
ಬೆಂಗಳೂರು: ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಎಂ. ಸೋಮಯ್ಯ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಗೆದ್ದ ಚಿನ್ನದ ಪದಕ ಸೇರಿದಂತೆ ಅವರ ಕ್ರೀಡಾ ಜೀವನದ ಅಮೂಲ್ಯ ಸ್ಮರಣಿಕೆಗಳು ಕಳುವಾಗಿವೆ ಎಂದು ವರದಿಯಾಗಿದೆ.
ಬೆಂಗಳೂರಿನ ಹೆಚ್ಎಎಲ್ ಮೂರನೇ ಹಂತದ ನ್ಯೂ ತಿಪ್ಪಸಂದ್ರದಲ್ಲಿರುವ ಅವರ ಮನೆಯಲ್ಲಿ ಅಕ್ಟೋಬರ್ 28ರಂದು ಈ ಕೃತ್ಯ ನಡೆದಿದೆ. ಆ ವೇಳೆ 67 ವರ್ಷದ ಸೋಮಯ್ಯ ಮತ್ತು ಅವರ ಕುಟುಂಬ ಕೊಡಗಿಗೆ ಹೋಗಿದ್ದರು. ಬೆಳಗ್ಗೆ ಸುಮಾರು 7.15ಕ್ಕೆ ಮನೆಯ ಮುಂಬಾಗಿಲು ತೆರೆದಿರುವುದನ್ನು ನೆರೆಮನೆಯವರಾದ ನಾರಾಯಣನ್ ಅವರು ಗಮನಿಸಿ, ಸೋಮಯ್ಯ ಅವರಿಗೆ ವಿಷಯ ತಿಳಿಸಿದರು.
ಕಳುವಾದ ನಾಲ್ಕು ಪದಕಗಳು ಹೀಗಿವೆ: 1980 ಮಾಸ್ಕೋ ಒಲಿಂಪಿಕ್ಸ್ ಚಿನ್ನ 1982 ನವದೆಹಲಿ ಏಷ್ಯನ್ ಗೇಮ್ಸ್ ಬೆಳ್ಳಿ 1986 ಸಿಯೋಲ್ ಏಷ್ಯನ್ ಗೇಮ್ಸ್ ಕಂಚು 1982 ಆಮ್ಸ್ಟರ್‌ಡ್ಯಾಮ್ ಚಾಂಪಿಯನ್ಸ್ ಟ್ರೋಫಿ ಕಂಚು
ಇದಲ್ಲದೆ ಸುಮಾರು 3.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳೂ ಕಳುವಾಗಿವೆ. ಹತ್ತು ಗ್ರಾಂ ಚಿನ್ನದ ಬಳೆ, ಎಂಟು ಗ್ರಾಂ ಚಿನ್ನದ ನಾಣ್ಯ, ಎರಡು ಬೆಳ್ಳಿ ಕಪ್, ಆರು ಬೆಳ್ಳಿ ಚಮಚ, ಬೆಳ್ಳಿ ಪಾತ್ರೆ ಮತ್ತು 30 ಸಾವಿರ ರೂಪಾಯಿ ನಗದು ಅದರಲ್ಲಿ ಸೇರಿವೆ.
ನೆರೆಮನೆಯ ಸಿಸಿಟಿವಿ ದೃಶ್ಯಗಳಲ್ಲಿ ಬೆಳಗಿನ ಜಾವ 2.34ಕ್ಕೆ ಇಬ್ಬರು ಅಪರಿಚಿತರು ಬಾಗಿಲು ಒಡೆದು ಒಳಗೆ ಹೋಗುವುದು ಕಂಡುಬಂದಿದೆ ಎಂದು ವರದಿಯಾಗಿದೆ. ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದುವರೆಗೆ ಯಾರ ಬಂಧನವೂ ವರದಿಯಾಗಿಲ್ಲ.
ಹಣದ ಬೆಲೆಗಿಂತ ಈ ಪದಕಗಳ ಬೆಲೆ ದೊಡ್ಡದು. ಇವು ದೇಶಕ್ಕಾಗಿ ಬೆವರು ಸುರಿಸಿದ ಒಬ್ಬ ಕೊಡಗಿನ ಕ್ರೀಡಾಪಟುವಿನ ಇತಿಹಾಸ. ಪದಕಗಳು ಬೇಗ ಸುರಕ್ಷಿತವಾಗಿ ಅವರ ಕೈ ಸೇರಲಿ ಎಂದು ಕ್ರೀಡಾಪ್ರೇಮಿಗಳು ಹಾರೈಸುತ್ತಿದ್ದಾರೆ.
ವರದಿ : ಒಯಾಸಿಸ್ ಸುದ್ದಿ ಮನೆ
ಓಯಾಸಿಸ್ ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: nammaoasis@gmail.com, +91 8147424128
