
ಪ್ರಿಯ ಓದುಗರೇ, ಮಲೆನಾಡಿನ ಮಂಜಿನ ದಾರಿಯಲ್ಲಿ ನಡೆದಿದ್ದೀರಾ?
ಮುಂದೆ ನಾಲ್ಕು ಹೆಜ್ಜೆ ಕೂಡ ಕಾಣುವುದಿಲ್ಲ. ಆದರೆ ಪರಿಚಿತ ದಾರಿ ಎಂಬ ನಂಬಿಕೆಯಲ್ಲಿ ಕಾಲು ತಾನಾಗಿ ಮುಂದೆ ಹೋಗುತ್ತದೆ. ಕಳ್ಳರು ಕಾದು ಕುಳಿತಿರುವುದು ಆ ನಂಬಿಕೆಗೇ.
ಒಂದು ಕಥೆ ಹೇಳುತ್ತೇನೆ ಕೇಳಿ.
ನಮ್ಮ ಕೊಡಗಿನ ಹಳ್ಳಿಯೊಂದರಲ್ಲಿ ರಾಮಣ್ಣ ಅಂತ ಕಾಫಿ ಬೆಳೆಗಾರ. ಅರವತ್ತು ದಾಟಿದವರು! ಫೋನ್ ಬಳಸುವುದು ಮಗ ಕಲಿಸಿಕೊಟ್ಟಷ್ಟೇ. ಒಂದು ಸಂಜೆ ವಾಟ್ಸಾಪ್ನಲ್ಲಿ ಒಂದು ಸಂದೇಶ ಬಂತು. ದೂರದ ಸಂಬಂಧಿಯ ಹೆಸರು, ಜೊತೆಗೆ ಒಂದು ಫೈಲ್. ಹೆಸರು “ಮದುವೆ ಆಮಂತ್ರಣ”!
ಹಳ್ಳಿಯಲ್ಲಿ ಮದುವೆಯ ಕರೆಯೋಲೆ ಬಂದರೆ ಯಾರು ಓದದೆ ಬಿಡುತ್ತಾರೆ? ರಾಮಣ್ಣ ಒತ್ತಿದರು. ಫೋನ್ ಕೇಳಿತು, “ಇನ್ಸ್ಟಾಲ್ ಮಾಡಬೇಕೆ?” ಅವರು ಹೌದು ಅಂದರು. ಮತ್ತೆ ಕೇಳಿತು, “ಸಂದೇಶಗಳನ್ನು ನೋಡಲು ಅನುಮತಿ ಕೊಡುವಿರಾ?” ಅದಕ್ಕೂ ಹೌದು ಅಂದರು. ಆಮಂತ್ರಣ ಓದುವ ಆತುರದಲ್ಲಿ!
ಆಮಂತ್ರಣ ತೆರೆಯಲೇ ಇಲ್ಲ. ಬೆಳಗಾಗುವಷ್ಟರಲ್ಲಿ ಬ್ಯಾಂಕಿನಿಂದ ಸಂದೇಶ ಬಂತು. ಖಾತೆಯಿಂದ ಹಣ ಹೋಗಿತ್ತು!
ಹೈದರಾಬಾದಿನಲ್ಲಿ ಒಬ್ಬ ಐಟಿ ಉದ್ಯೋಗಿಗೂ ಇದೇ ಆಯಿತು! ಮದುವೆ ಆಮಂತ್ರಣದ ಹೆಸರಿನಲ್ಲಿ ಬಂದ ಫೈಲ್!ಅದೇ ಬಲೆ! ಓದಿದವರು, ತಿಳಿದವರೂ ಬೀಳುತ್ತಾರೆ ಎಂದರೆ ತಪ್ಪು ಅವರದಲ್ಲ, ಬಲೆಯದು.
ಏನಿದು APK? ಫೋನಿನಲ್ಲಿ ಒಂದು APP ಇನ್ಸ್ಟಾಲ್ ಮಾಡುವ ಫೈಲ್ ಅಷ್ಟೇ. ಚೆಂದದ ಹಣ್ಣಿನ ಒಳಗೆ ಹುಳು ಕೂತಂತೆ! ಈ ಫೈಲ್ ಮದುವೆ ಕರೆಯೋಲೆಯಂತೆ ಕಾಣುತ್ತದೆ. ಆದರೆ ಒಮ್ಮೆ ಇನ್ಸ್ಟಾಲ್ ಆದರೆ ನಿಮ್ಮ ಸಂದೇಶಗಳನ್ನು ಓದುತ್ತದೆ. ಬ್ಯಾಂಕಿನಿಂದ ಬರುವ OTP ಕದಿಯುತ್ತದೆ! ಹೆಸರು ಬದಲಾಗುತ್ತದೆ ಅಷ್ಟೇ. ಒಮ್ಮೆ ಪಿಎಂ ಕಿಸಾನ್ ಕಂತು! ಇನ್ನೊಮ್ಮೆ ಸಂಚಾರ ದಂಡದ ನೋಟಿಸು! ಮತ್ತೊಮ್ಮೆ ಕೆಲಸದ ಸಂದರ್ಶನ!
ನನಗೆ ಎಲ್ಲಕ್ಕಿಂತ ನೋವಾಗುವುದು ಹಿರಿಯರ ಬಗ್ಗೆ. ಅವರಿಗೆ ಆಮಂತ್ರಣ ಎಂದರೆ ಗೌರವ! ಆ ಗೌರವವನ್ನೇ ಕಳ್ಳರು ಆಯುಧ ಮಾಡಿಕೊಂಡಿದ್ದಾರೆ!
ಹಾಗಾದರೆ ಏನು ಮಾಡಬೇಕು? ಮೂರು ಮಾತು ನೆನಪಿಡಿ.
ಒಂದು, ಹೆಸರಿನ ಕೊನೆಯಲ್ಲಿ .APK ಎಂದಿದ್ದರೆ ಅದನ್ನು ಮುಟ್ಟಲೇಬೇಡಿ. ನಿಜವಾದ ಆಮಂತ್ರಣ ಒಂದು ಚಿತ್ರವಾಗಿ ಅಥವಾ PDF ಆಗಿ ಬರುತ್ತದೆ, ಆ್ಯಪ್ ಆಗಿ ಅಲ್ಲ!
ಎರಡು, ಆ್ಯಪ್ಗಳನ್ನು ಫೋನಿನ ಅಧಿಕೃತ ಅಂಗಡಿಯಿಂದ ಮಾತ್ರ ಇಳಿಸಿಕೊಳ್ಳಿ!
ಮೂರು, ಒಂದು ವೇಳೆ ಒತ್ತಿಬಿಟ್ಟರೆ ನಾಚಿಕೆ ಪಡಬೇಡಿ. ತಕ್ಷಣ ಫೋನಿನ ಇಂಟರ್ನೆಟ್ ಆಫ್ ಮಾಡಿ, ಬ್ಯಾಂಕಿಗೆ ಕರೆ ಮಾಡಿ, ಸೈಬರ್ Helpline ತಿಳಿಸಿ. ಮೊದಲ ಗಂಟೆ ಬಹಳ ಮುಖ್ಯ!
ಇಂದೇ ನಿಮ್ಮ ಮನೆಯ ಹಿರಿಯರ ಬಳಿ ಕೂತು ಇದನ್ನು ಹೇಳಿ. “ಅಪ್ಪಾ, ಅಮ್ಮಾ, ಯಾವ ಫೈಲ್ ಬಂದರೂ ಒತ್ತುವ ಮುನ್ನ ನನ್ನನ್ನು ಕೇಳಿ” ಅನ್ನಿ. ಒಂದು ಸಣ್ಣ ಮಾತು, ಒಂದು ಬೀಜ ಬಿತ್ತಿದಂತೆ. ಮುಂದೆ ಅದು ಮರವಾಗಿ ನೆರಳು ಕೊಡುತ್ತದೆ!
ಬರಹ: ಸಂತೋಷ್ಕುಮಾರ್ ತಂಗವೇಲು

