
ಪ್ರಿಯ ಓದುಗರೇ, ಮನಸ್ಸೆಂಬ ಪುಸ್ತಕದಲ್ಲಿ ಬರುವ ಅಕ್ಷರವೆಂಬ ಒಳ್ಳೆಯ ಗುಣಗಳು ನಮ್ಮ ಯಶಸ್ಸಿನ ಪುಟವನ್ನೇ ಸಾಗಹಾಕುತ್ತವೆ! ಆದರೆ ನಕಾರಾತ್ಮಕ ಆಲೋಚನೆಗಳು? ಅವು ನಮ್ಮನ್ನು ಜ್ವಾಲಾಮುಖಿಯ ಹಾಗೆ ಜೀವಂತ ಸಮಾಧಿ ಮಾಡಿಬಿಡುತ್ತವೆ!
ಆ ಜ್ವಾಲಾಮುಖಿ ಎಲ್ಲಿದೆ ಗೊತ್ತಾ? ಬೆಟ್ಟದ ಮೇಲಲ್ಲ! ಸಮುದ್ರದ ಆಳದಲ್ಲಲ್ಲ! ನಮ್ಮ ತಲೆಯೊಳಗೆ!
ವಿಜ್ಞಾನಿಗಳು ಒಬ್ಬ ಮನುಷ್ಯ ದಿನಕ್ಕೆ ಎಷ್ಟು ಆಲೋಚನೆ ಮಾಡುತ್ತಾನೆ ಅಂತ ಎಣಿಸಿದರು. ಸುಮಾರು ಅರವತ್ತು ಸಾವಿರ! ಅದರಲ್ಲಿ ಆಘಾತದ ವಿಷಯ ಏನು ಗೊತ್ತಾ? ಬಹುಪಾಲು ನಕಾರಾತ್ಮಕ! ಮತ್ತೂ ವಿಚಿತ್ರ! ಅವುಗಳಲ್ಲಿ ಹೆಚ್ಚಿನವು ನಿನ್ನೆಯವೇ! ಮೊನ್ನೆಯವೇ! ಕಳೆದ ವರ್ಷದವೇ!
ಅಂದರೆ ನಾವು ಪ್ರತಿದಿನ ಹೊಸ ದಿನವನ್ನು ಬದುಕುವುದಿಲ್ಲ. ಹಳೆಯ ದಿನವನ್ನೇ ಮತ್ತೆ ಮತ್ತೆ ಬದುಕುತ್ತೇವೆ. ಅದೇ ಹಳೆಯ ನೋವು, ಅದೇ ಹಳೆಯ ಅವಮಾನ, ಅದೇ ಹಳೆಯ ತಪ್ಪುಗಳು. ತಲೆಯೊಳಗೆ ಒಂದು ಟೇಪ್ ರೆಕಾರ್ಡರ್ ಇದೆ. ಅದು ನಿಲ್ಲದೆ ಹಳೆಯ ಹಾಡನ್ನೇ ನುಡಿಸುತ್ತಿರುತ್ತದೆ!
ಆ ಧ್ವನಿ ಹೇಗೆ ಮಾತಾಡುತ್ತದೆ ನೋಡಿ. “ನೀನು ಸಾಲದು.” “ಅವತ್ತು ನೀನು ಹಾಗೆ ಮಾಡಬಾರದಿತ್ತು.” “ಎಲ್ಲರೂ ನಿನ್ನನ್ನು ನೋಡಿ ನಗುತ್ತಿದ್ದಾರೆ.” ಈ ಧ್ವನಿ ನಮ್ಮ ಜೀವನದ ಅತ್ಯಂತ ಕ್ರೂರ ಟೀಕಾಕಾರ! ದುರಂತ ಏನು ಗೊತ್ತಾ? ಆ ಕ್ರೂರ ಧ್ವನಿ ಬೇರೆ ಯಾರದ್ದೂ ಅಲ್ಲ, ನಮ್ಮದ್ದೇ!
ಒಂದು ಪ್ರಾಮಾಣಿಕ ಪ್ರಶ್ನೆ ಕೇಳಲಾ? ನಿಮ್ಮ ಆತ್ಮೀಯ ಗೆಳೆಯ ಒಂದು ತಪ್ಪು ಮಾಡಿದರೆ ನೀವೇನು ಹೇಳುತ್ತೀರಿ? “ಪರವಾಗಿಲ್ಲ ಕಣೋ, ಆಗೋದು ಆಯ್ತು, ಮುಂದೆ ನೋಡೋಣ” ಅಲ್ಲವಾ? ಅದೇ ತಪ್ಪನ್ನು ನೀವು ಮಾಡಿದರೆ? “ನಿನ್ನಂಥ ದಡ್ಡ ಇನ್ನೊಬ್ಬ ಇಲ್ಲ” ಅಂತ ನಿಮಗೆ ನೀವೇ ಬೈದುಕೊಳ್ಳುತ್ತೀರಿ! ಗೆಳೆಯನಿಗೆ ತೋರಿಸುವ ಕರುಣೆಯ ಒಂದು ಹನಿಯನ್ನೂ ನಮಗೆ ನಾವು ತೋರಿಸುವುದಿಲ್ಲ. ಎಂಥ ವಿಚಿತ್ರ ಅಲ್ಲವಾ?
ಚಳಿಗಾಲದಲ್ಲಿ ಮರ ಬೋಳಾಗಿ ನಿಲ್ಲುತ್ತದೆ. ಆಗ ಅದು, “ಅಯ್ಯೋ, ನನ್ನ ಎಲ್ಲಾ ಎಲೆಗಳೂ ಉದುರಿದವು, ನಾನು ಕೆಟ್ಟ ಮರ, ನನ್ನಿಂದಾಗಲ್ಲ” ಅಂತ ತನ್ನನ್ನೇ ಹಳಿದುಕೊಳ್ಳುತ್ತದಾ? ಇಲ್ಲ! ಅದು ಸುಮ್ಮನೆ ಕಾಯುತ್ತದೆ. ವಸಂತ ಬರುತ್ತದೆ ಅಂತ ಅದಕ್ಕೆ ಗೊತ್ತು. ಕಾಲಕ್ಕೆ ತಕ್ಕಂತೆ ಬೋಳಾಗುವುದೂ, ಚಿಗುರುವುದೂ ಜೀವನದ ಭಾಗ ಅಂತ ಅದು ಒಪ್ಪಿಕೊಂಡಿದೆ!
ನಮ್ಮ ಮನಸ್ಸಿಗೂ ಋತುಗಳಿವೆ. ಕೆಲವು ದಿನ ಚಳಿಗಾಲ, ಕೆಲವು ದಿನ ವಸಂತ. ಬೋಳಾದ ದಿನಗಳನ್ನು ನೋಡಿ ನಾವು ಹೆದರಬಾರದು. ಅದು ಕೊನೆಯಲ್ಲ, ಕೇವಲ ಒಂದು ಋತು.
ನನಗೆ ಪರಿಚಿತವಿರುವ ಒಬ್ಬ ಹೆಣ್ಣುಮಗಳ ಕಥೆ! ಅವಳಿಗೆ ಒಂದು ಅಭ್ಯಾಸವಿತ್ತು. ಪ್ರತಿ ರಾತ್ರಿ ಮಲಗುವ ಮೊದಲು ತನ್ನ ದಿನದ ಎಲ್ಲಾ ತಪ್ಪುಗಳನ್ನು ನೆನಪಿಸಿಕೊಂಡು ನರಳುತ್ತಿದ್ದಳು. “ಆ ಮೀಟಿಂಗ್‌ನಲ್ಲಿ ಹಾಗೆ ಮಾತಾಡಬಾರದಿತ್ತು. ಆ ಮೆಸೇಜ್ ಕಳಿಸಬಾರದಿತ್ತು.” ನಿದ್ದೆ ಕೆಡುತ್ತಿತ್ತು.
ಒಬ್ಬ ಹಿರಿಯರು ಅವಳಿಗೆ ಒಂದು ಸಣ್ಣ ಸಲಹೆ ಕೊಟ್ಟರು. “ಮಗೂ, ಇವತ್ತಿನಿಂದ ಮಲಗುವ ಮೊದಲು ನಿನ್ನ ತಪ್ಪುಗಳನ್ನಲ್ಲ, ನೀನು ಇವತ್ತು ಮಾಡಿದ ಮೂರು ಒಳ್ಳೆಯ ಕೆಲಸಗಳನ್ನು ನೆನಪಿಸಿಕೋ. ಎಷ್ಟೇ ಸಣ್ಣದಾಗಿರಲಿ.”
ಮೊದಲ ದಿನ ಅವಳಿಗೆ ಮೂರು ಹುಡುಕಲೂ ಕಷ್ಟವಾಯಿತು. “ಒಬ್ಬ ಮುದುಕಿಗೆ ರಸ್ತೆ ದಾಟಿಸಿದೆ. ಒಬ್ಬ ಸಹೋದ್ಯೋಗಿಗೆ ಸಹಾಯ ಮಾಡಿದೆ. ಅಮ್ಮನಿಗೆ ಫೋನ್ ಮಾಡಿದೆ.” ಅಷ್ಟೇ. ಆದರೆ ಆ ರಾತ್ರಿ ಅವಳಿಗೆ ಬೇಗ ನಿದ್ದೆ ಬಂತು.
ದಿನ ಕಳೆದಂತೆ ಆ ತಲೆಯೊಳಗಿನ ಕ್ರೂರ ಧ್ವನಿ ಸ್ವಲ್ಪ ಸ್ವಲ್ಪವೇ ಮೆತ್ತಗಾಯಿತು. ಆ ಟೀಕಾಕಾರನ ಜಾಗದಲ್ಲಿ ಒಬ್ಬ ಗೆಳೆಯ ಕೂತ. ಅವಳು ಬದಲಾಗಲಿಲ್ಲ. ಅವಳ ತಲೆಯೊಳಗಿನ ಧ್ವನಿ ಮಾತ್ರ ಬದಲಾಯಿತು! ಅಷ್ಟೇ ಸಾಕಾಯಿತು!

ಮ್ಮ ತಲೆಯೊಳಗೂ ಒಂದು ಧ್ವನಿ ಇದೆ. ಅದು ದಿನವಿಡೀ ಏನು ಮಾತಾಡುತ್ತಿದೆ? ಅದು ನಿಮ್ಮ ಗೆಳೆಯನಾ? ಅಥವಾ ಶತ್ರುವಾ?
ನೀವು ಬದುಕಿನುದ್ದಕ್ಕೂ ಆ ಧ್ವನಿಯ ಜೊತೆಯೇ ಬದುಕಬೇಕು. ಅದನ್ನು ಬಿಟ್ಟು ಓಡಿಹೋಗಲು ಆಗುವುದಿಲ್ಲ. ಹಾಗಿದ್ದಮೇಲೆ ಆ ಧ್ವನಿಯನ್ನು ಒಬ್ಬ ಒಳ್ಳೆಯ ಗೆಳೆಯನನ್ನಾಗಿ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲವಾ?
ಇವತ್ತು ರಾತ್ರಿ ಮಲಗುವ ಮೊದಲು ಒಂದು ಕೆಲಸ ಮಾಡಿ. ನಿಮ್ಮ ತಪ್ಪುಗಳನ್ನು ಎಣಿಸಬೇಡಿ. ಇವತ್ತು ನೀವು ಮಾಡಿದ ಮೂರು ಒಳ್ಳೆಯ ಕೆಲಸಗಳನ್ನು ನೆನಪಿಸಿಕೊಳ್ಳಿ. ಎಷ್ಟೇ ಸಣ್ಣದಾಗಿರಲಿ!
ಮತ್ತು ಕೊನೆಯಲ್ಲಿ ಆ ತಲೆಯೊಳಗಿನ ಧ್ವನಿಗೆ ಮೆಲ್ಲಗೆ ಹೇಳಿ: “ಇವತ್ತು ನಾನು ತುಂಬಾ ಸಾಧಿಸಿದ್ದೇನೆ! ಗೆಳೆಯ, ಇನ್ನು ಮಲಗೋಣ.”
ಮನಸ್ಸು ನಿಮ್ಮ ಶತ್ರುವಲ್ಲ! ಅದು ದಾರಿ ತಪ್ಪಿದ ನಿಮ್ಮ ಆತ್ಮೀಯ ಗೆಳೆಯ! ಇವತ್ತಿನಿಂದ ಅದರ ಕೈ ಹಿಡಿದುಕೊಳ್ಳಿ!
ಬರಹ: ಸಂತೋಷ್‌ಕುಮಾರ್ ತಂಗವೇಲು

