
ಇವತ್ತಿನ ಪ್ರಪಂಚದಲ್ಲಿ ಫ್ರೀಯಾಗಿ ಸಿಗುವುದು Advice ಮಾತ್ರ! ಯಾರೂ ನಿಮ್ಮ ಸಮಸ್ಯೆಗಳನ್ನು ಕೇಳುವ Empathy ಹೊಂದಿರುವುದಿಲ್ಲ. ಯಾಕೆಂದರೆ ಭಾವನೆಗಳೇ ಈಗ ಸತ್ತು ಹೆಣವಾಗಿವೆ!
ಪ್ರಿಯ ಓದುಗರೇ, ಇದು ಕಠೋರ ಮಾತು! ಆದರೆ ಕಣ್ಣು ತೆರೆದು ಸುತ್ತ ನೋಡಿ! ಆಸ್ಪತ್ರೆಯ ಕಾರಿಡಾರಿನಲ್ಲಿ ಒಮ್ಮೆ ನಿಂತು ನೋಡಿ! ಅಲ್ಲಿ ಕಾಣುವ ದೃಶ್ಯ ನಮ್ಮ ಕಾಲದ ಕನ್ನಡಿ!
ಮಂಜುನಾಥ ಅಂತ ಒಬ್ಬರು. ಅವರ ಹೆಂಡತಿ ಐಸಿಯುನಲ್ಲಿ ಮಲಗಿದ್ದರು. ಹೊರಗೆ ಕಾರಿಡಾರಿನ ಬೆಂಚಿನ ಮೇಲೆ ಮಂಜುನಾಥ ಕುಸಿದು ಕೂತಿದ್ದರು. ಎರಡು ದಿನದಿಂದ ನಿದ್ದೆ ಇಲ್ಲ! ಹೊಟ್ಟೆಗೆ ಏನೂ ಹೋಗಿಲ್ಲ! ಬಂಧುಗಳು ಒಬ್ಬೊಬ್ಬರಾಗಿ ಬಂದರು. ಒಬ್ಬರು ಹೇಳಿದರು, “ಈ ಆಸ್ಪತ್ರೆ ಸರಿಯಿಲ್ಲ, ಬೇರೆ ಕಡೆ ಸೇರಿಸಿ.” ಇನ್ನೊಬ್ಬರು, “ನಮ್ಮ ಪರಿಚಯದವರಿಗೂ ಹೀಗೇ ಆಗಿತ್ತು, ಆಯುರ್ವೇದ ಮಾಡಿಸಿ.” ಮತ್ತೊಬ್ಬರು, “ಇನ್ಶೂರೆನ್ಸ್ ಕ್ಲೇಮ್ ಮಾಡಿದ್ದೀರಾ?” ಅಂತ. ಎಲ್ಲರ ಬಳಿ ಸಲಹೆ ಇತ್ತು. ಒಬ್ಬರೂ ಅವರ ಪಕ್ಕ ಕೂರಲಿಲ್ಲ! ಒಬ್ಬರೂ ಅವರ ಕೈ ಹಿಡಿಯಲಿಲ್ಲ!
ಸ್ವಲ್ಪ ಹೊತ್ತಿನ ನಂತರ ನೆಲ ಒರೆಸಲು ಬಂದ ಲಕ್ಷ್ಮಿ ಅಂತ ಒಬ್ಬ ಕೆಲಸದ ಹೆಂಗಸು ನಿಂತಳು. ಅವಳ ಕೈಯಲ್ಲಿ ಒರೆಸುವ ಬಟ್ಟೆ ಇತ್ತು! ಅವಳು ಅವರನ್ನೊಮ್ಮೆ ನೋಡಿದಳು! ಏನೂ ಹೇಳಲಿಲ್ಲ! ಹೋಗಿ ಒಂದು ಲೋಟ ನೀರು ತಂದಳು. “ಅಣ್ಣಾ, ಮೊದಲು ಇದನ್ನು ಕುಡೀರಿ. ನೀವು ಊಟ ಮಾಡಿಲ್ಲ ಅಲ್ವಾ?” ಅಂದಳು. ಅಷ್ಟು ಕೇಳಿದ್ದೇ ತಡ, ಮಂಜುನಾಥ ಆ ಎರಡು ದಿನದಲ್ಲಿ ಮೊದಲ ಬಾರಿ ಬಿಕ್ಕಿ ಬಿಕ್ಕಿ ಅತ್ತರು!
ಹತ್ತು ಜನ ಓದಿದ ವಿದ್ಯಾವಂತರು ಕೊಟ್ಟ ಸಲಹೆ ಮಾಡದ್ದನ್ನು, ಒಂದು ಲೋಟ ನೀರು ಮಾಡಿತು! ಏಕೆ ಗೊತ್ತಾ? ಅವಳು ಅವರ ಸಮಸ್ಯೆಯನ್ನು ಸರಿಪಡಿಸಲು ಬಂದಿರಲಿಲ್ಲ. ಅವರನ್ನು ನೋಡಲು ಬಂದಿದ್ದಳು!
ಬೇಸಿಗೆಯಲ್ಲಿ ಬತ್ತಿ ಹೋದ ಹೊಳೆಯನ್ನು ನೋಡಿದ್ದೀರಾ? ಒಂದು ಕಾಲದಲ್ಲಿ ಜುಳುಜುಳು ಹರಿಯುತ್ತಿದ್ದ ನೀರು ,ಈಗ ಬರೀ ಬಿರುಕು ಬಿಟ್ಟ ಮರಳು! ನಮ್ಮ ಹೃದಯಗಳೂ ಹಾಗೇ ! ಧಾವಂತದ ಬಿಸಿಲಿಗೆ ಬತ್ತಿವೆ! ಈಗ ಅಲ್ಲಿ ಉಳಿದಿರುವುದು ಬರೀ ಮಾತಿನ ಮರಳು. ಸಲಹೆ ಕೊಡುವುದು ಸುಲಭ. ಯಾಕೆಂದರೆ ಅದಕ್ಕೆ ಹೃದಯ ಬೇಕಿಲ್ಲ!ಬಾಯಿ ಸಾಕು!ಒಬ್ಬರ ನೋವಿನಲ್ಲಿ ಪಾಲುದಾರರಾಗುವುದು ಕಷ್ಟ. ಯಾಕೆಂದರೆ ಅದಕ್ಕೆ ನಮ್ಮ ಸಮಯ ಬೇಕು! ನಮ್ಮ ಮೌನ ಬೇಕು! ನಮ್ಮ ಕಣ್ಣೀರೂ ಬೇಕು!
ಒಂದು ಪ್ರಾಮಾಣಿಕ ಮಾತು ಹೇಳಲಾ? ನಾನೂ ಹಲವು ಬಾರಿ ಹೀಗೇ ಮಾಡಿದ್ದೇನೆ. ಯಾರದೋ ದುಃಖದ ಮಾತು ಕೇಳುತ್ತಾ, ಅವರ ಮಾತು ಮುಗಿಯುವ ಮೊದಲೇ ನನ್ನ ಸಲಹೆ ತಯಾರು ಮಾಡಿಕೊಂಡಿದ್ದೇನೆ. ಅದು ಸಹಾಯ ಅಲ್ಲ, ಅದು ನನ್ನ ಅಸಹನೆ!
ಇನ್ನು ಮುಂದೆ ಯಾರಾದರೂ ತಮ್ಮ ನೋವು ಹೇಳಿದರೆ, ಸಲಹೆ ಕೊಡುವ ಮೊದಲು ಒಂದೇ ಒಂದು ಪ್ರಶ್ನೆ ಕೇಳಿ, “ನಿಮಗೆ ಸಲಹೆ ಬೇಕಾ, ಅಥವಾ ಸುಮ್ಮನೆ ಜೊತೆಗಿದ್ದರೆ ಸಾಕಾ?” ಈ ಒಂದು ಪ್ರಶ್ನೆ ಸಾಕು. ಸತ್ತು ಹೋದ ಭಾವನೆಗಳನ್ನು ಮತ್ತೆ ಉಸಿರಾಡಿಸಲು!
ಯಾಕೆಂದರೆ ಈ ಜಗತ್ತಿಗೆ ಇನ್ನೊಂದು ಸಲಹೆಗಾರ ಬೇಕಿಲ್ಲ. ಇನ್ನೊಂದು ಲೋಟ ನೀರು ಹಿಡಿದು ನಿಲ್ಲುವ ಒಬ್ಬ ಮನುಷ್ಯ ಬೇಕು!
ಬರಹ: ಸಂತೋಷ್ಕುಮಾರ್ ತಂಗವೇಲು

