
‘ಕೊಡಗಿನ ಮೇಲ್ಮಂಜು’ ಎನ್ನುವ ಹಾಡು ಕೇಳುತ್ತಾ, ಮಂಜು ಮುಸುಕಿದ ದಾರಿಯಲ್ಲಿ ನಡೆಯುತ್ತಿದ್ದ ಕಾಲದಲ್ಲಿ ಕಾಫಿ ಗಿಡಗಳ ಎಲೆಗಳು ಸಂತೋಷದಿಂದ ನಾಟ್ಯ ಮಾಡುತ್ತಿದ್ದವು! ಏಕೆಂದರೆ ಅವಾಗ ಮುಂಗಾರು ಚೆನ್ನಾಗಿತ್ತು, ಮಳೆಯೂ ಉತ್ತಮವಾಗಿ ಸುರಿಯುತ್ತಿತ್ತು. ಆದರೆ ಕಾಲ ಕಳೆದಂತೆ ವಾತಾವರಣದ ವೈಪರೀತ್ಯದಿಂದ, ಕೊಡಗಿನಲ್ಲಿ ಸಾಲು ಸಾಲು ಮರ-ಗಿಡಗಳ ಮರಣ ಹೋಮದಿಂದ ಈ ವರ್ಷ ಕೊಡಗಿನಲ್ಲಿ ತೀರಾ ವಿಭಿನ್ನ ಹಾಗೂ ಆತಂಕಕಾರಿ ವಾತಾವರಣ ಸೃಷ್ಟಿಯಾಗಿದೆ…
ಅಕ್ಟೋಬರ್ ಬಂತೆಂದರೆ ಕೊಡಗಿನ ತೋಟಗಳಲ್ಲಿ ಒಂದು ಬಗೆಯ ಗಡಿಬಿಡಿ ಶುರುವಾಗಬೇಕಿತ್ತು. ಕಾಫಿ ಹಣ್ಣುಗಳು ಕೆಂಪಾಗಲು ಆರಂಭವಾಗುತ್ತಿದ್ದ ಕಾಲವಿದು. ಕೂಲಿಕಾರರ ಕೈಗಳು ಬುಟ್ಟಿ ಹಿಡಿದು ಗಿಡದಿಂದ ಗಿಡಕ್ಕೆ ಓಡಾಡಬೇಕಿತ್ತು. ಆದರೆ ಈ ಬಾರಿ, ಹಲವು ತೋಟಗಳಲ್ಲಿ ಆ ಗಡಿಬಿಡಿ ಇಲ್ಲ! ಬದಲಿಗೆ, ಒಂದು ಮೌನ ಆತಂಕ ಗಾಳಿಯಲ್ಲಿ ತೇಲಾಡುತ್ತಿದೆ !
ಈ ವರ್ಷದ ನೈಋತ್ಯ ಮಾನ್ಸೂನ್ ದುರ್ಬಲವಾಗಿತ್ತು. ಕಾಫಿ ಗಿಡಕ್ಕೆ ಬೇಕಾದ ಆ ನಿರಂತರ ಮಳೆ ಈ ಬಾರಿ ಸಮರ್ಪಕವಾಗಿ ಬರಲಿಲ್ಲ. ಪರಿಣಾಮ, ಹಣ್ಣುಗಳ ಬೆಳವಣಿಗೆ ಸರಿಯಾಗಿ ಆಗಿಲ್ಲ, ಕೆಲವೆಡೆ ಹಣ್ಣುಗಳು ಚಿಕ್ಕದಾಗಿಯೇ ಉಳಿದಿವೆ. ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ನ ಅಧ್ಯಕ್ಷ ಎಂ. ಸಲ್ಮಾನ್ ಬಸೀರ್ ಅವರ ಮಾತಿನಲ್ಲಿ ಹೇಳುವುದಾದರೆ, ದುರ್ಬಲ ಮಾನ್ಸೂನ್ನಿಂದಾಗಿ ಹಣ್ಣುಗಳ ಬೆಳವಣಿಗೆ ಸರಿಯಿಲ್ಲ. ಅಮೆರಿಕದ ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಈ ಬಾರಿ ಭಾರತದ ಕಾಫಿ ಉತ್ಪಾದನೆ ಹಿಂದಿನ ವರ್ಷಕ್ಕಿಂತ ನಾಲ್ಕು ಪ್ರತಿಶತ ಕಡಿಮೆಯಾಗುವ ಸಾಧ್ಯತೆ ಇದೆ.

ಇನ್ನೊಂದು ಕಡೆ, ಕಳೆದ ಅಕ್ಟೋಬರ್ನ ಅನಪೇಕ್ಷಿತ ಭಾರೀ ಮಳೆಗಳ ನೋವಿನಿಂದ ಸಾಕಷ್ಟು ಬೆಳೆಗಾರರು ಇನ್ನೂ ಹೊರಬಂದಿಲ್ಲ. ಹಣ್ಣುಗಳು ಗಿಡದಲ್ಲೇ ಕೊಳೆತು ಬಿದ್ದ, ಮೆಣಸಿನ ಬಳ್ಳಿಗಳು ಬೇರು ಕೊಳೆತದಿಂದ ಸತ್ತ ನೆನಪು ಇನ್ನೂ ಹಸಿ ಇದೆ. ಕಳೆದ ವರ್ಷ ಕರ್ನಾಟಕದ ಮೆಣಸಿನ ಉತ್ಪಾದನೆ ಒಂದೇ ಬಾರಿಗೆ ನಲವತ್ತ ನಾಲ್ಕು ಪ್ರತಿಶತ ಕುಸಿದಿತ್ತು. ಈ ವರ್ಷವೂ ಅದೇ ಕಥೆ ಮರುಕಳಿಸುತ್ತದೆಯೇ ಎಂಬ ಭಯ ಬೆಳೆಗಾರರ ಮನಸ್ಸಿನಲ್ಲಿದೆ.
ಕೊಡಗಿನ ಬೋಸ್ ಮಂದಣ್ಣ ಅವರಂತಹ ಹಿರಿಯ ಬೆಳೆಗಾರರು ನಾಲ್ಕು ದಶಕಗಳ ತಮ್ಮ ಅನುಭವದಲ್ಲಿ ಈ ರೀತಿಯ ಅಸ್ಥಿರತೆ ನೋಡಿಯೇ ಇಲ್ಲ ಎನ್ನುತ್ತಾರೆ. ಒಂದು ವರ್ಷ ಬರ, ಇನ್ನೊಂದು ವರ್ಷ ಅತಿವೃಷ್ಟಿ, ಹವಾಮಾನದ ಈ ಹುಚ್ಚು ಬದಲಾವಣೆ ರೈತನ ನಂಬಿಕೆಯನ್ನೇ ಕಸಿದುಕೊಳ್ಳುತ್ತಿದೆ. ಜೊತೆಗೆ ಕಾಡಾನೆಗಳ ಹಾವಳಿ, ಬಿಳಿ ಕಾಂಡ ಕೊರಕ ಹುಳುವಿನ ಸಮಸ್ಯೆ, ಕೂಲಿಕಾರರ ಕೊರತೆ, ಇವೆಲ್ಲಾ ಒಟ್ಟಾಗಿ ಕಾಫಿ ಬೆಳೆಯುವುದನ್ನೇ ಒಂದು ಹಿಮಾಲಯದಷ್ಟು ಕಷ್ಟದ ಕಾರ್ಯವಾಗಿ ಪರಿವರ್ತಿಸಿವೆ ಎಂದು ಚೆರಂಬಾಣೆಯ ಮನು ಸೋಮಯ್ಯನವರು ಹಿಂದೊಮ್ಮೆ ಹೇಳಿದ್ದ ಮಾತು ಇಂದಿಗೂ ಪ್ರಸ್ತುತ.
ಆದರೆ ಈ ಕಥೆಯ ಇನ್ನೊಂದು ಮುಖವೂ ಇದೆ. ಕರ್ನಾಟಕ ಒಂದೇ ದೇಶದ ಕಾಫಿಯ ಎಪ್ಪತ್ತು ಪ್ರತಿಶತ ಕೊಡುತ್ತದೆ. ಅಂದರೆ ನೀವು ಬೆಂಗಳೂರಿನ ಯಾವುದೋ ಕೆಫೆಯಲ್ಲಿ ಬೆಳಗ್ಗೆ ಹೀರುವ ಕ್ಯಾಪುಚಿನೊದ ಹಿಂದೆ, ದೂರದ ಕೊಡಗಿನ ಗುಡ್ಡದ ಮೇಲೆ ಮಳೆ ಕಾಯುತ್ತಾ ನಿಂತ ಒಬ್ಬ ರೈತನ ಬೆವರು ಇದೆ!ಆ ರೈತನ ಫಸಲು ಹಾಳಾದಾಗ ಬರೀ ಅವನ ಆದಾಯ ಕಳೆದುಕೊಳ್ಳುವುದಲ್ಲ, ಇಡೀ ದೇಶದ ಕಾಫಿ ಆರ್ಥಿಕತೆಯೇ ಅಲುಗಾಡುತ್ತದೆ!

ವಿಪರ್ಯಾಸ ಎಂದರೆ, ಕಾಫಿ ಬೆಳೆಗೆ ಹವಾಮಾನ ಆಧಾರಿತ ವಿಮೆ ಇನ್ನೂ ಇಲ್ಲ. ಅಂದರೆ ಮಳೆ ಕಡಿಮೆ ಬಂದರೂ, ಹೆಚ್ಚು ಬಂದರೂ, ರೈತ ತನ್ನ ನಷ್ಟವನ್ನು ತಾನೇ ಹೊರಬೇಕು. ಸರ್ಕಾರಗಳು ಬದಲಾಗುತ್ತವೆ, ಭರವಸೆಗಳು ಬರುತ್ತವೆ, ಹೋಗುತ್ತವೆ, ಆದರೆ ತೋಟದಲ್ಲಿ ನಿಂತ ರೈತ ಮಾತ್ರ ಅದೇ ಬಾನಲ್ಲಿನ ಮೋಡಗಳನ್ನು ನೋಡುತ್ತಾ, ಅದೇ ಪ್ರಾರ್ಥನೆ ಮಾಡುತ್ತಾ ನಿಂತಿದ್ದಾನೆ!
ಆದರೂ ಕೊಡಗಿನ ರೈತ ಬಗ್ಗುವುದಿಲ್ಲ. ಅವನದು ಆ ಬಿಲ್ಲು ಬಾಣ ಹಿಡಿದು ಕಾಡಿನಲ್ಲಿ ಬದುಕು ಕಟ್ಟಿದ ಹಿರಿಯರ ರಕ್ತ! ಈ ವರ್ಷ ಫಸಲು ಕಡಿಮೆಯಾದರೂ, ಮುಂದಿನ ವರ್ಷ ಮತ್ತೆ ಗಿಡಕ್ಕೆ ಗೊಬ್ಬರ ಹಾಕುವ, ಕಳೆ ತೆಗೆಯುವ, ಕಾಯಿ ಕಾಯುವ ಆ ಶ್ರದ್ಧೆ ಅವನಲ್ಲಿ ಜೀವಂತ! ಕಾಫಿ ಬರೀ ಬೆಳೆಯಲ್ಲ, ಅದು ಕೊಡಗಿನ ಜನರ ಜೀವನ ಶೈಲಿ, ಅವರ ಗುರುತು! ಅವರ ಹೆಮ್ಮೆ!
ಈ ಬಾರಿ ನೀವು ಒಂದು ಕಪ್ ಕಾಫಿ ಕುಡಿಯುವಾಗ, ಆ ಘಮದ ಹಿಂದಿನ ಕಥೆಯನ್ನೊಮ್ಮೆ ನೆನಪಿಸಿಕೊಳ್ಳಿ. ಆ ಕಪ್ನಲ್ಲಿ ಬರೀ ಕಾಫಿ ಪುಡಿಯಿಲ್ಲ, ಕೊಡಗಿನ ಗಾಳಿ, ಅಲ್ಲಿನ ಮಂಜು, ಅಲ್ಲಿನ ಮಳೆ, ಮತ್ತು ಆ ರೈತನ ಬೆವರು, ಎಲ್ಲವೂ ಕರಗಿವೆ. ಕೊಡಗಿನ ಕಾಫಿ ಉಳಿದರೇ ಕೊಡಗು ಉಳಿಯುತ್ತದೆ, ಕೊಡಗು ಉಳಿದರೇ ಕನ್ನಡ ನಾಡಿನ ಒಂದು ಅಪರೂಪದ ಸಂಸ್ಕೃತಿ ಉಳಿಯುತ್ತದೆ.
ಈ ಅಕ್ಟೋಬರ್ನ ಮೋಡ ಕವಿದ ಬಾನಿನ ಕೆಳಗೆ, ಕೊಡಗಿನ ಪ್ರತಿಯೊಬ್ಬ ಬೆಳೆಗಾರನೂ ತನ್ನ ತೋಟಕ್ಕೆ ಇಳಿದು ಗಿಡಗಳನ್ನೊಮ್ಮೆ ಮುಟ್ಟಿ ನೋಡುತ್ತಿದ್ದಾನೆ. ಆ ಸ್ಪರ್ಶದಲ್ಲಿ ಒಂದು ಪ್ರಾರ್ಥನೆ ಇದೆ. ಮುಂದಿನ ಮಳೆಗಾಲ ಚೆನ್ನಾಗಿ ಬರಲಿ, ಮುಂದಿನ ಫಸಲು ಪೂರ್ಣವಾಗಲಿ ಎಂಬ ಪ್ರಾರ್ಥನೆ. ಕೊಡಗಿನ ಈ ಪ್ರಾರ್ಥನೆ ಕೇಳುವವರಾರು?
ಬರಹ: ಸಂತೋಷ್ಕುಮಾರ್ ತಂಗವೇಲು

