
ನಮ್ಮ ಜೀವನವೆಂಬ ಪುಸ್ತಕದಲ್ಲಿ ಸಾವಿರಾರು ನೆನಪುಗಳೆಂಬ ಪುಟಗಳು ತುಂಬಿಹೋಗಿವ!ಅದೇ ರೀತಿ ನೆನಪು ಮರುಕಳಿಸುತ್ತಿರುತ್ತವೆ! ನಾವು ಓಡುತ್ತಿರುತ್ತೇವೆ. ಎಲ್ಲಿಗೆ ಎಂದು ಗೊತ್ತಿರುವುದಿಲ್ಲ! ಆ ಓಟದಲ್ಲಿ ಹಲವು ವಿಷಯಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ!
ನಾವೆಲ್ಲ ಹೀಗೇ ಆಗಿಬಿಟ್ಟಿದ್ದೇವೆ. ಸುಮ್ಮನೆ ಕೂರುವುದಕ್ಕೂ ನಮಗೆ ಅಪರಾಧ ಪ್ರಜ್ಞೆ. “ಅಯ್ಯೋ, ಸಮಯ ವ್ಯರ್ಥ ಮಾಡುತ್ತಿದ್ದೇನೆ” ಅನ್ನುವ ಭಯ!
ಬೆಳಗ್ಗೆ ಎದ್ದ ಕ್ಷಣದಿಂದ ಓಡಲು ಶುರು ಮಾಡುತ್ತೇವೆ. ಗಡಿಯಾರ ನೋಡುತ್ತಾ ಹಲ್ಲುಜ್ಜುತ್ತೇವೆ. ಫೋನ್ ನೋಡುತ್ತಾ ಊಟ ಮಾಡುತ್ತೇವೆ. ಒಂದು ಕೆಲಸ ಮುಗಿಯುವ ಮೊದಲೇ ಇನ್ನೊಂದರ ಬಗ್ಗೆ ಯೋಚಿಸುತ್ತೇವೆ. ಕೊನೆಗೆ ರಾತ್ರಿ ದಿಂಬಿಗೆ ತಲೆ ಇಟ್ಟಾಗ, “ಇವತ್ತು ಏನು ಮಾಡಿದೆ?” ಅಂತ ಕೇಳಿಕೊಂಡರೆ ಉತ್ತರ ಇರುವುದಿಲ್ಲ. ಓಡಿದ್ದೇವೆ, ಆದರೆ ಎಲ್ಲಿಗೆ ಅಂತ ಗೊತ್ತಿಲ್ಲ!
ನನಗೆ ಗೊತ್ತಿದ್ದ ಒಬ್ಬ ಅಂಗಡಿಯವನಿದ್ದ. ಹೆಸರು ಮುಸ್ತಫಾ. ಬೆಳಗ್ಗೆ ಆರಕ್ಕೆ ಅಂಗಡಿ ತೆರೆದರೆ ರಾತ್ರಿ ಹನ್ನೆರಡರವರೆಗೆ ಕೆಲಸ. “ಇನ್ನೊಂದು ವರ್ಷ ಕಷ್ಟಪಟ್ಟರೆ ಸಾಕು, ಆಮೇಲೆ ಆರಾಮವಾಗಿ ಬದುಕುತ್ತೇನೆ” ಅನ್ನುತ್ತಿದ್ದ. ಆ “ಇನ್ನೊಂದು ವರ್ಷ” ಹತ್ತು ವರ್ಷ ಆಯಿತು!
ಒಂದು ದಿನ ಅವನ ಪುಟ್ಟ ಮಗಳು ಒಂದು ಚಿತ್ರ ಬಿಡಿಸಿ ತಂದಳು. ಅದರಲ್ಲಿ ಅಮ್ಮ, ಮಗಳು, ಮನೆ, ಮರ ಇತ್ತು. ಅಪ್ಪ ಇರಲಿಲ್ಲ. ಮುಸ್ತಫಾ ಕೇಳಿದ, “ನಾನೆಲ್ಲಿ ಪುಟ್ಟಾ?” ಮಗಳು ಮುಗ್ಧವಾಗಿ ಹೇಳಿದಳು, “ನೀನು ಯಾವಾಗಲೂ ಅಂಗಡಿಯಲ್ಲಿ ಇರ್ತೀಯಲ್ಲ ಅಪ್ಪಾ, ಅದಕ್ಕೆ ಬಿಡಿಸಲಿಲ್ಲ!
ಆ ಒಂದು ಮಾತು ಮುಸ್ತಫಾನ ಎದೆಗೆ ಚೂರಿಯಂತೆ ನಾಟಿತು, ಪ್ರಿಯ ಓದುಗರೇ. ಅವನು ಕುಟುಂಬಕ್ಕಾಗಿ ಓಡುತ್ತಿದ್ದ. ಆದರೆ ಆ ಓಟದಲ್ಲಿ ಅದೇ ಕುಟುಂಬವನ್ನು ಕಳೆದುಕೊಳ್ಳುತ್ತಿದ್ದ. ಮಗಳ ಬಾಲ್ಯ ಮತ್ತೆ ಬರುವುದಿಲ್ಲ. ಆ ಚಿತ್ರದಲ್ಲಿ ಅಪ್ಪನ ಜಾಗ ಖಾಲಿಯಾಗಿಯೇ ಉಳಿಯುತ್ತದೆ!

ನದಿಯನ್ನು ನೋಡಿ, ಅದು ಸಮುದ್ರಕ್ಕೆ ಹೋಗಲು ಅವಸರಪಡುವುದಿಲ್ಲ! ದಾರಿಯಲ್ಲಿ ಹೂವಿಗೆ ನೀರು ಕೊಡುತ್ತದೆ!ಮೀನಿಗೆ ಮನೆಯಾಗುತ್ತದೆ! ದಣಿದವನಿಗೆ ತಂಪು ಕೊಡುತ್ತದೆ! ಆ ಪ್ರಯಾಣದಲ್ಲೇ ಅದರ ಬದುಕಿದೆ. ಸಮುದ್ರ ಸೇರುವುದು ಗುರಿ ಅಲ್ಲ, ಹರಿಯುವುದೇ ಬದುಕು!
ನಾವು ಮಾತ್ರ ಗುರಿಯನ್ನೇ ಬದುಕು ಅಂದುಕೊಂಡಿದ್ದೇವೆ. “ಅದು ಸಿಕ್ಕ ಮೇಲೆ ಸಂತೋಷವಾಗಿರುತ್ತೇನೆ” ಅನ್ನುತ್ತೇವೆ. ಆ ಪದವಿ ಸಿಕ್ಕ ಮೇಲೆ, ಆ ಮನೆ ಕಟ್ಟಿದ ಮೇಲೆ, ಆ ಕಾರು ಕೊಂಡ ಮೇಲೆ, ಒಂದು ಗುರಿ ಮುಟ್ಟಿದ ತಕ್ಷಣ ಇನ್ನೊಂದು ಹುಟ್ಟಿಕೊಳ್ಳುತ್ತದೆ. ಆ ಸಂತೋಷ ಎಂದಿಗೂ ಬರುವುದಿಲ್ಲ. ಯಾಕೆಂದರೆ ಸಂತೋಷ ಒಂದು ನಿಲ್ದಾಣ ಅಲ್ಲ, ಅದು ಪ್ರಯಾಣ ಮಾಡುವ ರೀತಿ!
ಮರ ಬೆಳೆಯುವುದನ್ನು ನೋಡಿ. ಅದು ಅವಸರ ಮಾಡುವುದಿಲ್ಲ. ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತದೆ, ಮಳೆಗಾಲದಲ್ಲಿ ಚಿಗುರುತ್ತದೆ. ಅದಕ್ಕೆ ಗೊತ್ತು, ಪ್ರತಿಯೊಂದಕ್ಕೂ ಒಂದು ಕಾಲವಿದೆ ಅಂತ. ಸದಾ ಓಡುವ ಮರ ಅಂತ ಪ್ರಕೃತಿಯಲ್ಲಿ ಎಲ್ಲಿದೆ? ವಿಶ್ರಾಂತಿಯೂ ಬೆಳವಣಿಗೆಯ ಒಂದು ಭಾಗ! ನಾವು ಮಾತ್ರ ವಿಶ್ರಾಂತಿಯನ್ನು ಸೋಮಾರಿತನ ಅಂದುಕೊಂಡಿದ್ದೇವೆ!
ಒಂದು ಕಹಿ ಸತ್ಯ ಹೇಳಲಾ? ನಿಮ್ಮ ಅಂತ್ಯಕ್ರಿಯೆಯ ದಿನ ಯಾರೂ “ಅವರು ಬಹಳ ಕೆಲಸ ಮಾಡಿದರು, ಬಹಳ ಬ್ಯುಸಿ ಇದ್ದರು” ಅಂತ ಹೇಳುವುದಿಲ್ಲ. “ಅವರ ಜೊತೆ ಕಳೆದ ಆ ಕ್ಷಣಗಳು ನೆನಪಾಗುತ್ತವೆ” ಅಂತ ಹೇಳುತ್ತಾರೆ. ನಾವು ಕೂಡಿಡುವ ಸಂಪತ್ತಲ್ಲ, ಹಂಚುವ ಪ್ರೀತಿಯಲ್ಲಿ ನಮ್ಮ ನೆನಪು ಉಳಿಯುತ್ತದೆ!
ಇವತ್ತು ಒಂದು ಕೆಲಸ ಮಾಡಿ. ದೊಡ್ಡ ಕೆಲಸ ಬೇಡ. ಹದಿನೈದು ನಿಮಿಷ ಫೋನ್ ಪಕ್ಕಕ್ಕಿಡಿ. ಟಿವಿ ಆಫ್ ಮಾಡಿ. ಒಂದು ಕಪ್ ಚಹಾ ಹಿಡಿದು ಕಿಟಕಿಯ ಬಳಿ ಕೂತುಕೊಳ್ಳಿ. ಹೊರಗೆ ಮರ ಗಾಳಿಗೆ ತೂಗುವುದನ್ನು ನೋಡಿ! ಆ ಹದಿನೈದು ನಿಮಿಷ ವ್ಯರ್ಥ ಅಲ್ಲ! ಅದೇ ನಿಜವಾದ ಬದುಕು!
ಮನೆಯಲ್ಲಿ ಯಾರಾದರೂ ನಿಮ್ಮ ಸಮಯಕ್ಕಾಗಿ ಕಾಯುತ್ತಿದ್ದರೆ, ಅವರ ಬಳಿ ಹೋಗಿ ಕೂತುಕೊಳ್ಳಿ. ನಾಳೆ ಮಾಡಿದರಾಯಿತು ಅನ್ನಬೇಡಿ. ಆ ಮಗಳ ಚಿತ್ರದಲ್ಲಿ ನಿಮ್ಮ ಜಾಗ ಖಾಲಿ ಉಳಿಯುವ ಮೊದಲು, ಆ ಚಿತ್ರದೊಳಗೆ ಹೋಗಿ ನಿಂತುಕೊಳ್ಳಿ!
ಓಟ ಮುಖ್ಯ ಅಲ್ಲ! ಎಲ್ಲಿಗೆ, ಯಾರ ಜೊತೆ ಓಡುತ್ತಿದ್ದೀರಿ ಅನ್ನುವುದು ಮುಖ್ಯ
ಸ್ವಲ್ಪ ನಿಧಾನಿಸಿ. ಬದುಕು ನಿಮ್ಮ ಪಕ್ಕದಲ್ಲೇ ಕಾಯುತ್ತಿದೆ!
ಬರಹ: ಸಂತೋಷ್‌ಕುಮಾರ್ ತಂಗವೇಲು

