ಒಂದು ಮಾತಿನ ಬೀಜ (ಭಾಗ 2)

ಪ್ರಿಯ ಓದುಗರೇ

ಕಳೆದ ಸಂಚಿಕೆಯಲ್ಲಿ ನೀವು ಬಸವನನ್ನು ಭೇಟಿಯಾದಿರಿ. ಕೊನೆಯ ಬೆಂಚಿನ ಆ ಹುಡುಗ! ಮನೆಯಲ್ಲಿ “ಕೂಲಿ ಮಾಡಿ ಸಾಯ್ತೀಯ” ಅನ್ನೋ ಅಪ್ಪ! ಶಾಲೆಯಲ್ಲಿ “ಮಂಕು” ಅನ್ನೋ ಮೇಷ್ಟ್ರು! ಆಗ ಒಂದು ದಿನ ನಿಂತುಹೋದ ಗಡಿಯಾರ ಮತ್ತು ಗೌರಮ್ಮ ಟೀಚರ್ ಆಡಿದ ಒಂದು ಮಾತು, “ನಿನ್ನ ಕೈಯಲ್ಲಿ ಬುದ್ಧಿ ಇದೆ ಕಣೋ.” ಈಗ ಮುಂದೆ ಓದಿ.

ಆ ಮಾತಿನ ನಂತರ ಬಸವ ಗಣಿತದಲ್ಲಿ ಪಾಸಾದನಾ? ಇಲ್ಲ! ಕಷ್ಟಪಟ್ಟು ಎಸ್ಸೆಸ್ಸೆಲ್ಸಿ ಮುಗಿಸಿದ, ಅಷ್ಟೇ. ಆಮೇಲೆ ಐಟಿಐಗೆ ಸೇರಿದ. ಮೋಟಾರ್ ಮೆಕ್ಯಾನಿಕ್ ಕಲಿತ. ಪೇಟೆಯ ಒಂದು ಗ್ಯಾರೇಜಿನಲ್ಲಿ ಕೆಲಸಕ್ಕೆ ಸೇರಿದ. ತಿಂಗಳಿಗೆ ಎಂಟುನೂರು ರೂಪಾಯಿ ಸಂಬಳ! ಮಲಗಲು ಗ್ಯಾರೇಜಿನ ಮೂಲೆಯಲ್ಲಿ ಒಂದು ಚಾಪೆ! ಆದರೆ ಪ್ರತಿ ರಾತ್ರಿ ಮಲಗುವ ಮುನ್ನ ಅವನ ಕಿವಿಯಲ್ಲಿ ಒಂದೇ ಧ್ವನಿ ಕೇಳಿಸುತ್ತಿತ್ತು, “ನಿನ್ನ ಕೈಯಲ್ಲಿ ಬುದ್ಧಿ ಇದೆ ಕಣೋ.”

ಕೆಲವು ರಾತ್ರಿ ಆ “ಮಂಕು” ಅನ್ನೋ ಧ್ವನಿಯೂ ಕೇಳಿಸುತ್ತಿತ್ತು. ಎರಡು ಧ್ವನಿಗಳೂ ಅವನ ಎದೆಯೊಳಗೆ ಜಗಳ ಆಡುತ್ತಿದ್ದವು. ಪ್ರತಿ ಬಾರಿ ಗೆದ್ದದ್ದು ಟೀಚರ್ ಧ್ವನಿ!

ಇಪ್ಪತ್ತು ವರ್ಷ ಕಳೆಯಿತು!

ಗೌರಮ್ಮ ಟೀಚರ್ ನಿವೃತ್ತರಾಗಿದ್ದರು. ಕೂದಲು ನೆರೆತಿತ್ತು. ಕನ್ನಡಕ ದಪ್ಪವಾಗಿತ್ತು. ಒಂದು ಮಧ್ಯಾಹ್ನ ಪೇಟೆಗೆ ಹೋಗುವಾಗ ಅವರ ಹಳೆಯ ಸ್ಕೂಟರ್ ದಾರಿಯ ಮಧ್ಯೆ ಕೆಟ್ಟು ನಿಂತಿತು! ಬಿಸಿಲು! ಬೆವರು! ಸ್ಕೂಟರ್ ತಳ್ಳಿಕೊಂಡು ಹತ್ತಿರದ ಒಂದು ದೊಡ್ಡ ಗ್ಯಾರೇಜಿಗೆ ಹೋದರು. ಬೋರ್ಡಿನ ಮೇಲೆ ದೊಡ್ಡ ಅಕ್ಷರಗಳು, “ಗೌರಿ ಆಟೋ ವರ್ಕ್ಸ್”!
ಒಳಗೆ ಹತ್ತು ಜನ ಕೆಲಸಗಾರರು.

ಆ ಬೋರ್ಡಿನ ಹೆಸರು ಅವರ ಗಮನಕ್ಕೆ ಬರಲೇ ಇಲ್ಲ.

ಒಳಗಿನಿಂದ ಮಾಲೀಕ ಹೊರಗೆ ಬಂದ. ಟೀಚರ್ ಮುಖ ನೋಡಿದ. ಕೈಯಲ್ಲಿದ್ದ ಸ್ಪ್ಯಾನರ್ ನೆಲಕ್ಕೆ ಬಿತ್ತು!ಓಡಿ ಬಂದು ಅವರ ಕಾಲಿಗೆ ಬಿದ್ದ. “ಟೀಚರ್, ನಾನು ಬಸವ. ಕೊನೆಯ ಬೆಂಚಿನ ಬಸವ! ಗಡಿಯಾರ ರಿಪೇರಿ ಮಾಡಿದ್ನಲ್ಲ, ಆ ಬಸವ!”

ಗೌರಮ್ಮನಿಗೆ ಕ್ಷಣ ಕಾಲ ನೆನಪಾಗಲಿಲ್ಲ. ಆಮೇಲೆ ನಿಧಾನವಾಗಿ ನೆನಪಾಯಿತು. ಆ ಹರಿದ ಅಂಗಿಯ ಹುಡುಗ! ಆ ಗ್ರೀಸ್ ಕೈ! ಅವರ ಕಣ್ಣು ತುಂಬಿ ಬಂತು!

“ನಾನು ನಿನಗೆ ಏನು ಹೇಳಿದ್ದೆ ಅಂತಾನೇ ನನಗೆ ನೆನಪಿಲ್ಲ ಕಣೋ” ಅಂದರು.

ಬಸವ ನಕ್ಕ. ಕಣ್ಣಲ್ಲಿ ನೀರು. “ನಿಮಗೆ ನೆನಪಿಲ್ಲ ಟೀಚರ್. ನನಗೆ ಇಪ್ಪತ್ತು ವರ್ಷದಿಂದ ಒಂದು ದಿನವೂ ಮರೆತಿಲ್ಲ. ಆ ಬೋರ್ಡ್ ನೋಡಿ. ಆ ಹೆಸರು ನಿಮ್ಮದು!”

ಆ ಮಧ್ಯಾಹ್ನ ಆ ಗ್ಯಾರೇಜಿನ ಮುಂದೆ ಒಬ್ಬ ಮುದುಕಿ ಮತ್ತು ಒಬ್ಬ ಗಂಡಸು ನಿಂತು ಅಳುತ್ತಿದ್ದರು. ಕೆಲಸಗಾರರಿಗೆ ಏನೂ ಅರ್ಥವಾಗಲಿಲ್ಲ. ಆದರೆ ಆ ಕ್ಷಣ ಒಂದು ಬೀಜ ತನ್ನ ಮರವನ್ನು ತಾನೇ ನೋಡುತ್ತಿತ್ತು!

ಪ್ರಿಯ ಓದುಗರೇ, ಮಲೆನಾಡಿನ ಕಾಡಿನಲ್ಲಿ ಹಣ್ಣು ತಿಂದ ಒಂದು ಹಕ್ಕಿ ಬೀಜವನ್ನು ಯಾರಿಗೂ ಗೊತ್ತಿಲ್ಲದೆ ಮಣ್ಣಿಗೆ ಬಿಡುತ್ತದೆ. ಹಕ್ಕಿ ಹಾರಿ ಹೋಗುತ್ತದೆ! ಆ ಬೀಜವನ್ನು ಮರೆತೇ ಬಿಡುತ್ತದೆ! ಮಳೆ ಬರುತ್ತದೆ! ಬಿಸಿಲು ಬರುತ್ತದೆ!ಮಣ್ಣು ಅದನ್ನು ಅಪ್ಪಿಕೊಳ್ಳುತ್ತದೆ. ಹತ್ತು ವರ್ಷದ ಮೇಲೆ ಅಲ್ಲಿ ಒಂದು ಹೆಮ್ಮರ ನಿಂತಿರುತ್ತದೆ!ದಾರಿಹೋಕರಿಗೆ ನೆರಳು ಕೊಡುತ್ತಾ. ಆ ಹಕ್ಕಿಗೆ ತಾನು ಒಂದು ಕಾಡು ಬೆಳೆಸಿದೆ ಅಂತ ಗೊತ್ತೇ ಇರುವುದಿಲ್ಲ!

ಗೌರಮ್ಮ ಟೀಚರ್ ಆ ಹಕ್ಕಿ! ಅವರ ಮಾತು ಆ ಬೀಜ! ಬಸವ ಆ ಮರ! ಆ ಗ್ಯಾರೇಜಿನಲ್ಲಿ ಇವತ್ತು ಕೆಲಸ ಮಾಡುವ ಹತ್ತು ಕುಟುಂಬಗಳು ಆ ಮರದ ನೆರಳು!

ಆದರೆ ಈ ಕಥೆಯ ಇನ್ನೊಂದು ಮುಖವನ್ನೂ ನೋಡಿ. “ಮಂಕು” ಅಂದ ಆ ಮೇಷ್ಟ್ರ ಮಾತೂ ಒಂದು ಬೀಜವೇ ಆಗಿತ್ತು. “ಕೂಲಿ ಮಾಡಿ ಸಾಯ್ತೀಯ” ಅಂದ ಅಪ್ಪನ ಮಾತೂ ಒಂದು ಬೀಜವೇ ಆಗಿತ್ತು. ಆ ಬೀಜಗಳು ಬೆಳೆದಿದ್ದರೆ ಇವತ್ತು ಒಂದು ಗ್ಯಾರೇಜ್ ಇರುತ್ತಿರಲಿಲ್ಲ. ಹತ್ತು ಕುಟುಂಬಗಳ ಅನ್ನ ಇರುತ್ತಿರಲಿಲ್ಲ. ಇರುತ್ತಿದ್ದದ್ದು ಒಬ್ಬ ಸೋತ ಮನುಷ್ಯ!

ಒಂದು ಪ್ರಾಮಾಣಿಕ ಮಾತು ಹೇಳುತ್ತೇನೆ. ಈ ಕಥೆ ಬರೆಯುವಾಗ ನಾನು ನನ್ನನ್ನೇ ಕೇಳಿಕೊಂಡೆ, ನಾನು ಇದುವರೆಗೆ ಎಷ್ಟು ಮುಳ್ಳಿನ ಬೀಜ ಬಿತ್ತಿದ್ದೇನೆ? ಸಿಟ್ಟಿನಲ್ಲಿ ಆಡಿದ ಮಾತು. ಆಯಾಸದಲ್ಲಿ ಆಡಿದ ಮಾತು. ತಮಾಷೆಗೆ ಅಂತ ಆಡಿ ಯಾರನ್ನೋ ನೋಯಿಸಿದ ಮಾತು. ಉತ್ತರ ಕೇಳಿ ನನಗೇ ನಾಚಿಕೆಯಾಯಿತು!

ನಮ್ಮ ಮನೆಗಳಲ್ಲೂ ಇದೇ ಕಥೆ ನಡೆಯುತ್ತಿದೆ. “ನೋಡು ಪಕ್ಕದ ಮನೆ ಹುಡುಗ ಎಷ್ಟು ಮಾರ್ಕ್ಸ್ ತಗೊಂಡಿದ್ದಾನೆ.” “ನಿನ್ನಿಂದ ಏನೂ ಆಗಲ್ಲ.” ಹೇಳುವಾಗ ನಮಗೆ ಅದು ಬರೀ ಸಿಟ್ಟು. ಕೇಳುವ ಮಗುವಿಗೆ ಅದು ತೀರ್ಪು! ಕಚೇರಿಯಲ್ಲೂ ಹಾಗೇ. ಒಳ್ಳೆಯ ಕೆಲಸ ಮಾಡಿದಾಗ ಸುಮ್ಮನಿರುತ್ತೇವೆ. ತಪ್ಪು ಮಾಡಿದಾಗ ಮಾತ್ರ ಬಾಯಿ ತೆರೆಯುತ್ತೇವೆ!

ಹೊಗಳಲು ಹಣ ಬೇಡ, ಪ್ರಿಯ ಓದುಗರೇ. ಬೇಕಿರುವುದು ಎರಡೇ, ನೋಡುವ ಕಣ್ಣು ಮತ್ತು ಹೇಳುವ ಮನಸ್ಸು!

ಇವತ್ತು ಒಬ್ಬರನ್ನು ಆರಿಸಿ. ನಿಮ್ಮ ಮಗು, ಮನೆಗೆಲಸದವರು, ಅಂಗಡಿಯ ಹುಡುಗ, ಕಚೇರಿಯ ಸಹೋದ್ಯೋಗಿ. ಅವರಲ್ಲಿ ನೀವು ಗಮನಿಸಿದ ಒಂದು ಒಳ್ಳೆಯ ಗುಣವನ್ನು ಅವರ ಮುಖಕ್ಕೆ ಹೇಳಿ. ಒಂದೇ ವಾಕ್ಯ. ನೀವು ನಾಳೆಗೆ ಅದನ್ನು ಮರೆತುಬಿಡುತ್ತೀರಿ. ಅವರು ಜೀವನಪೂರ್ತಿ ಮರೆಯುವುದಿಲ್ಲ!

ಯಾಕೆಂದರೆ ಒಬ್ಬ ಮನುಷ್ಯನನ್ನು ಮುರಿಯಲು ಒಂದು ಮಾತು ಸಾಕು. ಅವನನ್ನು ಕಟ್ಟಲೂ ಒಂದೇ ಮಾತು ಸಾಕು. ಯಾವ ಬೀಜ ಬಿತ್ತಬೇಕು ಅನ್ನೋದು ಮಾತ್ರ ನಿಮ್ಮ ಕೈಯಲ್ಲಿದೆ, ಪ್ರಿಯ ಓದುಗರೇ!

ಬರಹ: ಸಂತೋಷ್‌ಕುಮಾರ್ ತಂಗವೇಲು

Leave a Comment

Your email address will not be published. Required fields are marked *

Scroll to Top