ಬೆಂಗಳೂರಿನ ಅಂಡರ್ವರ್ಲ್ಡ್: ಜಯರಾಜ್ರಿಂದ ಇಂದಿನವರೆಗೆ — ಭಾಗ 2

ಪಶ್ಚಿಮ ಘಟ್ಟದ ದಟ್ಟ ಅರಣ್ಯ. ಆ ಹಸಿರಿನ ಸಾಗರದ ನಡುವೆ ಶತಶತಮಾನಗಳಿಂದ ನಿಂತಿದ್ದ ಒಂದು ಮಹಾವೃಕ್ಷ. ಆ ವೃಕ್ಷದ ಬೇರುಗಳು ಭೂಮಿಯ ಗರ್ಭವನ್ನು ಸ್ಪರ್ಶಿಸಿದ್ದವು ! ಶಾಖೆಗಳು ಆಕಾಶದ ಎದೆಗೆ ತಾಗಿದ್ದವು. ಆ ವೃಕ್ಷದ ನೆರಳಿನಲ್ಲಿ ನೂರಾರು ಸಣ್ಣ ಗಿಡಗಳು ಬೆಳಕಿಗಾಗಿ ಹಂಬಲಿಸುತ್ತಾ, ಸೂರ್ಯನ ಸ್ಪರ್ಶಕ್ಕಾಗಿ ವರ್ಷಗಟ್ಟಲೆ ಕಾಯುತ್ತಾ!
ಒಂದು ದಿನ ಆ ವೃಕ್ಷ ಬಿತ್ತು! ಸದ್ದು ಇಡೀ ಕಾನನವನ್ನೇ ನಡುಗಿಸಿತು! ಪಕ್ಷಿಗಳು ಹಾರಿದವು, ಮೃಗಗಳು ಓಡಿದವು, ಅರಣ್ಯದೇವತೆ ಒಂದು ಕ್ಷಣ ನಿಟ್ಟುಸಿರುಬಿಟ್ಟಳು.
ಆದರೆ ಶಬ್ದ ಅಡಗಿದ ಕ್ಷಣಕ್ಕೆ? ವರ್ಷಗಟ್ಟಲೆ ಕತ್ತಲಲ್ಲಿ ಕಾದಿದ್ದ ನೂರಾರು ಚಿಗುರುಗಳ ಮೇಲೆ ಸೂರ್ಯರಶ್ಮಿ ಬಿತ್ತು. ಪ್ರತಿಯೊಂದೂ ಒಂದೇ ಕನಸು ಕಂಡಿತು “ನಾನೇ ನಾಳಿನ ಬೃಹತ್ ವೃಕ್ಷ.” ಆದರೆ ಆ ಪದವಿ ಒಂದೇ ಚಿಗುರಿಗೆ!ಎಲ್ಲಕ್ಕಿಂತ ಚಾಣಾಕ್ಷವಾದದ್ದಕ್ಕೆ!ಒಳಗೆ ಬೆಂಕಿ ಇಟ್ಟುಕೊಂಡಿರುವಂತಹದ್ದಕ್ಕೆ!
ಪ್ರಕೃತಿಗೆ ಶೂನ್ಯ ಸಹಿಸುವುದಿಲ್ಲ. ಅಧಿಕಾರವೂ ಪ್ರಕೃತಿಯದೇ ಒಂದು ಮುಖ. ಖಾಲಿ ಸಿಂಹಾಸನವನ್ನು ಅದು ಒಂದು ಕ್ಷಣವೂ ಸಹಿಸುವುದಿಲ್ಲ.
21 ನವೆಂಬರ್ 1989. ಜಯರಾಜ್ರವರು ನಿಧನರಾದರು. ಬೆಂಗಳೂರಿನ ಬೃಹತ್ ವೃಕ್ಷ ಉರುಳಿತು. ಆ ಬೆಳಕಿಗಾಗಿ ವರ್ಷಗಟ್ಟಲೆ ಕಾದಿದ್ದ ಒಂದು ಚಿಗುರು ಇತ್ತು. ದಕ್ಷಿಣ ಕನ್ನಡದ ಪುತ್ತೂರಿನಿಂದ ಬಂದವರು! ವಿಜಯಾ ಬ್ಯಾಂಕಿನಲ್ಲಿ ಕುರ್ಚಿ ಬೆಚ್ಚಗೆ ಮಾಡಿ ಕೂತಿದ್ದವರು! ಕೈಯಲ್ಲಿ ಪೆನ್ನು ಹಿಡಿದು ಲೆಕ್ಕ ಬರೆಯುತ್ತಿದ್ದವರು!
ನೆಟ್ಟಳ ಮುತ್ತಪ್ಪ ರೈಯವರು!!!!
ಪುತ್ತೂರಿನ ಆ ಬಂಟ ಸಮುದಾಯದ ಹುಡುಗ ಚಿಕ್ಕಂದಿನಿಂದಲೂ ಒಂದು ವಿಚಿತ್ರ ಕಣ್ಣಿಟ್ಟುಕೊಂಡಿದ್ದರು. ಇತರ ಹುಡುಗರು ಗುಡ್ಡ ಹತ್ತುತ್ತಿದ್ದರು, ಗೋಲಿ ಆಡುತ್ತಿದ್ದರು,ಇವರು ಜನರನ್ನು ನೋಡುತ್ತಿದ್ದರು, ಸಂತೆಯಲ್ಲಿ ವ್ಯಾಪಾರಿಗಳ ಮಾತನ್ನು ಕದ್ದು ಕೇಳುತ್ತಿದ್ದರು. ಎಲ್ಲಿ ಯಾರು ಯಾರಿಗೆ ಹಣ ಕೊಡುತ್ತಾರೆ, ಯಾರು ಯಾರ ಬಳಿ ತಲೆಬಾಗುತ್ತಾರೆ ! ಈ ಜಗತ್ತಿನ ರಹಸ್ಯ ವ್ಯಾಕರಣವನ್ನು ಆ ಬಾಲಕ ಗ್ರಹಿಸುತ್ತಿದ್ದರು.
ಕುವೆಂಪುರವರು ಎಲ್ಲೋ ಬರೆದಿದ್ದಾರೆ “ಪ್ರತಿಯೊಂದು ಬೀಜದಲ್ಲೂ ಒಂದು ಅರಣ್ಯ ಅಡಗಿದೆ.” ಈ ಹುಡುಗನ ಒಳಗೆ ಇದ್ದದ್ದೂ ಅದೇ ಇಡೀ ಸಾಮ್ರಾಜ್ಯದ ಬೀಜ.
ವಿಜಯಾ ಬ್ಯಾಂಕಿನ ಕುರ್ಚಿ ಸಿಕ್ಕಾಗ ಊರವರೆಲ್ಲಾ ಸಂತೋಷಪಟ್ಟರು. “ನಾರಾಯಣ ರೈಯವರ ಮಗನಿಗೆ ಸರ್ಕಾರಿ ಕೆಲಸ ಸಿಕ್ತು ನೋಡಿ!” ಆದರೆ ಆ ಹುಡುಗನಿಗೆ? ಆ ಕುರ್ಚಿ ಬಂಧನದಂತೆ ಕಂಡಿತು. ಬೆಳಗ್ಗೆ ಹತ್ತರಿಂದ ಸಂಜೆ ಐದರವರೆಗೆ ಒಂದೇ ಟೇಬಲ್. ಎಷ್ಟೋ ವರ್ಷ ಸೇವೆ ಮಾಡಿದರೆ ಒಂದು ಸಣ್ಣ ಬಡ್ತಿ. ರಿಟೈರ್ ಆದ ಮೇಲೆ ಪೆನ್ಶನ್. ಅಷ್ಟೇ ಜೀವನ.
ಇಲ್ಲ! ಈ ಬ್ರಹ್ಮಾಂಡ ತನಗಾಗಿ ಇನ್ನೂ ಏನೋ ಮೀಸಲಿಟ್ಟಿದೆ ಎಂದು ಅವರಿಗೆ ಅನ್ನಿಸಿತು. ಆ “ಇನ್ನೂ ಏನೋ” ಎಂಬ ಭಾವನೆಯೇ ಇಡೀ ಜೀವನದ ಆಕರ್ಷಣೆ. ಆ ಒಂದು ಭಾವನೆ ಎಷ್ಟೋ ಮನುಷ್ಯರನ್ನು ಎತ್ತರಕ್ಕೆ ಕೊಂಡೊಯ್ದಿದೆ, ಕಷ್ಟಕ್ಕೂ ದೂಡಿದೆ!
ಬೆಂಗಳೂರಿಗೆ ಬಂದರು. ಒಂದು ಸಣ್ಣ ಬಾರ್ ತೆಗೆದರು. ತಾವೇ ಬರೆದ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವಂತೆ ಆ ಬಾರ್ನ್ನು ಉಳಿಸಿಕೊಳ್ಳಲು ಅವರು ಈ ಅಖಾಡಕ್ಕೆ ಇಳಿಯಬೇಕಾಯಿತು.
ಆ ಬಾರ್ ಬರೀ ಒಂದು ಬಾಗಿಲು! ಆ ಬಾಗಿಲ ಒಳಗೆ ಒಂದು ಅಗ್ನಿಪರ್ವತ ಕುದಿಯುತ್ತಿತ್ತು! ಜಯರಾಜ್ರವರ ನಿಧನ ಆ ಬಾಗಿಲನ್ನು ತೆರೆಯಿತು!

ಸಿದ್ದಾಪುರದ ಆ ಸಂಜೆ ಜಯರಾಜ್ರವರ ಎದೆಯನ್ನು ಸೀಳಿದ ಆ ಗುಂಡು ಎರಡು ಕೆಲಸ ಒಟ್ಟಿಗೆ ಮಾಡಿತು. ಒಂದೆಡೆ ಹಳೆಯ ಯುಗದ ಅಂತ್ಯ! ಇನ್ನೊಂದೆಡೆ ಹೊಸ ಅಧಿಕಾರದ ಆರಂಭ! ಒಬ್ಬರ ಚಿತೆಯ ಬೆಂಕಿಯಲ್ಲೇ ಇನ್ನೊಬ್ಬರ ಅಡುಗೆ ಬೇಯುತ್ತದೆ ಈ ಜಗತ್ತಿನಲ್ಲಿ!
ಆ ಗುಂಡು ಹಾರಿಸಿದ ಕೈಗಳು ಬೇರೆಯವರವು. ಆದರೆ ಆ ಘಟನೆಯ ಹಿಂದೆ ಕಾರ್ಯನಿರ್ವಹಿಸಿದ ಬುದ್ಧಿ ಯಾರದ್ದು ಎಂಬ ಪ್ರಶ್ನೆ ಎದ್ದಾಗ, ಅಂದಿನ ಪೊಲೀಸ್ ಫೈಲುಗಳಲ್ಲಿ ಹಾಗೂ ಪತ್ರಿಕೆಗಳ ಪುಟಗಳಲ್ಲಿ ಪ್ರಮುಖವಾಗಿ ಕೇಳಿಬಂದ ಹೆಸರು, ಮುತ್ತಪ್ಪ ರೈ!!!
ಆದರೆ ಆ ಹೆಸರಿನ ಮನುಷ್ಯ? ಒಂದೂ ಶಬ್ದ ಹೇಳಲಿಲ್ಲ. ಒಪ್ಪಲಿಲ್ಲ. ಅಲ್ಲಗಳೆಯಲಿಲ್ಲ. ಬರೀ ನಗುತ್ತಿದ್ದರು!
ಇಲ್ಲಿ ಗಮನಿಸಬೇಕಾದ ಒಂದು ಸೂಕ್ಷ್ಮ ಇದೆ. ಹಳೆಯ ಡಾನ್ಗಳಂತಲ್ಲ. ಕೊತ್ವಾಲ್ ರಾಮಚಂದ್ರರವರಾಗಲಿ, ಜಯರಾಜ್ರವರಾಗಲಿ ತಮ್ಮ ಪಟ್ಟುಗಳನ್ನು ಬಹಿರಂಗವಾಗಿಯೇ ಬೀದಿಯಲ್ಲಿ ತೋರಿಸುತ್ತಿದ್ದರು. ಇವರ ಆಟ ಬಹಿರಂಗವಾಗಿತ್ತು. ಇವರ ಗರ್ಜನೆ ಇಡೀ ನಗರಕ್ಕೆ ಕೇಳುತ್ತಿತ್ತು.
ಆದರೆ ಮುತ್ತಪ್ಪ ರೈಯವರ ಶೈಲಿ ಬೇರೆಯಾಗಿತ್ತು. ಇವರ ತಂತ್ರಗಾರಿಕೆ, ಸೂಟುಬೂಟು, ಬ್ಯಾಂಕ್ ಬ್ಯಾಲೆನ್ಸ್, ಸಂಸ್ಕೃತವನ್ನೇ ನೆನಪಿಸುವ ಶಾಂತ ಮಾತು! ಇಂತಹ ಮನುಷ್ಯನನ್ನು ಬೆಂಗಳೂರು ಅದುವರೆಗೆ ನೋಡಿರಲಿಲ್ಲ!

ಆದರೆ ಒಂದು ಸಿಂಹ ಬಿದ್ದಷ್ಟೇ ಸಾಕಾಗಲಿಲ್ಲ. ಬೆಂಗಳೂರಿನ ಕಾಡಿನಲ್ಲಿ ಇನ್ನೂ ಒಂದು ಹುಲಿ ಗರ್ಜಿಸುತ್ತಿತ್ತು!
ಬೇಣಕನಹಳ್ಳಿ ಆಳಪ್ಪ ಶಿವಕುಮಾರ್ರವರು! ಜಗತ್ತಿಗೆ ಗೊತ್ತಿರುವ ಹೆಸರು ಆಯಿಲ್ ಕುಮಾರ್! ಬೆಂಗಳೂರಿನ ಕಲಬೆರಕೆ ಎಣ್ಣೆ ಸಾಮ್ರಾಜ್ಯದ ಚಕ್ರವರ್ತಿ. ಗಾಂಧಿನಗರದ ಸಿನಿಮಾ ವಿತರಣೆಯ ಒಡೆಯ!
ಆಯಿಲ್ ಕುಮಾರ್ರವರು ಜಯರಾಜ್ರವರಿಗಿಂತ ಇನ್ನೂ ದೊಡ್ಡ ಹಣದ ಜಾಲ ಹೆಣೆದಿದ್ದರು. ಆ ಜಾಲ ಬಿಚ್ಚದಿದ್ದರೆ ಹೊಸ ಶಕ್ತಿಗಳಿಗೆ ಜಾಗ ಸಿಗುತ್ತಿರಲಿಲ್ಲ.
ಸರಿಯಾಗಿ ಒಂದೇ ವರ್ಷ.
20 ನವೆಂಬರ್ 1990. ಸದಾಶಿವನಗರ. ಆಯಿಲ್ ಕುಮಾರ್ರವರು ರಸ್ತೆಯ ಮೇಲೆ ಕೊನೆಯುಸಿರೆಳೆದರು. ಬೆಂಗಳೂರಿನ ಮತ್ತೊಂದು ಬೃಹತ್ ವೃಕ್ಷ ಉರುಳಿತು.
ಒಂದೇ ದಿನಾಂಕದ ಅಂತರದಲ್ಲಿ ಸಂಭವಿಸಿದ ಈ ಎರಡು ನಿಧನಗಳು ಇಡೀ ನಗರದ ಪವರ್ ಬ್ಯಾಲೆನ್ಸ್ ಅನ್ನೇ ಬದಲಾಯಿಸಿದವು. ಅಂದಿನ ಮಾಧ್ಯಮಗಳಲ್ಲಿ ಮತ್ತು ತನಿಖಾ ಸಂಸ್ಥೆಗಳಲ್ಲಿ ಈ ಎರಡೂ ಹತ್ಯೆಗಳ ಹಿಂದೆ ಒಂದೇ ರೀತಿಯ ಸೂತ್ರಧಾರತ್ವ ಕೆಲಸ ಮಾಡಿರಬಹುದೇ ಎಂಬ ಅನುಮಾನದ ಚರ್ಚೆಗಳು ನಡೆದವು!!

ಬೆಂಗಳೂರಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ, ಡಾನ್ಗಿರಿ ಕೇವಲ ಗರಡಿ ಮನೆಯಿಂದ ಬರಲಿಲ್ಲ! ಬ್ಯಾಂಕಿನ ಟೇಬಲ್ನಿಂದ ಬಂತು. ಕೇವಲ ಶಕ್ತಿಯಿಂದಲ್ಲ, ತಂತ್ರಗಾರಿಕೆ ಮತ್ತು ಬುದ್ಧಿಯಿಂದ!
ಕುವೆಂಪುರವರ ಒಂದು ಮಾತು ನೆನಪಿಗೆ ಬರುತ್ತದೆ “ಶಕ್ತಿಯೇ ಶಿವ, ಶಿವನೇ ಶಕ್ತಿ.” ಆದರೆ ಆ ಶಕ್ತಿಯ ಸ್ವರೂಪ ಕಾಲ ಬದಲಾದಂತೆ ಬದಲಾಗುತ್ತದೆ. ಒಂದು ಯುಗದಲ್ಲಿ ಅದು ಸ್ನಾಯು ಶಕ್ತಿ, ಇನ್ನೊಂದು ಯುಗದಲ್ಲಿ ಬುದ್ಧಿ ಶಕ್ತಿ. ಒಂದು ಯುಗದ ದೊರೆ ಗದೆ ಹಿಡಿಯುತ್ತಿದ್ದ, ಇನ್ನೊಂದು ಯುಗದ ದೊರೆ ಪೆನ್ನು ಹಿಡಿಯುತ್ತಾನೆ!
ಮುಂದೆ ದುಬೈಗೆ ಹೋದರು. ಮರಳುಗಾಡಿನ ಆ ಮಣಿಮಯ ನಗರ ಇವರ ಎರಡನೆಯ ಮನೆಯಾಯಿತು. ಹೋಟೆಲುಗಳು, ಆಮದು-ರಫ್ತು, ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡರು.
ಹಳೆಯ ಕಾಲದಲ್ಲಿದ್ದಂತೆ ಬೀದಿಯಲ್ಲಿ ಪ್ರತ್ಯಕ್ಷವಾಗಿ ನಿಲ್ಲುವ ಬದಲು, ದೂರದ ಎಸಿ ಕೋಣೆಯಲ್ಲಿ ಕೂತು ಕಾರ್ಯಾಚರಣೆ ನಡೆಸುವ ಹೊಸ ಶೈಲಿಗೆ ಇದು ನಾಂದಿಯಾಯಿತು.
ಈ ಕಥೆಗೆ ಇನ್ನೊಂದು ಮುಖವಿದೆ! ಆ ಮುಖವನ್ನೂ ದಾಖಲಿಸದೆ ಇತಿಹಾಸ ಪೂರ್ಣವಾಗುವುದಿಲ್ಲ!
ಕುವೆಂಪುರವರು ಒಂದೆಡೆ ಬರೆದಿದ್ದಾರೆ “ಎಲ್ಲಾ ಜೀವಿಗಳಲ್ಲೂ ದೈವ ಇದೆ.” ಎಲ್ಲಾ ಜೀವಿಗಳಲ್ಲೂ ಬದಲಾಗುವ ಸಾಧ್ಯತೆ ಇದೆ. ಎಷ್ಟೋ ಪಾಪಿಗಳು ಸಂತರಾಗಿದ್ದಾರೆ. ವಾಲ್ಮೀಕಿ ಮಹರ್ಷಿಗಳು ದರೋಡೆಗಾರರಾಗಿದ್ದವರೇ ರಾಮಾಯಣ ಬರೆದದ್ದು! ಅಂಗುಲಿಮಾಲರವರು ಭಗವಾನ ಬುದ್ಧನ ಶಿಷ್ಯರಾಗಿ ಬದಲಾದದ್ದು!
2007-08ರ ಸುಮಾರಿಗೆ ಎಲ್ಲಾ ಪ್ರಕರಣಗಳಿಂದ ಕೋರ್ಟ್ ಬಿಡುಗಡೆಗೊಳಿಸಿದ ನಂತರ, ಮುತ್ತಪ್ಪ ರೈಯವರು ಒಂದು ಸ್ಪಷ್ಟ ಘೋಷಣೆ ಮಾಡಿದರು “ಇನ್ನು ಮುಂದೆ ನನ್ನ ಜೀವನ ಸಮಾಜ ಸೇವೆಗಾಗಿ.”
ಮಾತಿಗೆ ತಕ್ಕಂತೆ ಕೆಲಸವೂ ಮಾಡಿದರು.
“ಜಯ ಕರ್ನಾಟಕ” ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಆ ಸಂಘಟನೆಯ ಮೂಲಕ ಬಡ ಮಕ್ಕಳ ಶಾಲಾ ಶುಲ್ಕ, ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಯ ವೆಚ್ಚ, ರೈತರ ಸಂಕಷ್ಟದ ಪರಿಹಾರ , ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು.
ದಕ್ಷಿಣ ಕನ್ನಡ ಮತ್ತು ಬೆಂಗಳೂರಿನ ಎಷ್ಟೋ ಕುಟುಂಬಗಳಿಗೆ “ಜಯ ಕರ್ನಾಟಕ” ಒಂದು ಆಸರೆಯಾಯಿತು. ಆಸ್ಪತ್ರೆಯ ಬಿಲ್ ಕಟ್ಟಲಾಗದೆ ಕಂಗಾಲಾದವರಿಗೆ, ಮಗಳ ಮದುವೆಗೆ ಹಣವಿಲ್ಲದವರಿಗೆ, ಶಾಲಾ ಶುಲ್ಕದ ಕೊರತೆಯಿಂದ ಶಿಕ್ಷಣ ನಿಲ್ಲಿಸಬೇಕಾದ ಸ್ಥಿತಿಯ ವಿದ್ಯಾರ್ಥಿಗಳಿಗೆ ಸಂಘಟನೆಯ ನೆರವು ಪಡೆದವರು.
ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಗಣನೀಯ ದೇಣಿಗೆ ನೀಡಿದರು. ಬಂಟ ಸಮುದಾಯದ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ತುಳು ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಗೆ ಕೊಡುಗೆ ನೀಡಿದರು. ತುಳು ಸಿನಿಮಾ “ಕಂಚಿಲ್ದ ಬಾಳೆ”ಯಲ್ಲಿ ನಟಿಸಿ ತುಳು ಸಿನಿಮಾ ಉದ್ಯಮಕ್ಕೂ ಕೊಡುಗೆ ನೀಡಿದರು.
ತಮ್ಮ ಆತ್ಮಚರಿತ್ರೆ “My Days in the Underworld: Rise of the Bangalore Mafia” ಎಂಬ ಪುಸ್ತಕದಲ್ಲಿ ತಮ್ಮ ಜೀವನದ ಎಲ್ಲಾ ಮುಖಗಳನ್ನೂ ಪ್ರಾಮಾಣಿಕವಾಗಿ ಬಿಚ್ಚಿಟ್ಟರು.
ಬಂಧುಗಳೇ, ಇತಿಹಾಸ ಒಂದೇ ಮುಖವನ್ನು ನೋಡಿ ತೀರ್ಪು ಕೊಡಬಾರದು. ಆರೋಪ ಒಂದು ಮುಖ. ಸಾಧನೆ ಇನ್ನೊಂದು ಮುಖ. ಮನುಷ್ಯನ ಆತ್ಮ ಸಂಪೂರ್ಣ ಬಿಳಿಯೂ ಅಲ್ಲ, ಸಂಪೂರ್ಣ ಕರಿಯೂ ಅಲ್ಲ. ಬೂದಿಯ ಬಣ್ಣ, ಬೂದಿಯಲ್ಲಿ ಇನ್ನೂ ಸಣ್ಣ ಕೆಂಡವಿರಬಹುದು! ಆದರೆ ಬೂದಿಯ ಮೇಲೆ ಸಣ್ಣ ಹೂವೂ ಅರಳಬಹುದು!
ಮುತ್ತಪ್ಪ ರೈಯವರ ಜೀವನದ ಬಗ್ಗೆ ಸಂಪೂರ್ಣ ತೀರ್ಪು ಇತಿಹಾಸಕ್ಕೆ ಬಿಡೋಣ. ಆದರೆ ಅವರ ಸಮಾಜ ಸೇವೆಯ ಕೊಡುಗೆಯನ್ನು ಗುರುತಿಸದೆ ಇರುವುದೂ ನ್ಯಾಯವಲ್ಲ.
15 ಮೇ 2020. ಕೊರೊನಾ ಸಂಕಟದ ಕಾಲ. ಇಡೀ ಜಗತ್ತು ಸ್ತಬ್ಧವಾಗಿತ್ತು. ಬೆಂಗಳೂರಿನ ಬೀದಿಗಳು ಬಿಕೋ ಎಂದಿದ್ದವು. ಜನ ಒಬ್ಬೊಬ್ಬರಾಗಿ ಮನೆಯಲ್ಲಿ ಬಂದಿಯಾಗಿದ್ದರು. ಆ ಮೌನದ ನಗರದ ಒಂದು ಆಸ್ಪತ್ರೆಯಲ್ಲಿ ಮುತ್ತಪ್ಪ ರೈಯವರು ಕೊನೆಯುಸಿರೆಳೆದರು.
ಪುತ್ತೂರಿನ ಬ್ಯಾಂಕ್ ಗುಮಾಸ್ತ. ಬೆಂಗಳೂರಿನ ವಿವಾದಾತ್ಮಕ ವ್ಯಕ್ತಿ. ದುಬೈನ ಉದ್ಯಮಿ. ಎಂಟು ಪ್ರಕರಣಗಳಲ್ಲಿ ಆರೋಪಿ, ಎಂಟರಲ್ಲೂ ನಿರ್ದೋಷಿ. ಜಯ ಕರ್ನಾಟಕದ ಸಂಸ್ಥಾಪಕ. ದಾನಿ. ನಟ. ಬರಹಗಾರ. ಸಮಾಜ ಸೇವಕ.
ಇವೆಲ್ಲಾ ಒಬ್ಬರೇ ಮನುಷ್ಯರು!ಒಂದೇ ಶ್ವಾಸ!ಒಂದೇ ಹೃದಯ! ಆದರೆ ಎಷ್ಟೊಂದು ಮುಖಗಳು!
ಆದರೆ ಪ್ರಕೃತಿಗೆ ಶೂನ್ಯ ಸಹಿಸುವುದಿಲ್ಲ! ಸಿಂಹಾಸನ ಎಂದೂ ಖಾಲಿ ಇರುವುದಿಲ್ಲ!ಅವರ ನಿಧನದ ನಂತರ ಬೆಂಗಳೂರಿನ ಚಿತ್ರ ಮತ್ತೆ ಬದಲಾಯಿತು.
ಆ ಬದಲಾವಣೆಯ ಕಥೆ, ಈ ಶತಮಾನದ ಹೊಸ ಶಕ್ತಿಗಳ ಕಥೆ, ಸೂಟುಬೂಟಿನ ಹೊಸ ಮುಖಗಳ ಕಥೆ…..
…ಮುಂದಿನ ಭಾಗದಲ್ಲಿ.
ಬರಹ: ಸಂತೋಷ್ಕುಮಾರ್ ತಂಗವೇಲು

