
ರಾತ್ರಿ ಕನ್ನಡಿಯ ಮುಂದೆ ನಿಂತೊಡನೆ ಒಂದು ಅಪರಿಚಿತ ಮುಖ!
ಅದೇ ನಿಮ್ಮ ನಿಜವಾದ ಮುಖ! ಮುಖವಾಡವಿಲ್ಲದ ಮುಖ!
ಬೆಟ್ಟದ ತಪ್ಪಲಲ್ಲಿ ತಂಗಾಳಿ ಮೆಲ್ಲಗೆ ಬೀಸುತ್ತಿತ್ತು! ಸೂರ್ಯ ಪಶ್ಚಿಮದ ಬೆಟ್ಟದ ಹಿಂದೆ ಇಳಿಯುತ್ತಾ, ಆಕಾಶಕ್ಕೆ ಕೆಂಪು ಬಣ್ಣ ಬಳಿಯುತ್ತಿದ್ದ! ನಾನೂ ನನ್ನ ಗೆಳೆಯನೂ ಸುಮ್ಮನೆ ನಡೆಯುತ್ತಿದ್ದೆವು. ಆಗ ಅವನೆಂದ:
“ನೋಡೋ, ಈ ಪ್ರಪಂಚವೆಂಬ ರಂಗಮಂಟಪದಲ್ಲಿ ನಾವೆಲ್ಲ ಪಾತ್ರಧಾರಿಗಳೇ. ಪ್ರತಿಯೊಬ್ಬನೂ ಒಂದೊಂದು ಮುಖವಾಡ ಧರಿಸಿ ಬದುಕುತ್ತಿದ್ದಾನೆ.”
ಆ ಮಾತು ನನ್ನ ಎದೆಗೆ ನಾಟಿತು!
ನಿಜ ಅಲ್ಲವಾ? ಬೆಳಗ್ಗಿನಿಂದ ಸಂಜೆಯವರೆಗೆ ಹಲವು ಮುಖವಾಡ! ಅದೇ ಅವನ ಬದುಕು! ಆಫೀಸಿನಲ್ಲಿ ಒಂದು ಮುಖ, ಬಾಸ್ ಮುಂದೆ “ಎಸ್ ಸಾರ್” ಎನ್ನುವ ನಗು. ಮನೆಯಲ್ಲಿ ಇನ್ನೊಂದು ಮುಖ, ಎಲ್ಲಾ ಸರಿಯಿದೆ ಎನ್ನುವ ಸೋಗು. ಗೆಳೆಯರ ಮುಂದೆ ಮತ್ತೊಂದು ಮುಖ, ನನಗೇನೂ ಆಗಿಲ್ಲ ಎನ್ನುವ ಧೈರ್ಯ. ದಿನಪೂರ್ತಿ ಮುಖವಾಡ ಬದಲಿಸಿ ಬದಲಿಸಿ, ರಾತ್ರಿ ಆ ಮನುಷ್ಯ ಸುಸ್ತಾಗಿ ಮಲಗುತ್ತಾನೆ.
ಕನ್ನಡಿಯ ಮುಂದೆ ಎಲ್ಲಾ ಮುಖವಾಡಗಳು ಉದುರುತ್ತವೆ. ಅಲ್ಲಿ ಕಾಣುವುದೇ ನಿಮ್ಮ ದಣಿದುಹೋದ, ಮುದ್ದಾದ ಮುಖ.
ಆ ಗಾಜಿನ ತುಂಡು ಎಷ್ಟು ಪ್ರಾಮಾಣಿಕ ನೋಡಿ. ಕೊಳದ ತಿಳಿನೀರಿನಂತೆ. ಬೆಟ್ಟದ ತೊರೆ ಮೇಲೆ ಬಾಗಿ ನೋಡಿದವನ ಮುಖವನ್ನು ಅದು ಹೇಗಿದೆಯೋ ಹಾಗೆಯೇ ತೋರಿಸುತ್ತದೆ! ನಿಮ್ಮ ಬಣ್ಣ ನೋಡುವುದಿಲ್ಲ, ಹುದ್ದೆ ನೋಡುವುದಿಲ್ಲ, ಸಂಬಳ ನೋಡುವುದಿಲ್ಲ. ನೀವು ಹೇಗಿದ್ದೀರೋ ಹಾಗೆಯೇ ತೋರಿಸುತ್ತದೆ!
ನನಗೊಬ್ಬರು ಗೊತ್ತಿದ್ದರು. ಎಲ್ಲರೂ ಅವರನ್ನು “ಎಷ್ಟು ಸಂತೋಷದ ಮನುಷ್ಯ” ಅನ್ನುತ್ತಿದ್ದರು. ಯಾವಾಗಲೂ ನಗು, ಯಾವಾಗಲೂ ತಮಾಷೆ, ಪಾರ್ಟಿಯ ಜೀವಾಳ! ಒಂದು ದಿನ ಅವರೇ ಹೇಳಿದರು, “ಗೊತ್ತಾ, ಮನೆಗೆ ಹೋಗಿ ಬಾಗಿಲು ಹಾಕಿದ ಮೇಲೆ, ಆ ನಗುವನ್ನು ಎಲ್ಲಿ ಇಡಬೇಕು ಅಂತಲೇ ನನಗೆ ಗೊತ್ತಾಗಲ್ಲ.”
ಆ ಮಾತು ನನ್ನನ್ನು ಇವತ್ತಿಗೂ ಕಾಡುತ್ತದೆ!
ನಾವು ಜಗತ್ತಿಗೆ ತೋರಿಸುವ ಮುಖ ಬೇರೆ. ನಮ್ಮೊಳಗಿನ ಮುಖ ಬೇರೆ. ಆ ಎರಡರ ನಡುವಿನ ಅಂತರ ಎಷ್ಟು ದೊಡ್ಡದಾಗುತ್ತದೋ, ಮನಸ್ಸು ಅಷ್ಟು ಭಾರವಾಗುತ್ತದೆ!

ರಂಗಮಂಟಪದ ಪಾತ್ರಧಾರಿಗೆ ಒಂದು ಸೌಭಾಗ್ಯವಿದೆ. ನಾಟಕ ಮುಗಿದ ಮೇಲೆ ಅವನು ಬಣ್ಣ ತೊಳೆದು ಮನೆಗೆ ಹೋಗುತ್ತಾನೆ. ನಮ್ಮ ದುರಂತ ಏನು ಗೊತ್ತಾ? ನಮ್ಮ ನಾಟಕಕ್ಕೆ ತೆರೆಯೇ ಬೀಳುವುದಿಲ್ಲ! ಬಣ್ಣ ತೊಳೆಯುವುದನ್ನೇ ಮರೆತುಬಿಡುತ್ತೇವೆ!
ಕಾಡಿನ ಆ ದೊಡ್ಡ ಮರವನ್ನು ನೋಡಿ. ಅದು ಯಾರಿಗಾಗಿಯೂ ಮುಖವಾಡ ಹಾಕುವುದಿಲ್ಲ. ಒಣಗಿದ ಎಲೆಯನ್ನು ಒಣಗಿದೆ ಅಂತಲೇ ಉದುರಿಸುತ್ತದೆ. ಶಿಶಿರದಲ್ಲಿ ಬೋಳಾಗಿ ನಿಂತು, ಬತ್ತಲೆ ಕೊಂಬೆಗಳನ್ನು ಆಕಾಶಕ್ಕೆ ಚಾಚಿ ನಿಲ್ಲಲು ಅದಕ್ಕೆ ನಾಚಿಕೆಯಿಲ್ಲ. ಯಾಕೆಂದರೆ ಅದಕ್ಕೆ ಗೊತ್ತು, ವಸಂತ ಬಂದೇ ಬರುತ್ತದೆ, ಪ್ರತಿ ಕೊಂಬೆಯಲ್ಲೂ ಹೊಸ ಚಿಗುರು ನಗುತ್ತದೆ ಅಂತ. ಪ್ರಕೃತಿಗೆ ತನ್ನ ಬೋಳುತನದಲ್ಲೂ ಒಂದು ಘನತೆಯಿದೆ. ನಾವು ಮಾತ್ರ ನಮ್ಮ ಬೋಳುತನವನ್ನು ಮುಚ್ಚಿಡಲು ಜೀವನಪೂರ್ತಿ ಹೆಣಗಾಡುತ್ತೇವೆ.
ಒಂದು ವಿಷಯ ಅರ್ಥ ಮಾಡಿಕೊಳ್ಳಿ. ಎಲ್ಲಾ ಸರಿಯಿದೆ ಅಂತ ನಟಿಸುವುದು ಧೈರ್ಯವಲ್ಲ. ಸರಿಯಿಲ್ಲ ಅಂತ ಒಪ್ಪಿಕೊಳ್ಳುವುದೇ ನಿಜವಾದ ಧೈರ್ಯ. “ನನಗೆ ಸಹಾಯ ಬೇಕು” ಅನ್ನುವ ಆ ಮೂರು ಪದ ಹೇಳಲು ದೊಡ್ಡ ಎದೆಗಾರಿಕೆ ಬೇಕು. ಆ ಮಾತು ಹೇಳಲಾಗದೆ ಎಷ್ಟೋ ಜನ ಒಳಗೊಳಗೇ ಮುರಿದುಹೋಗುತ್ತಾರೆ.
ನಿಮಗೊಂದು ಗುಟ್ಟು ಹೇಳಲಾ? ಈ ರಂಗಮಂಟಪದ ಪ್ರತಿಯೊಬ್ಬ ಪಾತ್ರಧಾರಿಯೂ ಒಳಗೆ ಒಂದಿಷ್ಟು ಒಡೆದಿದ್ದಾನೆ. ಆ ನಗುತ್ತಿರುವ ಮುಖವಾಡದ ಹಿಂದೆ ಒಂದು ಹೇಳದ ಕಥೆಯಿದೆ. ನೀವೊಬ್ಬರೇ ಅಲ್ಲ!

ಪ್ರಪಂಚದಲ್ಲಿ ನೀವು ಎಷ್ಟೇ ಜನರಿಗೆ ಒಳ್ಳೆಯ ಮಾತು ಹೇಳಿರಬಹುದು. ಆದರೆ ಆ ಒಂದು ಮನುಷ್ಯನಿಗೆ, ಕನ್ನಡಿಯೊಳಗಿನ ಆ ಅಪರಿಚಿತನಿಗೆ, ನೀವು ಎಂದೂ ಒಂದು ಪ್ರೀತಿಯ ಮಾತು ಹೇಳಿಲ್ಲ.
ಬೆಟ್ಟದ ಹಿಂದೆ ಇಳಿದ ಸೂರ್ಯ ನಾಳೆ ಮತ್ತೆ ಬರುತ್ತಾನೆ. ಬೋಳಾದ ಮರ ಮತ್ತೆ ಚಿಗುರುತ್ತದೆ. ಆ ಕನ್ನಡಿಯೊಳಗಿನ ಮನುಷ್ಯ ಒಮ್ಮೆ ಪ್ರೀತಿ ಸಿಕ್ಕರೆ ಮತ್ತೆ ಅರಳುತ್ತಾನೆ!
ಅವನೂ ಕಾಯುತ್ತಿದ್ದಾನೆ!
ಎಲ್ಲಾ ಮುಖವಾಡ ಕಳಚಿ, ಇವತ್ತು ಒಮ್ಮೆ ಅವನನ್ನೂ ಪ್ರೀತಿಸಿ!
ಬರಹ : ಸಂತೋಷ್‌ಕುಮಾರ್ ತಂಗವೇಲು

