ಭಾವನಾತ್ಮಕ ಅತ್ಯಾಚಾರ (Emotional Athyachara)!!

ಪ್ರಿಯ ಓದುಗರೇ, ಇವತ್ತು ದಿನ ಬೆಳಗಾದರೆ ಸಾಕು, ಕೆಲವೊಂದು ಘಟನೆಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತವೆ.

ಒಬ್ಬನಿಗೆ ಮದುವೆಗೆ ಕರೆಯೋಲೆ ಹೋಗಿಲ್ಲ, ಆದರೆ ಅವನ ಪಕ್ಕದ ಮನೆಯವರಿಗೆ ಕರೆಯೋಲೆ ಕೊಟ್ಟಿದ್ದಾರೆ! ಚಿಕ್ಕಪ್ಪನ ಮನೆ ಪೂಜೆಗೆ ಅವನಿಗೆ ಕರೆದಿಲ್ಲ, ಆದರೆ ನೆಂಟರೆಲ್ಲರಿಗೂ ಕರೆದಿದ್ದಾರೆ! ದೂರದಿಂದ ಬಂದ ತಮ್ಮ ಅಕ್ಕನ ಮನೆಗೆ ಹೋದರೆ, ಆ ಅಕ್ಕ ಒಂದು ತುತ್ತು ಊಟವನ್ನೂ ಹಾಕದೆ ಕಳಿಸುತ್ತಾಳೆ! ಇವೆಲ್ಲ ಸಣ್ಣ ಘಟನೆಗಳು ಅನ್ನಿಸಬಹುದು. ಆದರೆ ಇವೇ ಒಂದು ಮನುಷ್ಯನ ಒಳಗೆ ಹನಿ ಹನಿಯಾಗಿ ವಿಷ ತುಂಬುತ್ತವೆ!

ಇದಕ್ಕೇ ಇನ್ನೊಂದು ಹೆಸರು, Emotional Athyachara! ಭಾವನೆಗಳ ಮೇಲಿನ ದೌರ್ಜನ್ಯ!

ಒಬ್ಬ ವ್ಯಕ್ತಿಯನ್ನು ಹೀಗೆ ಮೆಲ್ಲಗೆ ನೋಯಿಸುವುದು, ಕಡೆಗಣಿಸುವುದು, ಪದೇ ಪದೇ “ನೀನು ಮುಖ್ಯ ಅಲ್ಲ” ಅಂತ ತೋರಿಸುವುದು, ಇದು ಇವತ್ತು ನಾರ್ಮಲ್ ಆಗಿಬಿಟ್ಟಿದೆ. ಆದರೆ ಅದೇ ವ್ಯಕ್ತಿ ಒಂದು ದಿನ ಜೀವ ಕಳೆದುಕೊಂಡರೆ, ಅದು ಮಾತ್ರ ನಾರ್ಮಲ್ ಅಲ್ಲ! ಆಗ ಎಲ್ಲರೂ ಕೇಳುತ್ತಾರೆ, “ಅವನಿಗೆ ಏನು ಕಮ್ಮಿ ಇತ್ತು?”

ಏನು ಕಮ್ಮಿ ಇತ್ತು ಗೊತ್ತಾ? ಗೌರವ! ಪ್ರೀತಿ! “ನೀನೂ ಮುಖ್ಯ” ಅನ್ನುವ ಒಂದೇ ಒಂದು ಭಾವ!

ಮೈ ಮೇಲೆ ಪೆಟ್ಟು ಬಿದ್ದರೆ ಊರಿಗೆ ಕಾಣುತ್ತದೆ. ಮನಸ್ಸಿನ ಮೇಲೆ ಬಿದ್ದ ಪೆಟ್ಟು ಯಾರಿಗೂ ಕಾಣುವುದಿಲ್ಲ. ರಕ್ತ ಹರಿಯುವುದಿಲ್ಲ, ಆದರೆ ಒಳಗೆ ಜೀವ ಸೀಳುತ್ತದೆ! ಅದೇ ಈ ಗಾಯದ ಕ್ರೂರತೆ!

ನನಗೆ ಒಬ್ಬ ಗೆಳೆಯನಿದ್ದ! ಅವನ ಮನೆಯಲ್ಲಿ ಅಪ್ಪ ಪ್ರತಿದಿನ, “ನೆರೆಮನೆ ಹುಡುಗ ನೋಡು, ಎಷ್ಟು ಸಂಬಳ ತರ್ತಾನೆ. ನೀನು ದಂಡಕ್ಕೆ ಹುಟ್ಟಿದ್ದೀಯ” ಅನ್ನುತ್ತಿದ್ದರು. ಪ್ರೀತಿಯಿಂದಲೇ ಹೇಳಿರಬಹುದು. ಆದರೆ ಆ ಮಾತುಗಳು ಸುತ್ತಿಗೆಯಂತೆ ಪ್ರತಿದಿನ ಅವನ ಮನಸ್ಸನ್ನು ಬಡಿಯುತ್ತಿದ್ದವು!

ಹುಡುಗ ಏನೂ ಹೇಳುತ್ತಿರಲಿಲ್ಲ. ಬರೀ ನಕ್ಕು ಕೋಣೆಗೆ ಹೋಗುತ್ತಿದ್ದ. ಒಳಗೆ ಹನಿ ಹನಿಯಾಗಿ ಸಾಯುತ್ತಿದ್ದ! ಯಾರಿಗೂ ಗೊತ್ತಾಗಲಿಲ್ಲ!

ಒಂದು ದಿನ ಅವನ ತಂಗಿ ಆ ಕೋಣೆಗೆ ಹೋದಳು. ಅಣ್ಣ ಕಿಟಕಿಯ ಬಳಿ ಸುಮ್ಮನೆ ಕೂತಿದ್ದ. ಅವಳು ಏನೂ ಕೇಳಲಿಲ್ಲ. ಬರೀ ಪಕ್ಕದಲ್ಲಿ ಕೂತು ಅವನ ಹೆಗಲ ಮೇಲೆ ತಲೆ ಇಟ್ಟು, “ಅಣ್ಣಾ, ನೀನಿದ್ದೀಯಲ್ಲ, ಅಷ್ಟೇ ಸಾಕು ನನಗೆ” ಅಂದಳು.

ಅಷ್ಟೇ! ಆ ಒಂದು ಸಾಲು! ಆ ಹುಡುಗ ಅಂದು ಮೊದಲ ಬಾರಿ ಬಿಕ್ಕಿ ಬಿಕ್ಕಿ ಅತ್ತ! ವರ್ಷಗಟ್ಟಲೆ ಕಟ್ಟಿಕೊಂಡಿದ್ದ ಅಣೆಕಟ್ಟು ಆ ದಿನ ಒಡೆಯಿತು. ಆ ಕಣ್ಣೀರು ಅವನನ್ನು ಉಳಿಸಿತು! ಅವನು ಇವತ್ತು ಬದುಕಿದ್ದಾನೆ, ನಗುತ್ತಿದ್ದಾನೆ. ಆ ತಂಗಿಗೆ ಅಣ್ಣ ಏನು ಯೋಚಿಸುತ್ತಿದ್ದ ಅಂತ ಗೊತ್ತೇ ಇರಲಿಲ್ಲ. ಆದರೆ ಆ ಒಂದು ಕ್ಷಣದ ಪ್ರೀತಿ ಒಂದು ಜೀವ ಉಳಿಸಿತು!

ಪ್ರಕೃತಿಯನ್ನು ನೋಡಿ. ಎಷ್ಟೇ ದೊಡ್ಡ ಬಿರುಗಾಳಿ ಬರಲಿ, ಬಾಗುವ ಮರ ಉಳಿಯುತ್ತದೆ! ಬಾಗದ ಮರ ಮುರಿದುಬೀಳುತ್ತದೆ! “ನನಗೆ ಕಷ್ಟವಾಗಿದೆ, ಸ್ವಲ್ಪ ಸಹಾಯ ಬೇಕು” ಅಂತ ಹೇಳುವುದು, ಬಾಗುವುದು, ಅದು ಸೋಲಲ್ಲ! ಅದೇ ನಿಜವಾದ ಧೈರ್ಯ!

ಒಂದು ವಿಷಯ ಹೇಳುತ್ತೇನೆ. ನೀವು ಎಷ್ಟೇ ಕತ್ತಲಲ್ಲಿದ್ದರೂ, ನಿಮ್ಮ ನೋವು ಎಷ್ಟೇ ದೊಡ್ಡದಾಗಿ ಕಂಡರೂ, ಅದು ಶಾಶ್ವತವಲ್ಲ. ರಾತ್ರಿ ಎಷ್ಟೇ ಕಗ್ಗತ್ತಲಾಗಿರಲಿ, ಬೆಳಗು ಬಂದೇ ಬರುತ್ತದೆ!ಒಂದೇ ಒಂದು ತೀರ್ಮಾನ, ಆ ಬೆಳಗನ್ನೇ ನಿಮ್ಮಿಂದ ಕಿತ್ತುಕೊಳ್ಳುತ್ತದೆ!ಅಂಥ ತೀರ್ಮಾನ ಎಂದೂ ಬೇಡ. ಮಾತಾಡಿ. ಹಂಚಿಕೊಂಡ ದುಃಖ ಅರ್ಧವಾಗುತ್ತದೆ!ಹೇಳದ ದುಃಖ ಮಾತ್ರ ಇಮ್ಮಡಿಯಾಗುತ್ತದೆ!

ಈಗ ನಿಮಗೆ ಎರಡು ಕೆಲಸ ಕೊಡುತ್ತೇನೆ!

ಮೊದಲನೆಯದು. ನೀವು ಒಳಗೆ ನೊಂದಿದ್ದರೆ, ಇವತ್ತು ಒಬ್ಬರಿಗಾದರೂ ಹೇಳಿ! ನಾಚಿಕೆ ಬೇಡ!

ಎರಡನೆಯದು, ಇದು ಇನ್ನೂ ಮುಖ್ಯ. ನೀವು ಯಾರನ್ನೂ ಕಡೆಗಣಿಸಬೇಡಿ. ಮದುವೆಗೆ ಕರೆಯುವಾಗ, ಪೂಜೆಗೆ ಕರೆಯುವಾಗ, ಒಂದು ಹೆಸರನ್ನೂ ಬಿಡಬೇಡಿ. ಮನೆಗೆ ಬಂದವರಿಗೆ ಒಂದು ತುತ್ತು ಊಟ ಹಾಕದೆ ಕಳಿಸಬೇಡಿ. ಆ ಸಣ್ಣ ಗೌರವ, ಆ ಒಂದು ಕರೆ, ಯಾರದ್ದೋ ಮನಸ್ಸನ್ನು ಉಳಿಸಬಹುದು. ನಿಮಗೆ ಸಣ್ಣ ವಿಷಯ, ಅವರಿಗೆ ಇಡೀ ಜಗತ್ತು!

ಭಾವನೆಗಳ ಮೇಲಿನ ದೌರ್ಜನ್ಯ ಯಾವ ಕಾನೂನಿನಲ್ಲೂ ಅಪರಾಧವಲ್ಲ. ಆದರೆ ಅದು ಮನುಷ್ಯತ್ವದ ಕೋರ್ಟಿನಲ್ಲಿ ಅತಿ ದೊಡ್ಡ ಅಪರಾಧ!

ಯಾರನ್ನೂ ನೋಯಿಸಬೇಡಿ. ನೊಂದವರ ಕೈ ಹಿಡಿಯಿರಿ!

ಒಂದು ಕರೆ ಮಾಡಲು, ಒಂದು ತುತ್ತು ಹಾಕಲು, ಒಂದು ಪ್ರೀತಿಯ ಮಾತು ಹೇಳಲು ಹಣ ಬೇಕಿಲ್ಲ. ಬೇಕಿರುವುದು ಒಂದು ಮೃದುವಾದ ಹೃದಯ, ಅಷ್ಟೇ!

ಬರಹ : ಸಂತೋಷ್‌ಕುಮಾರ್ ತಂಗವೇಲು

Leave a Comment

Your email address will not be published. Required fields are marked *

Scroll to Top