
ಅವತ್ತು ಮುಂಜಾನೆ! ನನ್ನ ಅಕ್ಕನ ಮೊಬೈಲ್ ರಿಂಗ್ ಆದ ಆ ಶಬ್ದ! ಅಪರಿಚಿತ ನಂಬರಿನಿಂದ ಒಂದು ಕರೆ ಬಂತು! ಆ ಕಡೆಯಿಂದ ಒಬ್ಬಳು ಮಾತನಾಡುತ್ತಿದ್ದಳು, ಮೇಡಂ, ನಿಮಗೆ ಒಂದು ಎಸ್ಎಂಎಸ್ ಬಂದಿದೆ, ಆ ಒಟಿಪಿಯನ್ನ ಒಮ್ಮೆ ನನಗೆ ಶೇರ್ ಮಾಡಿ, ಎಂದು! ಆ ಕ್ಷಣದಲ್ಲಿ ಆಕೆಯ ಧ್ವನಿ ಎಷ್ಟು ಸಹಜವಾಗಿತ್ತು, ಎಷ್ಟು ವಿನಮ್ರವಾಗಿತ್ತು ಎಂದರೆ ಒಂದು ಕ್ಷಣ ಅಕ್ಕನೂ ನಂಬಿಬಿಟ್ಟರು! ಆ ಒಟಿಪಿಯನ್ನ ಶೇರ್ ಮಾಡಿಬಿಟ್ಟರು!
ನಂತರ ಆ ವಿಷಯವನ್ನ ಫೋನ್ನಲ್ಲಿ ನನಗೆ ಹೇಳಿದಾಗ ಎದೆಯಲ್ಲಿ ಒಂದು ಸಂಶಯ ಎದ್ದಿತು. ಯಾವ ಬ್ಯಾಂಕ್, ಯಾವ ವ್ಯವಹಾರ, ಯಾವುದೇ ಸಂದರ್ಭ ಇಲ್ಲದೆ ಒಟಿಪಿ ಯಾಕೆ ಬಂತು? ತಕ್ಷಣ ನಾನು ಅಕ್ಕನಿಗೆ ಹೇಳಿ ಕೆನರಾ ಬ್ಯಾಂಕ್ಗೆ ಫೋನ್ ಮಾಡಿಸಿ ಅಕೌಂಟ್ ಬ್ಲಾಕ್ ಮಾಡಿಸಿದೆವು! ಇಲ್ಲದಿದ್ದರೆ ಅವತ್ತು ಅಕ್ಕನ ಬ್ಯಾಂಕಿನಲ್ಲಿದ್ದ ಹಣವೆಲ್ಲ ಮಂಗಮಾಯವಾಗುತ್ತಿತ್ತು! ಒಂದು ಫೋನ್ ಕರೆ, ಒಂದು ಸಂಶಯ, ಒಂದು ತ್ವರಿತ ನಿರ್ಧಾರ, ಇವಿಷ್ಟೇ ಆ ದಿನ ಅಕ್ಕನ ಜೀವನದ ಉಳಿತಾಯ ಉಳಿಸಿತು! ಆ ಒಂದೂ ಒಂದು ಕ್ಷಣ ತಡವಾಗಿದ್ದರೆ ಕಥೆ ಬೇರೆಯೇ ಆಗುತ್ತಿತ್ತು!

ದು ನನ್ನ ಅಕ್ಕನೊಬ್ಬರ ಕಥೆಯಲ್ಲ; ಎಷ್ಟೋ ಜನರ ದಿನನಿತ್ಯದ ಕಥೆ, ಗೋಳು, ತೊಡಲಾಟ! ಬಡ ಗ್ರಾಮದ ರೈತನಿಂದ ಹಿಡಿದು ದೊಡ್ಡ ಪಟ್ಟಣದ ಸಾಫ್ಟ್ವೇರ್ ಎಂಜಿನಿಯರ್ವರೆಗೆ ಎಲ್ಲರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ವೃದ್ಧ ಅಪ್ಪ-ಅಮ್ಮನ ಪಾಡು ಏನು? ಗ್ರಾಮದಲ್ಲಿರುವ, ಫೋನ್ ಬಳಸಲು ಇನ್ನೂ ಸರಿಯಾಗಿ ಕಲಿಯದಿರುವ ಆ ಸಾವಿರಾರು ಜನರ ಸ್ಥಿತಿ ಏನು? ಈ ಪುಟ್ಟ ಲೇಖನ ನಿಮಗಾಗಿಯೇ, ಒಪ್ಪಿಸಿಕೊಳ್ಳಿ! ಒಬ್ಬರಾದರೂ ಇದನ್ನು ಓದಿ ಎಚ್ಚೆತ್ತರೆ, ಒಂದು ಕುಟುಂಬದ ಜೀವಮಾನದ ಉಳಿತಾಯ ಉಳಿದರೆ, ಈ ಬರಹಕ್ಕೆ ಬೆಲೆ ಬಂದಂತೆ!
ಆ ದಿನ ಫೋನ್ ರಿಂಗಣಿಸಿತು. ಬೆಂಗಳೂರಿನ ಒಬ್ಬ ಸಾಫ್ಟ್ವೇರ್ ಎಂಜಿನಿಯರ್ ಫೋನ್ ಎತ್ತಿದರು. ಆ ಕಡೆಯಿಂದ ಬಂದ ಧ್ವನಿ ಅತ್ಯಂತ ಗಂಭೀರವಾಗಿತ್ತು: “ನಾವು ಟ್ರಾಯ್ (TRAI) ಇಲಾಖೆಯಿಂದ ಮಾತನಾಡುತ್ತಿದ್ದೇವೆ. ನಿಮ್ಮ ಸಿಮ್ ಕಾರ್ಡ್ ಒಂದು ದೊಡ್ಡ ಅಕ್ರಮ ಹಣ ವರ್ಗಾವಣೆಯಲ್ಲಿ ಬಳಕೆಯಾಗಿದೆ!” ಮರುಕ್ಷಣ ಆ ಕರೆ ಮುಂಬೈ ಸೈಬರ್ ಸೆಲ್ಗೆ ವರ್ಗಾವಣೆಯಾಯಿತು. ವಿಡಿಯೋ ಕರೆ ಬಂತು; ಸ್ಕ್ರೀನ್ ಮೇಲೆ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿ, ಹಿಂದೆ ಅಶೋಕ ಸ್ತಂಭ! “ನೀವು ಡಿಜಿಟಲ್ ಅರೆಸ್ಟ್ನಲ್ಲಿದ್ದೀರಿ,” ಎಂಬ ಆ ಒಂದು ವಾಕ್ಯ! ಮುಂದಿನ ಕೆಲವು ದಿನಗಳಲ್ಲಿ ಆ ಸಾಫ್ಟ್ವೇರ್ ಎಂಜಿನಿಯರ್ ೧೧ ಕೋಟಿ ೮೦ ಲಕ್ಷ ರೂಪಾಯಿ ಕಳೆದುಕೊಂಡರು! ಒಂದು ದಿನ ಬೆಳಿಗ್ಗೆ ಎಚ್ಚರಗೊಂಡಾಗ ಬ್ಯಾಂಕ್ ಬ್ಯಾಲೆನ್ಸ್ ಶೂನ್ಯ, ಜೀವನದ ಉಳಿತಾಯವೆಲ್ಲವೂ ಸ್ವಾಹಾ! ಆ ದಿನ ಆ ಎಂಜಿನಿಯರ್ ಕುಟುಂಬಕ್ಕೆ ಏನು ಹೇಳಿದರೋ, ಆ ರಾತ್ರಿ ಹೇಗೆ ನಿದ್ದೆ ಮಾಡಿದರೋ, ಬರೀ ಭಗವಂತನಿಗೇ ಗೊತ್ತು!

ಈ ಕಥೆ ಒಬ್ಬ ವ್ಯಕ್ತಿಯದಲ್ಲ. ೨೦೨೪ರಿಂದ ಇಲ್ಲಿಯವರೆಗೆ ಭಾರತದಲ್ಲಿ ೨,೪೧,೫೩೭ ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿವೆ; ಒಟ್ಟು ೩,೦೧೨ ಕೋಟಿ ರೂಪಾಯಿಯನ್ನು ದೇಶ ಕಳೆದುಕೊಂಡಿದೆ! ಇವು ಬರೀ ಅಂಕಿಸಂಖ್ಯೆಗಳಲ್ಲ; ಇವು ಒಡೆದ ಕುಟುಂಬಗಳ ಕಥೆಗಳು, ಆತ್ಮಹತ್ಯೆ ಮಾಡಿಕೊಂಡ ವೃದ್ಧ ಪೋಷಕರ ಕಥೆಗಳು, ೪೦ ವರ್ಷಗಳ ಬೆವರಿನ ಗಳಿಕೆ ಒಂದೇ ಫೋನ್ ಕರೆಯಲ್ಲಿ ಕಣ್ಮರೆಯಾದ ಕಥೆಗಳು, ಮಗಳ ಮದುವೆಗೆ ಇಟ್ಟಿದ್ದ ಹಣ ಕಳೆದುಕೊಂಡ ತಂದೆಯ ಕಣ್ಣೀರಿನ ಕಥೆಗಳು!
ಈಗ ಒಂದು ಮೂಲ ಸತ್ಯ ತಿಳಿದುಕೊಳ್ಳಿ! ‘ಡಿಜಿಟಲ್ ಅರೆಸ್ಟ್’ ಎಂಬುದು ಭಾರತದ ಯಾವ ಕಾನೂನಿನಲ್ಲಿಯೂ ಇಲ್ಲ! ಸಿಬಿಐ (CBI), ಇಡಿ (ED), ಪೊಲೀಸ್, ಆದಾಯ ತೆರಿಗೆ ಇಲಾಖೆ (IT), ಟ್ರಾಯ್ (TRAI) ಅಥವಾ ಆರ್ಬಿಐ (RBI) ಇವು ಯಾವುದೂ ವಿಡಿಯೋ ಕರೆಯ ಮೂಲಕ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ! ಇದೊಂದು ಸಂಪೂರ್ಣ ಸೃಷ್ಟಿಸಿದ ಭಯ, ಒಂದು ನಾಟಕ! ಆ ಸಮವಸ್ತ್ರ ನಕಲಿ, ಆ ಅಶೋಕ ಸ್ತಂಭ ನಕಲಿ, ಆ ಎಫ್ಐಆರ್ (FIR) ನಕಲಿ, ಆ ಕೋರ್ಟ್ ಆದೇಶವೂ ನಕಲಿ! ಎಲ್ಲವೂ ಒಂದು ಕಾಲ್ ಸೆಂಟರ್ನಲ್ಲಿ ಕುಳಿತು ಸೃಷ್ಟಿಸಿದ ಸುಳ್ಳಿನ ಮಹಲು!

ಆದರೆ ಈ ಸುಳ್ಳಿನ ಮಹಲು ಎಷ್ಟು ನಿಪುಣವಾಗಿ ಕಟ್ಟಲಾಗಿದೆ ಎಂದರೆ ದೊಡ್ಡ ದೊಡ್ಡ ವಿದ್ಯಾವಂತರೂ ಬಲಿಯಾಗುತ್ತಾರೆ! ವಾರ್ಧಮಾನ್ ಗ್ರೂಪ್ನ ಸಂಸ್ಥಾಪಕರೇ ೭ ಕೋಟಿ ಕಳೆದುಕೊಂಡರು! ದೆಹಲಿಯ ಒಬ್ಬ ವೃದ್ಧ ವೈದ್ಯ ದಂಪತಿ ೧೪ ಕೋಟಿ ಕಳೆದುಕೊಂಡರು! ಮಂಗಳೂರಿನ ಒಬ್ಬ ಹಿರಿಯ ಮಹಿಳೆ ೩ ಕೋಟಿ ೯ ಲಕ್ಷ ಕಳೆದುಕೊಂಡರು!
ಎಲ್ಲಕ್ಕಿಂತ ಹೃದಯ ಒಡೆಯುವ ಕಥೆ ಒಬ್ಬ ವೃದ್ಧನದು. ಅವರು ೪೦ ದಿನಗಳ ಕಾಲ ೨೭ ಬಾರಿ ಬ್ಯಾಂಕ್ಗೆ ಹೋಗಿ ಒಟ್ಟು ೫೮ ಕೋಟಿ ರೂಪಾಯಿ ವರ್ಗಾಯಿಸಿದರು! ಆ ೪೦ ದಿನಗಳಲ್ಲಿ ಒಂದೇ ಒಂದು ಬ್ಯಾಂಕ್ ಅಧಿಕಾರಿ, ಒಂದೇ ಒಂದು ಕುಟುಂಬ ಸದಸ್ಯ, ಒಂದೇ ಒಂದು ಸ್ನೇಹಿತ ಆ ವೃದ್ಧನನ್ನು ತಡೆಯಲಿಲ್ಲ! ಆ ಒಂಟಿತನ ಎಷ್ಟು ಭಯಾನಕ ಎಂದು ಊಹಿಸಿ! ಒಂದೊಂದು ಬಾರಿ ಬ್ಯಾಂಕ್ಗೆ ಹೋಗುವಾಗಲೂ ಆ ವೃದ್ಧನ ಎದೆಯಲ್ಲಿ ಎಷ್ಟು ಭಯವಿತ್ತೋ, ಎಷ್ಟು ಒಂಟಿತನವಿತ್ತೋ! ಒಂದೇ ಒಂದು ಜೀವ ಆ ದಿನ ಅವರ ಪಕ್ಕದಲ್ಲಿದ್ದಿದ್ದರೆ ಆ ೫೮ ಕೋಟಿ ಉಳಿಯುತ್ತಿತ್ತು!

ಇಲ್ಲಿ ಒಂದು ಎಚ್ಚರಿಕೆಯ ಗಂಟೆ ಬಾರಿಸೋಣ! ಈ ವಂಚಕರು ಎಲ್ಲಿಂದ ಬರುತ್ತಿದ್ದಾರೆ ಗೊತ್ತೇ? ಕಾಂಬೋಡಿಯಾ, ಮ್ಯಾನ್ಮಾರ್, ಥೈಲ್ಯಾಂಡ್! ಆ ದೇಶಗಳ ಗಡಿ ಪ್ರದೇಶಗಳಲ್ಲಿ ಬಾಡಿಗೆಗೆ ತಂದ ಭಾರತೀಯ ಯುವಕರೇ ಈ ಕರೆಗಳನ್ನು ಮಾಡುತ್ತಿದ್ದಾರೆ. ಅವರಲ್ಲಿ ಎಷ್ಟೋ ಜನ ವಿದೇಶಿ ಉದ್ಯೋಗದ ಆಸೆಗೆ ಹೋಗಿ ಬಂಧಿತರಾಗಿ, ಬಲವಂತವಾಗಿ ಈ ಕೆಲಸ ಮಾಡುತ್ತಿದ್ದಾರೆ! ಇದೊಂದು ಆಧುನಿಕ ಗುಲಾಮಗಿರಿಯ ಜಾಲ!
ಪ್ರೀತಿಯ ಓದುಗರೇ, ಈ ಕಥೆಗಳನ್ನು ಬರೀ ಓದಿ ಬಿಡಬೇಡಿ! ನಿಮ್ಮ ಅಪ್ಪ, ಅಮ್ಮ, ಅಜ್ಜ, ಅಜ್ಜಿಯಂದಿರಿಗೆ ಕಳುಹಿಸಿ! “ಅಪರಿಚಿತ ಸಂಖ್ಯೆಯಿಂದ ಬಂದ ವಿಡಿಯೋ ಕರೆಯನ್ನು ಎಂದಿಗೂ ಎತ್ತಬೇಡಿ,” ಎಂದು ಎಚ್ಚರಿಸಿ! ಪೊಲೀಸ್, ಸಿಬಿಐ, ಇಡಿ, ಆರ್ಬಿಐ ಅಧಿಕಾರಿಗಳು ಯಾರೂ ವಿಡಿಯೋ ಕರೆ ಮಾಡುವುದಿಲ್ಲ! ಹಿಂದೆ ಎಚ್ಚರಿಕೆ ಅಪ್ಪ-ಅಮ್ಮನಿಂದ ಮಕ್ಕಳಿಗೆ ಬರಬೇಕಾಗಿತ್ತು; ಈಗ ಆ ಎಚ್ಚರಿಕೆ ಮಕ್ಕಳಿಂದ ಅಪ್ಪ-ಅಮ್ಮನಿಗೆ ತಲುಪಬೇಕಾಗಿದೆ. ಇದೇ ಡಿಜಿಟಲ್ ಯುಗದ ಹೊಸ ಕರ್ತವ್ಯ!

ಆದರೆ ಇದು ಬರೀ ಒಂದು ಬಗೆಯ ಮೋಸ ಅಷ್ಟೇ! ಇನ್ನೂ ಯುಪಿಐ (UPI) ವಂಚನೆ, ಕ್ಯೂಆರ್ (QR) ಕೋಡ್ ಬದಲಾವಣೆ, ಸಿಮ್ ಸ್ವಾಪ್ (SIM Swap), ನಕಲಿ ಬ್ಯಾಂಕ್ ಎಸ್ಎಂಎಸ್—ಇಂತಹ ಎಷ್ಟೋ ಬಗೆಯ ಬಲೆಗಳಿವೆ. ಆ ಎಲ್ಲಾ ಮೋಸಗಳ ಬಗ್ಗೆ, ಅವುಗಳಿಂದ ಪಾರಾಗುವ ದಾರಿಗಳ ಬಗ್ಗೆ ಹಾಗೂ ಬಲೆಗೆ ಬಿದ್ದಾಗ ಏನು ಮಾಡಬೇಕು ಎಂಬ ಜೀವರಕ್ಷಕ ಸಲಹೆಗಳ ಬಗ್ಗೆ ಮುಂದಿನ ಭಾಗದಲ್ಲಿ ವಿವರವಾಗಿ ಬರೆಯುತ್ತೇನೆ!
ವತ್ತಿಗೆ ಇಷ್ಟು ಎಚ್ಚರಿಕೆ ಸಾಕು! ಈ ಬರಹವನ್ನು ಇಂದೇ ನಿಮ್ಮ ಕುಟುಂಬಕ್ಕೆ, ಗೆಳೆಯರಿಗೆ, ವಾಟ್ಸಾಪ್ ಗ್ರೂಪುಗಳಿಗೆ ಕಳುಹಿಸಿ! “ಡಿಜಿಟಲ್ ಅರೆಸ್ಟ್ ಎಂಬುದು ಸಂಪೂರ್ಣ ಸುಳ್ಳು,” ಎಂಬುದನ್ನು ಮನದಲ್ಲಿ ಗಟ್ಟಿಯಾಗಿ ಇಟ್ಟುಕೊಳ್ಳಿ! ಎಚ್ಚರ, ಎಚ್ಚರ, ಎಚ್ಚರ!
ಬರಹ: ಸಂತೋಷ್ಕುಮಾರ್ ತಂಗವೇಲು
