ಅಭಿಮನ್ಯು ಮುಂದೆ ನಡೆದರೂ ಚಿನ್ನದ ಅಂಬಾರಿ ಹೊರುವವನು ಪ್ರಶಾಂತ!!!

ಮೈಸೂರು: ಅರಮನೆಯ ಅಂಗಳದಲ್ಲಿ ಈ ವರ್ಷ ಒಂದು ಯುಗ ಬದಲಾಗುತ್ತಿದೆ. ಸತತ ಆರು ವರ್ಷ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಸಾಗಿದ ಅಭಿಮನ್ಯು, ಅರವತ್ತು ವರ್ಷ ತುಂಬಿದ ಕಾರಣ ಆ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ! ಅಕ್ಟೋಬರ್ 21, ವಿಜಯದಶಮಿಯಂದು ನಡೆಯುವ ಜಂಬೂಸವಾರಿಯಲ್ಲಿ ಅಂಬಾರಿಯ ಹೊಣೆ ಹೊರುವವನು ಪ್ರಶಾಂತ ಎಂಬ ಆನೆ!

ಅಭಿಮನ್ಯು ಈ ಬಾರಿ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಮುಂದೆ ಸಾಗುತ್ತಾನೆ. ಗೋಪಿ ನೌಫತ್ , ಮಹೇಂದ್ರ ಮತ್ತು ಲಕ್ಷ್ಮಿ, ಶ್ರೀರಾಮ, ಚಿತ್ರಾ ಮತ್ತು ಸುಗ್ರೀವ, ಶ್ರೀಕಂಠ ಮತ್ತು ಏಕಲವ್ಯ ಮೂರು ತಂಡಗಳಲ್ಲಿ ಸಾಲಾನೆಗಳಾಗಿ ನಡೆಯಲಿವೆ. ಒಟ್ಟು ಹದಿಮೂರು ಆನೆಗಳು ಈ ವರ್ಷದ ಸವಾರಿಯಲ್ಲಿ ಭಾಗವಹಿಸುತ್ತಿವೆ. ಅಂಬಾರಿಯ ತೂಕಕ್ಕೆ ಸರಿಸಮನಾದ ಭಾರ ಹೊರಲು ಮಹೇಂದ್ರ, ಧನಂಜಯ, ಏಕಲವ್ಯ ಮತ್ತು ಸುಗ್ರೀವ ಆನೆಗಳಿಗೆ ತರಬೇತಿ ನೀಡಲಾಗಿದೆ!

ಈ ತಾಲೀಮು ಒಂದೆರಡು ದಿನದ ಕೆಲಸವಲ್ಲ. ಆಗಸ್ಟ್ 26ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಮೊದಲ ತಂಡದ ಒಂಬತ್ತು ಆನೆಗಳು ಮೈಸೂರಿಗೆ ಹೊರಟವು. ಆಗಸ್ಟ್ 28ರಂದು ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ ಸಿಕ್ಕಿತು. ಆಗಸ್ಟ್ 30ರಿಂದ ವಿಶೇಷ ಪೌಷ್ಟಿಕ ಆಹಾರ, ಜನಜಂಗುಳಿ ಮತ್ತು ದಾರಿಯ ತರಬೇತಿ ಶುರುವಾಯಿತು. ಸೆಪ್ಟೆಂಬರ್ 6ರಿಂದ ಭಾರ ಹೊರುವ ತರಬೇತಿ, ಸೆಪ್ಟೆಂಬರ್ 25ರಿಂದ ಮರದ ಅಂಬಾರಿ ತಾಲೀಮು, ಅಕ್ಟೋಬರ್ 7, 9 ಮತ್ತು 12ರಂದು ಫಿರಂಗಿ ಸದ್ದಿಗೆ ಹೊಂದಿಕೊಳ್ಳುವ ಅಭ್ಯಾಸ ನಡೆಯಿತು. ಸೆಪ್ಟೆಂಬರ್ 13ರಂದು ಸುಗ್ರೀವ, ರೂಪಾ ಮತ್ತು ಚೈತ್ರಾ ಎರಡನೇ ತಂಡದಲ್ಲಿ ಬಂದು ಸೇರಿದವು.

ಅಂತಿಮ ತಾಲೀಮಿನಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್. ರವಿಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಬಿ. ಪ್ರಭುಗೌಡ ಮತ್ತು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪುಷ್ಪನಮನ ಸಲ್ಲಿಸಿದರು. ಮೈಸೂರು ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆಯ ಜೊತೆಗೆ ಈ ಬಾರಿ ಮೊದಲ ಬಾರಿಗೆ ತಾಲೀಮಿನಲ್ಲಿ ವಂದೇ ಮಾತರಂ ನುಡಿಸಿತು.

ಜಂಬೂಸವಾರಿಯ ಕೊನೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುಷ್ಪಾರ್ಚನೆ ಮಾಡಲಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದ ಮುಖ್ಯಮಂತ್ರಿಗಳೂ ವೇದಿಕೆಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಚಾಮುಂಡೇಶ್ವರಿಗೆ ಪುಷ್ಪಾರ್ಚನೆಯ ವೇಳೆ ಇಪ್ಪತ್ತೊಂದು ಫಿರಂಗಿ ಸುತ್ತು ಸಿಡಿಸಲಾಗುತ್ತದೆ.

ಇದೇ ದಿನ ನಮ್ಮ ಕೊಡಗಿನ ಮಡಿಕೇರಿಯಲ್ಲೂ ವಿಜಯದಶಮಿಯ ಶೋಭಾಯಾತ್ರೆ ನಡೆಯಲಿದೆ. ಹತ್ತು ದಶಮಂಟಪಗಳ ಮೆರವಣಿಗೆಗೆ ಮಡಿಕೇರಿ ಸಜ್ಜಾಗುತ್ತಿದ್ದು, ಪೊಲೀಸರು ಭದ್ರತೆ ಮತ್ತು ಸಂಚಾರ ನಿಯಮಗಳನ್ನು ಬಿಗಿಗೊಳಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಒಂದು ಯುಗ ಮುಗಿಯುವ ಜಾಗದಲ್ಲಿ ಇನ್ನೊಂದು ಶುರುವಾಗುತ್ತದೆ. ಅಭಿಮನ್ಯು ಅಂಬಾರಿ ಹೊತ್ತ ಆರು ವರ್ಷಗಳು ಮೈಸೂರು ದಸರಾದ ಇತಿಹಾಸದಲ್ಲಿ ನೆನಪಾಗಿ ಉಳಿಯುತ್ತವೆ! ಈಗ ಪ್ರಶಾಂತನ ಸರದಿ! ಮುಂದೆ ನಿಶಾನೆಯಾಗಿ ಸಾಗುವ ಅಭಿಮನ್ಯುವಿನ ಹೆಜ್ಜೆಯಲ್ಲಿ ಅನುಭವದ ಗಾಂಭೀರ್ಯ, ಹಿಂದೆ ಅಂಬಾರಿ ಹೊತ್ತು ಬರುವ ಪ್ರಶಾಂತನ ಹೆಜ್ಜೆಯಲ್ಲಿ ಹೊಸ ತಲೆಮಾರಿನ ಹೊಣೆ. ನಾಡಿನ ಲಕ್ಷಾಂತರ ಜನರ ಕಣ್ಣು ನಾಳೆ ಮೈಸೂರಿನ ರಾಜಬೀದಿಯ ಮೇಲಿರುತ್ತದೆ.

ಓಯಾಸಿಸ್ ಓದುಗರಿಗೆ ವಿಜಯದಶಮಿಯ ಶುಭಾಶಯಗಳು.

ವರದಿ : ಒಯಾಸಿಸ್ ಸುದ್ದಿ ಮನೆ

Leave a Comment

Your email address will not be published. Required fields are marked *

Scroll to Top