

ಮಳೆ ಬಂತು, ಬೆಳೆ ಬರಲಿಲ್ಲ !
ಸೆಪ್ಟೆಂಬರ್ ಹತ್ತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್! ಒಂದೇ ದಿನ ಒಂಬತ್ತು ಘೋಷಣೆ!
ಸೇವಾ ಒನ್. ರೈತ ಚೈತನ್ಯ. ಉಚಿತ ಬಸ್ ಪಾಸ್. ಬಿಎಂಟಿಸಿ ಆ್ಯಪ್. ಒನ್ ಕರ್ನಾಟಕ ಮೊಬಿಲಿಟಿ ಆ್ಯಪ್. ಐದು ಲಕ್ಷ ವಸತಿ ನಿವೇಶನ. ಸೈನಿಕ ಸಮ್ಮಾನ! ಜೊತೆಗೆ 2037ರ ಕನಸು. ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ! ಬಡತನ ಶೂನ್ಯ! ಶಾಲೆ ಬಿಡುವವರು ಶೂನ್ಯ!
ಮುಂದಿನ ಐನೂರು ದಿನದಲ್ಲಿ ಒಂದೂವರೆ ಲಕ್ಷ ಕೋಟಿ ಹೂಡಿಕೆ. ಮೂರು ಲಕ್ಷ ಕೋಟಿ ಬಂಡವಾಳ!
ಕಣ್ಣು ಕೋರೈಸುತ್ತದೆ ಅಲ್ಲವೇ.ನನಗೂ ಕೋರೈಸಿತು! ಆದರೆ ಕಣ್ಣು ತೆರೆದ ಮೇಲೆ ಒಂದು ಪ್ರಶ್ನೆ ಉಳಿಯಿತು.
ಈ ಘೋಷಣೆಗಳಲ್ಲಿ ಎಷ್ಟು ನೆಲಕ್ಕೆ ಇಳಿಯುತ್ತವೆ? ಒಬ್ಬ ವಿಶ್ಲೇಷಕರು ತೀಕ್ಷ್ಣವಾಗಿ ಹೇಳಿದ್ದಾರೆ. ಈ ನೂರು ದಿನಗಳ ಅನುಮೋದನೆಗಳ ವೇಗವನ್ನು ಜನ ಪ್ರಗತಿ ಎಂದು ಭಾವಿಸುವುದಿಲ್ಲ, ಅದು ಬಹುಶಃ ಪ್ರಗತಿಯೆಡೆಗಿನ ಒಂದು ದಾರಿ ಅಷ್ಟೇ!
ಐದು ಲಕ್ಷ ನಿವೇಶನ ಎಂದರೆ ಸಹಿ ಹಾಕುವುದಷ್ಟೇ ಅಲ್ಲ. ಐದು ಲಕ್ಷ ಕುಟುಂಬಗಳನ್ನು ಗುರುತಿಸಬೇಕು. ಭೂಮಿ ಹುಡುಕಬೇಕು. ಸರ್ವೆ ಆಗಬೇಕು. ಹಕ್ಕುಪತ್ರ ಸಿಗಬೇಕು. ರಸ್ತೆ, ನೀರು, ಕರೆಂಟು ತಲುಪಬೇಕು.ಇದಕ್ಕೆ ಎಷ್ಟು ವರ್ಷ ಬೇಕು ಗೊತ್ತೇ. ಎಪ್ಪತ್ತೈದು ಸಾವಿರ ಹುದ್ದೆ ಭರ್ತಿ ಮಾಡುತ್ತೇವೆ ಎಂದಿದ್ದಾರೆ. ಸಂತೋಷ. ಆದರೆ ಅದೇ ನೂರು ದಿನದಲ್ಲಿ ಕೆಪಿಎಸ್‌ಸಿ ನೇಮಕಾತಿ ಹಗರಣದ ವಿವಾದವೂ ಎದ್ದಿದೆ!

ಭರ್ತಿ ಮಾಡುವ ಮೊದಲು ಭರ್ತಿ ಮಾಡುವ ವ್ಯವಸ್ಥೆಯನ್ನೇ ಸರಿಪಡಿಸಬೇಕು. ಇಲ್ಲದಿದ್ದರೆ ಎಪ್ಪತ್ತೈದು ಸಾವಿರ ಹುದ್ದೆ ಎಂದರೆ ಎಪ್ಪತ್ತೈದು ಸಾವಿರ ಹೊಸ ನಿರಾಸೆ!
ಬಿಡದಿಯಲ್ಲಿ ಏನಾಯಿತು ನೋಡಿ.ಟೌನ್‌ಶಿಪ್ ಯೋಜನೆ ಬಂತು. ರೈತರು ಬೀದಿಗಿಳಿದರು. ಪ್ರತಿಭಟನೆಯ ನಂತರ ಮುಖ್ಯಮಂತ್ರಿ ಹೇಳಿದರು, ಯಾರನ್ನೂ ಒತ್ತಾಯದಿಂದ ಭೂಮಿ ಕೊಡುವಂತೆ ಮಾಡುವುದಿಲ್ಲ ಎಂದು. ರೈತರ ಅಹವಾಲು ಕೇಳಲು ಸಮಿತಿಯೂ ಆಯಿತು. ಒಳ್ಳೆಯ ಮಾತು! ಆದರೆ ಆ ಮಾತು ಯೋಜನೆ ಘೋಷಿಸುವ ಮೊದಲೇ ಏಕೆ ಬರಲಿಲ್ಲ!
ಅಭಿವೃದ್ಧಿ ಎಂಬ ಪದದ ಒಳಗೆ ಯಾವಾಗಲೂ ಒಂದು ಸಣ್ಣ ಕತ್ತಿ ಅಡಗಿರುತ್ತದೆ. ಯಾರಿಗಾಗಿ ಅಭಿವೃದ್ಧಿ? ಯಾರ ಬೆಲೆಯಲ್ಲಿ ಅಭಿವೃದ್ಧಿ? ಟೌನ್‌ಶಿಪ್ ಬರುತ್ತದೆ. ಉದ್ಯೋಗ ಬರುತ್ತದೆ. ಒಳ್ಳೆಯದೇ!
ಆದರೆ ಮೂರು ತಲೆಮಾರಿನಿಂದ ಆ ಮಣ್ಣಿನಲ್ಲಿ ಬೆವರಿಳಿಸಿದ ರೈತನ ಮಗನಿಗೆ ಆ ಟೌನ್‌ಶಿಪ್‌ನಲ್ಲಿ ಯಾವ ಕೆಲಸ ಸಿಗುತ್ತದೆ. ಪರಿಹಾರದ ಹಣ ಮೂರು ವರ್ಷದಲ್ಲಿ ಖಾಲಿಯಾದ ಮೇಲೆ ಅವನು ಎಲ್ಲಿಗೆ ಹೋಗುತ್ತಾನೆ?
ಈ ಪ್ರಶ್ನೆಗೆ ಉತ್ತರವಿದ್ದರೆ ಅದು ಅಭಿವೃದ್ಧಿ. ಇಲ್ಲದಿದ್ದರೆ ಅದು ಬರೀ ಭೂ ವರ್ಗಾವಣೆ!

ಇನ್ನೊಂದು ಮಾತು ನೇರವಾಗಿ ಹೇಳಬೇಕು.
ಸಂಪುಟದಲ್ಲಿ ಒಬ್ಬ ಮಹಿಳಾ ಸಚಿವರೂ ಇಲ್ಲ. ಒಬ್ಬರೂ ಇಲ್ಲ! ಗೃಹಲಕ್ಷ್ಮಿ ಕೊಟ್ಟ ಸರ್ಕಾರ ಇದು. ಶಕ್ತಿ ಕೊಟ್ಟ ಸರ್ಕಾರ. ಆದರೆ ಆ ಯೋಜನೆಗಳ ಫಲಾನುಭವಿಗಳಲ್ಲಿ ಒಬ್ಬರನ್ನೂ ನಿರ್ಧಾರ ತೆಗೆದುಕೊಳ್ಳುವ ಮೇಜಿನ ಬಳಿ ಕೂರಿಸಿಲ್ಲ! ರಾಜ್ಯದ ಅರ್ಧ ಜನಸಂಖ್ಯೆಗೆ ಶೂನ್ಯ ಪ್ರಾತಿನಿಧ್ಯ! ಇದನ್ನು ಇಂದೇ ಸರಿಪಡಿಸಬೇಕು.
ಮತ್ತೊಂದು ಗಮನಿಸಿ. ಹೊಸ ಆ್ಯಪ್ ಬೆಂಗಳೂರಿಗೆ. ಮೆಟ್ರೋ ಬೆಂಗಳೂರಿಗೆ. ಟೌನ್‌ಶಿಪ್ ಬೆಂಗಳೂರಿನ ಪಕ್ಕ.
ಯಾದಗಿರಿಗೆ ?ರಾಯಚೂರಿಗೆ ? ಕೊಪ್ಪಳಕ್ಕೆ? ಬೀದರಿಗೆ ಏನು? ಕಲ್ಯಾಣ ಕರ್ನಾಟಕಕ್ಕೆ 371ಜೆ ಸಿಕ್ಕಿ ಹತ್ತು ವರ್ಷ ದಾಟಿತು. ಇಂದಿಗೂ ಶಿಶು ಮರಣ, ಸಾಕ್ಷರತೆ, ವಲಸೆ, ಎಲ್ಲದರಲ್ಲೂ ಆ ಪ್ರದೇಶ ಹಿಂದೆಯೇ ಇದೆ. ಒಂದು ಟ್ರಿಲಿಯನ್ ಡಾಲರ್ ಗುರಿ ಇಟ್ಟುಕೊಂಡಿದ್ದಾರೆ. ಒಳ್ಳೆಯದು! ಆದರೆ ಆ ಟ್ರಿಲಿಯನ್‌ನಲ್ಲಿ ಯಾದಗಿರಿಯ ಪಾಲು ಎಷ್ಟು?
ನಮ್ಮ ಮಲೆನಾಡಿನ ಕಥೆಯೂ ಅದೇ.
ಕಾಫಿ ಬೆಲೆಯ ಏರಿಳಿತ! ಕಾಡಾನೆ ದಾಳಿ!ಭೂಕುಸಿತ!ಅರಣ್ಯ ಹಕ್ಕಿನ ಗೊಂದಲ!ಊರು ಬಿಟ್ಟು ಹೋಗುತ್ತಿರುವ ಯುವಕರು!
ಈ ಯಾವ ಸಮಸ್ಯೆಗೆ ಯಾವ ಆ್ಯಪ್ ಪರಿಹಾರ ಕೊಡುತ್ತದೆ ಹೇಳಿ? ರೈತ ಚೈತನ್ಯ ಯೋಜನೆ ಬಂತು. ಒಳ್ಳೆಯ ಹೆಸರು. ಆದರೆ ರೈತನಿಗೆ ಬೇಕಾಗಿರುವುದು ಚೈತನ್ಯವಲ್ಲ. ಬೆಲೆ!ಕಬ್ಬಿನ ಬಾಕಿ ಸಮಯಕ್ಕೆ ಸಿಕ್ಕರೆ, ರಾಗಿಗೆ ಸರಿಯಾದ ಬೆಂಬಲ ಬೆಲೆ ಸಿಕ್ಕರೆ, ಶೈತ್ಯಾಗಾರ ಇದ್ದರೆ, ಅದು ನೂರು ಯೋಜನೆಗಿಂತ ದೊಡ್ಡದು!
ನನ್ನ ಒಂದೇ ಒಂದು ಸಲಹೆ ಏನು ಗೊತ್ತೇ. ಮುಂದಿನ ಒಂದು ವರ್ಷ ಒಂದೇ ಒಂದು ಹೊಸ ಘೋಷಣೆ ಬೇಡ. ಈಗಾಗಲೇ ಘೋಷಿಸಿದ್ದನ್ನೇ ಜಾರಿ ಮಾಡಲಿ.
ಪ್ರತಿ ಯೋಜನೆಗೆ ಒಂದು ಗಡುವು. ಒಬ್ಬ ಜವಾಬ್ದಾರ ಅಧಿಕಾರಿ. ಮತ್ತು ಜನರಿಗೆ ಕಾಣುವ ಒಂದು ಪಟ್ಟಿ, ಎಷ್ಟು ಆಯಿತು ಎಷ್ಟು ಬಾಕಿ ಎಂದು! ಅಷ್ಟು ಮಾಡಿದರೆ ಸಾಕು. ಅದೇ ಇತಿಹಾಸವಾಗುತ್ತದೆ!
ಮುಖ್ಯಮಂತ್ರಿಗಳೇ ಹೇಳಿದರು, ನೂರು ದಿನ ಇದು ಆರಂಭ ಮಾತ್ರ ಎಂದು.ನಿಜ! ಆದರೆ ಆರಂಭ ಎಂದರೆ ಅವಕಾಶ ಮಾತ್ರವಲ್ಲ, ಜವಾಬ್ದಾರಿಯೂ ಹೌದು. ಅವರು ಎರಡೂವರೆ ವರ್ಷ ಕಾದರು. ಕಾಯುವ ಕಲೆ ಅವರಿಗೆ ಚೆನ್ನಾಗಿ ಗೊತ್ತು.

ಆದರೆ ಈಗ ಕಾಯುತ್ತಿರುವವರು ಬೇರೆಯವರು!
ಕಾಫಿ ಬೆಲೆಗೆ ಕಾಯುತ್ತಿರುವ ಕೊಡಗಿನ ಬೆಳೆಗಾರ! ಕಬ್ಬಿನ ಬಾಕಿಗೆ ಕಾಯುತ್ತಿರುವ ಮಂಡ್ಯದ ರೈತ! ನೇಮಕಾತಿ ಫಲಿತಾಂಶಕ್ಕೆ ಕಾಯುತ್ತಿರುವ ಕಲಬುರಗಿಯ ಪದವೀಧರ! ಹಕ್ಕುಪತ್ರಕ್ಕೆ ಕಾಯುತ್ತಿರುವ ಭೂರಹಿತ ತಾಯಿ!
ಅವರಿಗೂ ಕಾಯುವುದು ಗೊತ್ತು. ವರ್ಷಗಟ್ಟಲೆ ಕಾದಿದ್ದಾರೆ! ಆದರೆ ಅವರ ಕಾಯುವಿಕೆಯ ಕೊನೆಯಲ್ಲಿ ಒಂದು ಕುರ್ಚಿ ಕಾಯುತ್ತಿಲ್ಲ. ಘೋಷಣೆ ಮಳೆಯಂತೆ! ಬಂದಾಗ ಸದ್ದು, ಸಂಭ್ರಮ, ತಂಪು!
ಆದರೆ ಮಳೆ ಬಂದ ಮಾತ್ರಕ್ಕೆ ಬೆಳೆ ಬರುವುದಿಲ್ಲ. ಮಣ್ಣು ಹದವಾಗಿರಬೇಕು. ಬೀಜ ಸತ್ವವಾಗಿರಬೇಕು. ಯಾರೋ ಒಬ್ಬರು ಪ್ರತಿದಿನ ಹೊಲಕ್ಕೆ ಹೋಗಿ ನೋಡುತ್ತಿರಬೇಕು
ಇಲ್ಲದಿದ್ದರೆ ಮಳೆ ಹರಿದು ಹೋಗುತ್ತದೆ!ನೆಲ ಮತ್ತೆ ಬಾಯಾರಿಯೇ ಉಳಿಯುತ್ತದೆ!
ಕರ್ನಾಟಕಕ್ಕೆ ಈಗ ಬೇಕಾಗಿರುವುದು ಇನ್ನಷ್ಟು ಮಳೆಯಲ್ಲ!ಬೆಳೆ!
ಬರಹ : ಸಂತೋಷಕುಮಾರ್ ತಂಗವೇಲು

