ಬರಹ: ಐಗೂರು ಮೋಹನ್ ದಾಸ್ ಜಿ.
ಸೋಮವಾರಪೇಟೆ, ಕೊಡಗು

ಈ ವರ್ಷ ಕೊಡಗಿನಲ್ಲಿ ಸುರಿಯಬೇಕಾಗಿದ್ದ ಮಳೆಯೂ ನಾಪತ್ತೆಯಾಗಿ, ಮೋಡವೇ ಇಲ್ಲದಿರುವ ಆಕಾಶವನ್ನು ಒಂದು ತಿಂಗಳ ಕಾಲ ಸುಮ್ಮನೆ ನೋಡಿಕೊಂಡು ಕುಳಿತುಕೊಳ್ಳುವಂತಹ ಕೆಟ್ಟ ದಿನಗಳು ನಮ್ಮ ಜಿಲ್ಲೆಗೆ ಬಂದವು…!
‘ಈ ವರ್ಷ ಇನ್ನು ಮಳೆ ಬರುವುದಿಲ್ಲ… ಕುಡಿಯಲು ನೀರು ಸಿಗುವುದಿಲ್ಲ…. ಉತ್ತಮ ಫಸಲು ದೊರೆಯುವುದಿಲ್ಲ…’ ಹೀಗೆ ಹತ್ತಾರು ಮಂದಿಯ ಬಾಯಲ್ಲಿ ನೂರಾರು ಮಾತುಗಳು…! ಆದರೂ ನನ್ನ ಮನಸ್ಸಿನಲ್ಲಿ ಮಾತ್ರ ಒಂದು ಭಂಡ ಧೈರ್ಯವಿತ್ತು…! ನಮ್ಮದು ಕಾವೇರಿ ಮಾತೆಯ ಪುಣ್ಯಭೂಮಿ…. ಈ ಭೂಮಿ ರಾಜ್ಯದ ಯಾವುದೇ ಇತರ ಜಿಲ್ಲೆಗಳಲ್ಲಿ ಬರಬಿದ್ದು ನಾಶವಾದರೂ, ನಮ್ಮ ಜಿಲ್ಲೆ ಮಾತ್ರ ಯಾವುದೇ ಕಾರಣಕ್ಕೂ ನಾಶವಾಗುವುದಿಲ್ಲ….. ಕಾವೇರಿ ಮಾತೆಯ ಕೃಪೆ ನಮಗೆ ಇರುತ್ತದೆ ಎಂಬ ನಂಬಿಕೆ ನನಗಿತ್ತು…! ಈ ನಂಬಿಕೆ ಸತ್ಯವಾಗುವಂತೆ ಈಗ ಎರಡು ದಿನಗಳಿಂದ ಮೆಲ್ಲನೆ ಮಳೆ ಸುರಿಯಲು ಪ್ರಾರಂಭಿಸಿ, ಜನತೆಯ ಮನಸ್ಸನ್ನು ಮತ್ತು ಭೂಮಾತೆಯನ್ನು ತಂಪು ಮಾಡಿದೆ…!

ಈಗ ಮಳೆ ಬರುತ್ತಿದೆ… ಮನಸ್ಸಿನಲ್ಲಿ ಪುನಃ ಕನಸುಗಳು ಹುಟ್ಟಿಕೊಳ್ಳಲು ಪ್ರಾರಂಭಿಸಿವೆ… ನಾಳೆಯ ದಿನ ನಮ್ಮ ಬದುಕು ಸುಂದರ ‘ಕಾವ್ಯ’ವಾಗುತ್ತದೆ ಎಂದು ಭಾವಿಸಿ, ನಾವು ಕನಸು ಕಾಣುತ್ತಾ ನಿದ್ರಿಸುತ್ತೇವೆ…! ಆದರೆ ನಮ್ಮ ಬದುಕಿಗೆ ಒಂದು ಗ್ಯಾರಂಟಿ ಎಂಬುದೇ ಇಲ್ಲ…! ರಾತ್ರಿ ನಿದ್ರಿಸುತ್ತಾ ಮಲಗಿರುವ ಮಂದಿ, ನಾಳೆ ಉದಯಿಸುವ ‘ಸೂರ್ಯ’ನನ್ನು ನೋಡುವ ‘ಭಾಗ್ಯ’ ಪಡೆದಿದ್ದಾರೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ…! ಬೆಳಿಗ್ಗೆ ನಮ್ಮ ಜೊತೆ ಕುಳಿತುಕೊಂಡು, ಟೀ – ಕಾಫಿ ಕುಡಿಯುತ್ತಾ ಒಂದು ಸಿಗರೇಟ್ ಉರಿಸಿದ್ದ ಪುಣ್ಯಾತ್ಮ, ಮಧ್ಯಾಹ್ನದ ವೇಳೆಗೆ ಮತ್ತೊಂದು ಲೋಕಕ್ಕೆ ಪಯಣ ಬೆಳೆಸಿರುತ್ತಾನೆ…! ನಾವು ಆಗ ವಿಧಿ ಇಲ್ಲದೆ, ಭಗವಂತನಿಗೆ ಶಾಪ ಹಾಕುತ್ತಾ, ‘ಓಂ ಶಾಂತಿ’ ಎಂದು ಹೇಳಲೇಬೇಕಾಗುತ್ತದೆ…!
ಈ ಭೂಮಿಗೆ ‘ಕೊರೊನಾ’ ಮಾರಿ ಬಂದು ಹೋದ ಮೇಲೆ, ಮನುಷ್ಯ ಜನ್ಮಕ್ಕೊಂದು ‘ಗ್ಯಾರಂಟಿ’ ಎಂಬುದೇ ಇಲ್ಲದಂತಾಗಿದೆ…! ಒಂದು ಸಣ್ಣ ‘ಹಾರ್ಟ್ ಅಟ್ಯಾಕ್’… ಹೃದಯಾಘಾತ… ಎದೆನೋವು… ಎಂಬ ಸಣ್ಣ-ಪುಟ್ಟ ನೆಪ ಹೇಳಿ, ಮನುಷ್ಯ ಜನ್ಮದ ಆಯುಷ್ಯ ಕಡಿಮೆಯಾಗಿದೆ…! ಜೊತೆಗೆ ಆರೋಗ್ಯದ ವಿಚಾರ ಹೇಳುವುದೇ ಬೇಡ…! ಸರ್ವರಿಗೂ ಹತ್ತಾರು ರೋಗಗಳು…! ಮಾತ್ರೆ – ಇಂಜೆಕ್ಷನ್ಗಳು ಸದಾ ಕಾಲ ‘ಪ್ರೇಯಸಿಯರಂತೆ’ ಜೊತೆಯಲ್ಲೇ ಇರಬೇಕಾಗುತ್ತದೆ…!

ಈ ಮರಣ… ಸಾವು ಎಂಬುದು ಸದಾ ‘ನೆರಳಿನಂತೆ’ ಜೊತೆಗಿರುವಾಗ, ಬದುಕಿನಲ್ಲಿ ಹುಚ್ಚು-ಹುಚ್ಚು ಕನಸುಗಳನ್ನು ಕಾಣುತ್ತಾ ಬದುಕು ಸಾಗಿಸುವುದು ಮೂರ್ಖತನವಾಗಿದೆ…! ಬದುಕು ಸಾಗಿಸಲು ಹಣ ಬೇಕು ಎಂಬುದು ಸತ್ಯ…! ಆದರೆ ಹಣಕ್ಕಾಗಿ ಮಾತ್ರವೇ ನಾವು ಜೀವಿಸಬಾರದು…! ಮೋಸ – ವಂಚನೆ ನಡೆಸಿ ಸಂಪಾದನೆ ಮಾಡಿ ವೈಭವದ ಜೀವನ ಸಾಗಿಸುವಂತಹ ಮಂದಿಯೂ ಸಹ, ಜೀವನಯಾತ್ರೆ ಮುಗಿಸಿ ಹೋಗುವಾಗ ‘ಬ್ಯಾನ್’ ಆಗಿರುವ ಒಂದು ನೋಟನ್ನೂ ಸಹ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ…! ಆರು ಅಡಿ ಮಣ್ಣು ಮಾತ್ರ ದೊರೆಯುತ್ತದೆ…! ಅದಕ್ಕೂ ಭಗವಂತನ ಕೃಪೆ ಮತ್ತು ಆಶೀರ್ವಾದ ಬೇಕು…! ಪ್ರಕೃತಿ ವಿಕೋಪದಿಂದ ಭೂಮಾತೆ ಮುನಿಸಿಕೊಂಡು ದುರಂತಗಳು ಸೃಷ್ಟಿಯಾದರೆ, ‘ಹೆಣಗಳೂ’ ಸಹ ಕಣ್ಣಿಗೆ ಗೋಚರಿಸುವುದಿಲ್ಲ…! ಆದ್ದರಿಂದ ಪ್ರತಿಯೊಬ್ಬರೂ ಸಹ ಹುಟ್ಟು-ಸಾವುಗಳ ನಡುವಿನ ಅವಧಿಯಲ್ಲಿ ಪ್ರೀತಿ-ವಿಶ್ವಾಸದಿಂದ, ‘ಮನುಷ್ಯರಂತೆ’ ಬದುಕು ಸಾಗಿಸಲು ಪ್ರಯತ್ನ ನಡೆಸಬೇಕು..! ಆಗ ಮಾತ್ರ ಈ ಸಮಾಜದ ಮತ್ತು ದೇವರ ಕೃಪೆ ದೊರೆಯಲು ಸಾಧ್ಯ….!
ನಾವು ಮನುಷ್ಯರಂತೆ ಬದುಕು ಸಾಗಿಸಲು, ಮೊದಲು ನಮ್ಮ ‘ಮನಸ್ಸು’ ಶುಭ್ರವಾಗಿರಬೇಕು…! ಹೊಲಸು ತುಂಬಿರಬಾರದು…! ಸ್ವಾರ್ಥ… ಅಸೂಯೆಗಳಿಗೆ ಜಾಗ ನೀಡಬಾರದು…! ಪ್ರತಿಯೊಬ್ಬರನ್ನೂ ಪ್ರೀತಿಸುವಂತಹ ಹೃದಯವಿರಬೇಕು…! ಆಗ ಮಾತ್ರ ಎರಡು ಕೈ-ಕಾಲುಗಳನ್ನು ಹೊಂದಿರುವ ಈ ಜೀವಿಗಳನ್ನು ‘ಮನುಷ್ಯರು’ ಎಂದು ಕರೆಯಲು ಸಾಧ್ಯ…! ಇಲ್ಲದಿದ್ದರೆ ಈ ಜನ್ಮಗಳನ್ನು ‘ಪ್ರಾಣಿಗಳು’ ಎಂದೇ ಕರೆಯಬೇಕಾಗುತ್ತದೆ…!
ಮುಂದಿನ ದಿನಗಳಲ್ಲಿ ನಾವು ಬದಲಾಗೋಣ…. ಮನುಷ್ಯರಂತೆ ಬದುಕು ಸಾಗಿಸೋಣ….!
ಆ ದಿನಗಳು ಬರುವುದು ಯಾವಾಗ….?
ಬರಹ:
ಐಗೂರು ಮೋಹನ್ ದಾಸ್ ಜಿ.
ಸೋಮವಾರಪೇಟೆ, ಕೊಡಗು.
