ಮನಸ್ಸು ಕೇಳುವುದು ಪರಿಹಾರವಲ್ಲ, ಪ್ರೀತಿಯನ್ನು!

ಪ್ರಿಯ ಓದುಗರೇ, ಒಂದು ಮನೋವಿಜ್ಞಾನದ ಸತ್ಯ ಹೇಳಲಾ? ಮನುಷ್ಯ ದುಃಖದಲ್ಲಿದ್ದಾಗ ಅವನಿಗೆ ಬೇಕಾಗಿರುವುದು ಸಲಹೆಯಲ್ಲ; ಕೇಳಿಸಿಕೊಳ್ಳುವ ಒಂದು ಆತ್ಮ! ಅಷ್ಟೇ!

ಆದರೆ ನಾವೇನು ಮಾಡುತ್ತೇವೆ? ಯಾರಾದರೂ “ನನಗೆ ಬಹಳ ಬೇಜಾರಾಗಿದೆ” ಅಂದ ತಕ್ಷಣ, “ಅದಕ್ಕೇನಿದೆ, ಹೀಗೆ ಮಾಡು, ಹಾಗೆ ಮಾಡು” ಅಂತ ಪರಿಹಾರಗಳ ಮಳೆ ಸುರಿಸುತ್ತೇವೆ. ಮನಸ್ಸು ಬಯಸಿದ್ದು ಬೆಚ್ಚನೆಯ ಒಂದು ತಬ್ಬುಗೆ, ನಾವು ಕೊಟ್ಟದ್ದು ಒಣ ಉಪದೇಶ!

ನನ್ನ ಪರಿಚಯದ ಒಬ್ಬ ಹುಡುಗ ಇದ್ದ. ಕಾಲೇಜಿನಲ್ಲಿ ಪರೀಕ್ಷೆ ಫೇಲ್ ಆದ. ಮನೆಗೆ ಹೋಗಿ ಅಪ್ಪನಿಗೆ ಹೇಳಿದ. ಅಪ್ಪ ತಕ್ಷಣ ಶುರು ಮಾಡಿದರು, “ನಾನು ಆವಾಗಲೇ ಹೇಳಿದ್ದೆ, ಓದು ಅಂತ. ಕೇಳಿದ್ಯಾ? ಈಗ ನೋಡು!” ಆ ಹುಡುಗ ತಲೆ ತಗ್ಗಿಸಿ ಕೋಣೆಗೆ ಹೋದ. ಅಪ್ಪ ಹೇಳಿದ್ದೆಲ್ಲ ಸರಿ, ಆದರೆ ಆ ಕ್ಷಣದಲ್ಲಿ ಅವನಿಗೆ ಬೇಕಾಗಿದ್ದದ್ದು ಸರಿ,ತಪ್ಪಿನ ಲೆಕ್ಕ ಅಲ್ಲ!

ಅದೇ ರಾತ್ರಿ ಅಜ್ಜಿ ಮೆಲ್ಲಗೆ ಕೋಣೆಗೆ ಬಂದರು. ಏನೂ ಹೇಳಲಿಲ್ಲ. ಅವನ ತಲೆ ಸವರಿ, ಪಕ್ಕದಲ್ಲಿ ಕೂತು, “ಕಷ್ಟ ಆಯ್ತಲ್ವಾ ಕಂದ” ಅಂದರು. ಅಷ್ಟೇ! ಆ ಹುಡುಗ ಅಜ್ಜಿಯ ಮಡಿಲಲ್ಲಿ ತಲೆ ಇಟ್ಟು ಬಿಕ್ಕಿ ಬಿಕ್ಕಿ ಅತ್ತ! ಆ ಅಳುವಿನ ನಂತರ ಅವನ ಮನಸ್ಸು ಹಗುರಾಯಿತು. ಮರುದಿನದಿಂದ ಮತ್ತೆ ಪುಸ್ತಕ ಹಿಡಿದ!

ವ್ಯತ್ಯಾಸ ನೋಡಿದಿರಾ? ಅಪ್ಪ ಸರಿಯಾದ ಮಾತು ಹೇಳಿದರು, ಆದರೆ ತಪ್ಪಾದ ಸಮಯದಲ್ಲಿ. ಅಜ್ಜಿ ಯಾವ ಮಾತೂ ಹೇಳಲಿಲ್ಲ, ಆದರೆ ಸರಿಯಾದ ಪ್ರೀತಿ ಕೊಟ್ಟರು. ಮನಸ್ಸು ಗೆಲ್ಲುವುದು ತರ್ಕದಿಂದ ಅಲ್ಲ, ಸ್ಪರ್ಶದಿಂದ!

ಮಣ್ಣಿಗೆ ಬಿದ್ದ ಬೀಜವನ್ನು ನೋಡಿ. ನೀವು ಅದಕ್ಕೆ ಪಾಠ ಹೇಳುವುದಿಲ್ಲ. “ಬೇಗ ಬೆಳೆ, ಯಾಕೆ ತಡ ಮಾಡುತ್ತಿದ್ದೀಯಾ” ಅಂತ ಬೈಯುವುದಿಲ್ಲ. ಸುಮ್ಮನೆ ನೀರು ಹಾಕುತ್ತೀರಿ, ಕಾಯುತ್ತೀರಿ. ಅದಕ್ಕೆ ಬೇಕಾದ ಸಮಯ ಕೊಡುತ್ತೀರಿ. ಬೀಜ ತನ್ನ ಸಮಯಕ್ಕೆ ಚಿಗುರುತ್ತದೆ. ಮನುಷ್ಯನ ಮನಸ್ಸೂ ಹಾಗೆಯೇ. ಅದಕ್ಕೆ ಒತ್ತಡ ಬೇಡ, ನೀರು ಬೇಕು. ಆ ನೀರಿನ ಹೆಸರೇ ಅನುಕಂಪ!

ನಮಗೆ ನಮ್ಮ ಬಗ್ಗೆಯೂ ಕ್ರೂರತೆ ಇದೆ, ಗೊತ್ತಾ? ಒಂದು ತಪ್ಪು ಮಾಡಿದರೆ ವರ್ಷಗಟ್ಟಲೆ ನಮ್ಮನ್ನೇ ನಾವು ಬೈದುಕೊಳ್ಳುತ್ತೇವೆ, “ನಾನು ದಡ್ಡ, ನನ್ನಿಂದಾಗಲ್ಲ” ಅಂತ. ಬೇರೆಯವರಿಗೆ ತೋರಿಸುವ ಕರುಣೆಯ ಒಂದು ಹನಿಯನ್ನಾದರೂ ನಮಗೆ ನಾವು ತೋರಿಸುತ್ತೇವಾ? ಇಲ್ಲ!

ಇವತ್ತು ಒಂದು ಕೆಲಸ ಮಾಡಿ. ನಿಮ್ಮ ಸುತ್ತಲಿನ ಯಾರಾದರೂ ಬೇಜಾರಿನಲ್ಲಿದ್ದರೆ, ಅವರಿಗೆ ಸಲಹೆ ಕೊಡಲು ಹೋಗಬೇಡಿ. ಬರೀ ಪಕ್ಕದಲ್ಲಿ ಕೂತು, “ನಾನಿದ್ದೀನಿ, ಹೇಳಿಕೋ” ಅನ್ನಿ. ಆ ಮೂರು ಪದ ಸಾವಿರ ಸಲಹೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತವೆ.

ಮತ್ತು ಕನ್ನಡಿಯ ಮುಂದೆ ನಿಂತಾಗ, ಆ ವ್ಯಕ್ತಿಗೂ ಒಮ್ಮೆ ಹೇಳಿ, “ಪರವಾಗಿಲ್ಲ. ತಪ್ಪಾಯಿತು, ಕಲಿಯೋಣ.”

ಮನಸ್ಸು ಕೇಳುವುದು ಪರಿಹಾರವನ್ನಲ್ಲ, ಪ್ರಿಯ ಓದುಗರೇ… ಕೇವಲ ಒಂದಿಷ್ಟು ಪ್ರೀತಿಯನ್ನು. ಇವತ್ತು ಅದನ್ನು ಕೊಟ್ಟುಬಿಡಿ!

ಬರಹ: ಸಂತೋಷ್‌ಕುಮಾರ್ ತಂಗವೇಲು

Leave a Comment

Your email address will not be published. Required fields are marked *

Scroll to Top