
ಬೆಟ್ಟದ ಮೌನವನ್ನು ನೋಡುತ್ತಾ ಕುಳಿತಿದ್ದೆ!
ಸಂಜೆಯ ಮಂಜು ಬೆಟ್ಟದ ಹೆಗಲ ಮೇಲೆ ಹಗುರಾಗಿ ಇಳಿಯುತ್ತಿತ್ತು!ಆ ಮೌನದ ನಡುವೆ, ಈ ಪ್ರಪಂಚದಲ್ಲಿ ನಡೆಯುತ್ತಿರುವ ಮನಸ್ಸಿನ ತಳಮಳ, ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಆತ್ಮಹತ್ಯೆಗಳು, ಇವೆಲ್ಲವನ್ನೂ ಆ ಬೆಟ್ಟದ ಮೇಲೆ ಹರಡುತ್ತಿದ್ದ ಗಾಳಿ ಹೊತ್ತು ತಂದಂತೆ ಅನ್ನಿಸಿತು! ತಕ್ಷಣ ಅದರ ಬಗ್ಗೆ ಬರೆಯಬೇಕು ಎಂದು ಕುಳಿತುಕೊಂಡೆ.
ಪ್ರಿಯ ಓದುಗರೇ,
ಒಂದು ಸಣ್ಣ ಸತ್ಯ ಹೇಳಲಾ? ನೀನು ಮೊಬೈಲಿನಲ್ಲಿ ನೋಡುತ್ತಿರುವುದು ಬದುಕಲ್ಲ. ಅದು ಬದುಕಿನ ಜಾಹೀರಾತು!
ಜಾಹೀರಾತಿನಲ್ಲಿ ಎಲ್ಲವೂ ಸುಂದರ. ಆ ಸೋಪಿನ ಜಾಹೀರಾತಿನ ಹುಡುಗಿಯ ಕೂದಲು ನಿಜಕ್ಕೂ ಹಾಗಿರುತ್ತದಾ? ಇಲ್ಲ! ಬೆಳಕು, ಕ್ಯಾಮೆರಾ, ಫಿಲ್ಟರ್, ಹತ್ತು ಬಾರಿ ತೆಗೆದ ಫೋಟೋ. ನಾವು ಆ ಜಾಹೀರಾತು ನೋಡಿ, ನಮ್ಮ ನಿಜವಾದ ಕೂದಲು ನೋಡಿ ಕೊರಗುತ್ತೇವೆ!ಎಂಥ ಮೂರ್ಖತನ ನೋಡಿ!
ಆ ವಿದೇಶದ ಬೀಚಿನ ಫೋಟೋ ಹಾಕಿದವನ ಬಗ್ಗೆ ಒಂದು ವಿಷಯ ಹೇಳಲಾ? ಬಹುಶಃ ಆ ಪ್ರವಾಸಕ್ಕೆ ಅವನು ಕ್ರೆಡಿಟ್ ಕಾರ್ಡ್ ಸಾಲ ಮಾಡಿದ್ದಾನೆ. ಆ ನಗುತ್ತಿರುವ ದಂಪತಿಯ ಫೋಟೋದ ಹಿಂದೆ ಹಿಂದಿನ ರಾತ್ರಿಯ ದೊಡ್ಡ ಜಗಳವಿರಬಹುದು. ಆ ಹೊಸ ಕಾರಿನ ಪಕ್ಕ ನಿಂತವನಿಗೆ ಇಎಂಐ ಕಟ್ಟಲು ನಿದ್ದೆ ಬರದಿರಬಹುದು. ಯಾರೂ ತಮ್ಮ ಕಣ್ಣೀರನ್ನು ಅಪ್‌ಲೋಡ್ ಮಾಡುವುದಿಲ್ಲ!
ಪ್ರತಿಯೊಬ್ಬರೂ ತಮ್ಮ ಬದುಕಿನ ಅತ್ಯಂತ ಒಳ್ಳೆಯ ಮೂರು ಸೆಕೆಂಡುಗಳನ್ನು ಆರಿಸಿ ಹಾಕುತ್ತಾರೆ. ಉಳಿದ ಇಪ್ಪತ್ತ ಮೂರು ಗಂಟೆ ಐವತ್ತೇಳು ನಿಮಿಷ ಅವರಿಗೂ ನಿಮ್ಮ ಹಾಗೇ. ಅದೇ ಸಾಲ! ಅದೇ ಚಿಂತೆ! ಅದೇ ಒಂಟಿತನ! ಆದರೆ ಆ ಮೂರು ಸೆಕೆಂಡುಗಳನ್ನು ನೋಡಿ ನೀವು ನಿಮ್ಮ ಇಪ್ಪತ್ತನಾಲ್ಕು ಗಂಟೆಯ ಬದುಕನ್ನೇ ಸೋಲು ಎಂದುಕೊಳ್ಳುತ್ತೀರಿ!

ಒಂದು ಕೆರೆಯನ್ನು ನೋಡಿ. ಮೇಲಿನಿಂದ ನೀರು ತಿಳಿಯಾಗಿ, ಹೊಳೆಯುತ್ತಾ ಕಾಣುತ್ತದೆ! ಆದರೆ ಆ ತಿಳಿ ನೀರಿನ ಆಳದಲ್ಲಿ ಎಷ್ಟು ಕೆಸರಿದೆ, ಎಷ್ಟು ಕಳೆ ಇದೆ, ಯಾರಿಗೆ ಗೊತ್ತು? ಸೋಷಿಯಲ್ ಮೀಡಿಯಾ ಆ ಕೆರೆಯ ಮೇಲ್ಮೈ! ನೀವು ನೋಡುತ್ತಿರುವುದು ಮೇಲ್ಮೈ ಮಾತ್ರ! ಆಳ ಯಾರೂ ತೋರಿಸುವುದಿಲ್ಲ!
ನನಗೊಬ್ಬ ಗೆಳೆಯನಿದ್ದ. ಅವನ ಇನ್‌ಸ್ಟಾಗ್ರಾಮ್ ನೋಡಿದರೆ, ಅವನಷ್ಟು ಸಂತೋಷದ ಮನುಷ್ಯ ಇಡೀ ಜಗತ್ತಿನಲ್ಲಿ ಇಲ್ಲ ಅನ್ನಿಸುತ್ತಿತ್ತು. ಹೊಸ ಬಟ್ಟೆ, ಹೋಟೆಲ್ ಊಟ, ಪ್ರವಾಸ, ಪಾರ್ಟಿ. ಒಂದು ದಿನ ಅವನು ನನ್ನ ಬಳಿ ಬಂದು ಬಿಕ್ಕಿ ಬಿಕ್ಕಿ ಅತ್ತುಬಿಟ್ಟ! “ಆ ಫೋಟೋಗಳೆಲ್ಲ ಸುಳ್ಳು ಕಣೋ. ನನಗೆ ತಿಂಗಳ ಕೊನೆಗೆ ಬಾಡಿಗೆ ಕಟ್ಟಲೂ ಕಷ್ಟ! ಎಲ್ಲರಿಗೂ ನಾನು ಸಂತೋಷವಾಗಿದ್ದೇನೆ ಅಂತ ತೋರಿಸಬೇಕು! ಆ ಒತ್ತಡದಲ್ಲೇ ಒಳಗೊಳಗೇ ಸಾಯುತ್ತಿದ್ದೇನೆ” ಅಂದ.
ಆ ದಿನ ನನಗೆ ಅರ್ಥವಾಯಿತು! ನಾವು ಅಸೂಯೆ ಪಡುತ್ತಿರುವ ಆ ಬದುಕು, ಅದನ್ನು ಬದುಕುತ್ತಿರುವವನಿಗೇ ಒಂದು ಹೊರೆಯಾಗಿದೆ!

ಡಿಪ್ರೆಶನ್ ಬಗ್ಗೆ ಒಂದು ಮಾತು. ಇದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಮನಸ್ಸು ನಿಜಕ್ಕೂ ಭಾರವಾದಾಗ, ಕತ್ತಲೆ ದಿನಗಟ್ಟಲೆ ಕಳೆಯದಿದ್ದಾಗ, ಅದನ್ನು ಒಂದು ಫೋನ್ ಆಫ್ ಮಾಡಿ ಸರಿಪಡಿಸಲಾಗುವುದಿಲ್ಲ. ಆಗ ನಾಚಿಕೆ ಪಡದೆ ಒಬ್ಬ ವೈದ್ಯರ ಬಳಿ, ಒಬ್ಬ ಆಪ್ತ ಸಮಾಲೋಚಕರ ಬಳಿ ಮಾತಾಡಿ. ಕಾಲು ಮುರಿದರೆ ಡಾಕ್ಟರ್ ಬಳಿ ಹೋಗುತ್ತೇವಲ್ಲ, ಮನಸ್ಸು ನೊಂದಾಗಲೂ ಹಾಗೆಯೇ. ಇದರಲ್ಲಿ ದೌರ್ಬಲ್ಯ ಏನೂ ಇಲ್ಲ. ಸಹಾಯ ಕೇಳುವುದೇ ನಿಜವಾದ ಧೈರ್ಯ!
ಆ ಪರದೆಯ ಆಚೆ ಒಂದು ನಿಜವಾದ ಜಗತ್ತಿದೆ! ಅಲ್ಲಿ ಅಮ್ಮ ಮಾಡಿದ ಬಿಸಿ ಊಟಕ್ಕೆ ಫಿಲ್ಟರ್ ಬೇಕಿಲ್ಲ! ಗೆಳೆಯನ ಜೊತೆ ನಕ್ಕ ನಗುವಿಗೆ ಲೈಕ್ ಬೇಕಿಲ್ಲ! ಮುಂಜಾನೆ ಬೆಟ್ಟದ ಮೇಲೆ ಹಕ್ಕಿ ಹಾಡುವ ಹಾಡಿಗೆ ಯಾವ ಚಂದಾದಾರನೂ ಬೇಕಿಲ್ಲ!ತೊರೆ ಜುಳುಜುಳು ಹರಿಯಲು ಯಾರ ಲೈಕ್‌ಗೂ ಕಾಯುವುದಿಲ್ಲ! ಇವೆಲ್ಲ ಉಚಿತ! ಆದರೆ ಇವೇ ನಿಜವಾದ ಸಂಪತ್ತು!
ಇವತ್ತು ಒಂದು ಗಂಟೆ, ಬರೀ ಒಂದು ಗಂಟೆ ಫೋನ್ ಪಕ್ಕಕ್ಕಿಡಿ. ಮನೆಯವರ ಜೊತೆ ಕೂತು ಒಂದು ಕಪ್ ಚಹಾ ಕುಡಿಯಿರಿ. ಆ ಕ್ಷಣದ ಫೋಟೋ ತೆಗೆಯಬೇಡಿ. ಅಪ್‌ಲೋಡ್ ಮಾಡಬೇಡಿ. ಬರೀ ಬದುಕಿ!ಆ ಕ್ಷಣ ನಿಮ್ಮದು ಮಾತ್ರ! ಇಡೀ ಜಗತ್ತಿಗೆ ತೋರಿಸದ, ನಿಮ್ಮ ಸ್ವಂತ ನಿಧಿ!
ಬೆಟ್ಟದ ಮೇಲಿನ ಆ ಮಂಜು ಬೇರೆಯವರಿಗಾಗಿ ಇಳಿಯುವುದಿಲ್ಲ. ಅದು ತನ್ನ ಪಾಡಿಗೆ ತಾನು ಬೆಟ್ಟವನ್ನು ತಬ್ಬಿಕೊಳ್ಳುತ್ತದೆ. ನೀವೂ ಹಾಗೆ ಇರಿ. ಬೇರೆಯವರ ಹೈಲೈಟ್ಸ್ ಜೊತೆ ನಿಮ್ಮ ಬಿಹೈಂಡ್-ದ-ಸೀನ್ಸ್ ಹೋಲಿಸಬೇಡಿ!
ಅವರ ಪರದೆಯ ಮೇಲಿನ ಬೆಳಕನ್ನು ನೋಡಿ, ನಿಮ್ಮ ಪರದೆಯ ಹಿಂದಿನ ನಿಜವಾದ ಬದುಕನ್ನು ದ್ವೇಷಿಸಬೇಡಿ!
ಬೆಳಕು ಅಲ್ಲಿದೆ ಅಂತ ಭ್ರಮಿಸುತ್ತೀರಿ! ಆದರೆ ನಿಜವಾದ ಬೆಳಕು ಫೋನ್ ಆಫ್ ಮಾಡಿದಾಗ, ನಿಮ್ಮೊಳಗೇ ಇದೆ!
ಬರಹ: ಸಂತೋಷ್‌ಕುಮಾರ್ ತಂಗವೇಲು

