
ಆ ಕಾಡು ಸುಮ್ಮನೆ ನಿಂತಿಲ್ಲ! ಆ ಕಾಡು ಈಗ ಗ್ರಾಮಗಳ ಬಾಗಿಲನ್ನ ತಟ್ಟುತ್ತಿದೆ! ಆ ಕಾಡಿನ ದೊರೆ ಪಟ್ಟೆ ಕೋಟು ತೊಟ್ಟುಕೊಂಡು ನಮ್ಮ ಬೀದಿಗಳಲ್ಲಿ ಇಳಿದು ಬಂದಿದ್ದಾನೆ. ಕೊಡಗು ಎಂಬ ಈ ಬೆಟ್ಟದ ನಾಡು, ಈ ಕಾಫಿಯ ವಾಸನೆಯ ನಾಡು, ಈ ಕಾವೇರಿಯ ಮಡಿಲಿನ ನಾಡು, ಇವತ್ತು ಒಂದು ವಿಚಿತ್ರ ಭಯದಲ್ಲಿ ಬದುಕುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಕೊಡಗಿನ ಗ್ರಾಮಗಳಲ್ಲಿ ಒಂದೇ ಒಂದು ಸುದ್ದಿ ಪದೇ ಪದೇ ಕೇಳಿಬರುತ್ತಿದೆ! ಹುಲಿ ಬಂತು, ಹಸು ತಿಂತು! ಜೀವ ಹೋಯ್ತು! ವಿರಾಜಪೇಟೆ ವಲಯದ ಬೊಳ್ಳಮಾಡ್ನಲ್ಲಿ ಕಾಳಯ್ಯ ಎಂಬ ರೈತನ ಹಸು! ಪೊನ್ನಂಪೇಟೆಯ ನಿಟ್ಟೂರು ಜಗಲೆಯಲ್ಲಿ ಗೋವನ್ನ ಮೇಯಿಸಲು ಹೋದ ಆ 55 ವರ್ಷದ ಮುಜೀದ್ ರೆಹಮಾನ್ ಎಂಬ ಹೆಸರಿನ ಕೂಲಿಕಾರ, ಅಸ್ಸಾಂನಿಂದ ಬಂದು ಇಲ್ಲಿ ದುಡಿಯುತ್ತಿದ್ದ ಆ ಬಡ ಜೀವ ಆ ದಿನ ಹಸುಗಳನ್ನ ಕಾಪಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ! ಆ ಸುದ್ದಿ ಅವನ ಅಸ್ಸಾಂನ ಕುಟುಂಬಕ್ಕೆ ತಲುಪಿದಾಗ ಆ ಮನೆಯಲ್ಲಿ ಎಷ್ಟು ಅಳು , ಹಾಹಾಕಾರ ಇತ್ತೋ! ಒಬ್ಬ ತಂದೆ ಕುಟುಂಬಕ್ಕಾಗಿ ದೂರದ ಊರಿಗೆ ಬಂದು ದುಡಿಯಲು ಹೋಗಿ, ವಾಪಸ್ ಬರಲಿಲ್ಲ. ಆ ಬಡ ಜೀವಕ್ಕೆ ಸಿಕ್ಕಿದ್ದೇನು? ಒಂದು compensation cheque!

ಕೊಡಗಿನಲ್ಲಿ ಇಂಥ ಕಥೆಗಳು ಒಂದೆರಡಲ್ಲ. ಪಾಳೇರಿ ಎಂಬ ಕುಗ್ರಾಮದಲ್ಲಿ ನಡೆದ ಘಟನೆ ಎಷ್ಟೋ ವರ್ಷಗಳ ಹಿಂದೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಒಂದೇ ಕುಟುಂಬದ ಇಬ್ಬರು ಸದಸ್ಯರು 24 ಗಂಟೆಗಳ ಅಂತರದಲ್ಲಿ ಹುಲಿಯ ದಾಳಿಗೆ ಬಲಿಯಾಗಿದ್ದರು! ಒಂದು ದಿನ 18 ವರ್ಷದ ಚೇತನ್ ಎಂಬ ಹುಡುಗ, ಮಾರನೇ ದಿನ ಅವನ ಅಜ್ಜ 75 ವರ್ಷದ ರಾಜು. ಒಂದೇ ಮನೆಯಲ್ಲಿ ಎರಡು ಸಾವು! ಒಂದೇ ಚಿತೆಯಲ್ಲಿ ಎರಡು ದೇಹ! ಆ ಮನೆಯ ಹೆಂಗಸರ ಬಳೆ ಒಡೆದ ಆ ದಿನ, ಮನೆಯ ಪುಟ್ಟ ಮಕ್ಕಳು ತಾತನನ್ನೂ ಕಳೆದುಕೊಂಡ ಆ ದಿನದ ಆಳವಾದ ಗಾಯ ಇಂದಿಗೂ ಆ ಕುಟುಂಬದ ಎದೆಯಲ್ಲಿ ಒಣಗಿಲ್ಲ.
ಈ ಆತಂಕ ಈಗ ಕೊಡಗಿನ ಎಷ್ಟೋ ಗ್ರಾಮಗಳಿಗೆ ಹರಡಿದೆ. ರಾತ್ರಿಯ ಘರ್ಜನೆ ಗ್ರಾಮಸ್ಥರ ನಿದ್ದೆಯನ್ನು ಕಿತ್ತುಕೊಂಡಿದೆ. ಬಡ ರೈತರ ಹಸುಗಳಿಗೆ ಈಗ ಪ್ರತಿ ರಾತ್ರಿ ಒಂದು ಭಯ; ಬೆಳಿಗ್ಗೆ ಕೊಟ್ಟಿಗೆಗೆ ಹೋಗಿ ನೋಡುವಾಗ ಎದೆಯಲ್ಲಿ ದುಗುಡ. “ಎಲ್ಲಾ ಸರಿ ಇರಬಹುದೇ?” ಎಂಬ ಆ ಒಂದು ಪ್ರಶ್ನೆ!
ಶಾಲೆಗೆ ಹೋಗುವ ಆ ಪುಟ್ಟ ಮಕ್ಕಳ ಗತಿ ಏನು? ಬೆಳಿಗ್ಗೆ ಆರೂವರೆಗೆ ಎದ್ದು, ಬ್ಯಾಗು ಬೆನ್ನಿಗೆ ಹಾಕಿ, ಆ ಅಡವಿಯ ದಾರಿಯಲ್ಲಿ ನಡೆದು ಶಾಲೆಗೆ ಹೋಗಬೇಕು. ಆ ಪುಟ್ಟ ಜೀವಗಳ ಎದೆಯಲ್ಲಿ ಈಗ ಎಂಥ ಭಯವಿರಬಹುದು! ಆ ಪೊದೆಯ ಹಿಂದೆ ಏನಿದೆಯೋ ಎಂಬ ದಿಗಿಲು, ಆ ಎಲೆಗಳ ಶಬ್ದ ಗಾಳಿಯದೋ ಅಥವಾ ಬೇಟೆಗಾರನನದೋ ಎಂಬ ಸಂಶಯ. ಒಂದೊಂದು ಹೆಜ್ಜೆಯನ್ನೂ ಎಣಿಸಿ ಇಡಬೇಕಾದ ದಾರಿ ಅದು!

ಗ್ರಾಮಸ್ಥರು ಸುಮ್ಮನೆ ಕುಳಿತಿಲ್ಲ. ಎಷ್ಟೋ ಬಾರಿ ಅರಣ್ಯ ಇಲಾಖೆಯ ಬಾಗಿಲು ತಟ್ಟಿದ್ದಾರೆ, ಹಲವಾರು ಬಾರಿ ಬೇಡಿಕೆ ಇಟ್ಟಿದ್ದಾರೆ. ಆದರೆ ಪ್ರತಿಫಲವೇನು? ಒಂದೆರಡು ಸಭೆಗಳು, ಒಂದೆರಡು ಭಾಷಣಗಳು! ನಂತರ ಆ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ (Social media) ಒಂದೆರಡು ಪೋಸ್ಟ್ ಹಾಕಿ, “ಹುಲಿ ಅಲ್ಲಿದೆ, ಇಲ್ಲಿದೆ” ಎಂದು ಹೇಳುತ್ತಾ ಕುಳಿತಿದ್ದಾರೆ. ಇದೇ ಇಲಾಖೆಯ ಕರ್ತವ್ಯವೇ? ಫೇಸ್ಬುಕ್ (Facebook) ಪೋಸ್ಟ್ ಹಾಕಿದರೆ ಆ ಹುಲಿ ಬಂದು ಓದುತ್ತದೆಯೇ? ಆ ವಾಟ್ಸಾಪ್ (WhatsApp) ಫಾರ್ವರ್ಡ್ ನೋಡಿ ಅದು ಹೊರಟುಹೋಗುತ್ತದೆಯೇ? ಆ ಬಡ ರೈತನ ಹಸು ಸತ್ತಾಗ, ಆ ಪುಟ್ಟ ಮಗುವಿನ ಎದೆ ಭಯದಿಂದ ನಡುಗಿದಾಗ ಆ ಪೋಸ್ಟ್ಗಳಿಂದ ಏನು ಪ್ರಯೋಜನ?
ನಿಜವಾದ ಪರಿಹಾರ ಬೇಕು! ಕ್ಯಾಮೆರಾ ಟ್ರ್ಯಾಪ್ಗಳು (Camera traps) ಬೇಕು, ಬೋನುಗಳು ಬೇಕು, ಗಸ್ತು (Patrolling) ಹೆಚ್ಚಾಗಬೇಕು, ತಜ್ಞರ ತಂಡ ಬರಬೇಕು! ಆ ಹುಲಿಯನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಸಾಗಿಸಬೇಕು. ಇದೊಂದು ನಿತ್ಯದ ಕೆಲಸ; ಇಲಾಖೆಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಬೇಕಾಗಿರುವುದು ಇಚ್ಛಾಶಕ್ತಿ. ಆ ಇಚ್ಛಾಶಕ್ತಿ ಎಲ್ಲಿ ಹೋಗಿದೆ?
ಇಲ್ಲಿ ಇನ್ನೊಂದು ಆಳವಾದ ಪ್ರಶ್ನೆ ಇದೆ. ಈ ಹುಲಿಗಳು ಯಾಕೆ ಗ್ರಾಮಗಳಿಗೆ ಬರುತ್ತಿವೆ? ಅವು ಬರೀ ಹಸಿವಿಗಾಗಿ ಬರುತ್ತಿಲ್ಲ, ಅವು ಆಶ್ರಯ ಕಳೆದುಕೊಂಡು ಬರುತ್ತಿವೆ! ಕೊಡಗಿನ ಕಾಡುಗಳು ಎಷ್ಟು ಕರಗಿವೆ? ಒಂದು ಕಾಲದಲ್ಲಿ ದಟ್ಟ ಅರಣ್ಯವಿದ್ದ ಜಾಗದಲ್ಲಿ ಈಗ ರೆಸಾರ್ಟ್ಗಳು, ವಿಲ್ಲಾಗಳು ಹಾಗೂ ಎಸ್ಟೇಟ್ಗಳು ತಲೆಎತ್ತಿವೆ. ಪ್ರಾಣಿಗಳಿಗೆ ಓಡಾಡಲು ಜಾಗವಿಲ್ಲ, ಬೇಟೆಯಾಡಲು ಪ್ರಾಣಿಗಳಿಲ್ಲ, ಕುಡಿಯಲು ನೀರಿಲ್ಲ! ಪರಿಣಾಮವಾಗಿ, ಆ ಪ್ರಾಣಿಗಳು ನಮ್ಮ ಗ್ರಾಮಗಳಿಗೇ ಬರುತ್ತಿವೆ. ನಾವು ಅವುಗಳ ಮನೆಯನ್ನು ಒಡೆದೆವು; ಈಗ ಅವು ನಮ್ಮ ಮನೆಗೆ ಬಂದಿವೆ! ಇದೊಂದು ದೊಡ್ಡ ಪಾಠ.

ಆ ಹುಲಿಯನ್ನು ಬರೀ ಒಂದು ಬೇಟೆಗಾರನಂತೆ ನೋಡಬಾರದು. ಅದೂ ಒಂದು ಜೀವ, ಈ ಪ್ರಕೃತಿಯ ಒಂದು ಭಾಗ, ನಮ್ಮ ಕೊಡಗಿನ ದೇವರುಗಳಲ್ಲಿ ಒಂದು! ನಾವು ಅದನ್ನು ಕೊಲ್ಲಬಾರದು; ಅದನ್ನು ಸೆರೆಹಿಡಿದು ಅದರ ಮನೆಗೆ ಕಳುಹಿಸಬೇಕು. ಅದರ ಮನೆ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು; ಅದರ ಕಾಡು ಉಳಿಯುವಂತೆ ನೋಡಿಕೊಳ್ಳಬೇಕು. ಅದೂ ಸಂತೋಷವಾಗಿರಬೇಕು, ನಾವೂ ಸಂತೋಷವಾಗಿರಬೇಕು. ಇದೇ ನಮ್ಮ ಪೂರ್ವಜರು ಕಲಿಸಿದ ಸಹಬಾಳ್ವೆಯ ಪಾಠ!
‘ಓಯಸಿಸ್ ಕನ್ನಡ’ ಪತ್ರಿಕೆ ಇವತ್ತು ಕೊಡಗಿನ ಗ್ರಾಮಸ್ಥರ ಪರವಾಗಿ ಧ್ವನಿ ಎತ್ತುತ್ತಿದೆ. ಆ ಬಡ ರೈತನ, ಆ ಪುಟ್ಟ ಮಗುವಿನ, ಆ ವೃದ್ಧ ಅಜ್ಜಿಯ ಪರವಾಗಿ! ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಒಂದೇ ಒಂದು ಬೇಡಿಕೆ: ಮತ್ತೊಂದು ಜೀವ ಬಲಿಯಾಗುವ ಮೊದಲೇ ಎಚ್ಚೆತ್ತುಕೊಳ್ಳಿ! ಬಲಿಯಾದ ಮೇಲೆ ಎಷ್ಟೇ ಪುಷ್ಪಗುಚ್ಛ ಇಟ್ಟರೂ, ಎಷ್ಟೇ ಪರಿಹಾರದ ಚೆಕ್ ಕೊಟ್ಟರೂ ಆ ಜೀವ ವಾಪಸ್ ಬರುವುದಿಲ್ಲ; ಆ ಕುಟುಂಬದ ಕಣ್ಣೀರು ಒಣಗುವುದಿಲ್ಲ.
ಕೊಡಗಿನ ಈ ಬೆಟ್ಟದ ನಾಡು ಎಂದೂ ಶಾಂತಿಯಿಂದ ಇರಲಿ! ಈ ನಾಡಿನ ಜನರೂ, ಈ ನಾಡಿನ ಪ್ರಾಣಿಗಳೂ ಒಟ್ಟಿಗೆ, ಸಂತೋಷವಾಗಿ ಬದುಕಲಿ! ಇದೇ ಈ ಪುಟ್ಟ ಪತ್ರಿಕೆಯ ಪ್ರಾರ್ಥನೆ!

ವರದಿ: ಸಂತೋಷ್ಕುಮಾರ್ ತಂಗವೇಲು

Very true bro
Good one !
Very true