ಬ್ರಿಟಿಷರ ವಿರುದ್ಧ ಕೊಡಗು ಯುದ್ಧ – 1834 ಸ್ವಾತಂತ್ರ್ಯ ಕ್ರಾಂತಿ ವೀರ: ಮಾತಂಡ ಅಪ್ಪಚ್ಚು

ಸೋಮೆಯಂಡ ಕೌಸಲ್ಯ ಸತೀಶ್

1600ರಲ್ಲಿ ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪೆನಿ, ನಿಧಾನವಾಗಿ ಭಾರತದ ಅಧಿಪತ್ಯವನ್ನು ತನ್ನತ್ತ ಸಾಧಿಸಲು ಪ್ರಯತ್ನಿಸಿದ ಕಾಲಘಟ್ಟವಾದು. ಕ್ರಮೇಣವಾಗಿ ಭಾರತದಾದ್ಯಂತ ತಮ್ಮ ಅಧಿಪತ್ಯವನ್ನು ಸಾಧಿಸಿದ ಕಂಪೆನಿ ಸಣ್ಣ ಸಣ್ಣ ಸಂಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಹೀಗೆ ಇವರ ವಿರುದ್ಧ ಸಿಡಿದ ಸಣ್ಣ ಸಂಸ್ಥಾನದ ಅರಸರ ಕ್ರಾಂತಿ ಕ್ರಮೇಣ ದೇಶ ವ್ಯಾಪ್ತಿ ಆವರಿಸಿತು. ಇದರ ಪರಿಣಾಮ 1857 ಇತಿಹಾಸದ ಪುಟದಲ್ಲಿ “ಸಿಪಾಯಿ ದಂಗೆ” ಎಂದೇ ಖ್ಯಾತವಾಗಿದೆ. ಇದೇ ಹೊತ್ತಿನಲ್ಲಿ ಕಿತ್ತೂರು ಸಂಸ್ಥಾನ ಭಾರತ ಭೂ ಪಟದಲ್ಲಿ ಗುರುತಿಸಿಕೊಂಡಿತು. ಇದೇ ಕಾಲಘಟ್ಟದಲ್ಲಿ ಮೈಸೂರು ಪ್ರಾಂತ್ಯ ಬ್ರಿಟಿಷರ ತೆಕ್ಕೆಗೆ ಬಿದ್ದಾಗ, ಕೊಡಗು ಸಂಸ್ಥಾನದ ಗೊಡವೆಗೆ ಹೋಗಬಾರದೆಂದು ಬ್ರಿಟೀಷರಿಗೆ ಅನಿಸಿರಬೇಕು. ಏಕೆಂದರೆ ಟಿಪ್ಪುವಿನ 32 ಬಾರಿಯ ಆಕ್ರಮಣವನ್ನು ಹಿಮ್ಮೆಟ್ಟಿಸಿದ ಸಣ್ಣ ಸಂಸ್ಥಾನದ ಅಪ್ರತಿಮ ಸೈನಿಕರು, ಪ್ರತಿಯೊಬ್ಬ ಕೆಚ್ಚೆದೆಯ ಗುಂಡಿಗೆಯಿಂದ ಹೋರಾಡುವ ಹುಟ್ಟು ಯೋಧರು ಕೊಡವರು ಆಗಿದ್ದರು.

ಭಾರತದಾದ್ಯಂತ ಸಣ್ಣ ಸಣ್ಣ ಸಂಸ್ಥಾನಗಳಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಕಿಡಿ ಹೊತ್ತಿಕೊಳ್ಳಲಾರಂಭಿಸಿದ ಸಮಯವದು. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯ ಜೊತೆಗೆ ಕಪ್ಪದ ವಿರುದ್ಧವೂ ಅಲ್ಲಲ್ಲಿ ಕೂಗು ಕೇಳಿ ಬಂತು. ಈ ಹೋರಾಟಕ್ಕೆ ಸಮರ್ಪಕವಾದ ನಾಯಕರ ಕೊರತೆ ಎದುರಾಗಿದ್ದು ನಿಜ. ಕೊಡಗು ಸಂಸ್ಥಾನದಲ್ಲಿ ಪಾಲೇರಿ (ಹಾಲೇರಿ) ವಂಶದ ಕೊನೆಯ ರಾಜ ಚಿಕ್ಕ ವೀರರಾಜೇಂದ್ರನ ಉಪಟಳದಿಂದ ಕೊಡಗಿನಾದ್ಯಂತ ಜನರು ಬೇಸತ್ತಿದ್ದರು. ಅದುವರೆಗೆ ಕೊಡವ ದಿವಾನರ ಸಲಹೆ ಸೂಚನೆಯಂತೆ ನಡೆಯುತ್ತಿದ್ದ ಪಾಲೇರಿ ಅರಸರ ವಂಶದಲ್ಲಿ ಈ ಕೊನೆಯ ರಾಜನ ದುರ್ಬುದ್ಧಿಯಿಂದ ಸಂಸ್ಥಾನ ಅವನತಿಯ ಕಡೆಗೆ ಹೊರಳಿತು.

ರಾಜನ ಸಂಗದಲ್ಲಿ ದಿವಾನ್ ಲಕ್ಷ್ಮಿ ನಾರಾಯಣ, ಕುಂಟ ಬಸವ ಬೇಡದ್ದನ್ನು ರಾಜನ ಬಳಿ ಕಿವಿಗೆ ಊದಲು ತೊಡಗಿದ್ದರು. ಇದರ ಪರಿಣಾಮ ನಿತ್ಯ ಕೊಡವರ ಮಾರಣ ಹೋಮವೇ ನಡೆಯುವಂತಾಯಿತು ಎಂದು ಸ್ಥಳೀಯ ಜನಪದದಲ್ಲಿ ಹೇಳಲಾಗುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಡವರನ್ನು ಗಡಿಪಾರು ಮಾಡುವ ಕಾರ್ಯ ನಿರಂತರವಾಗಿ ಸಾಗಿತು. ದಿವಾನ ಲಕ್ಷ್ಮಿನಾರಾಯಣನ ಸಲಹೆಯ ಮೇರೆಗೆ ರಾಜ್ಯದ ಬೊಕ್ಕಸ ಖಾಲಿಯಾದರೆ ಮುಂದೇನು ಗತಿ ಎಂದು ವಲಸಿಗರನ್ನು ಕರೆತಂದು ಕೊಡವರ ಆಸ್ತಿಯಲ್ಲಿ ಕೂರಿಸಿದ. ಅಂತೆಯೇ 1834ನೇ ಇಸವಿ ಏಪ್ರಿಲ್ ತಿಂಗಳ 3 ಮತ್ತು 4ನೇ ತಾರೀಖಿನಲ್ಲಿ ಬ್ರಿಟಿಷ್ ಸರ್ಕಾರ ಕೊಡಗಿನ ರಾಜನನ್ನು ಪದಚ್ಯುತಗೊಳಿಸಿ, ಸಂಸ್ಥಾನವನ್ನು ತಮ್ಮ ಕೈವಶ ಮಾಡಲು 7000 ಸೈನ್ಯದೊಂದಿಗೆ, ಬ್ರಿಟೀಷ್ ಅಧಿಕಾರಿ ಲಿಂಡ್ಸೆ ಮಡಿಕೇರಿ ಪಟ್ಟಣದ ಕಡೆಗೆ ಬಂದರು. ಕುಶಾಲನಗರ, ಶನಿವಾರ ಸಂತೆ, ಹೆಬ್ಬಾಲೆ, ಕಣಿವೆಯಲ್ಲಿ ಜಮೆಗೊಂಡರು. ದುರ್ಗಮವಾದ ಹಾದಿಯಲ್ಲಿ ಸಾಗುವುದಕ್ಕಿಂತ ನಾಲ್ಕು ದಿಕ್ಕುಗಳಲ್ಲಿ ಮಡಿಕೇರಿಯನ್ನು ಸುತ್ತುವರಿಯಬೇಕೆಂದು ಬ್ರಿಟಿಷರ ಯೋಜನೆಯಾಗಿತ್ತು.

ವಿಷಯ ತಿಳಿದ ರಾಜ ನಾಲ್ನಾಡ್ ಅರಮನೆಯಲ್ಲಿ ಅಡಗಿ ಕುಳಿತ. ರಾಜನ ತಲೆದಂಡವಾದರೆ ಕೊಡಗು ಸಂಸ್ಥಾನ ಬ್ರಿಟೀಷರ ಪಾಲಾಗುತ್ತದೆ ಎಂದು ಅರಿತ ಮಾತಂಡ ಅಪ್ಪಚ್ಚು ಧೃತಿಗೆಡಲಿಲ್ಲ. ತಕ್ಷಣ ತನ್ನ ಸೈನ್ಯವನ್ನು ಸಜ್ಜುಗೊಳಿಸಿದ. ತನ್ನ ಸೈನ್ಯದೊಂದಿಗೆ ಕುಶಾಲನಗರ, ಸೋಮವಾರಪೇಟೆಯ ಕಡೆಯಿಂದ ಬ್ರಿಟೀಷರ ವಿರುದ್ಧ ಹೋರಾಡಿದ. ಸುಮಾರು ಎರಡು ದಿನಗಳ ಕಾಲ ನಡೆದ ಈ ಕಾಳಗ ಅಖಂಡ ಭಾರತದ ಗಮನವನ್ನು ಕೊಡಗಿನತ್ತ ಸೆಳೆಯುವಂತೆ ಮಾಡಿತು. ಮೂವರು ಬ್ರಿಟೀಷ್ ಅಧಿಕಾರಿಗಳಾದ ಕರ್ನಲ್ ಮಿಲ್, ಎನ್ಸೈನ್ ರೋಬರ್ಟ್, ಎನ್ಸೈನ್ ಬಾಬಿಂಗ್ಟನ್ ಹತರಾಗಿಸಿದ್ದು ಮಾತ್ರವಲ್ಲದೆ, ಸುಮಾರು 48 ಬ್ರಿಟೀಷ್ ಸೈನಿಕರನ್ನು ಈ ದಿವಾನ್ ಮಾತಂಡ ಅಪ್ಪಚ್ಚು ಕೊಂದಿದ್ದಲ್ಲದೆ, 118 ಸೈನಿಕರನ್ನು ಮಾರಣಾಂತಿಕವಾಗಿ ಗಾಯಗೊಳಿಸಿದ. ಸ್ವಾತಂತ್ರ್ಯ ಚಳುವಳಿಯಲ್ಲಿ 1857ರ ಮಹಾದಂಗೆಗೆ ಈ ಹೋರಾಟ ಇತಿಹಾಸದ ಪುಟಗಳಲ್ಲಿ ಮುನ್ನುಡಿ ಇಟ್ಟಿತು. ಈ ಯುದ್ಧದಲ್ಲಿ ಮಡಿದ ಬ್ರಿಟೀಷ್ ಅಧಿಕಾರಿಯ ಕಲ್ಲಿನ ಸ್ಮಾರಕ ಮದ್ರಾಸಿನಲ್ಲಿದೆ.

ಬ್ರಿಟೀಷರ ಪಡೆಯನ್ನು ನೋಡಿ ಬೆದರಿದ ದಿವಾನ್ ಲಕ್ಷ್ಮಿನಾರಾಯಣ ಮತ್ತು ಮಹಮ್ಮದ್ ಟೇಕರ್ ಖಾನ್ ಯುದ್ಧ ವಿರಾಮವನ್ನು ಘೋಷಿಸಿ ಬಿಳಿಬಣ್ಣದ ಧ್ವಜವನ್ನು ತೋರಿಸಿ ಸಂಧಾನಕ್ಕೆ ನಾವು ಸಿದ್ಧರೆಂದರು. ಬೇರೆ ದಾರಿ ಕಾಣದೆ ಮಡಿಕೇರಿ ಏಪ್ರಿಲ್ 6, 1834ರಲ್ಲಿ ಬ್ರಿಟೀಷರ ಕೈವಶವಾಯಿತು. ಪದಚ್ಯುತಗೊಳಿಸಿದ ರಾಜನನ್ನು ಗಡಿಪಾರು ಮಾಡಲಾಯಿತು.

ಇತಿಹಾಸದ ಪುಟದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೆಜ್ಜೆ ಕೊಡಗಿನ ಪಾಲಿಗೆ ಅವಿಸ್ಮರಣೀಯವಾದುದು. ಕೊಡಗಿನ ಯೋಧ ಪರಂಪರೆಯ ಸಾಕ್ಷಿಯಾಗಿ ನಿಂತಿದ್ದು ವೀರ ಸ್ವಾತಂತ್ರ್ಯ ಹೋರಾಟಗಾರ ಮಾತಂಡ ಅಪ್ಪಚ್ಚು. ಇಂದು ಕಿತ್ತೂರಿನ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಹೆಸರು ಪುಸ್ತಕಗಳಲ್ಲಿ ಅಚ್ಚಾಗಿಸಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಗುರುತಿಸಲಾಗಿದೆ. ಆದರೆ ಬ್ರಿಟಿಷರ ವಶಕ್ಕೆ ಕೊಡಗು ಸಂಸ್ಥಾನ ಹೋಗಬಾರದೆಂದು ಹೋರಾಡಿದ ಈ ಕ್ರಾಂತಿಕಾರಿಯನ್ನು ಯಾರೂ ನೆನೆಯುತ್ತಿಲ್ಲ.

ಸೋಮೆಯಂಡ ಕೌಸಲ್ಯ ಸತೀಶ್

Leave a Comment

Your email address will not be published. Required fields are marked *

Scroll to Top