ವರದಿ: ಕಂದಾ ದೇವಯ್ಯ, ಕೊಡಗು

ಕ್ರೀಡೆ, ಸಾಹಸ, ಸಾಮರಸ್ಯ, ಸದುದ್ದೇಶ, ಸೌಹಾರ್ದತೆ ಮಾತ್ರವಲ್ಲ ಜಾತಿ, ಪಂಗಡ, ಪಂಥಭೇದ, ಧರ್ಮಗಳನ್ನು ಮೀರಿದ ಪರಸ್ಪರ ಸಂಬಂಧಗಳನ್ನು ಬೆಸೆಯುವ ಒಂದು ಪ್ರಬಲ ಶಕ್ತಿಯಿದ್ದರೆ ಅದರ ಹೆಸರು ಕ್ರೀಡೆ.
20-09-2026 ರಂದು ಗೋಣಿಕೊಪ್ಪ ಸಮೀಪದ ಕೈಕೇರಿ, ಪಡಿಕಲ್ ಜಂಕ್ಷನ್ ಯೂತ್ ಕ್ಲಬ್ ವತಿಯಿಂದ ಕೈಕೇರಿ, ಪಡಿಕಲ್, ಗೊಟ್ಟಡ, ಹೊಸೂರು ಇನ್ನಿತರ ಗ್ರಾಮಗಳ ಜನತೆಯನ್ನು ಸೇರಿಸಿ ಅಲ್ಲಿ ನಡೆದಂತಹ ಒಂದು ವಿನೂತನ ಹಾಗೂ ವಿಶಿಷ್ಟ ಶೈಲಿಯ ಕ್ರೀಡಾಕೂಟವನ್ನು ಬೆಳಿಗ್ಗೆಯಿಂದ ಮುಸ್ಸಂಜೆಯವರೆಗೆ ಕಣ್ಣಲ್ಲಿ ಕಣ್ಣಿಟ್ಟು ವೀಕ್ಷಿಸಿದಾಗ ನನಗನಿಸಿದ್ದು—”ಕ್ರೀಡೆಗೆ ಜಾತಿ, ಮತ, ಧರ್ಮ, ಪಂಥಭೇದಗಳನ್ನು ಮರೆತು ಒಂದಾಗಿ ಬೆಸೆಯುವ ಶಕ್ತಿಯಿದೆ! ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ!” ಚಿಕ್ಕ ಮಕ್ಕಳಿಂದ ಹಿಡಿದು ಯುವಕರು, ಯುವತಿಯರು, ನಡುವಯಸ್ಕರು ಹಾಗೂ ಹಿರಿಯ ನಾಗರಿಕರವರೆಗೆ ಸುಪ್ತ ಪ್ರತಿಭೆಗಳು ಜಾಗೃತವಾಗಿವೆ. ಆದರೆ ಈ ಸುಪ್ತ ಪ್ರತಿಭೆಗಳು ಹೊರಹೊಮ್ಮಲು ಅವರಿಗೆ ಒಂದು ಅವಕಾಶ ಬೇಕಷ್ಟೇ!
ಈ ಒಂದು ಅವಕಾಶವನ್ನು ಒದಗಿಸಿಕೊಟ್ಟಿದ್ದು ಕೈಕೇರಿ ಪಡಿಕಲ್ ಜಂಕ್ಷನ್ ಯೂತ್ ಕ್ಲಬ್!

ಮ್ಯಾರಥಾನ್, ರನ್ನಿಂಗ್, ಕಣ್ಣುಕಟ್ಟಿ ಮಡಕೆ ಒಡೆಯುವುದು, ನಿಂಬೆಹಣ್ಣು-ಚಮಚ ಓಟ, ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, ನಿಧಾನಗತಿಯ ಮೋಟಾರ್ ಬೈಕ್ ಚಾಲನೆ, ಬಾಂಬ್ ಇನ್ ದ ಸಿಟಿ, ನಿಧಿಶೋಧನೆ, ಮಕ್ಕಳಿಗೆ ಕಾಳು ಹೆರಕುವುದು, ಕೊಡವ ವಾಲಗತ್ತಾಟ್ ಸ್ಪರ್ಧೆ ಇತ್ಯಾದಿ ಇತ್ಯಾದಿ…
21ನೇ ವಯಸ್ಸಿಗೆ ಗ್ರಾಮದಲ್ಲಿ ಯುವಕ ಸಂಘವನ್ನು ಸ್ಥಾಪಿಸಿ ವಿರಾಜಪೇಟೆ ತಾಲೂಕು ಯುವ ಒಕ್ಕೂಟ, ಕೊಡಗು ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷನಾಗಿ ಜಿಲ್ಲೆಯಲ್ಲಿ ಯುವ ಸಂಘಟನೆ ಮತ್ತು ಸಾಮಾಜಿಕ ಸೇವೆಯೊಂದಿಗೆ ಇಂದಿಗೂ ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟಗಳ ಸಲಹೆಗಾರನಾಗಿ, ಹಾಗೂ ಹಲವಾರು ಯುವ ಸಂಘಟನೆಗಳಿಗೆ ಸಲಹೆಗಾರನಾಗಿ ಯುವಜನ ಕ್ಷೇತ್ರದ ಅನುಭವ ಹೊಂದಿರುವ ನನಗೆ ಈ ರೀತಿಯ ಕಾರ್ಯಕ್ರಮಗಳು ಹೊಸದಲ್ಲವಾದರೂ, ಇಂತಹ ಗ್ರಾಮೀಣ ಕ್ರೀಡಾ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರ ಶಿಸ್ತು, ಸಂಯಮ, ಕ್ರಿಯಾಶೀಲತೆ ಮತ್ತು ಶ್ರದ್ಧೆ ಅಚ್ಚರಿಯನ್ನುಂಟುಮಾಡಿತು!
ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಪಡಿಕಲ್ ಗೌತಮ್ ಎಂಬ ಯುವಕನ ಪ್ರತಿಭೆ ಈ ಕ್ರೀಡಾ ಕಾರ್ಯಕ್ರಮದಲ್ಲಿಯೂ ಕೂಡ ಅನಾವರಣಗೊಂಡು ಪ್ರಥಮ ಸ್ಥಾನ ಪಡೆಯುವ ಮೂಲಕ ಮತ್ತೆ ಹೊರಹೊಮ್ಮಿತು!
ಸಂಸ್ಥೆಯ ಗೌರವಾಧ್ಯಕ್ಷ ವಿ. ಪಿ. ರಾಜ ಇವರ ಮಾರ್ಗದರ್ಶನದಲ್ಲಿ, ಜಪ್ಪೆಕೋಡಿ ರಾಜ, ಪಡಿಕಲ್ ಮನು, ಕಾಯೇರ ಕಿರಣ್ ರಂತಹ ಹಿರಿಯರ ನಿರ್ದೇಶನದಲ್ಲಿ, ಬೆಳಿಗ್ಗೆಯಿಂದ ಮುಸ್ಸಂಜೆಯವರೆಗೂ ಗ್ರಾಮದವರೇ ಆದ ದೈಹಿಕ ಶಿಕ್ಷಕ ಸುದೀಪ್ ರವರ ಅತ್ಯುತ್ತಮ ವೀಕ್ಷಕ ವಿವರಣೆಯಲ್ಲಿ, ಯುವಕರಾದ ಜಪ್ಪೆಕೋಡಿ ವಿಕೇಶ್, ಪಡಿಕಲ್ ಮಿಥುನ್, ಅಂಕಿತ್, ರಕ್ಷಿತ್, ಪ್ರಜಿತ್, ಅನಿಲ್, ಪಡಿಕಲ್ ಪವನ್, ಮುಕ್ಕಾಟಿ ಗಗನ್, ಮುಕ್ಕಾಟಿ ಪ್ರವೀಣ್ (ಹೆಸರು ಬಿಟ್ಟು ಹೋಗಿದ್ದರೆ ಕ್ಷಮಿಸಿ) ಹಾಗೂ ಇನ್ನೂ ಹಲವಾರು ಯುವಕರ ಕ್ರಿಯಾಶೀಲತೆಯಲ್ಲಿ, ಕಾರ್ಯಕ್ರಮದ ಎಲ್ಲಾ ವಿಭಾಗಗಳಿಗೂ ಬಹುಮಾನಗಳ ಪ್ರಾಯೋಜಕತ್ವವನ್ನು ನೀಡಿ ಸಹಕರಿಸಿದ ಗ್ರಾಮದವರೇ ಆದ ಹಾಗೂ K.P.T.C.L ನಿವೃತ್ತ ಉದ್ಯೋಗಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅತಿಥಿಗಳಾದ ವಿ. ಟಿ. ರಮೇಶ್ ರವರ ಹೃದಯ ಶ್ರೀಮಂತಿಕೆಯಲ್ಲಿ, ಅತಿಥಿಗಳಾಗಿ ಭಾಗವಹಿಸಿದ ವಿರಾಜಪೇಟೆ ತಹಶೀಲ್ದಾರ್ ಪಡಿಕಲ್ ಪ್ರವೀಣ್, ಟಾಟಾ ಕಾಫಿ ಸಂಸ್ಥೆಯ ನಿವೃತ್ತ ವ್ಯವಸ್ಥಾಪಕ ಪಾರುವಂಗಡ ಚಂಗಪ್ಪ, ಪತ್ರಕರ್ತ ಟಿ. ಎಲ್. ಶ್ರೀನಿವಾಸ್ ಇವರ ಅರ್ಥಪೂರ್ಣ ಮಾತುಗಳಲ್ಲಿ ಕೈಕೇರಿ ಪಡಿಕಲ್ ಜಂಕ್ಷನ್ ಯೂತ್ ಕ್ಲಬ್ ಆಯೋಜಿಸಿದ ಕ್ರೀಡಾ ಕಾರ್ಯಕ್ರಮ ಸರ್ವರ ಮನಗೆದ್ದು ಸಂಪನ್ನಗೊಂಡಿತು. ಯಾವುದೇ ಒಂದು ಜಾತಿಗೆ, ವರ್ಗಕ್ಕೆ ಸೀಮಿತವಾಗದೇ ಆಯೋಜನೆಗೊಂಡು ಈ ಒಂದು ಕ್ರೀಡಾಕೂಟ ಜನತೆಯಿಂದ, ಜನತೆಗಾಗಿ ಸಹೋದರತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಬಿತ್ತರಿಸುವಲ್ಲಿ ಯಶಸ್ವಿಗೊಂಡಿತು.
ಕೊನೆಯ ಮಾತು: ಕೈಕೇರಿ ಗ್ರಾಮದ ಪಡಿಕಲ್ ಜಂಕ್ಷನ್ ಯೂತ್ ಕ್ಲಬ್ ಕೇಂದ್ರ ಸರ್ಕಾರದ ‘ಮೈ ಭಾರತ್’ ಸಂಘಟನೆ ಹಾಗೂ ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಾವಣೆಯಾಗಿ ಈ ಭಾಗದಲ್ಲಿ ಜಾತ್ಯತೀತ ಮತ್ತು ಪಕ್ಷಾತೀತ ಯುವ ಸಂಘಟನೆಯಾಗಿ ರೂಪುಗೊಂಡು ಹೊರಹೊಮ್ಮಲಿ ಹಾಗೂ ಸರ್ವರಿಗೂ ಆದರ್ಶಪ್ರಾಯವಾಗಲಿ.
ಒಂದು ವಿಶಿಷ್ಟ, ವಿನೂತನ ಕ್ರೀಡಾ ಕಾರ್ಯಕ್ರಮ ಆಯೋಜಿಸಿ ಯಶಸ್ವಿಯಾದ ಯುವ ಸಂಘಟನೆಯ ಸರ್ವರಿಗೂ ಅಭಿನಂದನೆಗಳು. 💐💐💐
ಯುವ ಶಕ್ತಿಯೇ ರಾಷ್ಟ್ರ ಶಕ್ತಿ.
ವರದಿ: ಕಂದಾ ದೇವಯ್ಯ, ಕೊಡಗು
