
ನವೆಂಬರ್ 1 ಕನ್ನಡ ರಾಜ್ಯೋತ್ಸವ! ಕರ್ನಾಟಕ ಏಕೀಕರಣವಾಗಿ ಎಪ್ಪತ್ತು ವರ್ಷ ತುಂಬುತ್ತಿವೆ. ವಿಧಾನಸೌಧದ ಮೇಲೆ ಕೆಂಪು ಹಳದಿ ಬಾವುಟ ಹಾರುತ್ತದೆ! ಶಾಲೆಯ ಮಕ್ಕಳು ನಾಡಗೀತೆ ಹಾಡುತ್ತಾರೆ! ವೇದಿಕೆಯಲ್ಲಿ ಭಾಷಣ!ಮೊಬೈಲ್‌ನಲ್ಲಿ ಶುಭಾಶಯ!
ಆದರೆ ಗೆಳೆಯರೇ, ಒಂದು ಪ್ರಶ್ನೆ ಕೇಳುತ್ತೇನೆ. ನವೆಂಬರ್ 2ರ ಬೆಳಿಗ್ಗೆ ಕನ್ನಡ ಎಲ್ಲಿರುತ್ತದೆ?
ನಿಮ್ಮ ಮನೆಯಲ್ಲಿ? ನಿಮ್ಮ ಮಕ್ಕಳ ನಾಲಿಗೆಯಲ್ಲಿ? ನೀವು ಹೋಗುವ ಅಂಗಡಿಯಲ್ಲಿ?
ಈ ಭಾಷೆಯ ಬೇರು ಹಲ್ಮಿಡಿ ಶಾಸನ !ಕ್ರಿಸ್ತಶಕ ಐದನೇ ಶತಮಾನದ್ದು ಎಂದು ಹೇಳುತ್ತಾರೆ! ಪಂಪ, ಬಸವಣ್ಣ, ಅಕ್ಕಮಹಾದೇವಿ, ಕನಕ, ಪುರಂದರ, ಬೇಂದ್ರೆ, ಕಾರಂತ, ಅನಂತಮೂರ್ತಿ, ಕಾರ್ನಾಡ್, ಕಂಬಾರ. ಈ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ! ಇಷ್ಟು ಶ್ರೀಮಂತ ತಾಯಿ ತನ್ನದೇ ಮನೆಯಲ್ಲಿ ಅತಿಥಿಯಂತೆ ನಿಲ್ಲಬೇಕಾಗಿ ಬಂದರೆ, ತಪ್ಪು ಯಾರದ್ದು?
ಒಂದು ಮನೆಯನ್ನು ಕಲ್ಪಿಸಿಕೊಳ್ಳಿ. ಅಪ್ಪ ಅಮ್ಮ ಇಬ್ಬರೂ ಕನ್ನಡಿಗರು. ಇಬ್ಬರೂ ದೊಡ್ಡ ನಗರದಲ್ಲಿ ಒಳ್ಳೆಯ ಕೆಲಸದಲ್ಲಿದ್ದಾರೆ. ಮಗ ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾನೆ. ಮನೆಯಲ್ಲಿ ಕಾರ್ಟೂನ್ ಇಂಗ್ಲಿಷ್, ಯೂಟ್ಯೂಬ್ ಇಂಗ್ಲಿಷ್. “ಪುಟ್ಟ, ಕನ್ನಡದಲ್ಲಿ ಮಾತಾಡು” ಎಂದರೆ “ಇಟ್ಸ್ ಟೂ ಡಿಫಿಕಲ್ಟ್” ಎಂಬ ಉತ್ತರ!

ಇಂತಹ ಮನೆಗಳು ಇಂದು ಅನೇಕ ಕಡೆ ಇವೆ!
ಆ ಮಗುವಿನ ತಪ್ಪಿಲ್ಲ!ಅಪ್ಪ ಅಮ್ಮನ ಉದ್ದೇಶವೂ ಕೆಟ್ಟದ್ದಲ್ಲ! ಮಗನ ಭವಿಷ್ಯಕ್ಕೆ ಇಂಗ್ಲಿಷ್ ಬೇಕು ಎಂದು ಅವರು ನಂಬಿದ್ದಾರೆ. ಅದು ನಿಜವೂ ಹೌದು. ಆದರೆ ಇಂಗ್ಲಿಷ್ ಕಲಿಯುವುದರ ಜೊತೆಗೆ ಕನ್ನಡ ಉಳಿಸಿಕೊಳ್ಳುವುದು ಅಸಾಧ್ಯವೇ? ಭಾಷೆ ಎಂದರೆ ಬರೀ ಸಂಬಳದ ಸಾಧನವೇ? ಹಾಗಾದರೆ ಅಜ್ಜಿ ಹಾಡುವ ಜೋಗುಳಕ್ಕೆ ಯಾವ ಬೆಲೆ?
ಒಂದು ಸಣ್ಣ ಗಿಡ ಮರವಾಗುವುದು ಬೇರಿನಿಂದ! ಬೇರಿಗೆ ನೀರು ಹಾಕುವವರು ಇಲ್ಲದಿದ್ದರೆ ಮರ ಎಷ್ಟು ದಿನ ನಿಲ್ಲುತ್ತದೆ? ಮಂಜು ಹೊದ್ದ ಬೆಟ್ಟದ ಮೇಲೆ ಹುಟ್ಟುವ ತೊರೆ ಒಣಗಿದ ದಿನ ಕಾವೇರಿಯೂ ಬರಿದಾಗುತ್ತದೆ! ಭಾಷೆಯೂ ಹಾಗೆಯೇ. ಅದು ಹರಿಯುವುದು ಮನೆ ಮನೆಯ ಮಾತಿನಲ್ಲಿ!
ನೆರೆಯ ರಾಜ್ಯಗಳನ್ನು ನೋಡಿ. ತಮಿಳರು ತಮ್ಮ ಭಾಷೆಯನ್ನು ಹೆಮ್ಮೆಯಿಂದ ಮಾತನಾಡುತ್ತಾರೆ. ಮಲಯಾಳಿಗಳೂ ಹಾಗೆಯೇ. ನಾವು ಮಾತ್ರ “ಅಡ್ಜಸ್ಟ್ ಮಾಡ್ಕೊಳ್ಳೋಣ ಬಿಡಿ” ಎನ್ನುತ್ತೇವೆ. ಅಂಗಡಿಯಲ್ಲಿ ಕನ್ನಡ ಬರದವನಿಗೆ ನಾವೇ ಹಿಂದಿಯಲ್ಲಿ ಮಾತನಾಡುತ್ತೇವೆ. ಹೊಂದಿಕೊಳ್ಳುವುದು ಒಳ್ಳೆಯ ಗುಣ! ಆದರೆ ಪ್ರತಿ ಬಾರಿ ಹೊಂದಿಕೊಳ್ಳುವವರು ನಾವೇ ಆದರೆ, ಕನ್ನಡ ಎಲ್ಲಿ ಉಳಿಯುತ್ತದೆ?
ನವೆಂಬರ್ 1ಕ್ಕೆ ಪ್ರೊಫೈಲ್ ಚಿತ್ರಕ್ಕೆ ಕೆಂಪು ಹಳದಿ ಚೌಕಟ್ಟು ಹಾಕುವುದು ಸುಲಭ! ಅದು ತಪ್ಪೂ ಅಲ್ಲ! ಆದರೆ ಅದು ಸಾಕೇ?

ಒಮ್ಮೆ ಹಿಂದಿರುಗಿ ನೋಡಿ. ಕನ್ನಡಕ್ಕಾಗಿ ಬೀದಿಗೆ ಇಳಿದ ದಿನಗಳಿದ್ದವು. ಗೋಕಾಕ್ ಸಮಿತಿಯ ವರದಿಯನ್ನು ಬೆಂಬಲಿಸಿ ನಾಡಿನಾದ್ಯಂತ ಎದ್ದ ಚಳವಳಿಯಲ್ಲಿ ವರನಟ ಡಾ. ರಾಜ್‌ಕುಮಾರ್ ಮುಂಚೂಣಿಯಲ್ಲಿ ನಿಂತರು! ಪ್ರೌಢಶಾಲೆಯಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಬೇಕು ಎಂಬುದು ಆ ಹೋರಾಟದ ಕೂಗಾಗಿತ್ತು. ಬೆಳ್ಳಿತೆರೆಯ ನಾಯಕ ಬೀದಿಯಲ್ಲಿ ಕನ್ನಡದ ಪರ ನಿಂತಾಗ ಜನ ಅವನ ಹಿಂದೆ ನಿಂತರು. ಆ ಕೈ ಎತ್ತಿದ ಒಂದು ಕ್ಷಣ ಇಂದಿಗೂ ನಮ್ಮ ನೆನಪಿನಲ್ಲಿದೆ!ಇಂದು ಆ ಕೈ ಎತ್ತುವವರು ಯಾರು?
ಒಳ್ಳೆಯ ಸುದ್ದಿಯೂ ಇದೆ. ಇಂದಿನ ಯುವಕರು ಕನ್ನಡದಲ್ಲಿ ವಿಡಿಯೋ ಮಾಡುತ್ತಿದ್ದಾರೆ, ಕನ್ನಡದಲ್ಲಿ ಬರೆಯುತ್ತಿದ್ದಾರೆ. ಕನ್ನಡ ಸಿನಿಮಾ ಕೆಜಿಎಫ್, ಕಾಂತಾರಗಳ ಮೂಲಕ ಭಾರತದ ಉದ್ದಗಲಕ್ಕೆ ತಲುಪಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಕ್ಕಿದೆ. ಆದರೆ ಕಾನೂನು, ಪ್ರಾಧಿಕಾರ, ಬಿರುದು ಮಾತ್ರ ಭಾಷೆಯನ್ನು ಉಳಿಸುವುದಿಲ್ಲ. ಉಳಿಸುವುದು ಮನೆಯ ಮಾತು!
ಹಾಗಾದರೆ ಈ ವರ್ಷ ಮಾಡುವುದೇನು? ದೊಡ್ಡ ಘೋಷಣೆ ಬೇಡ. ಚಿಕ್ಕ ಪ್ರತಿಜ್ಞೆ ಸಾಕು.
ಮಕ್ಕಳ ಜೊತೆ ಮನೆಯಲ್ಲಿ ಕನ್ನಡದಲ್ಲಿ ಮಾತನಾಡಿ!
ಒಂದು ಕನ್ನಡ ಪುಸ್ತಕ ಮಗುವಿನ ಕೈಗೆ ಕೊಡಿ!
ಅಜ್ಜ ಅಜ್ಜಿಯಿಂದ ಒಂದು ಹಳೆಯ ಹಾಡು ಕೇಳಿ!
ಕನ್ನಡಿಗನೊಂದಿಗೆ ಕನ್ನಡದಲ್ಲೇ ಮಾತನಾಡಿ!
ಕನ್ನಡ ನಮ್ಮ ತಾಯಿ. ತಾಯಿ ಮುದುಕಿಯಾದರೂ, ನಮ್ಮ ಮನೆಯಲ್ಲೇ ಇರಬೇಕಲ್ಲವೇ? ಅವಳನ್ನು ಮನೆಯ ಹೊರಗೆ ನಿಲ್ಲಿಸಿ ಹೂವಿನ ಹಾರ ಹಾಕಿದರೆ ಅದು ಪ್ರೀತಿಯೇ?
ನವೆಂಬರ್ 1ರ ಬಾವುಟ ಇಳಿದ ಮೇಲೂ ಕನ್ನಡ ನಿಮ್ಮ ನಾಲಿಗೆಯ ಮೇಲೆ ಉಳಿಯಲಿ. ಅಷ್ಟೇ ನಮ್ಮ ಕೋರಿಕೆ.
ಜೈ ಕನ್ನಡಾಂಬೆ. ಜೈ ಕರ್ನಾಟಕ ಮಾತೆ.
ಬರಹ: ಸಂತೋಷ್‌ಕುಮಾರ್ ತಂಗವೇಲು

