು ಇದನ್ನೆಲ್ಲ ಗೌರಮ್ಮ ಟೀಚರ್ ನೋಡುತ್ತಿದ್ದರು. ಬಸವ ಅವರನ್ನು ನೋಡಿ ಬೆಚ್ಚಿಬಿದ್ದ. ಈಗ ಬೈಗುಳ ಬರುತ್ತದೆ ಅಂತ ಹೆದರಿ ತಲೆ ತಗ್ಗಿಸಿದ. ಅಭ್ಯಾಸ ಹಾಗಿತ್ತು!
ಟೀಚರ್ ಹತ್ತಿರ ಬಂದರು. ಅವನ ಭುಜದ ಮೇಲೆ ಮೆಲ್ಲನೆ ಕೈಯಿಟ್ಟರು. ಒಂದೇ ಮಾತು ಹೇಳಿದರು, “ಬಸವ, ನಿನ್ನ ಕೈಯಲ್ಲಿ ಬುದ್ಧಿ ಇದೆ ಕಣೋ. ಎಲ್ಲರ ಬುದ್ಧಿ ಪುಸ್ತಕದಲ್ಲಿ ಇರಲ್ಲ.”
ಅಷ್ಟೇ! ಆ ಒಂದು ಮಾತು!
ಬಸವ ತಲೆ ಎತ್ತಿದ! ಟೀಚರ್ ಮುಖ ನೋಡಿದ. ಅಲ್ಲಿ ಸಿಟ್ಟು ಇರಲಿಲ್ಲ. ಕರುಣೆಯೂ ಇರಲಿಲ್ಲ. ಇದ್ದದ್ದು ಗೌರವ! ಜೀವನದಲ್ಲಿ ಮೊದಲ ಬಾರಿ ಯಾರೋ ಅವನನ್ನು ಗೌರವದಿಂದ ನೋಡಿದ್ದರು!
ಆ ದಿನ ಸಂಜೆ ಅವನು ಮನೆಗೆ ಹೋಗುವಾಗ ತಲೆ ಎತ್ತಿ ನಡೆದ. ಗದ್ದೆಯ ಬದುವಿನ ಮೇಲೆ, ಸಂಜೆಯ ಕೆಂಪು ಆಕಾಶದ ಕೆಳಗೆ, ಹತ್ತು ವರ್ಷದ ಆ ಹುಡುಗ ಮೊದಲ ಬಾರಿ ತನ್ನನ್ನು ತಾನು ಒಬ್ಬ ಮನುಷ್ಯನಾಗಿ ನೋಡಿಕೊಂಡ!
ಒಂದು ಮಾತು ಒಂದು ಬದುಕನ್ನು ಬದಲಿಸಲು ಸಾಧ್ಯವಾ? ಅದೂ ಮನೆಯಲ್ಲಿ ದಿನಾ “ನಿನ್ನಿಂದ ಏನೂ ಆಗಲ್ಲ” ಅನ್ನೋ ಧ್ವನಿ ಕೇಳುತ್ತಿರುವಾಗ? ಆ ಹುಡುಗ ಮುಂದೆ ಏನಾದ? ಆ ಒಂದು ಮಾತಿನ ಬೀಜ ಮೊಳಕೆಯೊಡೆಯಿತಾ, ಅಥವಾ ಬಿಸಿಲಿಗೆ ಒಣಗಿ ಹೋಯಿತಾ?
ಇಪ್ಪತ್ತು ವರ್ಷದ ನಂತರ ಒಂದು ಸುಡುವ ಮಧ್ಯಾಹ್ನ ನಡೆದ ಘಟನೆ ಅದಕ್ಕೆ ಉತ್ತರ ಕೊಡುತ್ತದೆ…
(ಮುಂದಿನ ಭಾಗ ಮುಂದುವರಿಯುತ್ತದೆ…)
ಬರಹ: ಸಂತೋಷ್‌ಕುಮಾರ್ ತಂಗವೇಲು
