
ಪ್ರಿಯ ಓದುಗರೇ, ಒಂದು ಪ್ರಶ್ನೆಯಿಂದ ಶುರು ಮಾಡೋಣ!
ಕೊನೆಯ ಬಾರಿ ನೀವು ಯಾವಾಗ ನಿಮ್ಮ ಬಗ್ಗೆ ನೀವೇ ಸಂತೋಷಪಟ್ಟಿದ್ದಿರಿ? ನೆನಪಿದೆಯಾ? ಬಹುಶಃ ಬಹಳ ದಿನವಾಗಿರಬೇಕು. ಯಾಕೆಂದರೆ ನಾವು ನಮ್ಮ ಸಂತೋಷವನ್ನು ನಮ್ಮ ಕೈಯಲ್ಲಿ ಇಟ್ಟುಕೊಳ್ಳುವುದಿಲ್ಲ. ಬೇರೆಯವರ ಕೈಯಲ್ಲಿ ಇಟ್ಟುಬಿಡುತ್ತೇವೆ!
ಬೆಳಗ್ಗೆ ಎದ್ದ ತಕ್ಷಣ ಫೋನ್ ತೆರೆಯುತ್ತೇವೆ. ಒಬ್ಬ ಗೆಳೆಯ ಹೊಸ ಕಾರು ಕೊಂಡಿದ್ದಾನೆ. ಒಬ್ಬಳು ವಿದೇಶ ಪ್ರವಾಸ ಹೋಗಿದ್ದಾಳೆ. ಇನ್ನೊಬ್ಬನಿಗೆ ದೊಡ್ಡ ಪ್ರಮೋಶನ್ ಆಗಿದೆ. ಇವೆಲ್ಲ ನೋಡಿ ನಮ್ಮ ಮನಸ್ಸು ಮೆಲ್ಲಗೆ ಕುಗ್ಗುತ್ತದೆ. “ನನ್ನ ಬದುಕು ಮಾತ್ರ ಹೀಗೇ ಇದೆ” ಅನ್ನುವ ಒಂದು ವಿಷ ಒಳಗೆ ಇಳಿಯುತ್ತದೆ.
ಒಂದು ಸತ್ಯ ಹೇಳಲಾ? ಅವರು ನಿಮಗೆ ತೋರಿಸುತ್ತಿರುವುದು ಅವರ ಬದುಕಿನ ಹಬ್ಬದ ದಿನ ಮಾತ್ರ!ಆ ಫೋಟೋದ ಹಿಂದಿನ ಕಣ್ಣೀರು! ಸಾಲ! ಜಗಳ! ಒಂಟಿತನ ಅವರು ತೋರಿಸುವುದಿಲ್ಲ. ನೀವು ನಿಮ್ಮ ಬದುಕಿನ ಕತ್ತಲೆಯ ದಿನಗಳನ್ನು, ಅವರ ಬದುಕಿನ ಬೆಳಕಿನ ಕ್ಷಣಗಳ ಜೊತೆ ಹೋಲಿಸಿ ನೊಂದುಕೊಳ್ಳುತ್ತಿದ್ದೀರಿ. ಇದು ಎಂಥ ಅನ್ಯಾಯ, ನಿಮಗೆ ನೀವೇ ಮಾಡಿಕೊಳ್ಳುತ್ತಿರುವ ಅನ್ಯಾಯ!

ನನಗೊಬ್ಬ ಗೆಳೆಯ ಇದ್ದ. ಅವನ ಹೆಸರು ಕೇಶವ. ಅವನ ತೋಟದಲ್ಲಿ ಒಂದು ಮಾವಿನ ಮರ, ಒಂದು ಬಿದಿರು. ಪ್ರತಿ ವರ್ಷ ಮಾವಿನ ಮರ ಹಣ್ಣು ಕೊಡುತ್ತಿತ್ತು. ಬಿದಿರು ಮಾತ್ರ ವರ್ಷಗಟ್ಟಲೆ ಏನೂ ಕೊಡಲಿಲ್ಲ. ಕೇಶವನಿಗೆ ಬೇಸರ. “ಈ ಬಿದಿರು ವ್ಯರ್ಥ” ಅಂತ ಕಡಿದುಹಾಕಲು ಮನಸ್ಸು ಮಾಡಿದ.
ಅವನ ತಂದೆ ತಡೆದರು. “ಸ್ವಲ್ಪ ತಾಳು ಮಗಾ” ಅಂದರು.
ನಾಲ್ಕು ವರ್ಷ ಬಿದಿರು ಕೇವಲ ತನ್ನ ಬೇರನ್ನು ಆಳಕ್ಕೆ ಇಳಿಸುತ್ತಿತ್ತು! ಮೇಲೆ ಏನೂ ಕಾಣುತ್ತಿರಲಿಲ್ಲ! ಐದನೇ ವರ್ಷ ಅದು ಬೆಳೆಯಲು ಶುರು ಮಾಡಿತು. ಕೆಲವೇ ವಾರಗಳಲ್ಲಿ ಮಾವಿನ ಮರಕ್ಕಿಂತ ಎತ್ತರ ಬೆಳೆದು ನಿಂತಿತು! ಅಷ್ಟು ದಿನ ಅದು ಸುಮ್ಮನಿರಲಿಲ್ಲ. ಕಾಣದ ಆಳದಲ್ಲಿ ಬೇರು ಗಟ್ಟಿ ಮಾಡಿಕೊಳ್ಳುತ್ತಿತ್ತು. ಕೇಶವ ಇವತ್ತಿಗೂ ಹೇಳುತ್ತಾನೆ, “ಆವತ್ತು ಕಡಿದಿದ್ದರೆ, ಆ ಸೌಂದರ್ಯ ನೋಡುತ್ತಲೇ ಇರಲಿಲ್ಲ”.
ಪ್ರಕೃತಿ ಮಾವಿನ ಮರಕ್ಕೆ ಒಂದು ಸಮಯ ಕೊಟ್ಟಿದೆ, ಬಿದಿರಿಗೆ ಬೇರೆಯದೇ ಸಮಯ ಕೊಟ್ಟಿದೆ. ಎರಡೂ ಸರಿ. ಬಿದಿರನ್ನು ನೋಡಿ ಮಾವು ಅಳಲಿಲ್ಲ. ಮಾವನ್ನು ನೋಡಿ ಬಿದಿರು ತನ್ನ ಬೇರು ಬಿಡಲಿಲ್ಲ.

ಹೂವುಗಳನ್ನು ನೋಡಿ. ಗುಲಾಬಿ ಒಂದು ಕಾಲಕ್ಕೆ ಅರಳುತ್ತದೆ!ಕಮಲ ಇನ್ನೊಂದು ಕಾಲಕ್ಕೆ! ಮಲ್ಲಿಗೆ ರಾತ್ರಿ ಅರಳುತ್ತದೆ!ಸೂರ್ಯಕಾಂತಿ ಹಗಲು! ಯಾವ ಹೂವೂ ಇನ್ನೊಂದು ಹೂವನ್ನು ನೋಡಿ, “ಅಯ್ಯೋ, ಅವಳು ನನಗಿಂತ ಮೊದಲೇ ಅರಳಿದಳಲ್ಲ” ಅಂತ ಕೊರಗುವುದಿಲ್ಲ. ಪ್ರತಿ ಹೂವೂ ತನ್ನ ಕಾಲಕ್ಕೆ, ತನ್ನ ಪರಿಮಳದಲ್ಲಿ ಅರಳುತ್ತದೆ. ನೀವೂ ಒಂದು ಹೂವು, ಪ್ರಿಯ ಓದುಗರೇ. ನಿಮ್ಮದೇ ಕಾಲ ನಿಮಗಾಗಿ ಕಾಯುತ್ತಿದೆ.
ಬೇರೆಯವರ ಗಡಿಯಾರ ನೋಡಿ ನಿಮ್ಮ ಸಮಯ ತಪ್ಪಿಸಿಕೊಳ್ಳಬೇಡಿ. ಅವರ ದಾರಿ ಅವರದ್ದು, ನಿಮ್ಮ ದಾರಿ ನಿಮ್ಮದು. ಇಬ್ಬರೂ ಬೇರೆ ಬೇರೆ ಊರಿಗೆ ಹೋಗುತ್ತಿದ್ದೀರಿ. ಹಾಗಿದ್ದ ಮೇಲೆ ಓಟದ ಸ್ಪರ್ಧೆ ಯಾಕೆ?
ಒಂದು ವಿಷಯ ಗಮನಿಸಿ. ನೀವು ಬೇರೆಯವರನ್ನು ನೋಡಿ ಕೊರಗುತ್ತಿರುವಾಗಲೇ, ಇನ್ನೊಬ್ಬ ಯಾರೋ ನಿಮ್ಮನ್ನು ನೋಡಿ, “ಅವರ ಬದುಕು ಎಷ್ಟು ಚೆನ್ನಾಗಿದೆ” ಅಂತ ಕೊರಗುತ್ತಿದ್ದಾರೆ. ನಿಮ್ಮ ಬಳಿ ಇರುವ ಆರೋಗ್ಯ, ಕುಟುಂಬ, ಕೆಲಸ, ನೆಮ್ಮದಿ, ಇವುಗಳಿಗಾಗಿ ಯಾರೋ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ನಿಮ್ಮ ಸಾಮಾನ್ಯ ದಿನ, ಇನ್ನೊಬ್ಬರ ಕನಸಾಗಿರಬಹುದು!
ಇವತ್ತು ಒಂದು ಕೆಲಸ ಮಾಡಿ ಒಂದು ಹಾಳೆ ತೆಗೆದುಕೊಳ್ಳಿ. ನಿಮ್ಮ ಬಳಿ ಈಗ ಇರುವ ಐದು ವಿಷಯಗಳನ್ನು ಬರೆಯಿರಿ. ಹತ್ತು ವರ್ಷದ ಹಿಂದೆ ನೀವು ಬಯಸಿದ್ದ, ಈಗ ನಿಮ್ಮ ಬಳಿ ಇರುವ ವಿಷಯಗಳು. ಆ ಪಟ್ಟಿ ನೋಡಿ. ಆಗ ಗೊತ್ತಾಗುತ್ತದೆ, ಇಂದಿನ ನಿಮ್ಮ ಬದುಕು, ನಿನ್ನೆಯ ನಿಮ್ಮದೇ ಕನಸಾಗಿತ್ತು ಅಂತ!
ನಿಮ್ಮ ಜೊತೆ ನಿಮ್ಮನ್ನೇ ಹೋಲಿಸಿಕೊಳ್ಳಿ. ನಿನ್ನೆಗಿಂತ ಇವತ್ತು ಸ್ವಲ್ಪ ಒಳ್ಳೆಯವರಾದರೆ ಸಾಕು. ಅದೇ ನಿಜವಾದ ಗೆಲುವು.
ಬೇರೆಯವರ ತೋಟ ಎಷ್ಟೇ ಹಸಿರಾಗಿ ಕಾಣಲಿ, ನಿಮ್ಮ ಮರಕ್ಕೆ ನೀವೇ ನೀರು ಹಾಕಬೇಕು!
ಆ ಬಿದಿರಿನಂತೆ, ನಿಮ್ಮ ಕಾಲವೂ ಬಂದೇ ಬರುತ್ತದೆ. ಸ್ವಲ್ಪ ತಾಳಿ!
ಬರಹ: ಸಂತೋಷ್ಕುಮಾರ್ ತಂಗವೇಲು

