ಹಾಕತ್ತೂರು ಶಾಲೆಯ ಹೆಮ್ಮೆ : ಶ್ರೀಮತಿ ವನಜಾ ಎಂ. ಅವರಿಗೆ ಹಾರ್ದಿಕ ಅಭಿನಂದನೆಗಳು!

ಬರಹ: ಸಂತೋಷ್ ಕುಮಾರ್ ತಂಗವೆಲು

ಕೆಲವು ಸುದ್ದಿಗಳು ಕೇವಲ ಸುದ್ದಿಯಾಗಿ ಉಳಿಯುವುದಿಲ್ಲ! ಅವು ಹೃದಯದ ಒಂದು ಮೂಲೆಯನ್ನು ತಟ್ಟಿ, ಕಣ್ಣಂಚಿನಲ್ಲಿ ಒಂದೆರಡು ಹನಿ ತಂದು, ಬಾಲ್ಯದ ಇಡೀ ಪುಟವನ್ನೇ ಮತ್ತೊಮ್ಮೆ ತೆರೆದಿಡುತ್ತವೆ. ಇವತ್ತು ಬಂದ ಈ ಸುದ್ದಿಯೂ ಅಂಥದ್ದೇ.

ಮಡಿಕೇರಿಯಿಂದ ಸುಮಾರು 10-12 ಕಿಮೀ ದೂರದಲ್ಲಿರುವ ಹಾಕತ್ತೂರು-ಬಿಳಿಗೇರಿ ಗ್ರಾಮ ಪ್ರದೇಶ, ಕೊಡಗಿನ ಗ್ರಾಮೀಣ ಮಕ್ಕಳ ಪಾಲಿಗೆ ಬರೀ ಒಂದು ಊರಲ್ಲ! ಅದೊಂದು ಕನಸಿನ ತಾಣ, ಬದುಕಿನ ಮೊದಲ ಬೆಳಕು! ಅಲ್ಲಿಯ ಸರ್ಕಾರಿ ಪ್ರೌಢಶಾಲೆ, ನಮ್ಮ ಹಾಕತ್ತೂರು ಶಾಲೆ, ತಲೆಮಾರುಗಳ ಕನಸುಗಳಿಗೆ ರೆಕ್ಕೆ ಕಟ್ಟಿಕೊಟ್ಟ ತಾಯ್ಗರ್ಭ. ಆ ಶಾಲೆಗೆ ಇಂದು ಮತ್ತೊಂದು ಹೆಮ್ಮೆಯ ಗರಿ ! ಅಲ್ಲಿಯ ವಿಜ್ಞಾನ ಶಿಕ್ಷಕಿ ಶ್ರೀಮತಿ ವನಜಾ ಎಂ. ಅವರಿಗೆ ರೋಟರಿ ಮಡಿಕೇರಿ ವತಿಯಿಂದ ‘ಉತ್ತಮ ಶಿಕ್ಷಕಿ ಪ್ರಶಸ್ತಿ’ (Nation Builders Award) ಪ್ರದಾನ ಮಾಡಲಾಗಿದೆ.

ಈ ಸುದ್ದಿ ಓದಿದ ಕ್ಷಣ ಮನಸ್ಸು ಒಮ್ಮೆಲೇ ಇಪ್ಪತ್ತು ವರ್ಷ ಹಿಂದಕ್ಕೆ ಜಾರಿತು. ಯಾಕೆಂದರೆ ಆ ಶಾಲೆ ನಮಗೆ ಕೇವಲ ಶಾಲೆಯಲ್ಲ, ಅಲ್ಲಿ ನಮ್ಮ ತಂದೆಯವರೂ ಒಂದು ಕಾಲದಲ್ಲಿ ಅಧ್ಯಾಪಕರಾಗಿದ್ದವರು, ಮುಂದೆ ಮುಖ್ಯೋಪಾಧ್ಯಾಯರಾಗಿಯೂ ಸೇವೆ ಸಲ್ಲಿಸಿದವರು. ಅವರ ಜೀವನದ ಬಹಳಷ್ಟು ವರ್ಷಗಳು ಈ ಶಾಲೆಯ ತರಗತಿ ಕೋಣೆಗಳಲ್ಲಿ, ಮಕ್ಕಳ ನಡುವೆಯೇ ಕಳೆದವು. ಅಂಥ ಶಾಲೆಯ ಒಬ್ಬ ಶಿಕ್ಷಕಿಗೆ ಇಂದು ಪ್ರಶಸ್ತಿ ಬಂದಿದೆ ಎಂದಾಗ, ಅದು ಕೇವಲ ಒಬ್ಬ ವ್ಯಕ್ತಿಗೆ ಬಂದ ಗೌರವವಲ್ಲ ಅದು ನಮ್ಮ ತಂದೆಯವರಂಥ ಎಷ್ಟೋ ಗುರುಗಳು ಬಿತ್ತಿ ಬೆಳೆಸಿದ ಪರಂಪರೆಗೆ ಸಂದ ಗೌರವ!

ಶಾಲೆಯ ಅಂಗಳದಲ್ಲಿ ನಾವೆಲ್ಲ ಸೇರಿ ಪುಟ್ಟ ಪುಟ್ಟ ಕೈಗಳಿಂದ ನೆಟ್ಟ ಆ ಸಿಲ್ವರ್ ಮರಗಳು ಇವತ್ತು ಎಷ್ಟು ಎತ್ತರಕ್ಕೆ ಬೆಳೆದಿವೆಯೋ ಗೊತ್ತಿಲ್ಲ. ಆದರೆ ಆ ಮರಗಳಂತೆಯೇ ಆ ದಿನಗಳ ನೆನಪುಗಳೂ ಮನಸ್ಸಿನ ಮಣ್ಣಿನಲ್ಲಿ ಆಳವಾಗಿ ಬೇರೂರಿ, ವರ್ಷ ಕಳೆದಂತೆ ಇನ್ನಷ್ಟು ಗಟ್ಟಿಯಾಗಿ ಬೆಳೆಯುತ್ತಿವೆ.

SSLC ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಮಾಸ್ತರುಗಳು ರಾತ್ರಿ ಪಾಳಿ ಮಾಡಿ, ದೀಪದ ಬೆಳಕಿನಲ್ಲಿ ಕುಳಿತು ಪಾಠ ಹೇಳಿಕೊಟ್ಟದ್ದು… ತಮ್ಮ ಮನೆಯ ಚಿಂತೆ ಬಿಟ್ಟು ನಮ್ಮ ಭವಿಷ್ಯದ ಚಿಂತೆ ಹೊತ್ತದ್ದು… ಪುಟ್ಟ ಪುಟ್ಟ ಸ್ಟೇಜ್ ಪ್ರೋಗ್ರಾಂಗಳನ್ನು ಮಾಡಿ, ಸೀರೆಗಳಿಂದ ಪರದೆ ಕಟ್ಟಿ, ಊರ ಜನರನ್ನೆಲ್ಲ ಒಂದೆಡೆ ಸೇರಿಸಿ ರಂಜಿಸಿದ್ದು ,ಇವೆಲ್ಲ ಇಂದಿಗೂ ಕಣ್ಣ ಮುಂದೆ ನಿನ್ನೆ ನಡೆದಂತೆಯೇ ಇವೆ. ಕೆಲವು ವರುಷಗಳ ಹಿಂದೆಯೇ ಶಾಲೆಯ SSLC ಫಲಿತಾಂಶ ನೂರಕ್ಕೆ ನೂರು ಬಂದಿತ್ತು. ಇದು ಒಂದು ಸಣ್ಣ ಸಂಗತಿಯಲ್ಲ! ಇದು ಆ ಗುರುಗಳ ಬೆವರಿನ, ನಿದ್ದೆಗೆಟ್ಟ ರಾತ್ರಿಗಳ, ಮತ್ತು ನಿಸ್ವಾರ್ಥ ಪ್ರೀತಿಯ ಫಲ.

ಕಾಲ ಉರುಳಿತು. ಆಗ ಚಿಕ್ಕವರಾಗಿ ಬೆಂಚಿನ ಮೇಲೆ ಕುಳಿತಿದ್ದ ಆ ಮಕ್ಕಳೆಲ್ಲ ಇಂದು ದೊಡ್ಡವರಾಗಿ, ಬೇರೆ ಬೇರೆ ಊರುಗಳಲ್ಲಿ, ದೇಶಗಳಲ್ಲಿ, ಒಳ್ಳೆಯ ಸ್ಥಾನಗಳಲ್ಲಿ ಇದ್ದಾರೆ. ಆದರೆ ಎಷ್ಟೇ ದೂರ ಹೋದರೂ, ಎಷ್ಟೇ ಎತ್ತರಕ್ಕೇರಿದರೂ, ಆ ಶಾಲೆಯ ಕದ ದಾಟಿದ ಆ ಮೊದಲ ದಿನ, ಆ ಬೋರ್ಡ್ ಮೇಲಿನ ಮೊದಲ ಅಕ್ಷರ, ಗುರುಗಳು ತಲೆಸವರಿ ಹೇಳಿದ ಮೊದಲ ಪ್ರೀತಿಯ ಮಾತು ಇವು ಯಾವ ವಿದ್ಯಾರ್ಥಿಯೂ ಯಾವತ್ತೂ ಮರೆಯುವುದಿಲ್ಲ. ಇವತ್ತು ಇವರೆಲ್ಲ ಎಲ್ಲಿದ್ದರೂ, ಏನಾಗಿದ್ದರೂ, ಅದರ ಬೇರುಗಳು ಇರೋದು ಆ ಹಾಕತ್ತೂರು ಶಾಲೆಯ ಮಣ್ಣಿನಲ್ಲೇ.

ಒಂದು ಗ್ರಾಮೀಣ ಶಾಲೆ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ಎಂದರೆ ಅದರ ಹಿಂದೆ ಎಷ್ಟೋ ಕೈಗಳ ಶ್ರಮವಿದೆ. ಸುತ್ತಮುತ್ತಲಿನ ಸಂಘಗಳು, ವಿಶೇಷವಾಗಿ ನಮ್ಮ ತ್ರಿನೇತ್ರ ಯುವಕ ಸಂಘ, ಊರಿನ ಹಲವಾರು ಸಂಸ್ಥೆಗಳು, ಮನಸ್ಸು ಬಿಚ್ಚಿ ಸಹಾಯ ಮಾಡಿದ ದಾನಿಗಳು, ತಮ್ಮ ಇಡೀ ಬದುಕನ್ನೇ ಶಾಲೆಗೆ ಮುಡಿಪಾಗಿಟ್ಟ ಹಳೆಯ ಶಿಕ್ಷಕರು, ಆ ಪರಂಪರೆಯನ್ನು ಇಂದು ಮುಂದುವರಿಸಿಕೊಂಡು ಹೋಗುತ್ತಿರುವ ಇಂದಿನ ಶಿಕ್ಷಕರು, ಆ ಶಾಲೆಯಿಂದ ಬಂದು ಇಂದಿಗೂ ಆ ಶಾಲೆಯನ್ನು ಮರೆಯದ ಹಳೆಯ ವಿದ್ಯಾರ್ಥಿಗಳು, ಮತ್ತು ಇಂದು ಹೊಸ ಕನಸು ಹೊತ್ತು ತರಗತಿಗೆ ಬರುತ್ತಿರುವ ಈಗಿನ ಪುಟ್ಟ ವಿದ್ಯಾರ್ಥಿಗಳು .. ಇವರೆಲ್ಲರ ಬೆವರು, ಪ್ರೀತಿ, ಕನಸು, ನಂಬಿಕೆ ಒಂದೇ ಕಡೆ ಬಂದು ಸೇರಿ ಇಂದು ಈ ಆಲದ ಮರವಾಗಿ ನಿಂತಿದೆ. ಆಗ ಬಿತ್ತಿದ ಆ ಪುಟ್ಟ ಕನಸು .. ಇಂದು ಇಷ್ಟು ದೊಡ್ಡದಾಗಿ ಬೆಳೆದು ಆಕಾಶ ಮುಟ್ಟುತ್ತಿದೆ.

ಹಾಕತ್ತೂರು ಶಾಲೆ ನಮ್ಮ ಮನದ ಪುಟದ ಒಂದು ಶಾಶ್ವತ ಅಧ್ಯಾಯ. ಎಂದೆಂದಿಗೂ ಅಳಿಸಲಾಗದ್ದು. ಆ ಶಾಲೆಯ ಎಲ್ಲ ಶಿಕ್ಷಕರಿಗೆ, ನಮಗೆ ಅಕ್ಷರ ಕಲಿಸಿದ ಹಳೆಯ ಗುರುಗಳಿಗೆ, ಇಂದು ಆ ಪರಂಪರೆಯನ್ನು ಮುನ್ನಡೆಸುತ್ತಿರುವ ಎಲ್ಲ ಗುರುಗಳಿಗೆ, ಮತ್ತು ವಿಶೇಷವಾಗಿ ಇಂದು ಪ್ರಶಸ್ತಿ ಪಡೆದ ಶ್ರೀಮತಿ ವನಜಾ ಎಂ. ಅವರಿಗೆ, Oasis ಕನ್ನಡ ಪತ್ರಿಕೆಯ ಮೂಲಕ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ಮೇಡಂ, ನಿಮ್ಮ ಈ ಸಾಧನೆ ನಮ್ಮೆಲ್ಲರ ಹೆಮ್ಮೆ! ನಿಮ್ಮಂಥ ಗುರುಗಳಿಂದಲೇ ಈ ಶಾಲೆ ಇನ್ನೂ ಉಸಿರಾಡುತ್ತಿದೆ, ಈ ಊರು ಇನ್ನೂ ಬೆಳಗುತ್ತಿದೆ.

ನಮ್ಮ ಹಾಕತ್ತೂರು ಶಾಲೆ ಇನ್ನೂ ಎತ್ತರಕ್ಕೆ ಬೆಳೆಯಲಿ! ಇಂಥ ಎಷ್ಟೋ ಪ್ರಶಸ್ತಿಗಳು ಇಲ್ಲಿಯ ಅಧ್ಯಾಪಕರ ಮಡಿಲಿಗೆ ಬರಲಿ! ಇಲ್ಲಿ ಕಲಿಯುವ ಪ್ರತಿ ಮಗುವಿನ ಕನಸೂ ನನಸಾಗಲಿ! ಇಲ್ಲಿಂದ ಹೊರಟ ಪ್ರತಿ ಹೆಜ್ಜೆಯೂ ಬೆಳಕಿನ ದಾರಿಯಲ್ಲಿ ಸಾಗಲಿ! 🙏

2 thoughts on “ಹಾಕತ್ತೂರು ಶಾಲೆಯ ಹೆಮ್ಮೆ : ಶ್ರೀಮತಿ ವನಜಾ ಎಂ. ಅವರಿಗೆ ಹಾರ್ದಿಕ ಅಭಿನಂದನೆಗಳು!”

Leave a Comment

Your email address will not be published. Required fields are marked *

Scroll to Top