
ಅವಾಗವಾಗ ಒಬ್ಬರು ಹೇಳುತ್ತಿರುತ್ತಾರೆ, “ಆ ಒಬ್ಬ ವ್ಯಕ್ತಿಯಿಂದ ನನಗೆ ನೆಮ್ಮದಿಯೇ ಇಲ್ಲ. ಅವಾಗವಾಗ ಚುಚ್ಚುಮಾತು ಆಡುತ್ತಾನೆ”! ನೆಮ್ಮದಿ ಅನ್ನುವುದು ನೀರಿನ ಹಾಗೆ. ಅದು ಹರಿಯುತ್ತಲೇ ಇರಬೇಕು. ಹರಿಯುವ ನದಿಗೆ ಕಲ್ಲು ಎಸೆದರೆ, ನೀರು ಹರಿಯುತ್ತಲೇ ಇರುತ್ತದೆ. ಅದೇ ತರಹ ನಿಮ್ಮ ಜೀವನದಲ್ಲಿ ಕೆಲವರು ಕಲ್ಲು ಎಸೆಯುತ್ತಲೇ ಇರುತ್ತಾರೆ. ನೀವು ನದಿಯಂತೆ ನಿದಾನವಾಗಿ ಹರಿಯುತ್ತಲೇ ಇರಿ!
ಈಗ ಒಂದು ಪ್ರಶ್ನೆ. ನಿನ್ನ ಮನೆಯೊಳಗೆ ಯಾರಾದರೂ ಬಂದು, ಕೊಳೆ ಚಪ್ಪಲಿಯಲ್ಲೇ ನಿನ್ನ ಹಾಸಿಗೆಯ ಮೇಲೆ ಮಲಗಿದರೆ ನೀನು ಸುಮ್ಮನಿರುತ್ತೀಯಾ? ಇಲ್ಲ ಅಲ್ಲವಾ? ಹಾಗಾದರೆ ನಿನ್ನ ಮನಸ್ಸಿನೊಳಗೆ ಕೆಲವರು ಬಂದು, ದಿನವಿಡೀ ಕೊಳೆ ಹರಡಿ ಹೋಗುವುದನ್ನು ಯಾಕೆ ಸಹಿಸುತ್ತೀಯಾ?
ಮನಸ್ಸು ಕೂಡ ಒಂದು ಮನೆ! ಅಲ್ಲಿ ಯಾರನ್ನು ಬಿಟ್ಟುಕೊಳ್ಳಬೇಕು, ಯಾರಿಗೆ ಬಾಗಿಲು ಮುಚ್ಚಬೇಕು ಅನ್ನುವುದನ್ನು ನೀನೇ ತೀರ್ಮಾನಿಸಬೇಕು.
ನನ್ನ ಪರಿಚಯದ ಒಬ್ಬ ಹುಡುಗಿ ಇದ್ದಳು. ಅವಳನ್ನು ಮೀರಾ ಎನ್ನೋಣ. ಕಚೇರಿಯಲ್ಲಿ ಅವಳ ಪಕ್ಕ ಕೂರುತ್ತಿದ್ದ ಒಬ್ಬಳು ಪ್ರತಿದಿನ ಒಂದಲ್ಲ ಒಂದು ಚುಚ್ಚುಮಾತು ಆಡುತ್ತಿದ್ದಳು. “ನಿನ್ನ ಸೀರೆ ಬಣ್ಣ ಸರಿಯಿಲ್ಲ.” “ನಿನಗೆ ಈ ಕೆಲಸ ಆಗಲ್ಲ ಬಿಡು.” ಮೀರಾ ಮನೆಗೆ ಬರುತ್ತಿದ್ದದ್ದೇ ಬಾಡಿದ ಮುಖದಲ್ಲಿ. ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಆ ಒಬ್ಬ ವ್ಯಕ್ತಿಯ ಮಾತು ಅವಳ ಇಡೀ ದಿನವನ್ನು ವಿಷ ಮಾಡುತ್ತಿತ್ತು.
ಒಂದು ದಿನ ಅವಳ ಅಜ್ಜಿ ಕೇಳಿದರು, “ಮಗೂ, ಯಾರೋ ನಿನಗೆ ಹಳಸಿದ ಊಟ ಕೊಟ್ಟರೆ ತಿನ್ನುತ್ತೀಯಾ?” ಮೀರಾ, “ಇಲ್ಲ ಅಜ್ಜಿ!” ಅಂದಳು. ಅಜ್ಜಿ ನಕ್ಕು ಹೇಳಿದರು, “ಹಾಗಾದರೆ ಯಾರೋ ಕೊಡುವ ಹಳಸಿದ ಮಾತನ್ನು ಯಾಕೆ ಒಳಗೆ ತೆಗೆದುಕೊಳ್ಳುತ್ತೀಯಾ? ಕೊಟ್ಟವರಿಗೇ ಹಿಂದಿರುಗಿಸು!”
ಆ ಒಂದು ಮಾತು ಮೀರಾಳ ಬದುಕನ್ನೇ ಬದಲಿಸಿತು!

ಗೆಳೆಯಾ, ಕೆಲವರು ಹಾಗೆ. ಅವರ ಒಳಗೆ ನೆಮ್ಮದಿ ಇರುವುದಿಲ್ಲ. ಹಾಗಾಗಿ ಬೇರೆಯವರ ನೆಮ್ಮದಿಯನ್ನೂ ಸಹಿಸಲಾರರು! ಅವರು ಕತ್ತಲೆಯ ಹಾಗೆ. ಕತ್ತಲೆ ಏನೂ ಮಾಡುವುದಿಲ್ಲ. ಆದರೆ ದೀಪದ ಪಕ್ಕ ಬಂದು ಕೂತರೆ, ದೀಪದ ಬೆಳಕನ್ನೇ ನುಂಗಲು ನೋಡುತ್ತದೆ. ನಿನ್ನ ಕೆಲಸ ಆ ಕತ್ತಲೆಯನ್ನು ಓಡಿಸುವುದಲ್ಲ! ನಿನ್ನ ದೀಪವನ್ನು ಆರಿಸಿಕೊಳ್ಳದಿರುವುದು!
ನದಿಯನ್ನು ನೋಡಿದ್ದೀಯಾ? ದಾರಿಯಲ್ಲಿ ಕಲ್ಲು ಬಂದರೆ ಅದು ಕಲ್ಲಿನೊಂದಿಗೆ ಜಗಳ ಆಡುವುದಿಲ್ಲ. ಸುಮ್ಮನೆ ಪಕ್ಕ ಹರಿದು ಮುಂದೆ ಹೋಗುತ್ತದೆ. ಕೊನೆಗೆ ಸಮುದ್ರ ಸೇರುತ್ತದೆ. ಕಲ್ಲು ಅಲ್ಲೇ ಉಳಿಯುತ್ತದೆ. ಟಾಕ್ಸಿಕ್ ಜನರ ಜೊತೆ ಜಗಳ ಆಡಿ ಗೆಲ್ಲಲು ಹೋಗಬೇಡ. ನದಿಯಾಗು! ಪಕ್ಕ ಹರಿದು ಮುಂದೆ ಹೋಗು!
ಇನ್ನೊಂದು ವಿಷಯ. ಪ್ರೀತಿ ಅಂದರೆ ಎಲ್ಲರನ್ನೂ ನಿನ್ನ ಮನಸ್ಸಿನೊಳಗೆ ತುಂಬಿಕೊಳ್ಳುವುದಲ್ಲ. ನಿನ್ನ ನೆಮ್ಮದಿಯನ್ನು ಗೌರವಿಸುವವರನ್ನು ಹತ್ತಿರ ಇಟ್ಟುಕೊಳ್ಳುವುದು. ನಿನ್ನನ್ನು ಕುಬ್ಜನಾಗಿಸುವ ಹತ್ತು ಜನರಿಗಿಂತ, ನಿನ್ನನ್ನು ನೀನಾಗಿ ಇರಗೊಡುವ ಒಬ್ಬ ಜೀವ ಸಾವಿರ ಪಟ್ಟು ಬೆಲೆಬಾಳುತ್ತದೆ. ನಿನ್ನ ಮೇಲೆ ಮೊದಲು ನೀನು ಪ್ರೀತಿ ತೋರಿಸು. ಅದು ಸ್ವಾರ್ಥವಲ್ಲ, ಅದು ಆರೋಗ್ಯ.
ಇವತ್ತು ಒಂದು ಕೆಲಸ ಮಾಡು. ನಿನ್ನ ದಿನವನ್ನು ಪದೇ ಪದೇ ವಿಷ ಮಾಡುವ ಆ ಒಬ್ಬ ವ್ಯಕ್ತಿಯ ಹೆಸರು ನೆನಪಿಸಿಕೋ. ಆ ವ್ಯಕ್ತಿಗೆ ನಿನ್ನ ಮನಸ್ಸಿನ ಮನೆಯಲ್ಲಿ ನೀನು ಪುಕ್ಕಟೆ ಕೊಟ್ಟಿರುವ ಕೋಣೆಯನ್ನು ಇವತ್ತು ವಾಪಸ್ ತೆಗೆದುಕೊಂಡುಬಿಡು.
ನೆಮ್ಮದಿ ಅನ್ನುವುದು ಬಾಡಿಗೆಗೆ ಕೊಡುವ ಮನೆಯಲ್ಲ!
ಅದು ನಿನ್ನ ಸ್ವಂತ ಮನೆ. ಅದರ ಬೀಗದ ಕೈ ನಿನ್ನ ಕೈಯಲ್ಲೇ ಇರಲಿ!
ಬರಹ: ಸಂತೋಷ್‌ಕುಮಾರ್ ತಂಗವೇಲು

