ದೇಶದ ಇಂದಿನ ಬೆಳಕು ನರೇಂದ್ರ ಮೋದಿ…!

ಬರಹ: ಐಗೂರು ಮೋಹನ್ ದಾಸ್ ಜಿ.

ಸೆಪ್ಟೆಂಬರ್ 16ರ ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯ… ನಮ್ಮ ಮನೆಯ ತಿರುವಿನಲ್ಲಿರುವ ‘ಮೋರಿ ಕಟ್ಟೆ’ಯ ಮೇಲೆ ಕುಳಿತು, ದೇಶದ ಇಂದಿನ ರಾಜಕೀಯ ಸ್ಥಿತಿಗತಿಗಳ ಕುರಿತು ಯೋಚಿಸುತ್ತಿದ್ದೆ! ಆಗ ಕೆಲವು ರಾಜಕೀಯ ಪಕ್ಷಗಳ ನಾಯಕರು ಹಾಗೂ ಮರಿ ಪುಡಾರಿಗಳ ‘ನುಡಿಮುತ್ತುಗಳು’ ಮನದಲ್ಲಿ ತೇಲಿ ಬಂದಾಗ, ಕೆಲ ಕ್ಷಣ ನಗಬೇಕೋ ಅಥವಾ ಸಂಕಟದಿಂದ ರೋಧಿಸಬೇಕೋ ಎಂಬುವುದೇ ತಿಳಿಯಲಿಲ್ಲ!

ನಿಜ…, ಸೆಪ್ಟೆಂಬರ್ 17 ನಮ್ಮ ದೇಶದ ಪ್ರಧಾನಿ ಮೋದಿಜೀಯವರ ಜನ್ಮದಿನ. ಈ ದಿನದಂದು “ಮನೆ ಮನೆಯಲ್ಲಿ ಆಶೀರ್ವಾದದ ದೀಪ” ಬೆಳಗಿಸುವಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ಕರೆ ನೀಡಿದ್ದಾರೆ. ಇದು ಯಾವುದೇ ಅಪರಾಧ ಅಥವಾ ಕೆಟ್ಟ ಸಂಭ್ರಮಾಚರಣೆಯಲ್ಲ; ಜಗತ್ತೇ ಮೆಚ್ಚಿರುವ ನಮ್ಮ ದೇಶದ ಪ್ರಧಾನಿಯವರ ಮೇಲಿರುವ ಅಭಿಮಾನ ಮತ್ತು ಪ್ರೀತಿಯ ಒಂದು ಪುಟ್ಟ ಕಾಣಿಕೆ ಮಾತ್ರ. ಆದರೆ, ಮೋದಿಜೀಯವರ ತಪ್ಪುಗಳನ್ನು ಮಾತ್ರ ಹುಡುಕುವ ಮಂದಿಗೆ ಈ ಕಾರ್ಯವೂ ಜೀರ್ಣವಾಗುತ್ತಿಲ್ಲ! ನೂರಾರು ರೀತಿಯ ಟೀಕೆಗಳು ವ್ಯಕ್ತವಾಗುತ್ತಿವೆ!

ಇಂದು ಪ್ರತಿಯೊಬ್ಬರಿಗೂ ನಮ್ಮ ಪ್ರಧಾನಿಯವರ ಆಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ದೀಪ ಬೆಳಗಿಸಿ ಪ್ರಾರ್ಥಿಸಲೇಬೇಕು ಎಂದು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ, ಮೋದಿಜೀಯವರ ಮೇಲೆ ವಿಶ್ವಾಸ ಹೊಂದಿರುವ ‘ಭಕ್ತರ’ ಬಳಗ ಈ ಪುಣ್ಯ ಕೆಲಸವನ್ನು ಮಾಡಿ, ಇಡೀ ದೇಶವನ್ನು ಮೋದಿಜೀಯವರ ನಾಮದಲ್ಲಿ ಬೆಳಗಿಸುತ್ತದೆ ಎಂಬ ನಂಬಿಕೆ ನನಗಿದೆ.

ಮೋದಿಜೀಯವರು 2001ರಿಂದ 2014ರ ತನಕ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು 2014ರಿಂದ ದೇಶದ ಪ್ರಧಾನ ಮಂತ್ರಿಯಾಗಿ ಅತ್ಯುತ್ತಮ ಆಡಳಿತ ನಡೆಸುತ್ತಿದ್ದಾರೆ. ಅವರ ಸುತ್ತ ಶತ್ರುಗಳ ಕೋಟೆಯೇ ಇದ್ದರೂ, ಭಾರತಾಂಬೆಯ ಕೃಪೆ ಮತ್ತು ಹೆತ್ತ ತಾಯಿಯ ಆಶೀರ್ವಾದದ ಫಲವಾಗಿ, ದಿನದಿಂದ ದಿನಕ್ಕೆ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದ್ದಾರೆ. ಜಗತ್ತಿನ ಸರ್ವ ರಾಷ್ಟ್ರಗಳೂ ತಿರುಗಿ ನೋಡುವಂತೆ ಆಡಳಿತ ನಡೆಸುತ್ತಿದ್ದಾರೆ! ದೇಶದೆಲ್ಲೆಡೆ ಮೋದಿ ‘ಜಪ’ ನಡೆಯುತ್ತಿದೆ! “ಮೋದಿ… ಮೋದಿ… ಮೋದಿ…” ಎಂಬ ಜೈಕಾರ ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ!

ಮೋದಿಜೀ ಇಂದು ಜಾಗತಿಕ ಮಟ್ಟದ ನಾಯಕ! ಭಾರತ ದೇಶಕ್ಕೆ ಜಾಗತಿಕ ಗೌರವ ತಂದುಕೊಟ್ಟ ಪ್ರಧಾನಿ, ‘ವಿಶ್ವಗುರು’! ನಾವು ಅವರನ್ನು ಎಷ್ಟೇ ಹಾಡಿ ಹೊಗಳಿದರೂ, ಅವರ ಜೀವನವೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಅವರ ಹೆತ್ತವರೂ ಬಡತನದಲ್ಲಿದ್ದರು; ಸಣ್ಣ ಚಹಾ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಬಾಲ್ಯದಲ್ಲಿ ಮೋದಿಜೀ ಹೆತ್ತವರಿಗೆ ನೆರವಾಗಿ, ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ‘ಚಹಾ’ ನೀಡುತ್ತಿದ್ದ ಕಾರಣ, ವಿರೋಧಿಗಳಿಂದ ‘ಚಾಯ್ ವಾಲಾ’ ಎಂಬ ಗೇಲಿಗೆ ಒಳಗಾದರು. ಆದರೂ, ಬಾಲ್ಯದಿಂದಲೇ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ದ (RSS) ನಿಷ್ಠಾವಂತ ಕಾರ್ಯಕರ್ತನಾಗಿ ಬೆಳೆದ ಕಾರಣ, ಕಮಲ ಪಕ್ಷದ ಮಹಾನ್ ನಾಯಕನಾಗುವ ಸೌಭಾಗ್ಯ ಅವರಿಗೆ ದೊರೆಯಿತು.

ಈಗ ಕೆಲವು ಮಂದಿ ನನ್ನನ್ನೂ ಟೀಕಿಸಬಹುದು “ಈತ ಸುಮ್ಮನೆ ಮೋದಿಜೀಯವರನ್ನು ಹೊಗಳುತ್ತಿದ್ದಾನೆ; ಮೋದಿಜೀಯವರಿಂದ ದೇಶದ ಹಣೆಬರಹವೇನೂ ಬದಲಾಗಿಲ್ಲ, ವಿದೇಶದಿಂದ ಕಪ್ಪು ಹಣ ಬರಲಿಲ್ಲ, ನೋಟು ಬ್ಯಾನ್‌ನಿಂದ ಯಾವುದೇ ಪ್ರಯೋಜನವಾಗಲಿಲ್ಲ, ದೇಶದ ಬಡ ಜನರ ಬದುಕು ಇನ್ನೂ ಬದಲಾಗಿಲ್ಲ, ದಿನದಿಂದ ದಿನಕ್ಕೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ” ಎಂದು. ಪರಿಸ್ಥಿತಿ ಹೀಗಿರುವಾಗ ‘ಮೋದಿ ಜಪ’ ಬೇಕೇ?

ಹೌದು…, ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ನೂರಾರು ರಾಜಕೀಯ ಪಕ್ಷಗಳಿವೆ, ಲಕ್ಷಾಂತರ ನಾಯಕರಿದ್ದಾರೆ. ಈ ಪೈಕಿ ಹೆಚ್ಚಿನವರು ಭ್ರಷ್ಟಾಚಾರಿಗಳು! ಆದರೆ, ನಮ್ಮ ಪ್ರಧಾನಿಯವರ ಹೆಸರಿನಲ್ಲಿ ಭ್ರಷ್ಟಾಚಾರದ ಯಾವುದೇ ‘ಕಪ್ಪುಚುಕ್ಕೆ’ ಇಲ್ಲ! ಕಳಂಕರಹಿತವಾಗಿ ಆಡಳಿತ ನಡೆಸುತ್ತಿರುವುದೇ ಮಹಾ ಪುಣ್ಯ.

ಈ ಭೂಮಿಯಲ್ಲಿ ಯಾವುದೇ ವ್ಯಕ್ತಿ ಸಾಧನೆ ಮಾಡುತ್ತಾ ಎತ್ತರಕ್ಕೆ ಬೆಳೆಯುತ್ತಿದ್ದಂತೆ, ಆತನ ಸುತ್ತ ಶತ್ರುಗಳ ಸಂಖ್ಯೆಯೂ ಬೆಳೆಯುತ್ತದೆ. ಕಾಲಳೆಯುವವರ ಸಂಖ್ಯೆಯೂ ಹೆಚ್ಚಾಗುತ್ತದೆ, ಎಲ್ಲೆಡೆಯೂ ಬೊಗಳುವ ಸದ್ದು ಕೇಳಿಸುತ್ತದೆ. ಆದರೂ ನಮ್ಮ ಮೋದಿಜೀಯವರು ರಾಜಕೀಯದಲ್ಲಿ ‘ಸಿಂಹ’ದಂತೆ ಮುನ್ನುಗ್ಗುತ್ತಿದ್ದಾರೆ. ದೇಶದ ಕೆಲವು ವಿರೋಧ ಪಕ್ಷದ ನಾಯಕರೂ ಸಹ ಇವರ ಸಾಧನೆಗೆ ಜೈ ಎನ್ನುತ್ತಿದ್ದಾರೆ!

ಈಗ ಮೋದಿಜೀಯವರ ‘ವಯಸ್ಸನ್ನು’ ಲೆಕ್ಕ ಹಾಕಿ, ಕೆಲವರು ಅವರನ್ನು ಪ್ರಧಾನಿ ಕುರ್ಚಿಯಿಂದ ಇಳಿಸುವ ಕನಸು ಕಾಣುತ್ತಿದ್ದಾರೆ. ಆದರೆ, ಈ ಕಮಲ ಪಕ್ಷದಲ್ಲಿ ಹಲವು ‘ಮೋದಿ’ಗಳಿದ್ದಾರೆ! ಒಬ್ಬರಿಗಿಂತ ಮತ್ತೊಬ್ಬರು ಪ್ರಭಾವಶಾಲಿಗಳು. ಆದ್ದರಿಂದ ಮೋದಿಜೀಯವರು ಇನ್ನೂ ಹಲವು ವರ್ಷಗಳ ಕಾಲ ಸುಖವಾಗಿ ಆಡಳಿತ ನಡೆಸಲಿ. ಶತ್ರು ರಾಷ್ಟ್ರಗಳು ಬಾಲ ಬಿಚ್ಚದಂತೆ ಅಡಗಿ ಕುಳಿತುಕೊಳ್ಳಲಿ! ದೇಶದ ಅಭಿವೃದ್ಧಿಯ ಯಾತ್ರೆಯೂ ಹೀಗೆಯೇ ಸಾಗಲಿ ಎಂದು ಪ್ರತಿಯೊಬ್ಬ ಭಾರತೀಯನೂ ಮನಸಾರ ಹಾರೈಸೋಣ.

ಕೊನೆಯದಾಗಿ, ಮೋದಿಜೀಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಪ್ರೀತಿಯ ಬೆಳಕಿನೊಂದಿಗೆ ಸಲ್ಲಿಸೋಣ!

ಹ್ಯಾಪಿ ಬತ೯ ಡೇ ಮೋದಿಜೀ..!!

ಬರಹ: ಐಗೂರು ಮೋಹನ್ ದಾಸ್ ಜಿ.
ಸೋಮವಾರಪೇಟೆ, ಕೊಡಗು.
9483111096.

Leave a Comment

Your email address will not be published. Required fields are marked *

Scroll to Top