ನಾಳೆ ಅನ್ನುವ ಸುಳ್ಳು !!!!!

ಪ್ರಿಯ ಓದುಗರೇ, ನಿಮ್ಮ ಕೈಯಲ್ಲಿ ಒಂದು ಗಡಿಯಾರ ಇದೆಯಲ್ಲವೇ? ಅದು ಸಮಯ ತೋರಿಸುತ್ತದೆ! ಆದರೆ ಇನ್ನೆಷ್ಟು ಸಮಯ ಉಳಿದಿದೆ ಅಂತ ಯಾವ ಗಡಿಯಾರವೂ ತೋರಿಸುವುದಿಲ್ಲ! ಅದೇ ನಮ್ಮ ಬದುಕಿನ ದೊಡ್ಡ ಮೋಸ.

ನಾವೆಲ್ಲ “ನಾಳೆ” ಅನ್ನುವ ಪದವನ್ನು ನಂಬಿ ಬದುಕುತ್ತೇವೆ. ನಾಳೆ ಅಪ್ಪನ ಜೊತೆ ಮಾತನಾಡುತ್ತೇವೆ, ನಾಳೆ ಊರಿಗೆ ಹೋಗುತ್ತೇನೆ, ನಾಳೆ ಆ ಗೆಳೆಯನಿಗೆ ಫೋನ್ ಮಾಡುತ್ತೇನೆ… ನಾಳೆ, ನಾಳೆ, ನಾಳೆ. ಆದರೆ ನಾಳೆ ಅನ್ನುವುದು ಯಾರ ಜೇಬಿನಲ್ಲೂ ಇಲ್ಲ!

ನನ್ನ ಗೆಳೆಯನೊಬ್ಬನಿದ್ದ, ಅವನ ಹೆಸರು ರಮೇಶ ಅಂತ. ಅವರಮ್ಮ ಪ್ರತಿ ಭಾನುವಾರ ಫೋನ್ ಮಾಡಿ, “ಮಗಾ, ಒಮ್ಮೆ ಊರಿಗೆ ಬಾರೋ. ಬರೀ ಎರಡು ದಿನ ಸಾಕು” ಅನ್ನುತ್ತಿದ್ದರು. ರಮೇಶ ಪ್ರತಿ ಸಲ, “ಅಮ್ಮಾ, ಈ ತಿಂಗಳು ಕೆಲಸ ಜಾಸ್ತಿ. ಮುಂದಿನ ತಿಂಗಳು ಖಂಡಿತ ಬರ್ತೀನಿ” ಅನ್ನುತ್ತಿದ್ದ.

ಆ “ಮುಂದಿನ ತಿಂಗಳು” ಹನ್ನೆರಡು ಸಲ ಬಂತು! ಹನ್ನೆರಡೂ ಸಲ ಹಾಗೇ ಹೋಯಿತು !

ಒಂದು ದಿನ ಬೆಳಿಗ್ಗೆ ಊರಿನಿಂದ ಫೋನ್ ಬಂತು. ಆ ಫೋನ್‌ನಲ್ಲಿ ಅಮ್ಮನ ದನಿ ಇರಲಿಲ್ಲ, ಪಕ್ಕದ ಮನೆಯವರ ದನಿ ಇತ್ತು. ರಮೇಶ ಊರಿಗೆ ಓಡಿದ. ಈ ಸಲ ಕೆಲಸ ಅಡ್ಡ ಬರಲಿಲ್ಲ; ಆದರೆ ತಡವಾಗಿತ್ತು. ಅಮ್ಮ ಕಾಯುವುದನ್ನು ನಿಲ್ಲಿಸಿದ್ದರು!

ಅಮ್ಮನ ಕೋಣೆಯಲ್ಲಿ ಒಂದು ಕ್ಯಾಲೆಂಡರ್ ಇತ್ತು. ಅದರಲ್ಲಿ ಪ್ರತಿ ಭಾನುವಾರದ ಮೇಲೆ ಒಂದು ಸಣ್ಣ ಗುರುತು! ರಮೇಶ ಫೋನ್ ಮಾಡಿದ ದಿನಗಳು. ಅಮ್ಮ ಆ ಕರೆಗಳನ್ನು ಎಣಿಸುತ್ತಿದ್ದರು! ಆ ಕ್ಯಾಲೆಂಡರ್ ಹಿಡಿದು ರಮೇಶ ಮಗುವಿನಂತೆ ಅತ್ತ. ಆದರೆ ಕಣ್ಣೀರಿಗೆ ಸಮಯವನ್ನು ಹಿಂದಕ್ಕೆ ತಿರುಗಿಸುವ ಶಕ್ತಿ ಇಲ್ಲವಲ್ಲ ಎಂದು ಕೊಂಚ ತಡವಾಗಿ ರಮೇಶನಿಗೆ ತಿಳಿಯಿತು!

ಮರದಿಂದ ಉದುರಿದ ಎಲೆಯನ್ನು ನೋಡಿದ್ದೀರಾ? ಅದು ಮತ್ತೆ ಕೊಂಬೆಗೆ ಹಿಂದಿರುಗುವುದಿಲ್ಲ. ಹೊಳೆಯಲ್ಲಿ ಹರಿದುಹೋದ ನೀರು ಮತ್ತೆ ಹಿಂದಕ್ಕೆ ಬರುವುದಿಲ್ಲ. ಸಮಯವೂ ಹಾಗೆಯೇ… ಒಮ್ಮೆ ಹೋದರೆ ಹೋಯಿತು. ಅದಕ್ಕೆ ಎಷ್ಟೇ ಬೆಲೆ ಕೊಟ್ಟರೂ ಮತ್ತೆ ಕೊಂಡುಕೊಳ್ಳಲು ಆಗುವುದಿಲ್ಲ.

ನಾವು ದುಡ್ಡಿಗಾಗಿ ಓಡುತ್ತೇವೆ. ಕಳೆದುಹೋದ ದುಡ್ಡನ್ನು ಮತ್ತೆ ಸಂಪಾದಿಸಬಹುದು, ಆದರೆ ಕಳೆದುಹೋದ ಕ್ಷಣವನ್ನು? ಆದರೂ ನಾವು ದುಡ್ಡನ್ನು ಜೋಪಾನ ಮಾಡುತ್ತೇವೆ, ಸಮಯವನ್ನು ಬೇಕಾಬಿಟ್ಟಿ ಚೆಲ್ಲುತ್ತೇವೆ. ಎಂಥ ವಿಚಿತ್ರ ನೋಡಿ!

ಪ್ರೀತಿಗೆ ಗಡುವಿಲ್ಲ ಅಂತ ನಾವು ಭ್ರಮಿಸುತ್ತೇವೆ. ಆದರೆ ಪ್ರತಿ ಸಂಬಂಧಕ್ಕೂ ಒಂದು ಕೊನೆಯ ದಿನ ಇದೆ. ಆ ದಿನ ಯಾವುದು ಅಂತ ನಮಗೆ ಮೊದಲೇ ಗೊತ್ತಾಗುವುದಿಲ್ಲ!. ಅದಕ್ಕೇ ಪ್ರತಿ ಭೇಟಿಯೂ ಕೊನೆಯದ್ದೇನೋ ಅನ್ನುವಷ್ಟು ಪ್ರೀತಿಯಿಂದ ಇರಬೇಕು!

ಇವತ್ತು ಒಂದು ಕೆಲಸ ಮಾಡಿ! ದೊಡ್ಡ ಕೆಲಸವೇನೂ ಬೇಡ. “ನಾಳೆ ಮಾಡಿದರಾಯಿತು” ಅಂತ ನೀವು ಮುಂದೂಡುತ್ತಿರುವ ಆ ಒಂದು ಫೋನ್ ಕರೆ ಇದೆಯಲ್ಲ, ಅದನ್ನು ಇವತ್ತೇ ಮಾಡಿ, ಈ ಕ್ಷಣವೇ ಮಾಡಿ. ಆ ದನಿ ಇನ್ನೂ ಕೇಳಿಸುತ್ತಿರುವಾಗಲೇ ಮಾತನಾಡಿ!

ಯಾಕೆಂದರೆ, ಕೆಲವು ಫೋನ್ ನಂಬರ್‌ಗಳಿಗೆ ಒಂದು ದಿನ ಕರೆ ಮಾಡಿದರೆ, ಆ ಕಡೆಯಿಂದ ಯಾರೂ ಎತ್ತುವುದಿಲ್ಲ!

ಆ ದಿನ ಬರುವ ಮೊದಲು ಮಾತನಾಡಿಬಿಡಿ!

ಬರಹ : ಸಂತೋಷ್‌ಕುಮಾರ್ ತಂಗವೇಲು

Leave a Comment

Your email address will not be published. Required fields are marked *

Scroll to Top