ಮಣ್ಣಿನ ಜೊತೆ ಬೆಸೆದ ಜೀವ: ಮಹಿಳೆ ಮತ್ತು ಪರಿಸರ

ಕೆ.ಟಿ. ವಾತ್ಸಲ್ಯ, ಗೋಣಿಕೊಪ್ಪಲು

ನಮ್ಮ ಸುತ್ತಮುತ್ತ ಕಾಣುವುದೆಲ್ಲವೂ ಪರಿಸರ. ಗಾಳಿ, ನೀರು, ಮಣ್ಣು, ಮರ-ಗಿಡ, ಪಶು-ಪಕ್ಷಿ ಇವೆಲ್ಲವೂ ನಮ್ಮ ಬದುಕಿನ ಬೆನ್ನೆಲುಬು. ಈ ಪರಿಸರವನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ; ಆದರೆ ಇದರಲ್ಲಿ ಮಹಿಳೆಯರ ಕೊಡುಗೆ ಮಾತ್ರ ಅಪಾರ, ಅನನ್ಯ.

ಪ್ರಕೃತಿಯನ್ನು “ತಾಯಿ” ಎಂದು ಪೂಜಿಸುವ ನಾವು, ಅದೇ ಪ್ರಕೃತಿಯನ್ನು ದಿನನಿತ್ಯ ಹಾಳು ಮಾಡುತ್ತಿರುವುದು ವಿಪರ್ಯಾಸವಲ್ಲವೇ? ಮಮತೆ, ತಾಳ್ಮೆ, ಸಹನೆ, ಇವು ಮಹಿಳೆಯ ಸಹಜ ಸ್ವಭಾವ. ಇದೇ ಕಾರಣಕ್ಕಾಗಿಯೇ ಮಹಿಳೆಯನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಇಬ್ಬರೂ ನಿಸ್ವಾರ್ಥವಾಗಿ ಕೊಡುತ್ತಾರೆ, ಪೊರೆಯುತ್ತಾರೆ, ಪೋಷಿಸುತ್ತಾರೆ.

ಪುರಾತನ ಕಾಲದಿಂದಲೂ ಮಹಿಳೆ ಪರಿಸರದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾಳೆ. ಬೆಳಗ್ಗೆ ಎದ್ದು ತುಳಸಿಗೆ ನೀರೆರೆಯುವುದರಿಂದ ಹಿಡಿದು, ಅಡುಗೆ ಮನೆಗೆ ಬೇಕಾದ ಸೌದೆ-ಇದ್ದಿಲು ಸಂಗ್ರಹಿಸುವುದು, ಹೊಲ-ಗದ್ದೆಗಳಲ್ಲಿ ಬೆವರು ಸುರಿಸಿ ದುಡಿಯುವುದು, ಹಸು-ಕರುಗಳನ್ನು ಸಾಕುವುದು ಹೀಗೆ ಪ್ರತಿಯೊಂದು ಹಂತದಲ್ಲೂ ಪ್ರಕೃತಿಯೊಂದಿಗೆ ಬೆಸೆದುಕೊಂಡವಳು ಅವಳು.

ಮನೆ ಕೆಲಸದ ಜೊತೆಗೆ ಅಡುಗೆ ಮನೆಗೆ ಬಳಸುವ ಸೌದೆ, ಇದ್ದಿಲು, ಜೊತೆಗೆ ಹೊಲ ಗದ್ದೆಗಳಲ್ಲಿ ದುಡಿಮೆ, ಹೀಗೆ ಅನೇಕ ರೀತಿಯಲ್ಲಿ ಪರಿಸರದ ಜೊತೆಗೆ ಮಹಿಳೆ ಸಂಬಂಧ ಹೊಂದಿರುತ್ತಾಳೆ. ಸ್ವಚ್ಛ ಮತ್ತು ಸುಂದರ ಪರಿಸರಕ್ಕಾಗಿ ಮಹಿಳೆ ಹೋರಾಟ ಮಾಡುತ್ತಿರುವುದು ಇಂದು ನಿನ್ನೆಯದಲ್ಲ. ಮನೆಯಲ್ಲಿ ಹಣ ಉಳಿತಾಯ ಮಾಡುವುದರಿಂದ ಹಿಡಿದು ನೀರು ಬಳಕೆಯನ್ನು ಕಡಿಮೆ ಮಾಡುವುದು, ಮಳೆ ನೀರಿನ ಸಂಗ್ರಹಣೆ, ಹಸಿ ಕಸ ಒಣ ಕಸವನ್ನು ಬೇರ್ಪಡಿಸುವುದು, ಗಿಡ ನೆಡುವುದು, ಹೀಗೆ ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರು ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.

ಪ್ರತಿ ತಾಯಿ ಮಕ್ಕಳಿಗೆ ಪರಿಸರ ಪಾಠ ಮಾಡುತ್ತಾಳೆ. ಉದಾಹರಣೆಗೆ ಚಂದಮಾಮ ತೋರಿಸಿ ಊಟ ಮಾಡಿಸುವುದು, ಮರ ಗಿಡ ನೆಡುವಾಗ, ನೀರು ಹಾಕುವಾಗ ಮಕ್ಕಳಿಗೆ “ಮರ ಬೆಳೆಸಿ, ಪರಿಸರ ಉಳಿಸಿ” ಎಂದು ಪಾಠ ಮಾಡಿ ಪರಿಸರದ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುತ್ತಾರೆ.

1973ರಲ್ಲಿ ಆರಂಭವಾದ ಚಿಪ್ಕೋ ಚಳುವಳಿಯಲ್ಲಿ ಉತ್ತರಾಖಂಡದ ಗ್ರಾಮೀಣ ಮಹಿಳೆಯರು ಮರ ಕಡಿಯಲು ಬಂದ ಗುತ್ತಿಗೆದಾರರ ವಿರುದ್ಧ ಧ್ವನಿ ಎತ್ತಿದರು. ಇದು ಪ್ರಸಿದ್ಧ ಪರಿಸರ ಸಂರಕ್ಷಣಾ ಚಳುವಳಿಯಾಗಿದೆ, ಮರಗಳನ್ನು “ಅಪ್ಪಿ” ಮಹಿಳೆಯರು ಅವುಗಳನ್ನು ರಕ್ಷಣೆ ಮಾಡಿದರು. ರೇಣಿ ಗ್ರಾಮದ ಗೌರಾ ದೇವಿಯವರ ಮುಂದಾಳತ್ವದಲ್ಲಿ ನಡೆದ ಈ ಚಳುವಳಿಯಲ್ಲಿ “ಮರಗಳನ್ನು ಕಡಿಬೇಡಿ, ಅವು ನಮ್ಮ ಜೀವ, ನೀರು, ಮಣ್ಣು ಮತ್ತು ಪರಿಸರವನ್ನು ರಕ್ಷಿಸುತ್ತವೆ” ಎಂದು ಸಂದೇಶ ನೀಡಿದರಲ್ಲದೆ, ಎಲ್ಲಾ ಮಹಿಳೆಯರು ಮರಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಇದು ಹಿಮಾಲಯದ ಅರಣ್ಯ ಸಂರಕ್ಷಣೆಯಲ್ಲಿ ಮಹತ್ವದ ಯಶಸ್ಸು ತಂದುಕೊಟ್ಟಿತು.

ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್‌ರವರು ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಬಿಷ್ಣೋಯಿ ಮಹಿಳೆಯರು ರಾಜಸ್ಥಾನದಲ್ಲಿ ಮರಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವಲ್ಲಿ ಪ್ರಸಿದ್ಧರು. 1730ರಲ್ಲಿ ಖೇಜರ್ಲಿ ಚಳವಳಿಯಲ್ಲಿ ಅಮೃತಾ ದೇವಿ ಬಿಷ್ಣೋಯಿ ಸೇರಿದಂತೆ ಅನೇಕ ಮಹಿಳೆಯರು ಮರಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಈ ಘಟನೆ ನಂತರದ ಪರಿಸರ ಸಂರಕ್ಷಣಾ ಚಳವಳಿಗಳಿಗೆ, ವಿಶೇಷವಾಗಿ ಚಿಪ್ಕೋ ಚಳವಳಿಗೆ, ಪ್ರೇರಣೆಯಾಯಿತು.

ಹವಾಮಾನದಲ್ಲಿನ ಏರುಪೇರು, ನೀರಿನ ಕೊರತೆಯನ್ನು ಇಂದು ಮಹಿಳೆಯರೇ ಹೆಚ್ಚು ಎದುರಿಸುತ್ತಿದ್ದಾರೆ. ಪ್ರತಿ ಮಹಿಳೆಯೂ ಮನೆಗೊಂದು ಗಿಡ ನೆಟ್ಟು ಪೋಷಣೆ ಮಾಡಿದರೆ, ಮುಂದಿನ ಪೀಳಿಗೆಗೆ ಪರಿಸರ ಉಳಿಯುತ್ತದೆ.

Leave a Comment

Your email address will not be published. Required fields are marked *

Scroll to Top