
ಮೂರ್ನಾಡು, ಸೆಪ್ಟೆಂಬರ್ 13.
ಶನಿವಾರ ಸಂಜೆ ಮೂರ್ನಾಡು ಪಟ್ಟಣ ಒಂದು ಹೊಸ ಬೆಳಕಿನಲ್ಲಿ ಝಗಝಗಿಸಿತು! ಪ್ರವಾದಿ ಮೊಹಮ್ಮದ್ (ಸ) ಅವರ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಬೃಹತ್ ಮಿಲಾದ್ ಸಂದೇಶ ಜಾಥಾ ಪಟ್ಟಣದ ಎದೆಬಡಿತವನ್ನೇ ಬದಲಾಯಿಸಿತು.
ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್ಜೆಎಮ್) ಮೂರ್ನಾಡು ರೇಂಜ್ ಹಾಗೂ ಎಸ್ವೈಎಸ್ ಮಡಿಕೇರಿ ಝೋನ್ ಸಂಯುಕ್ತಾಶ್ರಯದಲ್ಲಿ ಈ ಜಾಥಾ ವೈಭವದಿಂದ ನಡೆಯಿತು. ಎಸ್ವೈಎಸ್ ಜಿಲ್ಲಾ ಅಧ್ಯಕ್ಷ ಮುನೀರ್ ಮಹ್ಳರಿ ಪ್ರಾರ್ಥನೆ ನೆರವೇರಿಸಿ ಚಾಲನೆ ನೀಡಿದರು. ಲಕ್ಷದ್ವೀಪದಿಂದ ಆಗಮಿಸಿದ ಸಯ್ಯದ್ ಅಹ್ಮದ್ ಮಅದಿ ಅಲ್ ಬುಖಾರಿ ತಂಜಳ್ ಅವರು ಜಾಥಾವನ್ನು ಮುನ್ನಡೆಸಿದರು.
ಮೂರ್ನಾಡು ಕಾಲೇಜು ಮೈದಾನದಿಂದ ಆರಂಭಗೊಂಡ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾರೋಪಗೊಂಡಿತು.
ಜಾಥಾದ ವಿಶೇಷ ಆಕರ್ಷಣೆ 18 ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ! ಆ ಪುಟ್ಟ ಕೈಗಳಿಂದ ಎದ್ದ ಲಯ, ಆ ಎಳೆಯ ದನಿಗಳಿಂದ ಹೊರಟ ಕೀರ್ತನೆ, ನೋಡುಗರ ಎದೆಯನ್ನೇ ತಟ್ಟಿತು! ಇದರ ಜೊತೆಗೆ ಸ್ಕೌಟ್ ಪಡೆಯ ಶಿಸ್ತಿನ ನಡೆ, ಫ್ಲವರ್ ಶೋನ ಬಣ್ಣಗಳು, ಯುವಕರ ಹಾಗೂ ಹಿರಿಯರ ದಫ್ ಪ್ರದರ್ಶನ, ಪ್ರವಾದಿ ಕೀರ್ತನೆಗಳು ಸಾರ್ವಜನಿಕರ ಗಮನ ಸೆಳೆದವು.

ಪ್ರಮುಖ ವಾಗ್ಮಿ ನೂರುದ್ದೀನ್ ಝುಹ್ರಿ ಪಂಜ ಸಂದೇಶ ಭಾಷಣ ಮಾಡುತ್ತಾ, “ಮೊಹಮ್ಮದ್ ಪೈಗಂಬರ್ ಅವರ ಜೀವನ ಶೈಲಿ, ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಅವರ ಶಾಂತಿಯ ಸಂದೇಶ ಎಲ್ಲರಿಗೂ ಮಾದರಿಯಾಗಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಕೋಶಾಧಿಕಾರಿ ಹುಸೈನ್ ಸಖಾಫಿ, ಎಸ್ಜೆಎಮ್ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಸಖಾಫಿ, ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್ ಅಮ್ಜದಿ, ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಮಡಿಕೇರಿ ಝೋನ್ ಅಧ್ಯಕ್ಷ ಅಬ್ದುಲ್ಲ ಮುಸ್ಲಿಯಾರ್, ಮೂರ್ನಾಡು ರೇಂಜ್ ಅಧ್ಯಕ್ಷ ಹಸನ್ ಸಅದಿ, ಎಸ್ಎಂಜೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಕಮರುದ್ದೀನ್ ಅನ್ಸಾರಿ, ಪ್ರಧಾನ ಕಾರ್ಯದರ್ಶಿ ಜುನೈದ್, ಅಬೂಬಕ್ಕರ್ ಹಾಜಿ ಹಾಕತ್ತೂರು, ಹಂಝು ರಹ್ಮಾನಿ, ಹನೀಫ್ ಸಖಾಫಿ, ಯೂಸುಫ್ ಹಾಜಿ ಕೊಂಡಂಗೇರಿ, ಮುಬಶೀರ್ ಅಹ್ಸನಿ, ಮೂರ್ನಾಡು ಜಮಾಅತ್ ಪದಾಧಿಕಾರಿಗಳು, ಮೈಮ ಸಂಘಟನೆಯ ಪ್ರಮುಖರು ಮತ್ತು ಇತರರು ಉಪಸ್ಥಿತರಿದ್ದರು.
ಜಾಥಾ ಮುಗಿದಾಗ ಮೂರ್ನಾಡುವಿನ ಎದೆಯಲ್ಲಿ ಒಂದು ಬೆಳಕು ಉಳಿಯಿತು. ಆ ಬೆಳಕು ಪ್ರವಾದಿಯ ಸಂದೇಶದ್ದು. ಶಾಂತಿಯದ್ದು. ಪ್ರೀತಿಯದ್ದು. ಈ ಸಂದೇಶ ಎಂದೂ ಮಾಸದಿರಲಿ!
ಓಯಾಸಿಸ್. ಕಾವೇರಿಯ ದಡದಿಂದ, ಕನ್ನಡಿಗರ ಮನೆಮನೆಗೆ!

