ಮನದ ಪಿಸುಮಾತು!

ಆ ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಬರಲಿಲ್ಲ.
ಕಿಟಕಿಯ ಆಚೆ ಮಳೆ ಸುರಿಯುತ್ತಿತ್ತು. ಹೆಂಚಿನ ಮೇಲೆ ಬೀಳುವ ಹನಿಗಳ ಸದ್ದು, ದೂರದಲ್ಲಿ ಎಲ್ಲೋ ಬೊಗಳುವ ನಾಯಿ, ಗಾಳಿಗೆ ತೂಗುವ ಮರದ ಎಲೆಗಳ ಪಿಸುಗುಟ್ಟುವಿಕೆ. ಈ ಎಲ್ಲದರ ನಡುವೆ ನನ್ನ ಮನಸ್ಸು ಮಾತ್ರ ಮೌನವಾಗಿ ಕುಳಿತಿತ್ತು. ನಾವು ಎಷ್ಟೋ ಬಾರಿ ಜಗತ್ತಿನ ಸದ್ದುಗಳ ನಡುವೆ ಸಿಕ್ಕಿ, ನಮ್ಮ ಮನಸ್ಸು ಏನು ಹೇಳುತ್ತಿದೆ ಎಂಬುದನ್ನೇ ಕೇಳಿಸಿಕೊಳ್ಳುವುದನ್ನು ಮರೆತುಬಿಡುತ್ತೇವೆ. ಆ ರಾತ್ರಿ ಮೊದಲ ಬಾರಿಗೆ ನನ್ನ ಮನಸ್ಸು ನನ್ನೊಂದಿಗೆ ಪಿಸುಮಾತಾಡಿತು!

ಬದುಕು ಒಂದು ವಿಚಿತ್ರ ಪಯಣ. ನಾವು ಎಷ್ಟೆಲ್ಲಾ ಓಡುತ್ತೇವೆ, ಎಷ್ಟೆಲ್ಲಾ ಗಳಿಸುತ್ತೇವೆ, ಎಷ್ಟೆಲ್ಲಾ ಕಳೆದುಕೊಳ್ಳುತ್ತೇವೆ! ಆದರೆ ದಿನದ ಕೊನೆಯಲ್ಲಿ, ಎಲ್ಲರೂ ಮಲಗಿದ ಮೇಲೆ, ಆ ನಿಶ್ಶಬ್ದದ ಗಳಿಗೆಯಲ್ಲಿ ಮನಸ್ಸು ಕೇಳುತ್ತದೆ ನೀನು ಸುಖವಾಗಿದ್ದೀಯಾ. ಈ ಪ್ರಶ್ನೆಗೆ ಉತ್ತರ ಹೇಳಲಾಗದ ಸಂಕಟದಲ್ಲಿ ಎಷ್ಟೋ ಜನ ಒಳಗೊಳಗೇ ನರಳುತ್ತಿರುತ್ತಾರೆ, ಹೊರಗೆ ನಗುತ್ತಾ ಒಳಗೆ ಕಣ್ಣೀರು ಸುರಿಸುತ್ತಿರುತ್ತಾರೆ. ಅಂತಹ ಎಲ್ಲರಿಗಾಗಿ ಈ ಅಂಕಣ.

ನೆನಪಿದೆಯೇ, ಬಾಲ್ಯದಲ್ಲಿ ನಾವು ಎಷ್ಟು ಸಣ್ಣ ಸಣ್ಣ ವಿಷಯಗಳಿಗೆ ಸಂತೋಷಪಡುತ್ತಿದ್ದೆವು! ಮಳೆಯಲ್ಲಿ ಕಾಗದದ ದೋಣಿ ಬಿಟ್ಟು, ಮಾವಿನ ಮರ ಹತ್ತಿ, ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುತ್ತಿದ್ದ ದಿನಗಳು. ಆಗ ನಮ್ಮ ಬಳಿ ಏನೂ ಇರಲಿಲ್ಲ, ಆದರೆ ಎಲ್ಲವೂ ಇತ್ತು. ಈಗ ನಮ್ಮ ಬಳಿ ಎಲ್ಲವೂ ಇದೆ, ಆದರೆ ಆ ನೆಮ್ಮದಿ ಮಾತ್ರ ಎಲ್ಲೋ ಕಳೆದುಹೋಗಿದೆ. ದೊಡ್ಡವರಾಗುವುದೆಂದರೆ ಬಹುಶಃ ಇದೇ ಇರಬೇಕು ಕೈತುಂಬಾ ಗಳಿಸುತ್ತಾ, ಎದೆತುಂಬಾ ಕಳೆದುಕೊಳ್ಳುವುದು!

ನಾನು ಕಂಡ ಎಷ್ಟೋ ಜನ ಬದುಕಿನ ಭಾರವನ್ನು ಒಬ್ಬಂಟಿಯಾಗಿ ಹೊತ್ತು ನಡೆದವರು. ತಂದೆ ತೀರಿಕೊಂಡ ಮೇಲೆ ಕುಟುಂಬದ ಹೊಣೆ ಹೊತ್ತ ಹಿರಿಯ ಮಗ, ಗಂಡ ಬಿಟ್ಟುಹೋದ ಮೇಲೆ ಮಕ್ಕಳನ್ನು ಸಾಕಲು ಹಗಲಿರುಳು ದುಡಿದ ತಾಯಿ, ಪ್ರೀತಿಸಿದವಳು ಬೇರೆಯವರ ಕೈಹಿಡಿದ ಮೇಲೆ ಮೌನವಾಗಿ ನೋವನ್ನು ನುಂಗಿಕೊಂಡ ಯುವಕ. ಇವರೆಲ್ಲರ ಎದೆಯೊಳಗೆ ಎಷ್ಟೊಂದು ಕಥೆಗಳಿವೆ! ಆದರೆ ಯಾರೂ ಕೇಳುವುದಿಲ್ಲ. ಈ ಜಗತ್ತಿಗೆ ಗೆದ್ದವರ ಕಥೆ ಬೇಕು, ಸೋತವರ ಕಣ್ಣೀರು ಯಾರಿಗೆ ಬೇಕು. ಆದರೆ ನನಗನಿಸುತ್ತದೆ, ನಿಜವಾದ ಕಥೆಗಳಿರುವುದೇ ಆ ಕಣ್ಣೀರಿನಲ್ಲಿ.

ಈ ಅಂಕಣದಲ್ಲಿ ನಾನು ದೊಡ್ಡ ದೊಡ್ಡ ಉಪದೇಶಗಳನ್ನು ಕೊಡಲು ಬಂದಿಲ್ಲ. ನಾನೂ ನಿಮ್ಮಂತೆಯೇ ಒಬ್ಬ ಮನುಷ್ಯ. ನಾನೂ ಎಡವಿದ್ದೇನೆ, ಬಿದ್ದಿದ್ದೇನೆ, ಅತ್ತಿದ್ದೇನೆ, ಮತ್ತೆ ಎದ್ದು ನಡೆದಿದ್ದೇನೆ. ಇಲ್ಲಿ ನಾನು ಹಂಚಿಕೊಳ್ಳುವುದೆಲ್ಲಾ ನನ್ನ ಮನಸ್ಸಿನ ಪಿಸುಮಾತುಗಳು. ಕೆಲವೊಮ್ಮೆ ಅವು ನಿಮ್ಮ ಮನಸ್ಸಿನ ಮಾತುಗಳೂ ಆಗಿರಬಹುದು. ಆಗ ನಿಮಗನಿಸಬಹುದು ಈ ನೋವು ನನ್ನೊಬ್ಬನದಲ್ಲ, ಇಂತಹ ದಾರಿಯಲ್ಲಿ ನಡೆದವರು ಇನ್ನೂ ಇದ್ದಾರೆ! ಆ ಒಂದು ಭಾವನೆಯೇ ಎಷ್ಟೋ ಬಾರಿ ಬದುಕಿಗೆ ಆಸರೆಯಾಗುತ್ತದೆ.

ಬದುಕಿನಲ್ಲಿ ಎಲ್ಲವೂ ಸರಿಯಿಲ್ಲದಿದ್ದಾಗ, ಎಲ್ಲರೂ ದೂರ ಸರಿದಾಗ, ಕೊನೆಗೆ ಉಳಿಯುವುದು ನಮ್ಮ ಮನಸ್ಸೊಂದೇ. ಆ ಮನಸ್ಸಿನ ಜೊತೆ ಮಾತಾಡಲು ಕಲಿತರೆ, ಜಗತ್ತೇ ಬಿಟ್ಟುಹೋದರೂ ನಾವು ಒಂಟಿಯಾಗುವುದಿಲ್ಲ. ಮಳೆ ನಿಂತ ಮೇಲೆ ಆಕಾಶ ಸ್ವಚ್ಛವಾಗುವಂತೆ, ಕಣ್ಣೀರು ಬತ್ತಿದ ಮೇಲೆ ಮನಸ್ಸೂ ಹಗುರವಾಗುತ್ತದೆ. ಆ ಹಗುರವಾದ ಗಳಿಗೆಯಲ್ಲಿ ನಿಮ್ಮ ಮನಸ್ಸು ಏನು ಹೇಳುತ್ತಿದೆ ಎಂಬುದನ್ನು ಒಮ್ಮೆ ಕೇಳಿಸಿಕೊಳ್ಳಿ.

ಬನ್ನಿ, ಈ ದಾರಿಯಲ್ಲಿ ಒಟ್ಟಿಗೆ ನಡೆಯೋಣ! ನಿಮ್ಮ ಮನದ ಪಿಸುಮಾತುಗಳಿಗೂ ಇಲ್ಲಿ ಜಾಗವಿದೆ.

ಬರಹ: ಸಂತೋಷ್‌ಕುಮಾರ್ ತಂಗವೇಲು

Leave a Comment

Your email address will not be published. Required fields are marked *

Scroll to Top