
ಪ್ರಿಯ ಓದುಗರೇ,
ಕೆಲವೊಂದು ಸಲ ಹೇಳದೇ ಉಳಿದ ಮಾತುಗಳು ಮನಸಿನೊಳಗೆ ಒಂದು ತಣ್ಣನೆಯ ಕೋಟಡಿಯನ್ನು ಸೃಷ್ಟಿಸಿ, ಬಾಗಿಲು ಹಾಕಿಬಿಡುತ್ತವೆ. ಆ ಬಾಗಿಲು ಸದಾ ಬಡಿಯುತ್ತಿರುತ್ತದೆ! ಹೊರಗೆ ಬರಲು ಯತ್ನಿಸುತ್ತಿರುತ್ತದೆ. ಆದರೆ ಅದು ಬರುವ ಹೊತ್ತಿನಲ್ಲಿ, ಎಲ್ಲವೂ ಮುಗಿದು ಹೋಗಿರುತ್ತದೆ.
ಟೀಚರ್‌ಗೆ “ನೀವು ಬೆಸ್ಟ್ ಟೀಚರ್” ಎಂದು ಹೇಳಬೇಕಿತ್ತು. ಶಾಲೆಯ ಕೊನೆಯ ದಿನ ಎಲ್ಲರೂ ಸಹಿ ಪಡೆದು ಹೊರಟುಹೋದರು. ಆ ಒಂದು ಮಾತು ಗಂಟಲಿನಲ್ಲಿಯೇ ಉಳಿಯಿತು! ವರ್ಷಗಳು ಕಳೆದವು. ಆ ಟೀಚರ್ ಎಲ್ಲಿ ಹೋದರೋ ಗೊತ್ತಿಲ್ಲ. ಇಂದು ಆ ಮಾತು ಹೇಳಲು ಅವರೇ ಇಲ್ಲ.
ಅಪ್ಪನಿಗೆ “ನೀನೇ ವಂಡರ್‌ಫುಲ್ ಅಪ್ಪಾ” ಎಂದು ಹೇಳಬೇಕಿತ್ತು. ಅಪ್ಪ ಇಡೀ ಜೀವನ ಬೆವರು ಸುರಿಸಿ ದುಡಿದ. ನಮ್ಮನ್ನು ಸಾಕಿದ. ಶಾಲೆಗೆ ಕಳಿಸಿದ. ಆದರೆ ಒಮ್ಮೆಯೂ ನಾವು ಅವನಿಗೆ “ನೀನೇ ವಂಡರ್‌ಫುಲ್ ಅಪ್ಪಾ” ಎಂದು ಹೇಳಲಿಲ್ಲ. “ಅಪ್ಪಂಗೆ ಗೊತ್ತಿರುತ್ತೆ” ಎಂಬ ಒಂದೇ ಭ್ರಮೆ! ಅಪ್ಪ ಈಗ ವಯಸ್ಸಾಗಿ, ಮಂಚದ ಮೇಲೆ ಮಲಗಿದ್ದಾನೆ. ಆ ಮಾತು ಹೇಳಲು ಸಮಯವಿದೆ. ಆದರೆ ಇಂದಿಗೂ ಹೇಳಲಾಗುತ್ತಿಲ್ಲ.
ಹೆಂಡತಿಗೆ “ನೀನೇ ವಂಡರ್‌ಫುಲ್ ಹೆಂಡತಿ” ಎಂದು ಹೇಳಬೇಕಿತ್ತು. ಮದುವೆಯಾಗಿ ಇಪ್ಪತ್ತು ವರ್ಷಗಳಾದವು! ಆಕೆ ಪ್ರತಿದಿನ ಬೆಳಗ್ಗೆ ಎದ್ದು ಕಾಫಿ ಮಾಡುತ್ತಾಳೆ. ಮಕ್ಕಳಿಗೆ ಡಬ್ಬಿ ಕಟ್ಟುತ್ತಾಳೆ. ಮನೆಯ ಎಲ್ಲಾ ಜವಾಬ್ದಾರಿ ಹೊತ್ತಿದ್ದಾಳೆ. ಆದರೆ ಒಮ್ಮೆಯೂ ನಾವು ಆಕೆಗೆ “ನೀನೇ ವಂಡರ್‌ಫುಲ್ ಹೆಂಡತಿ” ಎಂದು ಹೇಳಿಲ್ಲ. ಕಾರಣ? ದೈನಂದಿನ ಜೀವನದ ಒತ್ತಡ. “ಆಕೆಗೆ ಗೊತ್ತಿರಬಹುದು” ಎಂಬ ಸಮಜಾಯಿಷಿ. ಆ ಒಂದು ಮಾತು ಹೇಳಿದರೆ ಆಕೆಯ ಮುಖ ಎಷ್ಟು ಅರಳುತ್ತದೆ ಎಂಬುದನ್ನು ಎಂದೂ ಯೋಚಿಸಿಲ್ಲ.
ಪ್ರಿಯತಮೆಗೆ “ಐ ಲವ್ ಯೂ” ಎಂದು ಹೇಳಬೇಕಿತ್ತು. ಆದರೆ ಹೇಳಲಿಲ್ಲ! ಆ ಪ್ರೀತಿ ಎಂಬ ಒಂದು ದೋಣಿ ನಡು ಸಮುದ್ರದಲ್ಲಿ ನಿಂತಿತ್ತು. ಯಾವ ದಡಕ್ಕೆ ಈ ದೋಣಿಯನ್ನು ಮುನ್ನಡೆಸಬೇಕು ಎಂಬ ಗೊಂದಲ. ಆ ಗೊಂದಲದಲ್ಲಿಯೇ ಸಮಯ ಕಳೆಯಿತು. ಕಾಲ ಬದಲಾಯಿತು. ಗಾಳಿಯ ದಿಕ್ಕು ಬದಲಾಯಿತು. ಆ ದೋಣಿ ಇಂದಿಗೂ ನಡು ಸಮುದ್ರದಲ್ಲಿಯೇ ಅಲುಗಾಡುತ್ತಿದೆ. ದಡ ಎಲ್ಲಿ ಎಂಬುದೂ ಗೊತ್ತಿಲ್ಲ, ಮತ್ತೆ ಆರಂಭಕ್ಕೆ ಮರಳುವ ದಾರಿಯೂ ಗೊತ್ತಿಲ್ಲ.

ನಾವೆಲ್ಲರ ಎದೆಯಲ್ಲೂ ಇಂತಹ ಒಂದೊಂದು ಕೋಟಡಿಗಳಿವೆ! ಆ ಕೋಟಡಿಯ ಬಾಗಿಲುಗಳು ಸದಾ ಬಡಿಯುತ್ತಿರುತ್ತವೆ. ಒಳಗಿನ ಮಾತುಗಳು ಹೊರಗೆ ಬರಲು ಪ್ರಯತ್ನಿಸುತ್ತಿರುತ್ತವೆ. ಆದರೆ ನಾವು ಆ ಬಾಗಿಲನ್ನು ತೆರೆಯುವುದಿಲ್ಲ. ಭಯ, ಸಂಕೋಚ, ಗರ್ವ, “ಸಮಯ ಸರಿ ಇರಲಿಲ್ಲ” ಎಂಬ ಸಬೂಬು. ನೂರಾರು ಕಾರಣಗಳು!
ಆದರೆ ಒಂದು ಸತ್ಯ ಇದೆ. ಆ ಬಾಗಿಲನ್ನು ನಾವು ತೆರೆಯದಿದ್ದರೂ, ಒಂದು ದಿನ ಜೀವನವೇ ಅದನ್ನು ತೆರೆಸುತ್ತದೆ. ಆ ದಿನ, ಆ ಮಾತು ಕೇಳಬೇಕಾದವರು ಅಲ್ಲಿ ಇರುವುದಿಲ್ಲ! ಟೀಚರ್ ಹೋಗಿರುತ್ತಾರೆ, ಅಪ್ಪ ಹೋಗಿರುತ್ತಾನೆ, ಹೆಂಡತಿಯ ಎದೆಯಲ್ಲಿ ನಮ್ಮ ಬಗ್ಗೆ ಪ್ರೀತಿ ಬತ್ತಿ ಹೋಗಿರುತ್ತದೆ, ಪ್ರಿಯತಮೆ ಬೇರೊಬ್ಬರ ಜೊತೆ ಸಂಸಾರ ಶುರು ಮಾಡಿರುತ್ತಾಳೆ.
ಆಗ ಎದೆಯಲ್ಲಿ ಇರುವ ಆ ಒಂದು ಮಾತು ನಮ್ಮನ್ನೇ ಸುಡಲು ಶುರು ಮಾಡುತ್ತದೆ. ರಾತ್ರಿಯ ನಿಶ್ಶಬ್ದದಲ್ಲಿ ಎಚ್ಚರಿಸುತ್ತದೆ. ಕಣ್ಣಂಚಲ್ಲಿ ನೀರು ತರಿಸುತ್ತದೆ. “ಆವಾಗ ಹೇಳಿದ್ದರೆ ಚೆನ್ನಾಗಿತ್ತು” ಎಂಬ ವಿಷಾದ ಜೀವಮಾನ ಪೂರ್ತಿ ಬೆನ್ನಿಗೆ ಅಂಟಿಕೊಳ್ಳುತ್ತದೆ.
ಪ್ರಿಯ ಓದುಗರೇ, ಜೀವನ ಬಹಳ ಚಿಕ್ಕದು! ನಾಳೆ ಎಂಬುದು ಯಾರಿಗೂ ಖಾತರಿ ಇಲ್ಲ. ಇಂದಿನ ಈ ಕ್ಷಣ ಮಾತ್ರ ನಮ್ಮದು. ನಿಮ್ಮ ಎದೆಯಲ್ಲಿರುವ ಆ ತಣ್ಣನೆಯ ಕೋಟಡಿಯ ಬಾಗಿಲನ್ನು ಇಂದೇ ತೆರೆಯಿರಿ. ಆ ಮಾತನ್ನು ಹೊರಗೆ ಬಿಡಿ.

ಟೀಚರ್‌ಗೆ ಫೋನ್ ಮಾಡಿ “ನೀವು ನನ್ನ ಜೀವನದ ಬೆಸ್ಟ್ ಟೀಚರ್” ಎಂದು ಹೇಳಿಬಿಡಿ. ಅಪ್ಪನ ಕೈ ಹಿಡಿದು “ಅಪ್ಪಾ, ನೀನೇ ವಂಡರ್‌ಫುಲ್ ಅಪ್ಪಾ” ಎಂದು ಹೇಳಿಬಿಡಿ. ಹೆಂಡತಿಯ ಕಣ್ಣಲ್ಲಿ ಕಣ್ಣಿಟ್ಟು “ನೀನೇ ವಂಡರ್‌ಫುಲ್ ಹೆಂಡತಿ” ಎಂದು ಹೇಳಿಬಿಡಿ. ಪ್ರಿಯತಮೆಗೆ ಅಥವಾ ಪ್ರಿಯತಮನಿಗೆ “ಐ ಲವ್ ಯೂ” ಎಂದು ಹೇಳಿ ಆ ಪ್ರೀತಿಯ ದೋಣಿಗೆ ಒಂದು ದಿಕ್ಕು ಕೊಡಿ.
ಆ ಮಾತು ಹೇಳಿಬಿಟ್ಟರೆ ಎದೆ ಹಗುರವಾಗುತ್ತದೆ! ಆ ಕೋಟಡಿಯ ಬಾಗಿಲು ತೆರೆದುಕೊಳ್ಳುತ್ತದೆ. ಬೆಳಕು ಒಳಗೆ ಬರುತ್ತದೆ! ಒಂದು ಬಿಡುಗಡೆ ಸಿಗುತ್ತದೆ!
ಇಲ್ಲದಿದ್ದರೆ, ಆ ಬಾಗಿಲು ಜೀವಮಾನ ಪೂರ್ತಿ ಬಡಿಯುತ್ತಲೇ ಇರುತ್ತದೆ. ಒಂದು ದಿನ ಬಡಿಯುವುದೂ ನಿಂತು ಹೋಗುತ್ತದೆ. ಆ ಮಾತು ಅಲ್ಲಿಯೇ ಸತ್ತು ಹೋಗುತ್ತದೆ! ನಿಮ್ಮ ಜೊತೆಗೇ ಮಣ್ಣಾಗುತ್ತದೆ!
ಇಂದು ರಾತ್ರಿ ಮಲಗುವ ಮೊದಲು ಒಂದು ಕ್ಷಣ ಕಣ್ಣು ಮುಚ್ಚಿ ಯೋಚಿಸಿ. ನಿಮ್ಮ ಎದೆಯಲ್ಲಿ ಇರುವ ಆ ಒಂದು ಮಾತು ಯಾವುದು? ಅದನ್ನು ಹೇಳಬೇಕಾದವರು ಯಾರು? ಆ ಬಾಗಿಲನ್ನು ತೆರೆಯುವ ಧೈರ್ಯ ನಿಮಗಿದೆಯೇ?
ನಾಳೆ ಬೆಳಗ್ಗೆ ಎದ್ದ ತಕ್ಷಣ ಆ ಮಾತನ್ನು ಹೇಳಿಬಿಡಿ! ಒಂದೇ ಒಂದು ಫೋನ್ ಕರೆ, ಒಂದೇ ಒಂದು ಸಂದೇಶ, ಒಂದೇ ಒಂದು ಆಲಿಂಗನ, ಒಂದೇ ಒಂದು ಮುಗುಳ್ನಗು ಸಾಕು.
ಜೀವನ ಬಹಳ ಚಿಕ್ಕದು. ಮಾತು ಹೇಳಲು ಸಮಯ ಸಾಲದು!
ಈ ಲೇಖನ ಓದಿ ನಿಮ್ಮ ಎದೆಯಲ್ಲಿ ಒಂದು ಮಾತು ನೆನಪಿಗೆ ಬಂತೇ? ಆ ಮಾತು ಯಾವುದು, ಯಾರಿಗೆ ಹೇಳಬೇಕು ಎಂಬುದನ್ನು ಕೆಳಗಿನ ಪ್ರತಿಕ್ರಿಯೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಕಥೆ ಇನ್ನೊಬ್ಬರಿಗೆ ತಮ್ಮ ಮಾತನ್ನು ಹೇಳಲು ಪ್ರೇರಣೆಯಾಗಬಹುದು.
ಓಯಾಸಿಸ್, ಕಾವೇರಿಯ ಮಡಿಲಲ್ಲಿ ಹೊರಡುವ ಕನ್ನಡ ಪತ್ರಿಕೆ. ಕಾವೇರಿಯ ದಡದಿಂದ, ಕನ್ನಡಿಗರ ಮನೆಮನೆಗೆ.
ಬರಹ : ಸಂತೋಷ್‌ಕುಮಾರ್ ತಂಗವೇಲು

