ಪ್ರೀತಿಯ ಪಯಣ!!

ಕಗ್ಗತ್ತಲು!

ಸುತ್ತ ಏನೂ ಕಾಣುತ್ತಿಲ್ಲ. ಆದರೆ ಕಿವಿಗೆ? ಎಲ್ಲೋ ಪಕ್ಷಿಯೊಂದು ಚಿಲಿಪಿಲಿ ಎನ್ನುತ್ತಿದೆ. ದೂರದಲ್ಲಿ ನಾಯಿಯೊಂದು ಊಳಿಡುತ್ತಿದೆ. ಅದು ಏನು ಹೇಳುತ್ತಿದೆ? ಪ್ರೀತಿಯ ಕರೆಯಾ, ಅಪಾಯದ ಎಚ್ಚರಿಕೆಯಾ, “ಓಡಿ ಹೋಗು” ಎಂಬ ಕೂಗಾ? ಗೊತ್ತಾಗುವುದಿಲ್ಲ. ಕಗ್ಗತ್ತಲಿನಲ್ಲಿ ಎಲ್ಲ ಸದ್ದೂ ಒಂದೇ ಥರ ಕೇಳುತ್ತದೆ. ಆದರೆ ಒಂದು ಸದ್ದು ಮಾತ್ರ ಬೇರೆ! ಎದೆಯೊಳಗಿನ ಸದ್ದು!ಅದು ಏನು ಹೇಳುತ್ತಿದೆ ಎಂದು ಕೇಳಿಸಿಕೊಂಡರೆ, ಪ್ರೀತಿಯ ನಿಜವಾದ ಅರ್ಥ ತಿಳಿಯುತ್ತದೆ.

ಪ್ರೀತಿ ಎಂದರೆ ನೂರು ಜನರ ಮನಸ್ಸಿನಲ್ಲಿ ನೂರು ಅರ್ಥಗಳು!

ಹದಿನಾರರ ಹುಡುಗಿ ಹೇಳುತ್ತಾಳೆ: “ಅವನು ನನ್ನ ಕಡೆ ನೋಡಿದಾಗ ಹೊಟ್ಟೆಯಲ್ಲಿ ಚಿಟ್ಟೆ ಹಾರುತ್ತದೆ; ಅದೇ ಪ್ರೀತಿ!” ಇಪ್ಪತ್ತೈದರ ಹುಡುಗ ಹೇಳುತ್ತಾನೆ: “ಅವಳ ಮೆಸೇಜ್ ಬರದಿದ್ದರೆ ನಿದ್ದೆ ಬರುವುದಿಲ್ಲ; ಅದೇ ಪ್ರೀತಿ!” ಮೂವತ್ತೈದರ ಗಂಡ ಹೇಳುತ್ತಾನೆ: “ಅವಳು ಮನೆಯಲ್ಲಿ ಇಲ್ಲದಿದ್ದರೆ ಮನೆ ಖಾಲಿ ಅನ್ನಿಸುತ್ತದೆ; ಅದೇ ಪ್ರೀತಿ!” ಐವತ್ತರ ಹೆಂಡತಿ ಹೇಳುತ್ತಾಳೆ: “ಅವರು ಕೆಮ್ಮಿದರೆ ನನಗೆ ಎದೆ ನೋಯುತ್ತದೆ; ಅದೇ ಪ್ರೀತಿ!” ಎಪ್ಪತ್ತರ ಅಜ್ಜಿ ಹೇಳುತ್ತಾಳೆ: “ಅವರು ಹೋಗಿ ಹತ್ತು ವರ್ಷ ಆಯಿತು. ಈಗಲೂ ಎರಡು ಲೋಟ ಕಾಫಿ ಮಾಡುತ್ತೇನೆ… ಅದೇ ಪ್ರೀತಿ!”

ಪ್ರೀತಿಯ ಅರ್ಥ ಸಾಯುವವರೆಗೂ ಹುಡುಕಿದರೂ ಸಿಗುವುದಿಲ್ಲ! ಅದೊಂಥರಾ ಸಮುದ್ರದ ಆಳವನ್ನು ಪರೀಕ್ಷಿಸುವ ತರಹ! ಏಕೆಂದರೆ ಪ್ರೀತಿಗೆ ಒಂದೇ ಉತ್ತರ ಇಲ್ಲ! ಪ್ರೀತಿ ಉತ್ತರ ಅಲ್ಲ! ಪ್ರೀತಿ ಒಂದು ಪ್ರಶ್ನೆ!

ಆದರೆ ಈ ಪ್ರಶ್ನೆಯನ್ನು ಕಾಡಿಗೆ ಕೇಳಿ ನೋಡಿ. ಕಾಡು ಉತ್ತರ ಕೊಡುತ್ತದೆ!

ಮಳೆ ಬರುತ್ತದೆ. ಮರ ನೆನೆಯುತ್ತದೆ. ಆದರೆ ಮರ ಛತ್ರಿ ಹಿಡಿಯುವುದಿಲ್ಲ. ಯಾಕೆ? ಅದರ ಬೇರಿಗೆ ಆ ಮಳೆ ಬೇಕು. ಬೇರು ಕುಡಿಯುತ್ತದೆ, ಎಲೆ ನಗುತ್ತದೆ, ಹೂ ಅರಳುತ್ತದೆ. ಮಳೆಯ ನೋವು ಹೂವಿನ ನಗುವಾಗುತ್ತದೆ. ಇದು ಪ್ರಕೃತಿಯ ಪ್ರೀತಿ. ಮನುಷ್ಯನ ಪ್ರೀತಿಯೂ ಇದಕ್ಕಿಂತ ಭಿನ್ನವಲ್ಲ!

ಒಂದು ಮಾತು ಹೇಳಬೇಕು. ಕಹಿಯಾದರೂ ಹೇಳಬೇಕು.

ನಾವು ಪ್ರೀತಿಯನ್ನು ತಪ್ಪು ಅರ್ಥ ಮಾಡಿಕೊಂಡಿದ್ದೇವೆ. ಬಹಳ ತಪ್ಪು! ಪ್ರೀತಿ ಎಂದರೆ ಹೂ ಕೊಡುವುದು ಅಂತ ತಿಳಿದಿದ್ದೇವೆ. ಚಾಕಲೇಟ್ ಕೊಡುವುದು ಅಂತ ತಿಳಿದಿದ್ದೇವೆ. ವ್ಯಾಲೆಂಟೈನ್ಸ್ ಡೇ ಆಚರಿಸುವುದು ಅಂತ ತಿಳಿದಿದ್ದೇವೆ. ಇನ್‌ಸ್ಟಾಗ್ರಾಮ್‌ನಲ್ಲಿ “My Love” ಬರೆದು ಫೋಟೋ ಹಾಕುವುದು ಪ್ರೀತಿ ಅಂತ ತಿಳಿದಿದ್ದೇವೆ. ಅದು ಪ್ರೀತಿ ಅಲ್ಲ; ಅದು ಪ್ರದರ್ಶನ! ಹೂವಿನ ಬಣ್ಣ ಕಣ್ಣಿಗೆ ಕಾಣುತ್ತದೆ; ಹೂವಿನ ಬೇರು ಕಾಣುವುದಿಲ್ಲ. ಪ್ರೀತಿ ಎಂಬುದು ಬೇರು, ಬಣ್ಣ ಅಲ್ಲ! ಹೂ ಕೊಡುವುದು ಪ್ರೀತಿ ಅಲ್ಲ; ಹೂ ಬೆಳೆಸುವುದು ಪ್ರೀತಿ. ಬೆಳೆಸುವುದು ಎಂದರೆ ಮಣ್ಣು ಹಾಕುವುದು, ನೀರು ಹಾಕುವುದು, ಬಿಸಿಲಲ್ಲಿ ಕಾಯುವುದು, ಚಳಿಯಲ್ಲಿ ಮುಚ್ಚುವುದು. ಅದು ಕಾಣುವುದಿಲ್ಲ; ಹೂ ಮಾತ್ರ ಕಾಣುತ್ತದೆ!

ನಮ್ಮ ಅಜ್ಜ ಅಜ್ಜಿಯನ್ನು ನೋಡಿ.

ಅಜ್ಜ ಅಜ್ಜಿಗೆ ಒಂದು ದಿನವೂ “ಐ ಲವ್ ಯೂ” ಹೇಳಿರಲಿಲ್ಲ. ಒಂದು ಹೂ ಕೊಟ್ಟಿರಲಿಲ್ಲ. ಒಂದು birthday wish ಮಾಡಿರಲಿಲ್ಲ. ಅಷ್ಟೇ ಯಾಕೆ, ಅಜ್ಜಿಯ ಹುಟ್ಟಿದ ದಿನ ಯಾವತ್ತು ಎಂದು ಅಜ್ಜನಿಗೆ ಗೊತ್ತಿರಲಿಲ್ಲವೇನೋ! ಆದರೆ ಅಜ್ಜಿಗೆ ಜ್ವರ ಬಂದ ರಾತ್ರಿ ಅಜ್ಜ ಮಲಗುತ್ತಿರಲಿಲ್ಲ. ಅವಳ ಹಣೆ ಮುಟ್ಟಿ ಜ್ವರ ಇಳಿಯಿತಾ ಎಂದು ನೋಡುತ್ತಿದ್ದ. ಯಾರಿಗೂ ಕಾಣಿಸದ ಹಾಗೆ ಕಣ್ಣು ಒರೆಸಿಕೊಳ್ಳುತ್ತಿದ್ದ. ಬೆಟ್ಟದ ತುದಿಯಲ್ಲಿ ಹಿಮ ಕರಗಿದಾಗ ಅದು ಝರಿಯಾಗಿ ಹರಿಯುತ್ತದೆ; ಯಾರೂ ನೋಡದ ಕಲ್ಲುಗಳ ನಡುವೆ, ಸದ್ದಿಲ್ಲದೆ. ಅಜ್ಜನ ಪ್ರೀತಿಯೂ ಆ ಝರಿಯಂತೆ! ಆ ಒಂದು ಕ್ಷಣದಲ್ಲಿ ಅವನು “ಐ ಲವ್ ಯೂ” ಲಕ್ಷ ಬಾರಿ ಹೇಳಿದ್ದ; ಬಾಯಿ ಬಿಡದೆ!

ಅದು ಪ್ರೀತಿ. ಮಾತಿಲ್ಲದ ಪ್ರೀತಿ. ಪ್ರದರ್ಶನ ಇಲ್ಲದ ಪ್ರೀತಿ. ಲೈಕ್ ಬೇಡದ ಪ್ರೀತಿ!

ಆದರೆ ನಮ್ಮ ಸಮಸ್ಯೆ ಏನು ಗೊತ್ತಾ? ನಾವು ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದೇ ಕಳೆದುಕೊಂಡ ಮೇಲೆ!

ಅಮ್ಮ ಇರುವಾಗ ಅವಳ ಅಡುಗೆ ಬೇಡ ಎನ್ನುತ್ತೇವೆ; ಹೋದ ಮೇಲೆ ಅದೇ ಅಡುಗೆಗಾಗಿ ಕಣ್ಣೀರು ಹಾಕುತ್ತೇವೆ. ಅಪ್ಪನ ಬುದ್ಧಿವಾದ ಕೇಳಲು ಕಿವಿ ಮುಚ್ಚಿಕೊಳ್ಳುತ್ತೇವೆ; ಅವರು ಹೋದ ಮೇಲೆ ಆ ಧ್ವನಿಗಾಗಿ ಹಳೇ ವಿಡಿಯೋ ಹುಡುಕುತ್ತೇವೆ. ಹೆಂಡತಿಯ ಮಾತು ಕಿರಿಕಿರಿ ಎನ್ನುತ್ತೇವೆ; ಅವಳು ತವರಿಗೆ ಹೋದ ಮೊದಲ ರಾತ್ರಿ ಮನೆ ಸ್ಮಶಾನದಂತೆ ಅನ್ನಿಸುತ್ತದೆ. ಗಂಡನ ಅಭ್ಯಾಸಗಳು ತಲೆನೋವು ಎನ್ನುತ್ತೇವೆ; ಅವನು ಊರಿಗೆ ಹೋದ ದಿನ ಅದೇ ಅಭ್ಯಾಸಗಳು ನೆನಪಾಗಿ ಎದೆ ಭಾರವಾಗುತ್ತದೆ! ಮರ ಇರುವಾಗ ನೆರಳು ಗೊತ್ತಾಗುವುದಿಲ್ಲ; ಕಡಿದ ಮೇಲೆ ಬಿಸಿಲು ಚುಚ್ಚುತ್ತದೆ!

ನಾವು ವಿಚಿತ್ರ ಮನುಷ್ಯರು. ಇರುವಾಗ ಬೆಲೆ ಕೊಡುವುದಿಲ್ಲ; ಹೋದ ಮೇಲೆ ಹುಡುಕುತ್ತೇವೆ. ಕೈಯಲ್ಲಿದ್ದಾಗ ಗಮನಿಸುವುದಿಲ್ಲ; ಜಾರಿ ಹೋದ ಮೇಲೆ ಅಳುತ್ತೇವೆ!

ಹಾಗಾದರೆ ಅಸಲಿ ಪ್ರೀತಿ ಎಲ್ಲಿದೆ?

ಅಮ್ಮನ ಅಡುಗೆಯಲ್ಲಿ ಇದೆ. ಉಪ್ಪು ಹಾಕುವಾಗ ಲೆಕ್ಕ ಹಾಕುವುದಿಲ್ಲ; ಕೈಗೆ ಅಳತೆ ಗೊತ್ತು. ಅದು ಅಳತೆ ಅಲ್ಲ; ಮೂವತ್ತು ವರ್ಷದ ಪ್ರೀತಿ! ಭೂಮಿ ಬೀಜಕ್ಕೆ ಎಷ್ಟು ಮಣ್ಣು ಬೇಕು ಎಂದು ಲೆಕ್ಕ ಹಾಕುವುದಿಲ್ಲ; ಭೂಮಿಗೆ ಗೊತ್ತು. ಅಮ್ಮನ ಕೈಗೂ ಗೊತ್ತು. ಭೂಮಿ ಮತ್ತು ಅಮ್ಮ ಒಂದೇ; ಎರಡೂ ಲೆಕ್ಕವಿಲ್ಲದೆ ಕೊಡುತ್ತವೆ!

ಅಪ್ಪನ ಮೌನದಲ್ಲಿ ಪ್ರೀತಿ ಅಡಗಿದೆ! ಅವರು ಎಂದಿಗೂ ವ್ಯಕ್ತಪಡಿಸುವುದಿಲ್ಲ…

ಆದರೆ ನೀವು ಜ್ವರದಲ್ಲಿ ಮಲಗಿದ್ದಾಗ ಅವರ ಕಣ್ಣುಗಳನ್ನು ನೋಡಿ; ಅಲ್ಲಿ ಕಳವಳದ ಸಮುದ್ರವೇ ಇರುತ್ತದೆ. ಅದನ್ನು ಹೊರಗೆ ಬಿಡುವುದಿಲ್ಲ ಅಷ್ಟೇ. ಬೆಟ್ಟವು ತನ್ನೊಳಗೆ ನೀರನ್ನು ಹಿಡಿದಿಟ್ಟುಕೊಂಡು, ಬೇಕಾದಾಗ ಒರತೆಯಾಗಿ ಹರಿಸುವಂತೆ, ಅಪ್ಪನ ಪ್ರೀತಿಯೂ ಆ ಬೆಟ್ಟದ ಹಾಗೆ! ಹೊರಗಣ್ಣಿಗೆ ಸುಲಭವಾಗಿ ಕಾಣಿಸುವುದಿಲ್ಲ, ಹಾಗೆಂದು ಎಂದಿಗೂ ಕರಗುವುದೂ ಇಲ್ಲ.

ಗಂಡ ಹೆಂಡತಿಯ ನಡುವೆ ಇರುವ ಅಗಾಧವಾದ ಪ್ರೀತಿ!

ರಾತ್ರಿ ಅವಳ ಕಂಬಳಿ ಸರಿದಿದ್ದರೆ ಸದ್ದಿಲ್ಲದೆ ಹೊದಿಸುವ ಅವನಲ್ಲಿದೆ! ಅವನು ಬರುವ ಮುನ್ನ ಅವನಿಗೆ ಇಷ್ಟವಾದ ಚಹಾ ಮಾಡಿ ಕಾಯುವ ಅವಳಲ್ಲಿದೆ! ಎರಡು ಮರಗಳು ಅಕ್ಕಪಕ್ಕ ಬೆಳೆಯುತ್ತವೆ; ಮೇಲೆ ನೋಡಿದರೆ ಬೇರೆ ಬೇರೆ, ಆದರೆ ಕೆಳಗೆ? ಬೇರುಗಳು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ! ಒಂದು ಮರ ಬಿದ್ದರೆ ಇನ್ನೊಂದು ನಡುಗುತ್ತದೆ. ಯಾಕೆಂದರೆ, ಅವುಗಳ ಬೇರು ಒಂದಾಗಿದೆ!

ಪ್ರೀತಿಯೆಂಬುದು ಒಮ್ಮೆಗೇ ಅರಳುವ ಕ್ಷಣಿಕ ಕುಸುಮವಲ್ಲ; ಅದು ಗಿರಿಶಿಖರಗಳ ನಡುವೆ ಹದವಾಗಿ ರೂಪುಗೊಳ್ಳುವ ರಸಬೆಳೆ. ಗುಡುಗುವ ಮುಂಗಾರಿನ ಮಳೆ ಸುರಿಯಬೇಕು, ಬಿಸಿಲ ಕಾಯಂಶವು ಧರೆಯೊಡಲನ್ನು ತಣಿಸಬೇಕು, ಹಿಮದ ಮಂಜು ಮುಸುಕಿ ಭೂಮಿಗೆ ಹೊದಿಕೆಯಾಗಬೇಕು. ಪ್ರಣಯದ ಈ ಸುದೀರ್ಘ ಕಾವ್ಯದಲ್ಲಿ, ಸಂಘರ್ಷದ ಜಗಳವೂ ಬೇಕು! ಮೌನದ ತಪಸ್ಸಿಯೂ ಬೇಕು! ಕಣ್ಣೀರ ಹನಿಯೂ ಬೇಕು! ಹರ್ಷದ ನಗೆಯೂ ಬೇಕು. ಕಾಲದ ಎಲ್ಲ ಋತುಧರ್ಮಗಳನ್ನು ಅನುಭವಿಸಿ, ಪ್ರಕೃತಿಯ ಸಕಲ ಏರಿಳಿತಗಳನ್ನು ದಾಟಿ ಬಂದಾಗಷ್ಟೇ ಆ ಭಾವನೆ ಪರಿಪಕ್ವ ಹಣ್ಣಾಗಿ ಸವಿಯಾಗುತ್ತದೆ.

ಯಾರೋ ಒಬ್ಬಳು ರಾತ್ರಿ ಕಳಿಸಿದ ಅರ್ಧಂಬರ್ಧ ವಾಟ್ಸಾಪ್ ಮೆಸೇಜ್‌ಗೆ ಹುಟ್ಟಿಬಿಡೋಕೆ ಅದೇನು ಬೀದಿಬದಿಯ ಪುಕ್ಸಟ್ಟೆ ಭಾವನೆಯಾ? ಅಥವಾ, ಯಾವನೋ ಅಹಂಕಾರಿ ಆಡಿದ ಒಂದೇ ಒಂದು ಒರಟು ಮಾತಿಗೆ ಮುಗಿದುಹೋಗೋಕೆ ಅದು ಗಾಜಿನ ಲೋಟಾನಾ?ಖಂಡಿತ ಅಲ್ಲ. ಪ್ರೀತಿ ಅಂದ್ರೆ ಕತ್ತಲಲ್ಲಿ ಕಣ್ಣೀರು ಕುಡಿದು, ಬೆಳಕಿನಲ್ಲಿ ಜೊತೆಯಾಗಿ ನಗುವ ತಾಳ್ಮೆ. ಅದು ಪ್ರತಿಯೊಂದು ನೋವನ್ನೂ ನುಂಗಿ, ಒಡಲಲ್ಲಿ ರಕ್ತ ಬಸಿದು ಗಟ್ಟಿಯಾಗೋ ಅನಕಾಲಿಕ ಅನುಬಂಧ!

ಇಂದು ಮನೆಗೆ ಹೋದ ಮೇಲೆ ಒಂದು ಕೆಲಸ ಮಾಡಿ!

ಫೋನ್ ಕೆಳಗೆ ಇಡಿ. ಅಮ್ಮನ ಮುಖ ನೋಡಿ; ಪ್ರೀತಿಯಿಂದ ನೋಡಿ. ಅಪ್ಪನ ಕೈ ಗಟ್ಟಿಯಾಗಿ ಹಿಡಿಯಿರಿ. ಮಗುವನ್ನು ಎತ್ತಿ ಮುದ್ದಾಡಿ. ಫೋಟೋ ಬೇಡ. ಆ ಕ್ಷಣ ನಿಮ್ಮದಾಗಿರಲಿ; ಸಂಪೂರ್ಣವಾಗಿ ನಿಮ್ಮದಾಗಿರಲಿ!

ಮರ ಯಾವಾಗಲೂ ಇರುವುದಿಲ್ಲ. ನದಿ ಯಾವಾಗಲೂ ಹರಿಯುವುದಿಲ್ಲ. ಈ ಅಮ್ಮ, ಈ ಅಪ್ಪ, ಈ ಮನೆ, ಈ ಕ್ಷಣ. ಯಾವುದೂ ಶಾಶ್ವತ ಅಲ್ಲ! ಇಂದು ಇದೆ. ಇಂದು ಮಾತ್ರ ಇದೆ!

ಪ್ರೀತಿ ಎಂದರೆ ಏನು? ಇರುವಾಗ ಇರುವುದು. ಮರ ಮಣ್ಣಿನಲ್ಲಿ ಇರುವಂತೆ. ನದಿ ಕಡಲಿನ ಕಡೆ ಹರಿಯುವಂತೆ. ಕಾವೇರಿ ಸಮುದ್ರ ಸೇರಿದ ಮೇಲೂ ಮೋಡವಾಗಿ ಮತ್ತೆ ಈ ಮಣ್ಣಿಗೆ ಮರಳುವಂತೆ. ಸದ್ದಿಲ್ಲದೆ, ಲೆಕ್ಕವಿಲ್ಲದೆ, ಷರತ್ತಿಲ್ಲದೆ!

ಪ್ರೀತಿಯಿಂದ,
ಸಂತೋಷ್ ಕುಮಾರ್ ತಂಗವೇಲು

📧 nammaoasis@gmail.com | 📞 +91 8147424128
🌐 nammaoasis.com

Leave a Comment

Your email address will not be published. Required fields are marked *

Scroll to Top