ತ್ಯಾಗದ ಹನಿ ಕಾವೇರಿ! ತೀರ್ಥೋದ್ಭವ ಹಾಗೂ ಕೊಡಗಿನ ಸಡಗರ!!

ಕೊಡಗಿನ ಬೆಟ್ಟಗಳ ಮೇಲೆ ಒಂದು ವಿಶೇಷ ಸಂಭ್ರಮದ ಗಾಳಿ ಬೀಸಲು ಶುರುವಾಗಿದೆ! ಅಕ್ಟೋಬರ್ 17, ಶುಕ್ರವಾರ, ತುಲಾ ಸಂಕ್ರಮಣದ ದಿನ. ಆ ದಿನ ಬ್ರಹ್ಮಗಿರಿಯ ತುತ್ತತುದಿಯಲ್ಲಿ, ತಲಕಾವೇರಿಯ ಆ ಪುಟ್ಟ ಕುಂಡಿಕೆಯಿಂದ ಕಾವೇರಿ ಮಾತೆ ಮತ್ತೊಮ್ಮೆ ಹುಟ್ಟಿ ಬರುತ್ತಾಳೆ. ಬೆಳಗ್ಗಿನ ಮುಹೂರ್ತದಲ್ಲಿ, ಲಕ್ಷಾಂತರ ಕಣ್ಣುಗಳ ಎದುರಿಗೆ, ಆ ಕುಂಡಿಕೆಯಲ್ಲಿ ನೀರು ಉಕ್ಕಿ ಬರುತ್ತದೆ. ಆ ಕ್ಷಣವೇ ತೀರ್ಥೋದ್ಭವ!

ಈ ಅದ್ಭುತವನ್ನು ಬರೀ ಕಣ್ಣಾರೆ ಕಂಡವರಿಗೆ ಮಾತ್ರ ಗೊತ್ತು. ಬ್ರಹ್ಮಗಿರಿಯ ಆ ಎತ್ತರದ ಬೆಟ್ಟದ ಮೇಲೆ, ಮಂಜು ಇನ್ನೂ ಕರಗಿರದ ಆ ಬೆಳಗ್ಗಿನ ಹೊತ್ತಿನಲ್ಲಿ, ಪುರೋಹಿತರು ಮಂತ್ರ ಪಠಿಸುತ್ತಿದ್ದಾರೆ. ಸುತ್ತ ಸಾವಿರಾರು ಭಕ್ತರು ಕೈಮುಗಿದು ನಿಂತಿದ್ದಾರೆ. ಗಾಳಿಯಲ್ಲಿ ಒಂದು ಬಗೆಯ ಮೌನ, ಒಂದು ಬಗೆಯ ಕಾತರ. ಇದ್ದಕ್ಕಿದ್ದಂತೆ, ಆ ಪುಟ್ಟ ಕುಂಡಿಕೆಯಲ್ಲಿ ನೀರು ಬುರ ಬುರನೆ ಉಕ್ಕಿ ಹೊರ ಹರಿಯಲು ಶುರುವಾಗುತ್ತದೆ. ಆ ಒಂದು ಕ್ಷಣದಲ್ಲಿ ಇಡೀ ಬೆಟ್ಟ “ಜೈ ಕಾವೇರಿ” ಎಂಬ ಘೋಷದಿಂದ ಮಾರ್ದನಿಸುತ್ತದೆ. ಎಷ್ಟೋ ಭಕ್ತರ ಕಣ್ಣುಗಳಲ್ಲಿ ನೀರು! ಈ ಅನುಭವಕ್ಕೆ ಪದಗಳಿಲ್ಲ!

ಕಾವೇರಿ ಬರೀ ಒಂದು ನದಿಯಲ್ಲ. ಅವಳು ಕೊಡಗಿನ ಮಗಳು, ಕರ್ನಾಟಕದ ತಾಯಿ, ದಕ್ಷಿಣ ಭಾರತದ ಜೀವಾಮೃತ. ಇಲ್ಲಿಂದ ಹುಟ್ಟಿ ಹೊರಡುವ ಈ ನದಿ ಕರ್ನಾಟಕದ ಕೊಡಗು, ಮೈಸೂರು, ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ಗ್ರಾಮೀಣ, ತುಮಕೂರು, ಚಾಮರಾಜನಗರ ಜಿಲ್ಲೆಗಳ ಮೂಲಕ ಹರಿಯುತ್ತಾ ತಮಿಳುನಾಡಿಗೆ ಹೋಗಿ ಅಲ್ಲಿನ ಕೋಟಿ ಕೋಟಿ ಜನರ ಹೊಟ್ಟೆ ತುಂಬಿಸುತ್ತಾಳೆ. ನಮ್ಮ ಹೊಲಗದ್ದೆಗಳಲ್ಲಿ ಬೆಳೆಯುವ ಪ್ರತಿ ತೆನೆ, ನಮ್ಮ ಬಾಯಿಗೆ ಬರುವ ಪ್ರತಿ ತುತ್ತು, ಆ ಕಾವೇರಿಯ ಕೊಡುಗೆ!

ಆದರೆ ಇಲ್ಲಿ ಒಂದು ವಿಪರ್ಯಾಸವಿದೆ! ಆ ಕಾವೇರಿಯ ಹುಟ್ಟೂರು ಇಂದು ಸ್ವತಃ ಬಾಯಾರಿದೆ. ಈ ಬಾರಿಯ ನೈಋತ್ಯ ಮಾನ್ಸೂನ್ ದುರ್ಬಲವಾಗಿತ್ತು. ಕೊಡಗಿನ ಬೆಟ್ಟಗಳ ಮೇಲೆ ಮಳೆ ಸರಿಯಾಗಿ ಸುರಿಯಲಿಲ್ಲ. ಇದರ ಪರಿಣಾಮ ಬರೀ ಕಾಫಿ ಬೆಳೆಗಾರರ ಮೇಲೆಯಲ್ಲ, ಕಾವೇರಿಯ ಹರಿವಿನ ಮೇಲೆಯಾಗಿದ!. ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ, ತಮಿಳುನಾಡಿಗೆ ಹರಿಯಬೇಕಾದ ಪ್ರಮಾಣ, ಈ ಎಲ್ಲಾ ಲೆಕ್ಕಾಚಾರಗಳು ಈಗ ಮತ್ತೆ ಚರ್ಚೆಗೆ ಬರುತ್ತಿವೆ. ತಾಯಿಗೇ ದಾಹ ಇರುವಾಗ ಮಕ್ಕಳಿಗೆ ಎಷ್ಟು ಕೊಡಲು ಸಾಧ್ಯ?

ಆದರೂ ತೀರ್ಥೋದ್ಭವದ ದಿನ ಆ ಕುಂಡಿಕೆಯಲ್ಲಿ ನೀರು ಉಕ್ಕುತ್ತದೆ. ಇದೇ ಕಾವೇರಿಯ ವಿಶೇಷ. ಅವಳು ಎಂದೂ ತನ್ನ ಮಕ್ಕಳನ್ನು ಬಿಟ್ಟಿಲ್ಲ. ಕಡಿಮೆಯಾದರೂ, ಹೆಚ್ಚಾದರೂ, ಬರವಾದರೂ, ಪ್ರವಾಹವಾದರೂ, ಅವಳು ಹರಿಯುತ್ತಲೇ ಇರುತ್ತಾಳೆ. ಪ್ರತಿ ವರ್ಷ ಈ ಒಂದು ದಿನ, ಆ ಪವಿತ್ರ ಕ್ಷಣದಲ್ಲಿ, ಅವಳು ನಮಗೆ ನೆನಪಿಸುತ್ತಾಳೆ, “ನಾನಿದ್ದೇನೆ, ನಿಮ್ಮನ್ನು ಬಿಟ್ಟಿಲ್ಲ.”

ಈ ಹಬ್ಬದ ಹಿಂದಿನ ಕಥೆಯೂ ಅಷ್ಟೇ ಹೃದಯಸ್ಪರ್ಶಿ. ಪುರಾಣದ ಪ್ರಕಾರ, ಕಾವೇರಿ ಒಬ್ಬ ಮಾನವ ಹುಡುಗಿಯಾಗಿ ಹುಟ್ಟಿ, ಅಗಸ್ತ್ಯ ಮುನಿಯನ್ನು ಮದುವೆಯಾಗಿ, ನಂತರ ಮನುಷ್ಯಕುಲದ ಬಾಯಾರಿಕೆ ನೀಗಿಸಲು ಸ್ವಇಚ್ಛೆಯಿಂದ ನದಿಯಾಗಿ ಹರಿದಳು. ಅದಕ್ಕಾಗಿಯೇ ಅವಳ ನೀರು ಬರೀ ನೀರಲ್ಲ, ಅದು ತ್ಯಾಗದ ಹನಿ. ಕೊಡಗಿನವರ ಪಾಲಿಗೆ ಅವಳು ಬರೀ ದೇವತೆಯಲ್ಲ, ಸ್ವಂತ ಮಗಳು, ಊರಿನ ಸೊಸೆ, ನಾಡಿನ ಅಮ್ಮ!

ಅಕ್ಟೋಬರ್ 17ರಂದು ಬೆಳಗ್ಗೆ ತಲಕಾವೇರಿಗೆ ಲಕ್ಷಗಟ್ಟಲೆ ಭಕ್ತರು ಹರಿದು ಬರುತ್ತಾರೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ಎಲ್ಲೆಡೆಯಿಂದ. ಕೆಲವರಿಗೆ ಇದು ಜೀವಮಾನದ ಕನಸು. ಕೆಲವು ವೃದ್ಧರು, ಇನ್ನೊಂದು ವರ್ಷ ಇರುತ್ತೇನೋ ಇಲ್ಲವೋ ಎಂಬ ಆತಂಕದಲ್ಲಿ, ಮೊಮ್ಮಕ್ಕಳ ಕೈಹಿಡಿದು ಆ ಬೆಟ್ಟವೇರಿ ಬರುತ್ತಾರೆ. ಆ ಕ್ಷಣ ಕಾವೇರಿಯ ದರ್ಶನ ಮಾಡಿದ ಮೇಲೆ, ಅವರ ಕಣ್ಣಲ್ಲಿ ಒಂದು ವಿಚಿತ್ರ ಶಾಂತಿ. ಜೀವನ ಸಾರ್ಥಕವಾಯಿತು ಎಂಬ ತೃಪ್ತಿ.

ಕೊಡಗಿನವರಿಗಂತೂ ಈ ದಿನ ಇನ್ನೂ ವಿಶೇಷ. ಅದೇ ದಿನ ಕೊಡಗಿನ ಜಿಲ್ಲೆಗೆ ಸ್ಥಳೀಯ ಸಾರ್ವತ್ರಿಕ ರಜೆ. ಪ್ರತಿ ಕೊಡಗಿನವರೂ ಜಾತಿ ಭೇದ ಮರೆತು ಕಾವೇರಿ ತಾಯಿಗೆ ಕೈ ಮುಗಿಯುತ್ತಾರೆ. ವಿದೇಶಗಳಲ್ಲಿರುವ ಕೊಡಗಿನ ಮಕ್ಕಳೂ ಈ ದಿನ ಅಮ್ಮನಿಗೆ ಫೋನ್ ಮಾಡಿ “ಕಾವೇರಿಗೆ ಪೂಜೆ ಮಾಡಿದಿರಾ?” ಎಂದು ಕೇಳುತ್ತಾರೆ. ದೂರ ಇರುವುದರ ನೋವು ಆ ಒಂದು ಪ್ರಶ್ನೆಯಲ್ಲಿ ತೇಲಿ ಬರುತ್ತದೆ!

ಬೆಂಗಳೂರಿನ ಫ್ಲಾಟಿನಲ್ಲಿ, ಮುಂಬಯಿಯ ಆಫೀಸಿನಲ್ಲಿ, ಅಮೆರಿಕದ ಬೆಳಗಿನಲ್ಲಿ, ದುಬೈನ ಬಿಸಿಲಿನ ಮಧ್ಯಾಹ್ನದಲ್ಲಿ, ಎಲ್ಲೇ ಇರಲಿ, ಕೊಡಗಿನ ಮಗ-ಮಗಳ ಹೃದಯ ಮಾತ್ರ ಅಂದೂ ಎಂದೆಂದಿಗೂ ತಾಯ್ನಾಡಿನ ಕಾವೇರಿಯ ತಟದಲ್ಲೇ ಪರಿತಪಿಸುತ್ತಿರುತ್ತದೆ!

ಇನ್ನು ನಾಲ್ಕೇ ದಿನ. ತಲಕಾವೇರಿ ಸಜ್ಜಾಗುತ್ತಿದೆ! ಭಾಗಮಂಡಲ ಸಜ್ಜಾಗುತ್ತಿದೆ! ಕೊಡಗಿನ ಪ್ರತಿ ಊರು ಸಜ್ಜಾಗುತ್ತಿದೆ! ಕಾವೇರಿ ಮಾತೆ ಈ ಬಾರಿ ಎಷ್ಟು ನೀರಿನೊಂದಿಗೆ ಬರುತ್ತಾಳೋ, ಅದು ಅವಳ ಇಚ್ಛೆ. ಆದರೆ ಅವಳು ಬರುತ್ತಾಳೆ, ಅದು ಖಾತರಿ. ನಾವು ಮಾಡಬೇಕಾದ ಕೆಲಸವೊಂದೇ, ಅವಳ ದಾರಿಯನ್ನು ಸ್ವಚ್ಛವಾಗಿಡುವುದು, ಅವಳ ಅರಣ್ಯಗಳನ್ನು ಕಾಪಾಡುವುದು, ಅವಳ ಪಾತ್ರವನ್ನು ಗೌರವಿಸುವುದು.

ಓಯಾಸಿಸ್ ಕಾವೇರಿಯ ಮಡಿಲಲ್ಲಿ ಹೊರಡುವ ಕನ್ನಡ ಪತ್ರಿಕೆ! ಆ ತಾಯಿಯ ಹೆಸರಲ್ಲೇ ನಮ್ಮ ಅಸ್ತಿತ್ವ!ಈ ತೀರ್ಥೋದ್ಭವದ ದಿನದಂದು ನಮ್ಮೆಲ್ಲರ ಪರವಾಗಿ ಆ ತಾಯಿಗೆ ಒಂದು ಕೈಮುಗಿತ, ಒಂದು ಪ್ರಾರ್ಥನೆ, “ಅಮ್ಮ, ಇನ್ನೂ ನೂರಾರು ವರ್ಷ ಹೀಗೆಯೇ ಹರಿಯುತ್ತಿರು, ನಮ್ಮನ್ನು ಕಾಪಾಡುತ್ತಿರು.”

ಬರಹ: ಸಂತೋಷ್‌ಕುಮಾರ್ ತಂಗವೇಲು

Leave a Comment

Your email address will not be published. Required fields are marked *

Scroll to Top