
ಹೂವಿನ ರಂಗೋಲಿ !ಹಚ್ಚಿಟ್ಟ ದೀಪ! ಕೇರಳದ ಕಸವು ಸೀರೆಯ ಸೊಬಗು!
ಇದು ಕೇರಳದ ಒಂದು ಹಳ್ಳಿಯ ಚಿತ್ರವಲ್ಲ. ನವೆಂಬರ್ 8ರಂದು ಕೊಡಗಿನ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರದಲ್ಲಿ ಕಂಡ ದೃಶ್ಯ.
ಕೊಡಗು ಹಿಂದೂ ಮಲಯಾಳಿ ಸಮಾಜ ತನ್ನ ಪೊನ್ನೋಣಂ ಸಂಭ್ರಮವನ್ನು ಅಲ್ಲಿ ಆಚರಿಸಿತು. ದೀಪ ಬೆಳಗಿಸಿ ಉದ್ಘಾಟಿಸಿದವರು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ. ಒಂದು ಸಮುದಾಯದ ಹಬ್ಬಕ್ಕೆ ಇನ್ನೊಂದು ಸಮುದಾಯದ ಅಧ್ಯಕ್ಷರು ದೀಪ ಹಚ್ಚಿದ್ದೇ ಅಂದಿನ ದೊಡ್ಡ ಸಂದೇಶವಾಗಿತ್ತು!
ನಮ್ಮ ಧರ್ಮ ಮತ್ತು ಜಾತಿಯನ್ನು ಪ್ರೀತಿಸುವುದರ ಜೊತೆಗೆ ಇತರ ಸಮುದಾಯಗಳನ್ನೂ ಗೌರವಿಸುವ ಉದಾತ್ತ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ವಿಚಾರಗಳು ಬೇರೆ ಬೇರೆಯಾಗಿದ್ದರೂ ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಬದುಕುವುದೇ ನಮ್ಮ ದೇಶದ ವೈಶಿಷ್ಟ್ಯ ಎಂದರು. ಸಮಾಜದ ಒಗ್ಗಟ್ಟನ್ನು ಒಡೆಯಲು ಕೆಲವು ದುಷ್ಟಶಕ್ತಿಗಳು ಪ್ರಯತ್ನಿಸುತ್ತವೆ, ಅಂಥ ಹೊತ್ತಿನಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ಕೊಡದೆ ಒಗ್ಗಟ್ಟಿನಿಂದ ಇರಬೇಕು, ಸಮಾರಂಭಗಳಲ್ಲಿ ರಾಜಕೀಯ ಬೆರೆಸದೆ ಸಮಾಜದ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಬೇಕು ಎಂದೂ ಅವರು ಹೇಳಿದರು.
ಮಕ್ಕಳ ಬಗ್ಗೆಯೂ ಅವರದು ಕಳಕಳಿಯ ಮಾತು! ಅಂಕಗಳಿಗಾಗಿ ಓದುವ ಒತ್ತಡ ಹೇರುವುದಕ್ಕಿಂತ, ಅವರಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ಹೊಣೆ ಪೋಷಕರದ್ದು ಎಂದರು. ಇತ್ತೀಚಿನ ದಿನಗಳಲ್ಲಿ ಮಕ್ಕಳ ಹವ್ಯಾಸಗಳು ಬದಲಾಗುತ್ತಿವೆ, ತಪ್ಪು ದಾರಿಗೆ ಹೋಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಉತ್ತಮ ನಡೆ ನುಡಿ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡ ಮಕ್ಕಳೇ ದೇಶದ ಭವಿಷ್ಯ ಎಂದ ಅವರು, ಮಕ್ಕಳಲ್ಲಿ ದೇಶಪ್ರೇಮ ಬೆಳೆಸಬೇಕು ಎಂದು ಸಲಹೆ ನೀಡಿದರು.
ಅದೇ ವೇದಿಕೆಯಲ್ಲಿ ಸಮಾಜದ ದಶಮಾನೋತ್ಸವದ ವಿಶೇಷ ಲಾಂಛನವನ್ನು ಅನಾವರಣಗೊಳಿಸಲಾಯಿತು. ಹತ್ತು ವರ್ಷ ತುಂಬುತ್ತಿರುವ ಸಮಾಜ ಈಗ ಹಮ್ಮಿಕೊಳ್ಳಲಿರುವ ಹತ್ತು ಪ್ರಮುಖ ಕಾರ್ಯಕ್ರಮಗಳ ಪಟ್ಟಿಯನ್ನು ಸಾಹಿತಿ ಹಾಗೂ ಸಮಾಜ ಸೇವಕಿ ಪುಷ್ಪಲತಾ ಶಿವಪ್ಪ ಅವರು ಬಿಡುಗಡೆ ಮಾಡಿದರು. ಸಮುದಾಯದ ಅಸ್ಮಿತೆ, ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ಈ ನಿಟ್ಟಿನಲ್ಲಿ ಒಗ್ಗಟ್ಟು ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಎಸ್ಎನ್ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಅವರು ಸಮಾಜದ ಮುಂದಿನ ಮೂರು ವರ್ಷಗಳ ಯೋಜನೆ ಮತ್ತು ಕಾರ್ಯಕ್ರಮಗಳ ವಿವರಗಳನ್ನು ಮುಂದಿಟ್ಟರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನೂ ನೀಡಬೇಕು, ಸಮುದಾಯದ ಜನರು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದರು. ಕೊಡಗಿನ ಜನತೆಗೆ ಯಾವುದೇ ಸಮಸ್ಯೆಗಳು ಎದುರಾದರೂ ಹಿಂದೂ ಮಲಯಾಳಿ ಸಮಾಜ ಸದಾ ನೆರವಿನ ಹಸ್ತ ಚಾಚಲಿದೆ ಎಂದು ಭರವಸೆ ನೀಡಿದರು.
ಮಲಯಾಳಿ ಚಿತ್ರನಟಿ ಪ್ರಿಯಾಂಕಾ ನಾರಾಯಣ್ ಅವರ ಮಾತಿನಲ್ಲಿ ಸ್ವಲ್ಪ ವಿಷಾದವಿತ್ತು. ನಮ್ಮ ಸಂಸ್ಕೃತಿ ಬದಲಾಗದಿದ್ದರೂ ಅದನ್ನು ಆಚರಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರಸ್ಪರ ಭೇಟಿಯಾಗಿ ಬೆರೆಯುವ ಸಂಪ್ರದಾಯ ಮರೆಯಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಪಿ. ಪ್ರಶಾಂತ್ ಕುಮಾರ್ ಅವರು ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಶರತ್ ಕಾಂತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದ ಅತ್ಯಂತ ಮನಮುಟ್ಟುವ ಕ್ಷಣ ಬಂದದ್ದು ಸನ್ಮಾನದಲ್ಲಿ. ಕಳೆದ 12 ವರ್ಷಗಳಿಂದ 1,410 ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಿಸಿಕೊಟ್ಟ ಸಮಾಜಸೇವಕ ಚೋಕಂಡ ಸಂಜು ಸುಬ್ಬಯ್ಯ ಅವರಿಗೆ ಗೌರವ ಸಲ್ಲಿಸಲಾಯಿತು. ಒಂದೆರಡು ಜೀವವಲ್ಲ, ಸಾವಿರದ ನಾನೂರಕ್ಕೂ ಹೆಚ್ಚು ಜೀವಗಳ ಬೆನ್ನಿಗೆ ನಿಂತ ಲೆಕ್ಕ ಅದು. ಅವರ ಜೊತೆಗೆ ರಕ್ತದಾನಿ ಪ್ರಿಯಾ ಮೋಹನ್, ಸಮಾಜಸೇವಕ ಹಾಗೂ ಪತ್ರಕರ್ತ ವಿ.ವಿ. ಅರುಣ್ ಕುಮಾರ್, ನಿವೃತ್ತ ಸೈನಿಕ ಕೆ.ಕೆ. ಮೋಹನ್ದಾಸ್, ಪತ್ರಕರ್ತ ಪುತ್ರಮ್ ಪ್ರದೀಪ್, ಕೆ.ಕೆ. ಸುಷಾ, ಲಿಧಿನಾ ಸುಹಾಸ್, ಟಿ.ಆರ್. ವಿನೋದ್, ರಾಮಕೃಷ್ಣ, ಟಿ.ವಿ. ಭಾಗ್ಯವತಿ ಹಾಗೂ ಪಿ.ಜಿ. ಬಿಂದು ಅವರನ್ನು ಗೌರವಿಸಲಾಯಿತು. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸದಸ್ಯರ ಮಕ್ಕಳನ್ನೂ ಸನ್ಮಾನಿಸಲಾಯಿತು.
ನಾಟ್ಯ ಕಲಾವಿದೆ ಲಿಧಿನಾ ಸುಹಾಸ್ ಅವರ ಸ್ವಾಗತ ನೃತ್ಯ, ತಿರುವಾದಿರ ನೃತ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ರಜನಿ ಮದುರಾಜನ್, ಸಮಾಜದ ಕಾರ್ಯದರ್ಶಿ ಸುಬ್ರಮಣಿ, ಶಾಜಿ ಅಚ್ಚುತ್ತನ್, ಜ್ಯೋತಿ ಅರುಣ್ ಕುಮಾರ್ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯದವರು ಉಪಸ್ಥಿತರಿದ್ದರು.
ಕಾವೇರಿಯ ನೆಲದಲ್ಲಿ ಕೊಡವರು, ಮಲಯಾಳಿಗಳು, ಗೌಡರು, ಅರೆಭಾಷೆಯವರು ಎಲ್ಲರೂ ಒಂದೇ ಮಳೆಯಲ್ಲಿ ನೆನೆದು ಬೆಳೆದವರು. ಒಬ್ಬರ ಹಬ್ಬಕ್ಕೆ ಇನ್ನೊಬ್ಬರು ದೀಪ ಹಚ್ಚುವ ಈ ಪರಂಪರೆ ಕೊಡಗಿನ ಅತಿ ದೊಡ್ಡ ಆಸ್ತಿ!ಅದನ್ನು ಉಳಿಸಿಕೊಳ್ಳುವುದು ಯಾವ ಸಮಾರಂಭದ ಭಾಷಣಕ್ಕಿಂತಲೂ ಮುಖ್ಯ!
ವರದಿ : ಕೆ.ಟಿ. ವಾತ್ಸಲ್ಯ, ಗೋಣಿಕೊಪ್ಪಲು
ಓಯಾಸಿಸ್ ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: nammaoasis@gmail.com, +91 8147424128
