ಸಿಲಿಂಡರ್ ತಂದ ನೆನಪುಗಳು!!

ಬರಹ: ನಿಸ್ವಾರ್ಥ ಮಣಿಕಂಠನ್

ಸಿಲಿಂಡರ್ ಕಂಡಾಗ ಪೋಸ್ಟ್ ಬಾಕ್ಸ್ ನೆನಪಾಯ್ತು…

ದಾರಿಯಲ್ಲಿ ಸಾಗುತ್ತಿದ್ದೆ. ಬೀದಿಯ ತಿರುವಿನಲ್ಲಿ ಕಣ್ಣಿಗೆ ಬಿದ್ದದ್ದು ಒಂದು ಕೆಂಪು ಬಣ್ಣದ ಗ್ಯಾಸ್ ಸಿಲಿಂಡರ್! ದೃಷ್ಟಿ ಅದರ ಮೇಲಿಂದ ಸರಿದರೂ, ಮನಸ್ಸು ಮಾತ್ರ ಏಕೋ ಹಿಂದಕ್ಕೆ ಎಳೆಯಿತು. ಕ್ಷಣಕಾಲ ಆ ಸಿಲಿಂಡರ್‌ನ ಆಕಾರದಲ್ಲಿ, ಅಕ್ಷರಗಳನ್ನೇ ಉಸಿರಾಡುತ್ತಿದ್ದ ಹಳೆಯ ಕಾಲದ ಕೆಂಪು ಪೋಸ್ಟ್ ಬಾಕ್ಸ್ ಮೈದಳೆದು ನಿಂತಂತೆ ಭಾಸವಾಯಿತು. ಎದೆಯೊಳಗೆ ಎಲ್ಲಿಯೋ ಬಿಟ್ಟುಬಂದ ಬಾಲ್ಯ ಒಮ್ಮೆಲೆ ಚುರುಕ್ ಅಂದಿತು!

ಎಂಥ ಅದ್ಭುತ ಕಾಲವಾಗಿತ್ತು ಅದು !ಆಗ ನಮ್ಮ ಎದೆಬಡಿತದ ಲಯವೇ ಬೇರೆಯಾಗಿತ್ತು. ‘ಚಂದಮಾಮ’, ‘ಬಾಲಮಂಗಳ’, ‘ಚಂಪಕ’, ‘ಬಾಲಮಿತ್ರ’ಗಳಂತಹ ಬಾಲಸಾಹಿತ್ಯದ ಜೊತೆಗೆ, ಪೌರಾಣಿಕ, ಸಾಮಾಜಿಕ ಕಾದಂಬರಿಗಳನ್ನು ಬಿಡದೆ ಓದುತ್ತಿದ್ದ, ಅಕ್ಷರಗಳನ್ನು ಆವಾಹಿಸಿಕೊಳ್ಳುತ್ತಿದ್ದ ದಿನಗಳವು. ಹೊಸ ಪುಸ್ತಕದ ಆ ಸುವಾಸನೆ, ಹಳೆಯ ಪುಸ್ತಕದ ಆ ಪರಿಮಳವೆರಡೂ ಉಸಿರಿನಲ್ಲಿ ಬೆರೆತುಹೋಗಿದ್ದವು. ಓದುವ ಹಸಿವು ಎಷ್ಟಿತ್ತೆಂದರೆ, ಕಿರಾಣಿ ಅಂಗಡಿಯಿಂದ ಸಕ್ಕರೆ, ಬೇಳೆ, ಹಿಟ್ಟು ಕಟ್ಟಿ ತರುತ್ತಿದ್ದ ಪೇಪರ್ ಪೊಟ್ಟಣವನ್ನೂ ನಮ್ಮ ಕಣ್ಣುಗಳು ಬಿಡುತ್ತಿರಲಿಲ್ಲ. ಎಣ್ಣೆ ಜಿಡ್ಡಿನ ಮಡಿಕೆಗಳ ನಡುವೆ ಅಡಗಿದ್ದ ಅಕ್ಷರಗಳನ್ನು ಹುಡುಕಿ ಓದುವ ಹಪಾಹಪಿ. ರಸ್ತೆಯಲ್ಲಿ ಯಾವುದೋ ಹರಿದ ಕಾಗದದ ಚೂರು ಬಿದ್ದಿದ್ದರೆ ಸಾಕು, ಎತ್ತಿ, ಧೂಳು ಕೊಡವಿ ಅದರಲ್ಲಿ ಅಡಗಿರುವ ಜಗತ್ತನ್ನು ಅರಿಯುವ ಕಾತರ. ನಮಗಿಷ್ಟದ ಪುಸ್ತಕಕ್ಕಾಗಿ ದಿನಗಟ್ಟಲೆ ಕಾಯುತ್ತಿದ್ದ ಆ ತಾಳ್ಮೆ… ಆ ವಯಸ್ಸಿನಲ್ಲಿ ಪ್ರಪಂಚದ ಜ್ಞಾನವನ್ನೆಲ್ಲಾ ಮಿದುಳಿಗೆ ತುಂಬಿಕೊಳ್ಳಬೇಕು, ಅಕ್ಷರಗಳನ್ನು ಕುಡಿದು ತೇಗಬೇಕು ಎಂಬ ಹಠವಿತ್ತಲ್ಲ; ಆ ಅಮೃತದ ರುಚಿ ಈಗಿನ ಯಾವ ಪಾನೀಯಕ್ಕೂ ಇಲ್ಲ!

ಆದರೆ ಈಗ? ಬೆರಳ ತುದಿಯಲ್ಲೇ ಜಗತ್ತಿದೆ ಎಂಬ ದಟ್ಟ ಭ್ರಮೆಯಲ್ಲಿ ಬದುಕುತ್ತಿರುವ ಯಾಂತ್ರಿಕ ತಲೆಮಾರು ನಮ್ಮ ಮುಂದಿದೆ. ಗಾಜಿನ ಪರದೆಯೊಳಗೆ ಕಳೆದುಹೋದ ಇವರಿಗೆ ಅಕ್ಷರಗಳ ‘ಮಾಂತ್ರಿಕತೆ’ ಅರ್ಥವಾಗುವುದು ಕಷ್ಟ. ನಗು, ಅಳು, ಪ್ರೀತಿ, ಕೋಪ ಎಲ್ಲವೂ ಕೇವಲ ಪ್ಲಾಸ್ಟಿಕ್ ‘ಎಮೋಜಿ’ಗಳಾಗಿ ಮಾರ್ಪಟ್ಟಿವೆ. ಮೊಬೈಲ್ ಎಂಬ ಮಾಯಾಪೆಟ್ಟಿಗೆಯಲ್ಲಿ ಹುದುಗಿರುವವರಿಗೆ ಎಲ್ಲಿಯೂ ಮಾಂತ್ರಿಕತೆ ಕಾಣಿಸುವುದಿಲ್ಲ, ಗೋಚರಿಸುವುದು ಕೇವಲ ‘ಯಾಂತ್ರಿಕತೆ’ ಮಾತ್ರ. ಯಂತ್ರಗಳನ್ನು ನಾವೇ ನಿಯಂತ್ರಿಸುತ್ತಿದ್ದೇವೆ ಎಂಬ ಮೂರ್ಖತನದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ; ಆದರೆ ವಾಸ್ತವದಲ್ಲಿ ಆ ಯಂತ್ರಗಳೇ, ಯಾವನೋ ಬರೆದ ಸಾಫ್ಟ್ ವೇರ್ ಕೋಡುಗಳೇ ನಮ್ಮ ಉಸಿರನ್ನು, ಬದುಕನ್ನು, ಭಾವನೆಗಳನ್ನು ನಿಯಂತ್ರಿಸುತ್ತಿವೆ ಎಂಬ ಸತ್ಯ ಅರಿವಿಗೆ ಬರುತ್ತಿಲ್ಲ. 

ಇಂದಿನ ಬದುಕು ಎಷ್ಟೊಂದು ವಿಪರ್ಯಾಸವೆಂದರೆ, ವರ್ಷದ ಆರು ತಿಂಗಳು ಟಿವಿಯಲ್ಲಿ ಬೇರೆಯವರ ಬದುಕನ್ನು ಇಣುಕಿ ನೋಡುವ ‘ರಿಯಾಲಿಟಿ ಶೋ’ಗಳ ಅಬ್ಬರ, ಇನ್ನುಳಿದ ಆರು ತಿಂಗಳು ಕ್ರಿಕೆಟ್ಟಿನ ಭರಾಟೆ. ಇವೆರಡರ ನಡುವೆ ಒಂದಷ್ಟು ಸಮಯ ಉಳಿದರೆ, ವಾಸ್ತವದಿಂದ ಬಹುದೂರವಿರುವ ‘ರೀಲ್ಸ್’ ಎಂಬ ನಕಲಿ ಮಾಯಾಕುಣಿತ. ಕೈಲೊಂದು ಮೊಬೈಲ್ ಇದ್ದರೆ ಸಾಕು, ಅವನೇ ಬರಹಗಾರ, ಅವನೇ ಕ್ಯಾಮೆರಾಮ್ಯಾನ್, ಅವನೇ ನಿರ್ದೇಶಕ! ಯಾರಿಗೆ, ಯಾರು, ಏನನ್ನು ಬೇಕಾದರೂ ಹೇಳಬಹುದು, ಮಾಡಬಹುದು ಎಂಬ ಅಗ್ಗದ ಕಾಲವಿದು. ಬೆರಳೆಣಿಕೆಯಷ್ಟು ‘ಫಾಲೋವರ್ಸ್’ಗೋಸ್ಕರ ಅಸಲಿ ಬದುಕನ್ನೇ ಕಳೆದುಕೊಂಡವರದ್ದೇ ಒಂದು ಲೋಕ!

ಇದೆಲ್ಲವನ್ನು ನೋಡಿದಾಗ, ಮತ್ತೆ ಆ ಹಳೆಯ ಕಾಲಕ್ಕೆ ಜಾರಿಬಿಡಬೇಕು ಎನಿಸುತ್ತದೆ. ಇರುಳಿನ ನೀರವತೆಯಲ್ಲಿ ಎಚ್ಚರಗೊಂಡು, ಇಂಕ್ ಪೆನ್ನಿನಲ್ಲಿ ಕೈಗೆಲ್ಲಾ ಶಾಯಿ ಅಂಟಿಸಿಕೊಂಡು ಕವಿತೆಯನ್ನೋ, ಕತೆಯನ್ನೋ ಗೀಚಿ ಲಕೋಟೆಗೆ ಹಾಕಬೇಕು. ಬೀದಿಬದಿಯ ಆ ಕೆಂಪು ಪೋಸ್ಟ್ ಬಾಕ್ಸ್ ಎಂಬ ‘ಕನಸಿನ ಪೆಟ್ಟಿಗೆ’ಯೊಳಗೆ ನಮ್ಮ ಅಕ್ಷರಗಳನ್ನಿಟ್ಟು ಕಾಯಬೇಕು. ಆಮೇಲೆ ದೂರದಿಂದ ಪೋಸ್ಟ್‌ಮ್ಯಾನ್ ಸೈಕಲ್ ಬೆಲ್ ಸದ್ದು ಕೇಳಿದ ತಕ್ಷಣ ಗೇಟಿನ ಬಳಿ ಓಡಿ, ಅವನ ಹಿಂದೆ ಬಿದ್ದು, “ಲೆಟರ್ ಏನಾದ್ರೂ ಬಂತಾ?” ಎಂದು ಪದೇ ಪದೇ ಕೇಳಿ ಬೈಸಿಕೊಳ್ಳಬೇಕು. ಭಾನುವಾರದ ಪತ್ರಿಕೆ ಬಂದಾಗ, ಗಡಗಡ ನಡುಗುವ ಕೈಗಳಿಂದಲೇ ಪುಟ ತಿರುವಿ, ಪೇಪರಿನ ಯಾವುದೋ ಮೂಲೆಯಲ್ಲಿ ನಮ್ಮ ಕಥೆ, ನಮ್ಮ ಹೆಸರು ಮುದ್ರಣವಾಗಿದೆಯೇ ಎಂದು ಇಡೀ ಪತ್ರಿಕೆ ಹುಡುಕುವ ಆ ಕಾತರ… ಅಬ್ಬಾ! ಆ ರೋಮಾಂಚನ, ಇಂದಿನ ಯಾವ ‘ಲೈಕ್ಸ್’ ಅಥವಾ ‘ಶೇರ್ಸ್’ ಕೊಟ್ಟರೂ ಸಿಗದಂತಹ ಸ್ವರ್ಗಸುಖ.

ಇಂದು ಆ ಕನಸಿನ ಅಂಚೆ ಪೆಟ್ಟಿಗೆಗಳು ರಸ್ತೆಯ ಮೂಲೆಗಳಲ್ಲಿ ಎಲ್ಲಿಯೂ ಕಾಣುತ್ತಿಲ್ಲ. ಕಾಣೋದು ಕೆಂಪು ಸಿಲಿಂಡರ್‌ಗಳು ಮಾತ್ರ. ಇಂದಿನ ನಮ್ಮ ಬದುಕು ಕೂಡ ಆ ಸಿಲಿಂಡರ್‌ನಂತೆಯೇ ಆಗಿಬಿಟ್ಟಿದೆ. ಹೊರಗಡೆ ನೋಡಲು ಆಕರ್ಷಕವಾದ ಕೆಂಪು ಬಣ್ಣ, ಎತ್ತಲು ಭಾರವಾದ ತೂಕ… ಆದರೆ, ಒಳಗಡೆ ಇರುವುದು ಕೇವಲ ಗ್ಯಾಸ್.

ಏನೋ ಇದೆ ಎಂಬ ದಟ್ಟ ಭ್ರಮೆ, ಆದರೆ ವಾಸ್ತವದಲ್ಲಿ ಏನೂ ಇಲ್ಲದ ಶೂನ್ಯತೆ.

ಮತ್ತೆ ಸಿಗೋಣ ಬಾಯ್.

ಬರಹ: ನಿಸ್ವಾರ್ಥ ಮಣಿಕಂಠನ್

Leave a Comment

Your email address will not be published. Required fields are marked *

Scroll to Top