ವರದಿ: ಕೆ.ಟಿ. ವಾತ್ಸಲ್ಯ, ಗೋಣಿಕೊಪ್ಪಲು

ಗೋಣಿಕೊಪ್ಪ: ಅಕ್ಷಯ ಚಾರಿಟೇಬಲ್ ಟ್ರಸ್ಟ್ (ರಿ.) ಗೋಣಿಕೊಪ್ಪ ಮತ್ತು ಕೋಲು ಬಾಣೆ ಟ್ರೇಡರ್ಸ್ ಸಂಸ್ಥೆಯ ಮಾಲೀಕರಾದ ಬಿ.ಎಸ್. ಪುರುಷೋತ್ತಮ ಅವರ ಜಂಟಿ ಸಹಯೋಗದೊಂದಿಗೆ, ಚೆನ್ನಯ್ಯನ ಕೋಟೆ ಸಿ.ಬಿ. ಹಳ್ಳಿಯ ವಾಲ್ಮೀಕಿ ಆಶ್ರಮ ಶಾಲೆಯ ಬಾಲಕ ಮತ್ತು ಬಾಲಕಿ ಕ್ರೀಡಾಪಟುಗಳಿಗೆ ಉಚಿತ ಕ್ರೀಡಾ ಸಮವಸ್ತ್ರಗಳನ್ನು ವಿತರಿಸಲಾಯಿತು.
ಸುಮಾರು ₹11,000 ಮೌಲ್ಯದ ಕ್ರೀಡಾ ಸಮವಸ್ತ್ರಗಳನ್ನು ಆಶ್ರಮ ಶಾಲೆಯ ಅರ್ಹ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಕ್ಷಯ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷರಾದ ಸೋಮಯ್ಯ ಕೆ.ಕೆ. ಅವರು, ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆಯನ್ನು ಬೆಳೆಸಲು ಮತ್ತು ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಟ್ರಸ್ಟ್ನಿಂದ ಉಚಿತ ಕ್ರೀಡಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಇದರ ಜೊತೆಗೆ ಮಕ್ಕಳಲ್ಲಿ ಕ್ರೀಡಾ ಉತ್ಸಾಹವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರತಿವರ್ಷವೂ ಸರ್ಕಾರಿ ಆಶ್ರಮ ಶಾಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ಸಮವಸ್ತ್ರಗಳನ್ನು ನೀಡುತ್ತಾ ಬರಲಾಗುತ್ತಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಇಂತಹ ಪ್ರೋತ್ಸಾಹ ಅಗತ್ಯ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿ ಹಾಗೂ ಟ್ರಸ್ಟ್ನ ಸದಸ್ಯರು ಉಪಸ್ಥಿತರಿದ್ದರು.
ವರದಿ: ಕೆ.ಟಿ. ವಾತ್ಸಲ್ಯ, ಗೋಣಿಕೊಪ್ಪಲು
