ಒಂದು ಕನ್ನಡಕ! ಒಂದು ತೆಳು ಬಟ್ಟೆ! ಇಡೀ ದೇಶ!!

ಪ್ರಿಯ ಓದುಗರೇ, ಇವತ್ತು ಅಕ್ಟೋಬರ್ ಎರಡು!

ಶಾಲೆಗೆ ರಜೆ! ಬ್ಯಾಂಕಿಗೆ ರಜೆ! ಆಫೀಸಿಗೆ ರಜೆ!

ಆದರೆ ಒಂದು ಪ್ರಶ್ನೆ ನನ್ನ ಎದೆಯೊಳಗೆ ಪ್ರತಿ ವರ್ಷ ಇದೇ ದಿನ ಮೂಡುತ್ತದೆ. ಗಾಂಧಿ ಅಂದರೆ ಬರೀ ಒಂದು ರಜಾ ದಿನವೇ ನಮಗೆ?

ಒಂದು ಪುಟ್ಟ ಕಥೆ ಹೇಳುತ್ತೇನೆ ಕೇಳಿ.

ನನ್ನ ಅಪ್ಪ ಬದುಕಿದ್ದಾಗ ಒಂದು ಸಣ್ಣ ಕನ್ನಡಕ ಇಟ್ಟುಕೊಂಡಿದ್ದರು. ಗಾಜು ಬಿರುಕಿತ್ತು. ಹಲವು ಸಲ ಹೇಳಿದೆ, “ಅಪ್ಪ, ಹೊಸ ಕನ್ನಡಕ ತೊಗೊಳ್ಳಿ” ಎಂದು. ಅವರು ನಕ್ಕು, “ಬೇಡ ಕಣೋ, ಇದು ನನ್ನ ಜೊತೆ ಬಾಳಿದೆ” ಎನ್ನುತ್ತಿದ್ದರು.

ಅಪ್ಪ ವಸ್ತುವಿಗೆ ಅಂಟಿಕೊಂಡಿರಲಿಲ್ಲ. ಅವರು ಹಿಡಿದಿದ್ದು ಒಂದು ಮೌಲ್ಯ! ಇರುವುದರಲ್ಲಿ ಬಾಳುವ ಕಲೆ!

ಅದೇ ಕಲೆ ಅಲ್ಲವೇ ಗಾಂಧಿ ಬದುಕಿದ್ದು.

ಒಬ್ಬ ಮನುಷ್ಯ!ಒಂದು ತೆಳುವಾದ ಪಂಚೆ! ಒಂದು ಕನ್ನಡಕ! ಒಂದು ಕೋಲು! ಇಷ್ಟೇ ಆಸ್ತಿ ಹಿಡಿದುಕೊಂಡು ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಅಲುಗಾಡಿಸಿದರು!

ಇದನ್ನು ನಾವು ಇತಿಹಾಸದ ಪಾಠವಾಗಿ ಓದುತ್ತೇವೆ. ಆದರೆ ಇದೊಂದು ಪಾಠವಲ್ಲ . ಇದೊಂದು ಬೀಜ.

ಬೆಟ್ಟ ದೊಡ್ಡದಾಗಿ ನಿಲ್ಲುವುದು ಒಂದೇ ಬಂಡೆಯಿಂದ ಅಲ್ಲ. ಮಣ್ಣಿನ ಪ್ರತಿ ಕಣ, ಮಳೆಯ ಪ್ರತಿ ಹನಿ, ಬೇರಿನ ಪ್ರತಿ ಎಳೆ ಒಂದಾಗಿ ಬೆಟ್ಟ ಆಗುತ್ತದೆ.

ಗಾಂಧಿಯೂ ಹಾಗೆಯೇ. ಒಬ್ಬ ಮನುಷ್ಯ ಅಲ್ಲ. ಲಕ್ಷಾಂತರ ಜನರ ಸಣ್ಣ ಸಣ್ಣ ಧೈರ್ಯಗಳು ಸೇರಿ ಕಟ್ಟಿದ ಒಂದು ಬೆಟ್ಟ!

ಆದರೆ ಇವತ್ತು ಆ ಬೆಟ್ಟದ ಮೇಲೆ ಮಂಜು ಕವಿದಂತೆ ಅನಿಸುವುದಿಲ್ಲವೇ ನಿಮಗೆ?

ಸತ್ಯ ಹೇಳೋಕೆ ಹೆದರುತ್ತೇವೆ! ಅಹಿಂಸೆ ಎಂದರೆ ದುರ್ಬಲತೆ ಎಂದು ನಗುತ್ತೇವೆ! ಸರಳತೆ ಎಂದರೆ ಹಳೆಯ ಕಾಲದ ಮಾತು ಎಂದು ಮೂಲೆಗೆ ತಳ್ಳುತ್ತೇವೆ!

ಗಾಂಧಿ ಫೋಟೋ ನೋಟಿನ ಮೇಲೆ ಇದೆ. ಆದರೆ ಗಾಂಧಿ ಮೌಲ್ಯ ಜೇಬಿನಿಂದ ಯಾವಾಗಲೋ ಜಾರಿ ಬಿದ್ದಿದೆ!

ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ ಪ್ರಿಯ ಓದುಗರೇ. ಕೊನೆಯ ಸಲ ಯಾವಾಗ ಒಂದು ಸಣ್ಣ ಸತ್ಯಕ್ಕಾಗಿ ನಿಂತಿರಿ? ಕೊನೆಯ ಸಲ ಯಾವಾಗ ಕೋಪ ಬಂದರೂ ಕೈ ಎತ್ತದೆ, ಮಾತೂ ಕಠಿಣವಾಗದಂತೆ ಇದ್ದಿರಿ?

ನೆನಪಿಲ್ಲ ಅಲ್ಲವೇ. ನನಗೂ ಇಲ್ಲ!

ಶಿಶಿರ ಬಂದಾಗ ಮರದ ಎಲೆ ಉದುರುತ್ತದೆ. ಆದರೆ ಬೇರು ಸಾಯುವುದಿಲ್ಲ. ಮಣ್ಣಿನ ಆಳದಲ್ಲಿ ಅದು ಕಾಯುತ್ತಿರುತ್ತದೆ, ವಸಂತಕ್ಕಾಗಿ!

ಗಾಂಧಿ ಮೌಲ್ಯಗಳೂ ಹಾಗೆಯೇ. ಸತ್ತಿಲ್ಲ. ಬರೀ ಮಣ್ಣಿನಾಳದಲ್ಲಿ ಕಾಯುತ್ತಿವೆ. ಯಾರಾದರೂ ನೀರು ಹಾಕಬೇಕಷ್ಟೇ!

ಆ ಯಾರಾದರೂ ನೀವೇ ಆಗಬಹುದಲ್ಲವೇ!

ದೊಡ್ಡ ಕ್ರಾಂತಿ ಬೇಡ ಪ್ರಿಯ ಓದುಗರೇ. ಇವತ್ತು ಒಂದು ಸಣ್ಣ ಕೆಲಸ ಮಾಡಿ. ಮನೆಯಲ್ಲಿ ಹಿರಿಯರಿಗೆ ಒಂದು ಮಾತು ಸುಳ್ಳು ಹೇಳಬೇಡಿ . ದಾರಿಯಲ್ಲಿ ಒಬ್ಬ ಬಡವನನ್ನು ಗೌರವದಿಂದ ನೋಡಿ. ಕೋಪ ಬಂದಾಗ ಒಂದು ಕ್ಷಣ ಉಸಿರು ಬಿಗಿಹಿಡಿಯಿರಿ.

ಇಷ್ಟೇ ಸಾಕು! ಬೆಟ್ಟ ಒಂದೇ ದಿನಕ್ಕೆ ಆಗಲಿಲ್ಲ! ಆದರೆ ಪ್ರತಿ ಕಣವೂ ಮುಖ್ಯ!

ಇವತ್ತು ಆ ಕನ್ನಡಕ, ಆ ಕೋಲು, ಆ ತೆಳು ಪಂಚೆಯನ್ನು ಒಮ್ಮೆ ಮನಸ್ಸಿನಲ್ಲಿ ನೆನೆಯಿರಿ. ಮತ್ತು ಕೇಳಿಕೊಳ್ಳಿ, ನಾನು ಇಂದು ಅವರ ಬೆಟ್ಟಕ್ಕೆ ಒಂದು ಕಣ ಸೇರಿಸಿದೆನಾ ಎಂದು.

ಬರಹ : ಸಂತೋಷ್‌ಕುಮಾರ್ ತಂಗವೇಲು

Leave a Comment

Your email address will not be published. Required fields are marked *

Scroll to Top