ವೀರಾಜಪೇಟೆಯ ಬೀದಿಗಳಲ್ಲಿ ಶಾಂತಿಯ ಮೆರವಣಿಗೆ; ಪ್ರವಾದಿಯ ಸಂದೇಶ ಮತ್ತೊಮ್ಮೆ ಮೊಳಗಿತು!

ವೀರಾಜಪೇಟೆ ಪಟ್ಟಣ ಶನಿವಾರ ಒಂದು ಬೇರೆಯೇ ಬಣ್ಣ ತೊಟ್ಟಿತ್ತು. ಬೀದಿಗಳಲ್ಲಿ ಜನಸಾಗರ. ಬಿಳಿ ಬಟ್ಟೆಯ ಸಾಲು ಸಾಲು ಜನ. ಬ್ಯಾನರ್‌ಗಳು, ಸಂದೇಶದ ಫಲಕಗಳು, ಮಕ್ಕಳ ಕಣ್ಣಲ್ಲಿ ಕುತೂಹಲ, ಹಿರಿಯರ ಮುಖದಲ್ಲಿ ಭಕ್ತಿ. ಅನ್ವಾರುಲ್ ಹುದಾ ಹಾಗೂ ಸುನ್ನಿ ಸಂಘ ಕುಟುಂಬಗಳ ಸಂಯುಕ್ತಾಶ್ರಯದಲ್ಲಿ ನಡೆದ “ಅನುಪಮ ನಾಯಕ ಅನರ್ಘ್ಯ ಸಂದೇಶ” ಬೃಹತ್ ಪ್ರವಾದಿ ಸಂದೇಶ ಜಾಥಾ ಅದು!

ಪಂಜರ್‌ಪೇಟೆಯಿಂದ ಜಾಥಾ ಹೊರಟಾಗ ಒಂದು ಸಣ್ಣ ಗುಂಪಿನಂತೆ ಕಾಣುತ್ತಿತ್ತು. ಆದರೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ, ದೊಡ್ಡಟ್ಟಿ ಜೌಕಿ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ, ಮೀನಮಪೇಟೆ ದಾಟುತ್ತ ಹೋದಂತೆ ಜನ ಸೇರುತ್ತಲೇ ಹೋದರು. ನದಿಗೆ ಉಪನದಿ ಸೇರುವಂತೆ! ವಿದ್ಯಾರ್ಥಿಗಳು, ಯುವಕರು, ಹಿರಿಯರು, ಕುಟುಂಬ ಸಮೇತ ಬಂದ ಜನ. ಪ್ಲವರ್ ಶೋ, ಸ್ಕ್ಯೌಟ್ಸ್ ತಂಡ ಮೆರುಗು ನೀಡಿತು. ಚಾರಿಟಬಲ್ ಟ್ರಸ್ಟ್ ಪತಿಯಂದ ಜಾಥಾ ಸಾರಥಿಗಳಿಗೆ ಸಿಹಿ ತಿಂಡಿ ಹಂಚಿ ಅದ್ಧೂರಿ ಸ್ವಾಗತ ಕೋರಲಾಯಿತು.

ಆದರೆ ಈ ಜಾಥಾದ ನಿಜವಾದ ಶಕ್ತಿ ಬೀದಿಯಲ್ಲಿರಲಿಲ್ಲ; ಮಾತಿನಲ್ಲಿತ್ತು. ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಹಾಗೂ ಅನ್ವಾರ್ ಸಾರಥಿ ಅಶ್ರಫ್ ಅಹ್ಸನಿ ಅವರು ವೇದಿಕೆಯಲ್ಲಿ ನಿಂತು ಹೇಳಿದ ಮಾತು ಸಭೆಯನ್ನು ಮೌನವಾಗಿಸಿತು. ಪ್ರವಾದಿಯವರು ಸಾರಿದ ಮಾರ್ಗ ಸ್ನೇಹದ್ದು, ಸೌಹಾರ್ದತೆಯದ್ದು, ಶಾಂತಿಯದ್ದು; ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಇಸ್ಲಾಂ ಎಂದಿಗೂ ಅಶಾಂತಿಯನ್ನೋ ಭಯೋತ್ಪಾದನೆಯನ್ನೋ ಪ್ರೋತ್ಸಾಹಿಸುತ್ತಿಲ್ಲ, ಅದನ್ನು ಪೂರ್ಣವಾಗಿ ಖಂಡಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

ಈ ಕಾವೇರಿಯ ಮಣ್ಣಿನಲ್ಲಿ ಜಾತಿ ಬೇರೆ ಇರಬಹುದು, ಧರ್ಮ ಬೇರೆ ಇರಬಹುದು. ಆದರೆ ನೋವು ಒಂದೇ, ಕನಸು ಒಂದೇ, ಶಾಂತಿಯ ಬಯಕೆ ಒಂದೇ! ಅಂಥ ಶಾಂತಿಯ ಸಂದೇಶ ಶನಿವಾರ ವೀರಾಜಪೇಟೆಯ ಬೀದಿಗಳಲ್ಲಿ ಮೊಳಗಿತು. ಅದು ಕೇವಲ ಒಂದು ಜಾಥಾ ಆಗಿರಲಿಲ್ಲ; ಒಂದು ಸಮುದಾಯ ಈ ನೆಲಕ್ಕೆ ಕೊಟ್ಟ ಭರವಸೆಯಾಗಿತ್ತು!

ಈ ಸಂದರ್ಭ ಸ್ವಾಗತ ಸಮಿತಿಯ ಚೇರ್ಮನ್ ಸಯ್ಯಿದ್ ಅಹಮದ್ ಮೆಹ್ದಿ ತಂಙಳ್ ಲಕ್ಷದ್ವೀಪ್, ಕನ್ವಿನರ್ ಸಯ್ಯಿದ್ ಶಿಹಾಬ್ ತಂಙಳ್, ಅನ್ವಾರುಲ್ ಹುದಾ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ ಹಾಕತ್ತೂರು, SYS ಜಿಲ್ಲಾಧ್ಯಕ್ಷ ಮುನೀರ್ ಮಳ್ಳರಿ, SJM ಜಿಲ್ಲಾಧ್ಯಕ್ಷ ಅಬ್ದುಲ್ಲಾ ಸಖಾಫಿ, ಕುಂಜಿಲ ಮುದರ್ರಿಸ್ ನಿಯಾಜ್ ಅಹ್ಸನಿ ಕಕ್ಕಡಿಪುರಂ, KMJ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, SYS ಮಾಜಿ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಜ್ ಸಅದಿ,, SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, SSF ಜಿಲ್ಲಾಧ್ಯಕ್ಷರಾದ ಕಮರುದ್ದೀನ್ ಅನ್ವಾರಿ, ಪ್ರಧಾನ ಕಾರ್ಯದರ್ಶಿ ಜುನೈದ್, ರಾಜ್ಯ ಕಾರ್ಯದರ್ಶಿ ಮುಜೀಬ್, ಖಾಸಿಮ್ ತಂಙಳ್, SYS ರಾಜ್ಯ ನಾಯಕರಾದ ಆಹ್ಮದ್ ಮದನಿ, ಸಲಾಂ ಕುಂಜಿಲ, ಅನ್ವಾರ್ ಮುದರ್ರಿಸ್ ಇಸ್ಮಾಯಿಲ್ ಸಖಾಫಿ, ಪ್ರಾಂಶುಪಾಲರಾದ ಅಬ್ದುಲ್ ರಶೀದ್ , ಅನ್ವಾರ್ ಸೌದಿ ಕಾರ್ಯದರ್ಶಿ ಸಂಶುದ್ದೀನ್ ಮುಸ್ಲಿಯಾರ್ ಪರಾಜೆ, ಅನ್ವಾರ್ UAE ಕಾರ್ಯದರ್ಶಿ ಮುಜೀಬ್ ಕಡಂಗ, ಇಬ್ರಾಹಿಂ ಕಲ್ಲುಬಾಣೆ, ಉಮರ್ ಕಲ್ಲುಬಾಣೆ, ನೌಫಲ್ ವಿರಾಜಪೇಟೆ, ನೌಫಲ್ ಸಿದ್ದಾಪುರ, ಇಬ್ರಾಹಿಂ, ಮೀಲಾದ್ ಜಾಥಾದ ಸ್ವಾಗತ ಸಮಿತಿಯ ಖಾಲಿದ್ ಫೈಝಿ ಅಂಬಟ್ಟಿ, ರಝಾಕ್ ಮಿಸ್ಬಾಹಿ ಕಟ್ರಾಕೊಲ್ಲಿ, ಹಂಝ ಮದನಿ ಗುಯ್ಯ, ಸಲಾಂ ಗೋಣಿಕೊಪ್ಪಲ್, ಅಹಮದ್ ಹಾಜಿ, SSF, SYS, KMJ, SJM ಪದಾಧಿಕಾರಿಗಳು ಮುಂತಾದ ಮುಖಂಡರು ಉಪಸ್ಥಿತರಿದ್ದರು.

ವರದಿ: ಓಯಾಸಿಸ್ ಸುದ್ದಿಮನೆ

📧 nammaoasis@gmail.com | 📞 +91 8147424128
🌐 nammaoasis.com

Leave a Comment

Your email address will not be published. Required fields are marked *

Scroll to Top