ಕೆಂಪು ಬಸ್ಸಿನ ನೆನಪುಗಳು!!!

ಬರಹ: ಸಂತೋಷ್‌ಕುಮಾರ್ ತಂಗವೇಲು

ಆಹಾ! ಕೆಂಪು ಬಸ್ಸಿನಿಂದ ಇಳಿದು, ಅಮ್ಮ ಪ್ರೀತಿಯಿಂದ ಕಟ್ಟಿಕೊಟ್ಟ ಬುತ್ತಿಯನ್ನು ಮೆಜೆಸ್ಟಿಕ್‌ನಲ್ಲಿ ಗೆಳೆಯನ ಜೊತೆ ಹಂಚಿಕೊಂಡು ತಿನ್ನುತ್ತಿದ್ದ ಆ ಕ್ಷಣ… ಆ ನೆನಪು ಈಗಲೂ ಎದೆಯೊಳಗೆ ಬಿಸಿಯಾಗಿಯೇ ಇದೆ!

ಮಡಿಕೇರಿಯಿಂದ ಬೆಂಗಳೂರಿಗೆ ರಾತ್ರಿ ಎಂಟು ಗಂಟೆಗೆ ಒಂದು ಬಸ್ಸಿತ್ತು!

ಕೆಂಪು ಬಣ್ಣ. ಮುಂದೆ ದೊಡ್ಡ ಅಕ್ಷರದಲ್ಲಿ “ಕರ್ನಾಟಕ ಸಾರಿಗೆ!” ಒಳಗೆ ಹಳೆಯ ರೆಕ್ಸಿನ್ ಸೀಟುಗಳು, ಅರ್ಧ ಹರಿದ ಪರದೆ. ಸಂಜೆಯ ದೀಪಗಳನ್ನು ಒಂದೊಂದಾಗಿ ಹತ್ತಿಸಿಕೊಳ್ಳುತ್ತಾ ಸಾಗುತ್ತಿದ್ದ ಬಸ್ಸು; ಕಿಟಕಿಯಾಚೆ, ಮುಸ್ಸಂಜೆಯ ಮಡಿಲಲ್ಲಿ ಮೈಚಾಚಿ ಮಲಗಿದ ಮಲೆನಾಡಿನ ಗಿರಿಶ್ರೇಣಿ , ಮೋಡದ ಸೆರಗು ಹೊದ್ದು, ಮೌನದ ಮಂತ್ರ ಪಠಿಸುತ್ತಾ ನಿಂತ ಕೊಡಗಿನ ಕಾನನದ ಬೆಟ್ಟಗಳು!

ಅಪ್ಪ ಮುಂಚಿತವಾಗಿಯೇ ಟಿಕೆಟ್ ತೆಗೆದಿಡುತ್ತಿದ್ದರು. ಸೀಟು ನಂಬರ್ 23!

ಚೀಲದಲ್ಲಿ ಅಮ್ಮನ ಕೈಯ ಚಪಾತಿ, ಕೊಡಗಿನ ವಿಶೇಷ “ಬೋಯಿಂಬಳೆ ಕರಿ” (ಬಿದಿರಿನ ಕಳಲೆ ಪಲ್ಯ), ಸ್ಟೀಲ್ ಡಬ್ಬಿಯಲ್ಲಿ ಬಾಳೆಹಣ್ಣಿನ ಬಜ್ಜಿ! ಬಸ್ ಹೊರಡುವವರೆಗೂ ಅಪ್ಪ ಅಮ್ಮ ಅತ್ತಿತ್ತ ಕದಲದೆ ಸ್ಟಾಂಡಿನಲ್ಲಿಯೇ ನಿಂತಿರುತ್ತಿದ್ದರು.

ಬಸ್ ಹೊರಟ ಮೇಲೂ ನಿಂತಿರುತ್ತಿದ್ದರು.

ಅದು ಬರೀ ಪ್ರಯಾಣವಲ್ಲ, ಏಳು ಗಂಟೆಯ ರಸಯಾತ್ರೆ!

ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು, ಮೈಸೂರು, ಚನ್ನಪಟ್ಟಣ… ಒಂದೊಂದು ಊರಿಗೂ ಒಂದೊಂದು ವೈಶಿಷ್ಟ್ಯ! ಕುಶಾಲನಗರದಲ್ಲಿ ಕಾವೇರಿಯ ಒಡಲಿಂದೆದ್ದು ಬಂದು ಮೈಕೊರೆಯುವ ತಂಗಾಳಿ! ಹುಣಸೂರಿನಲ್ಲಿ ಕಬ್ಬಿನ ಗದ್ದೆಗಳ ನಡುವಿನಿಂದ ತೇಲಿಬರುವ ಸಿಹಿ ಸೌರಭ! ಮೈಸೂರಿನಲ್ಲಿ ರಾತ್ರಿಯ ಗಾಳಿಯನ್ನೇ ಸುಗಂಧಮಯವಾಗಿಸುವ ಮಲ್ಲಿಗೆಯ ಪರಿಮಳ!

ಕಣ್ಣು ಮುಚ್ಚಿಯೂ ಹೇಳಬಹುದಿತ್ತು, ಈಗ ಯಾವ ಊರು ಬಂತು ಅಂತ!

ಪ್ರತಿ ಊರಿನಲ್ಲೂ ಬಸ್ಸು ಹತ್ತು ನಿಮಿಷ ವಿಶ್ರಮಿಸುತ್ತಿತ್ತು. ಚಾಲಕ ಕೆಳಗಿಳಿದು ಚಹಾ ಕುಡಿಯುತ್ತಿದ್ದ, ನಿರ್ವಾಹಕ ಸಿಗರೇಟ್ ಸೇದುತ್ತಿದ್ದ. ಪ್ರಯಾಣಿಕರು ಕೆಳಗಿಳಿದು ಮೈಮುರಿದು ಸೊಂಟ ನೇರ ಮಾಡುತ್ತಿದ್ದರು. ಹಾದಿಯಂಚಿನ ಪುಟ್ಟ ಪುಟ್ಟ ಚಹಾ ಅಂಗಡಿಗಳು, ಎಣ್ಣೆಯಲ್ಲಿ ತೇಲುವ ಬಜ್ಜಿ, ಕರಿದ ಕಡಲೆಕಾಳು, ಗಾಜಿನ ಗ್ಲಾಸಿನಲ್ಲಿ ಹಬೆ ಹಾರುವ ಬಿಸಿ ಬಿಸಿ ಚಹಾ!

“ಚಾಯ್… ಚಾಯ್… ಬಿಸೀ ಚಾಯ್…” ಆ ಹುಡುಗನ ಕೂಗು ಈಗಲೂ ಕಿವಿಯಲ್ಲಿದೆ.

ಆ ಬಿಸಿಯಾದ ಚಹಾವನ್ನು ನಿಧಾನವಾಗಿ ಆಸ್ವಾದಿಸಿ ಕುಡಿದು, ಮತ್ತೆ 23ನೇ ಸೀಟಿನಲ್ಲಿ ಆಸೀನನಾಗುತ್ತಿದ್ದೆ!

ಅಲ್ಲಿ ಶಂಕರಣ್ಣನೆಂಬ ನಿರ್ವಾಹಕನಿದ್ದ.ಬಿಳಿ ಶರ್ಟು, ಖಾಕಿ ಪ್ಯಾಂಟ್, ಎಡಗೈಯಲ್ಲಿ ಟಿಕೆಟ್ ಪಂಚ್ ಮಷೀನ್, ಬಲಗೈಯಲ್ಲಿ ಚಿಲ್ಲರೆ ಕಾಸಿನ ಚೀಲ. ಅವನಿಗೆ ಇಡೀ ಊರೇ ಪರಿಚಿತ! ಪ್ರತಿ ನಿಲ್ದಾಣದಲ್ಲೂ ಯಾರೋ ಒಬ್ಬರು “ಶಂಕರಣ್ಣ, ನಮ್ಮ ಮಗಳಿಗೆ ಮೈಸೂರಿನಲ್ಲಿ ಇದನ್ನ ಕೊಟ್ಟುಬಿಡಪ್ಪ” ಎಂದು ಒಂದು ಚಿಕ್ಕ ಪೊಟ್ಟಣ ಕೈಗಿಡುತ್ತಿದ್ದರು. ರಸೀದಿ ಇಲ್ಲ. ಸಹಿ ಇಲ್ಲ. ಟ್ರ್ಯಾಕಿಂಗ್ ನಂಬರ್ ಇಲ್ಲ!

ಶಂಕರಣ್ಣ ಮೌನವಾಗಿ ತಲೆಯಾಡಿಸುತ್ತಿದ್ದ. ಅಷ್ಟೇ. ಆ ಪೊಟ್ಟಣ ತಲುಪಬೇಕಾದವರಿಗೆ ತಲುಪುತ್ತಿತ್ತು.ಇಂದು ಇದನ್ನು “ಕೊರಿಯರ್ ಸೇವೆ” ಎನ್ನಬಹುದೇನೋ. ಅಂದು ನಾವು ಇದನ್ನು “ಮನುಷ್ಯತ್ವ” ಎನ್ನುತ್ತಿದ್ದೆವು!

ರಾತ್ರಿ ಹನ್ನೆರಡು ಗಂಟೆಯ ಸಮಯ. ಬಸ್ಸಿನ ಒಳಗೆಲ್ಲ ನಿಶ್ಶಬ್ದ, ಎಲ್ಲರೂ ನಿದ್ದೆಯ ಮಡಿಲಲ್ಲಿ! ಅಲ್ಲಲ್ಲಿ ಗೊರಕೆಯ ನಾದ, ಚಾಲಕನ ಪಕ್ಕದಲ್ಲಿ ಮೆಲ್ಲನೆ ತೇಲಿಬರುವ ಹಿಂದಿ ಹಾಡು. ನಾನು ಮಾತ್ರ ಎಚ್ಚರ!

ಆಕಾಶದ ತುಂಬ ಚುಕ್ಕಿಗಳ ಚಪ್ಪರ. ಕೆಳಗೆ, ಕತ್ತಲ ಕಡಲಿನಲ್ಲಿ ದೀಪದ ಹಡಗುಗಳಂತೆ ತೇಲುತ್ತಿದ್ದ ದೂರದ ಹಳ್ಳಿಗಳು! ಆ ಮನೆಗಳ ಒಳಗೆ ಯಾರೋ ಎಚ್ಚರ, ಯಾರೋ ನಿದ್ದೆ. ಯಾರೋ ಅಳುತ್ತಿರಬಹುದು! ಯಾರೋ ನಗುತ್ತಿರಬಹುದು! ಯಾರೋ ಹೊಸ ಜೀವವೊಂದನ್ನು ಬರಮಾಡಿಕೊಳ್ಳುತ್ತಿರಬಹುದು ! ಯಾರೋ ಒಂದು ಜೀವಕ್ಕೆ ವಿದಾಯ ಹೇಳುತ್ತಿರಬಹುದು! ಒಂದೊಂದು ಬೆಳಕಿನ ಹಿಂದೆ ಒಂದೊಂದು ಜೀವನದ ಮಹಾಕಾವ್ಯ!

ಬಸ್ಸು ಸಾಗುತ್ತಿತ್ತು. ಸಮಯವೂ ತಡೆಯಿಲ್ಲದೆ ಸಾಗುತ್ತಿತ್ತು.ನಾನೂ ಸಾಗುತ್ತಿದ್ದೆ….ಒಂದು ಊರಿನಿಂದ ಇನ್ನೊಂದು ಊರಿಗೆ, ಬಾಲ್ಯದ ತೀರದಿಂದ ಹೊಸ ಜೀವನದ ಕಡೆಗೆ!

ಆ ಏಳು ಗಂಟೆಯ ಅವಧಿಯಲ್ಲಿ ನಾನು ಏನನ್ನೂ ಮಾಡುತ್ತಿರಲಿಲ್ಲ. ಕೈಯಲ್ಲಿ ಫೋನ್ ಇರಲಿಲ್ಲ, ನೋಡುವುದಕ್ಕೆ ಸಿನಿಮಾವಿರಲಿಲ್ಲ, ಬೆಳಕಿಲ್ಲದೆ ಪುಸ್ತಕವೂ ಓದಲಾಗುತ್ತಿರಲಿಲ್ಲ! ಕಿಟಕಿಯ ತಂಪಾದ ಗಾಳಿಗೆ ಮುಖ ಒಡ್ಡಿ ಕುಳಿತಿದ್ದೆ. ಆ ಏಳು ಗಂಟೆ ಬರೀ ಪ್ರಯಾಣವಾಗಿರಲಿಲ್ಲ, ಅದೊಂದು ಧ್ಯಾನ!

ಈಗ ಬೆಂಗಳೂರಿನಿಂದ ಮಡಿಕೇರಿಗೆ ಹೋಗುವುದು ನಾಲ್ಕೈದು ಗಂಟೆಯಲ್ಲೇ ಮುಗಿದುಹೋಗುತ್ತದೆ! ಎಕ್ಸ್‌ಪ್ರೆಸ್‌ವೇ, ಎಸಿ ಬಸ್ಸು, ಟಾಟಾ ವಿಂಗರ್, ಸ್ವಂತ ಕಾರುಗಳು…..ಮೂರ್ನಾಲ್ಕು ಗಂಟೆ ಉಳಿಸಿದ್ದೇವೆ. ಅಷ್ಟೇ.

ಆದರೆ ಆ ಪ್ರಯಾಣದಲ್ಲಿ ಈಗ ಎಲ್ಲರೂ ಯಾಂತ್ರಿಕವಾಗಿ ಫೋನ್ ನೋಡುತ್ತಿರುತ್ತಾರೆ! ಇಯರ್‌ಫೋನ್ ಕಿವಿಗೆ ಸಿಕ್ಕಿಸಿಕೊಂಡು, ಪಕ್ಕದ ಜೀವಿಯ ಜೊತೆ ಮಾತೂ ಇಲ್ಲ, ಕಿಟಕಿಯಾಚೆಯ ರಮಣೀಯ ನೋಟವೂ ಇಲ್ಲ!

ಒಂದು ಚಹಾ ಅಂಗಡಿಯಲ್ಲಿ ಇಳಿದು ಬಿಸಿ ಚಹಾ ಸವಿಯುವ ಆ ಸಣ್ಣ ಸಂಭ್ರಮವಿಲ್ಲ. ಶಂಕರಣ್ಣನಂತಹ ಪ್ರೀತಿಯ ಕಂಡಕ್ಟರಿಲ್ಲ. ಪೊಟ್ಟಣ ಕೊಟ್ಟರೆ ಭರವಸೆಯಿಂದ ತಲುಪಿಸುವ ಆ ಮನುಷ್ಯತ್ವವಿಲ್ಲ!

ನಾವು ದೂರವನ್ನು ಗೆದ್ದಿದ್ದೇವೆ. ಆದರೆ ದಾರಿಯನ್ನೇ ಕಳೆದುಕೊಂಡಿದ್ದೇವೆ!

ಮೊನ್ನೆ ನನ್ನ ಗೆಳೆಯನೊಬ್ಬ ತನ್ನ ಮಗನನ್ನು ಕಾರಿನಲ್ಲಿ ಮೈಸೂರಿಗೆ ಕರೆದುಕೊಂಡು ಹೋಗಿದ್ದ. ಹಿಂತಿರುಗುವಾಗ ಫೋನ್ ಮಾಡಿದ. ಧ್ವನಿಯಲ್ಲಿ ದುಃಖ ತುಂಬಿತ್ತು!

“ಸಂತೋಷ್, ಮೂರು ಗಂಟೆಯಲ್ಲಿ ಮೈಸೂರು ಮುಟ್ಟಿದೆವು ಕಣೋ! ಆದರೆ ಮಗ ಇಡೀ ದಾರಿಯಲ್ಲಿ ಫೋನ್‌ನಲ್ಲಿ ಗೇಮ್ ಆಡ್ತಿದ್ದ. ಒಂದೇ ಒಂದು ಸಲ ಹೊರಗೆ ನೋಡಲಿಲ್ಲ! ಚನ್ನಪಟ್ಟಣದ ಗೊಂಬೆ ಅಂಗಡಿ, ಮಂಡ್ಯದ ಕಬ್ಬಿನ ಗದ್ದೆ, ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ… ಯಾವುದನ್ನೂ ನೋಡಲಿಲ್ಲ!”

ಸ್ವಲ್ಪ ಹೊತ್ತು ಮೌನ! “ನಾವು ಚಿಕ್ಕವರಿದ್ದಾಗ ಬಸ್ಸಿನಲ್ಲಿ ಅನುಭವಿಸಿದ ಆ ಪ್ರಯಾಣ ನೆನಪಿದೆಯಾ? ಅದನ್ನ ನನ್ನ ಮಗನಿಗೆ ಕೊಡಕ್ಕೆ ನನ್ನಿಂದ ಆಗ್ತಿಲ್ಲವಲ್ಲೋ…” ನಾನು ಮೌನವಾಗಿದ್ದೆ. ಹೇಳುವುದಕ್ಕೇನಿತ್ತು?

ಶಂಕರಣ್ಣ ಈಗಿಲ್ಲ. ಆ ಕೆಂಪು ಬಸ್ಸು ಈಗಿಲ್ಲ! ಆ ರೋಚಕ ಟೀ ಅಂಗಡಿಗಳು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ನಿರ್ಜೀವ “ಹೈವೇ ಪ್ಲಾಜಾ”ಗಳಾಗಿ ರೂಪಾಂತರಗೊಂಡಿವೆ. ಎಸಿ ಕೊಠಡಿಯೊಳಗೆ ಪೇಪರ್ ಕಪ್ಪಿನಲ್ಲಿ ಬಿಸಿ ಚಹಾ ಸಿಗುತ್ತದೆ. ಅದೇ ಚಹಾ, ಅದೇ ಸಕ್ಕರೆ, ಅದೇ ಹಾಲು. ಆದರೆ ಆ ರುಚಿ ಮಾತ್ರ ಇಲ್ಲ.

ಬಹುಶಃ ಚಹಾದ ರುಚಿಯಲ್ಲಿ ಬದಲಾವಣೆ ಆಗಿಲ್ಲವೇನೋ. ನಾವು ಅದನ್ನು ಅನುಭವಿಸಿ ಕುಡಿಯುವ ರೀತಿಯಲ್ಲಿ ಬದಲಾವಣೆಯಾಗಿದೆ!

ಈಗ ನಿಮಗೊಂದು ಸಣ್ಣ ಪ್ರಶ್ನೆ.

ನೀವು ಕೊನೆಯ ಬಾರಿಗೆ ಕಿಟಕಿಯಾಚೆ ಈ ವಿಶಾಲ ಜಗತ್ತನ್ನು ನೋಡುತ್ತಾ, ಫೋನಿನ ಹಂಗಿಲ್ಲದೆ, ಸುಮ್ಮನೆ ಕುಳಿತು ಪ್ರಯಾಣ ಮಾಡಿದ್ದು ಯಾವಾಗ?

ನೆನಪಿಲ್ಲ, ಅಲ್ಲವೇ?

ಮುಂದಿನ ಬಾರಿ ಊರಿಗೆ ಹೊರಡುವಾಗ ಸಾಧ್ಯವಾದರೆ ಬಸ್ಸಿನಲ್ಲಿಯೇ ಹೊರಡಿ! ಫೋನನ್ನು ಬ್ಯಾಗಿನೊಳಗೆ ಹಾಕಿಬಿಡಿ! ಕಿಟಕಿ ಸೀಟನ್ನೇ ಆಯ್ದುಕೊಳ್ಳಿ! ಯಾವುದೋ ಒಂದು ಮಧ್ಯಂತರ ನಿಲ್ದಾಣದಲ್ಲಿ ಇಳಿದು ಬಿಸಿ ಚಹಾವನ್ನು ಆಸ್ವಾದಿಸಿ! ನೀವು ಗಳಿಸುವುದು ಯಾವ ಎಕ್ಸ್‌ಪ್ರೆಸ್‌ವೇಯಲ್ಲೂ ಸಿಗದ್ದು.

ನಿಮ್ಮದೇ ಅಂತರಂಗದ ಜೊತೆಗೆ ಕಳೆಯುವ ಕೆಲವು ಗಂಟೆಗಳು! ಇಂದಿನ ಈ ಯಾಂತ್ರಿಕ ಜಗತ್ತಿನಲ್ಲಿ ಇದಕ್ಕಿಂತ ದೊಡ್ಡ ಐಶ್ವರ್ಯ ಬೇರೆ ಯಾವುದಿದೆ ಹೇಳಿ?

Leave a Comment

Your email address will not be published. Required fields are marked *

Scroll to Top