ನಾರಿ ಶಕ್ತಿಯ ವಿಜೃಂಭಣೆ: ಗೋಣಿಕೊಪ್ಪ ಮಹಿಳಾ ದಸರಾದ ಹನ್ನೊಂದನೇ ಸಂಭ್ರಮದ ಕಳೆಗಟ್ಟು!

ಗೋಣಿಕೊಪ್ಪ: ವರ್ಷವಿಡೀ ಕುಟುಂಬದ ಜವಾಬ್ದಾರಿ ಹೊತ್ತು, ಮನೆಯ ಒಳಗೆ ಮತ್ತು ಹೊರಗೆ ಅವಿರತ ದುಡಿಯುವ ಮಹಿಳೆಯರಿಗೆ ಒಂದು ಸಂಪೂರ್ಣ ದಿನವನ್ನು ಸಮರ್ಪಿಸಿ, ಅವರ ಪ್ರತಿಭೆ, ಆತ್ಮವಿಶ್ವಾಸ ಮತ್ತು ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸಿದ ಗೋಣಿಕೊಪ್ಪ ದಸರಾ ಸಮಿತಿಯು ಕಳೆದ ಹನ್ನೊಂದು ವರ್ಷಗಳಿಂದ ಈ ಅಪರೂಪದ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವುದು ಇಡೀ ಕೊಡಗಿಗೆ ಒಂದು ಹೆಮ್ಮೆಯ ವಿಷಯ!

ಗೋಣಿಕೊಪ್ಪದ 48ನೇ ದಸರಾ ಮಹೋತ್ಸವದ ಅಂಗವಾಗಿ ಆಯೋಜನೆಗೊಂಡ ಈ ಬಾರಿಯ ಮಹಿಳಾ ದಸರಾ, ಕಾವೇರಿ ಕಲಾ ವೇದಿಕೆಯಲ್ಲಿ ಅದ್ಧೂರಿಯಾಗಿ ಜರುಗಿತು. ಕ್ರೀಡೆ, ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಉದ್ಯಮಶೀಲ ಮಾರುಕಟ್ಟೆ, ಹೀಗೆ ಹಲವು ಆಯಾಮಗಳಲ್ಲಿ ಮಹಿಳೆಯರು ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿ, ಈ ದಸರಾಕ್ಕೆ ಹೊಸ ಮೆರಗನ್ನು ತಂದರು. ಇಡೀ ಕಾರ್ಯಕ್ರಮದ ಉದ್ದಕ್ಕೂ ಮಹಿಳೆಯರ ಆತ್ಮವಿಶ್ವಾಸ, ಧೈರ್ಯ, ಆದರ್ಶ ಮತ್ತು ಒಗ್ಗಟ್ಟಿನ ಬಲ ಎದ್ದು ಕಾಣುತ್ತಿತ್ತು.

ಆರ್ಥಿಕ ಸ್ವಾವಲಂಬನೆಗೆ ವೇದಿಕೆ:

ಮಹಿಳೆಯರನ್ನು ಉದ್ಯಮ ರಂಗದಲ್ಲಿ ಮುಂಚೂಣಿಗೆ ತರುವ ಉದಾತ್ತ ಉದ್ದೇಶದಿಂದ ಕಾವೇರಿ ಕಲಾ ವೇದಿಕೆಯಲ್ಲಿ ವಿಶೇಷ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಮಹಿಳೆಯರೇ ತಯಾರಿಸಿದ ಕಾಚ್ಚುಬುಲಿ, ವಿವಿಧ ಬಗೆಯ ಸಾಂಪ್ರದಾಯಿಕ ತಿನಿಸುಗಳು, ಕರಕುಶಲ ವಸ್ತುಗಳು, ಸೃಜನಶೀಲ ಉತ್ಪನ್ನಗಳು, ಈ ಎಲ್ಲವೂ ಮಾರುಕಟ್ಟೆಯಲ್ಲಿ ಎಲ್ಲರ ಗಮನ ಸೆಳೆದವು. ಆರ್ಥಿಕವಾಗಿ ಸ್ವಾವಲಂಬನೆಯ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ಮಹಿಳೆಯರ ಆತ್ಮಸ್ಥೈರ್ಯಕ್ಕೆ ಈ ಮಳಿಗೆಗಳು ಕನ್ನಡಿ ಹಿಡಿದಂತಿದ್ದವು. ಕೈಚಳಕದಿಂದ ಹುಟ್ಟಿದ ಪ್ರತಿಯೊಂದು ಉತ್ಪನ್ನದ ಹಿಂದೆಯೂ ಒಂದು ಕನಸಿತ್ತು, ಒಂದು ಹೋರಾಟವಿತ್ತು, ಒಂದು ಗೆಲುವಿತ್ತು.

ಕ್ರೀಡಾ ಕ್ಷೇತ್ರದಲ್ಲಿ ಬೀಗಿದ ಮಹಿಳಾ ಶಕ್ತಿ:

ಅಡುಗೆ ಮನೆಯಿಂದ ಕ್ರೀಡಾಂಗಣದವರೆಗೂ ಮಹಿಳೆ ತನ್ನ ಛಾಪು ಮೂಡಿಸಬಲ್ಲಳು ಎಂಬುದನ್ನು ಈ ದಸರಾ ಮತ್ತೊಮ್ಮೆ ಸಾಬೀತು ಪಡಿಸಿತು. ಥ್ರೋಬಾಲ್, ಹಗ್ಗಜಗ್ಗಾಟ, ಕಪ್ ಜೋಡಣೆ, ಬಾಂಬ್ ಇನ್ ದ ಸಿಟಿ ಮುಂತಾದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಮಹಿಳೆಯರು ಅಪಾರ ಉತ್ಸಾಹದಿಂದ ಪಾಲ್ಗೊಂಡರು. ಹಗ್ಗಜಗ್ಗಾಟದಲ್ಲಿ ಕಂಡುಬಂದ ಸಾಮೂಹಿಕ ಶಕ್ತಿ ಮತ್ತು ಒಗ್ಗಟ್ಟಿನ ಪ್ರದರ್ಶನ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿತು!ಥ್ರೋಬಾಲ್‌ನಲ್ಲಿ ತೋರಿದ ಕ್ರೀಡಾ ಕೌಶಲ!ಕಪ್ ಜೋಡಣೆಯಲ್ಲಿ ಕಂಡ ಏಕಾಗ್ರತೆ! ಸಮಯ ಪ್ರಜ್ಞೆ ಮತ್ತು ಚುರುಕುತನ, ಇವೆಲ್ಲವೂ ಮಹಿಳೆಯರ ಬಹುಮುಖ ಸಾಮರ್ಥ್ಯಕ್ಕೆ ಜೀವಂತ ಸಾಕ್ಷಿಯಾದವು.

ಜಾನಪದದ ನಾದ, ರೆಟ್ರೋ ನೃತ್ಯದ ಮೆರುಗು:

ಸಾಂಸ್ಕೃತಿಕ ಕಾರ್ಯಕ್ರಮ ಈ ಬಾರಿಯ ದಸರಾಕ್ಕೆ ವಿಶೇಷ ಮೆರುಗು ನೀಡಿತು. ಜಾನಪದ ಗೀತೆಗಳ ಮಾಧುರ್ಯ!ರೆಟ್ರೋ ಶೈಲಿಯ ಗುಂಪು ನೃತ್ಯಗಳು! ವೈವಿಧ್ಯಮಯ ವೇಷಭೂಷಣ ಸ್ಪರ್ಧೆಗಳು! ಇವೆಲ್ಲವೂ ಪ್ರೇಕ್ಷಕರ ಕಣ್ಣನ್ನು ತುಂಬಿಸಿದವು. ಹಳೆಯ ಸಿನಿಮಾ ಹಾಡುಗಳಿಗೆ ಮಹಿಳೆಯರು ಹೆಜ್ಜೆ ಹಾಕಿದಾಗ, ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದ್ದು ಈ ಕಾರ್ಯಕ್ರಮದ ವಿಶೇಷ. ಹಾಡು, ನೃತ್ಯ ಮತ್ತು ವಿಭಿನ್ನ ವೇಷಭೂಷಣಗಳ ಮೂಲಕ ಮಹಿಳೆಯರು ತಮ್ಮ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಾಂಸ್ಕೃತಿಕ ವೈವಿಧ್ಯ ಮತ್ತು ಮನರಂಜನೆಯ ಈ ಸಂಗಮ ಇಡೀ ಕಾರ್ಯಕ್ರಮಕ್ಕೆ ಜೀವಕಳೆಯನ್ನು ತಂದಿತು.

ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆ:

ಕಾವೇರಿ ಕಲಾ ವೇದಿಕೆಯ ಮಹಿಳಾ ದಸರಾದ ಅಧ್ಯಕ್ಷೆ ಶ್ರೀಮತಿ ಎಂ. ಮಂಜುಳ ಅವರ ಸಮ್ಮುಖದಲ್ಲಿ, ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಶ್ರೀ ಕುಲ್ಲಚಂಡ ಪ್ರಮೋದ್ ಗಣಪತಿ ಅವರು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಯಿತು.

ಮಹಿಳಾ ದಸರಾ ಕಾರ್ಯದರ್ಶಿ ಸುನಿತಾ, ಪದಾಧಿಕಾರಿಗಳಾದ ಚಂದನ ಮಂಜುನಾಥ್, ಮನೆಯಪಂಡ ಶಿಲಾ ಬೋಪಣ್ಣ, ಓಮನ ಅಲಿಮಾ, ಕಾಡ್ಯಮಾಡ ಕುಸುಮ ಜೋಯಪ್ಪ, ನೂರೇರ ಧನ್ಯ, ಕೋಳೇರ ಭಾರತಿ, ಮೂಕಳೇರ ಆಶಾ ಪೂಣಚ್ಚ, ಪಂಕಜ, ಆಶಾ ಜಮ್ಮನ್, ಸಫೂರಾಬಾನು, ಸುಶೀಲಾ, ಯಾಸ್ಮಿನ್, ಸಮಿತಿಯ ಸಂಚಾಲಕ ದಿಲನ್ ಚಂಗಪ್ಪ, ಸಂಯೋಜಕ ಚಂದನ್ ಕಾಮತ್, ಉಪಾಧ್ಯಕ್ಷ ನಾಯಂದಿರ ಶಿವಾಜಿ ಹಾಗೂ ಶೋಭಿತ್ ಸೇರಿದಂತೆ ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಹಿಳಾ ದಸರಾ ಎಂಬ ಆಂದೋಲನ:

ಕಳೆದ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಗೋಣಿಕೊಪ್ಪ ದಸರಾ ಸಮಿತಿಯು ಈ ಮಹಿಳಾ ದಸರಾವನ್ನು ನಡೆಸಿಕೊಂಡು ಬರುತ್ತಿದೆ ಎಂಬುದು ಸಣ್ಣ ಸಾಧನೆಯಲ್ಲ! ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಮಹಿಳಾ ಸಬಲೀಕರಣದ ಒಂದು ಆಂದೋಲನ. ಅಡುಗೆ ಮನೆಯ ನಾಲ್ಕು ಗೋಡೆಗಳ ಒಳಗೇ ಕಳೆದುಹೋಗಬಹುದಾಗಿದ್ದ ಪ್ರತಿಭೆಗಳಿಗೆ ಈ ಸಮಿತಿಯು ಒಂದು ವೇದಿಕೆಯನ್ನು ಸೃಷ್ಟಿಸಿದೆ. “ನೀನು ಕೇವಲ ಮನೆಯ ಗೃಹಿಣಿಯಲ್ಲ, ನೀನು ಕ್ರೀಡಾಪಟುವೂ ಹೌದು, ಕಲಾವಿದಳೂ ಹೌದು, ಉದ್ಯಮಿಯೂ ಹೌದು” ಎಂಬ ಸಂದೇಶವನ್ನು ಪ್ರತಿ ಮಹಿಳೆಗೂ ಈ ಮಹಿಳಾ ದಸರಾ ಸಾರುತ್ತಿದೆ.

ಕೊಡಗಿನ ಪ್ರತಿ ಊರಿನಲ್ಲೂ ಇಂತಹ ಮಹಿಳಾ ವೇದಿಕೆಗಳು ಹುಟ್ಟಬೇಕು. ಗೋಣಿಕೊಪ್ಪದ ಈ ಮಾದರಿ ಇಡೀ ಕರ್ನಾಟಕಕ್ಕೆ ಒಂದು ಪ್ರೇರಣೆಯಾಗಬೇಕು. ಏಕೆಂದರೆ ಮಹಿಳೆ ಬೆಳೆದರೆ ಕುಟುಂಬ ಬೆಳೆಯುತ್ತದೆ!ಕುಟುಂಬ ಬೆಳೆದರೆ ಊರು ಬೆಳೆಯುತ್ತದೆ! ಊರು ಬೆಳೆದರೆ ನಾಡು ಬೆಳೆಯುತ್ತದೆ!

ಓಯಾಸಿಸ್ ಪತ್ರಿಕೆ ಗೋಣಿಕೊಪ್ಪ ದಸರಾ ಸಮಿತಿಗೆ, ಕಾವೇರಿ ಕಲಾ ವೇದಿಕೆಗೆ, ಹಾಗೂ ಈ ಮಹಿಳಾ ದಸರಾದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಮಹಿಳೆಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತದೆ. ಈ ಪರಂಪರೆ ಮುಂದಿನ ಹಲವು ದಶಕಗಳವರೆಗೆ ಮುಂದುವರಿಯಲಿ ಎಂದು ಹಾರೈಸುತ್ತದೆ.

ವರದಿ: ವಾತ್ಸಲ್ಯ ಕೆ.ಟಿ, ಗೋಣಿಕೊಪ್ಪಲು

Leave a Comment

Your email address will not be published. Required fields are marked *

Scroll to Top