
ನಾವೆಲ್ಲಾ ಗೆಳೆಯರು ಒಟ್ಟಿಗೇ ಹೊರಡುತ್ತಿದ್ದೆವು. ಇಡೀ ಗುಂಪೇ ಒಂದು ಹಿಂಡು. ಒಬ್ಬ ಇಲ್ಲದೇ ಇನ್ನೊಬ್ಬನಿಗೆ ಆ ದಸರೆ ಅಪೂರ್ಣ. ದಸರಾ ಎಂದರೆ ಗೆಳೆತನದ ಪರ್ವ! ಎದೆಯ ಬಾಂಧವ್ಯದ ಆಚರಣೆ!
ಆಯುಧ ಪೂಜೆಯ ದಿನ ಬಂತೆಂದರೆ ಸಾಕು!ನಮ್ಮ ಊರಿನ ಜೀಪುಗಳು, ಲಾರಿಗಳು, ಎಲ್ಲಾ ವಾಹನಗಳೂ ಬಣ್ಣಬಣ್ಣದ ಹೂಮಾಲೆ ಧರಿಸಿ, ಹೊಸ ವಧುಗಳಂತೆ ಸಿಂಗಾರಗೊಳ್ಳುತ್ತಿದ್ದವು. ಚಾಲಕರ ಮುಖದ ಮೇಲೆ ಒಂದು ವಿಚಿತ್ರವಾದ ಗರ್ವ. ವಾಹನದ ಮುಂಭಾಗಕ್ಕೆ ಕುಂಬಳಕಾಯಿ, ಬಾಳೆ ಎಲೆ, ಮಾವಿನ ತೋರಣ. ಪೂಜಾರಿಗಳ ಘನಗಂಭೀರ ಮಂತ್ರ. ಆ ದೃಶ್ಯವೇ ಒಂದು ಮಿನಿ ಹಬ್ಬ. ಇಡೀ ಊರು, ಬಾಗಿಲಿನಿಂದ ಬಾಗಿಲಿಗೆ, ಅಂಗಡಿಯಿಂದ ಅಂಗಡಿಗೆ, ಒಂದೇ ಶ್ರುತಿಯಲ್ಲಿ ನುಡಿಯುತ್ತಿತ್ತು, ಒಂದೇ ಎದೆಬಡಿತದಲ್ಲಿ ಮಿಡಿಯುತ್ತಿತ್ತು.

.
ಅದೇ ದಿನಗಳ ಇನ್ನೊಂದು ನೆನಪು ಇನ್ನೂ ಎದೆಯಲ್ಲಿ ಹಸಿಯಾಗಿಯೇ ಇದೆ. ನಮ್ಮ ಊರಿನ ಒಬ್ಬ ಅಣ್ಣ cycle race ನಲ್ಲಿ ಮೊದಲ ಬಹುಮಾನ ತಂದ ಆ ದಿನ. ಆ ಆನಂದ ಇತ್ತಲ್ಲ, ಎಷ್ಟು ಬರೆದರೂ ಸಾಲದು! ಇಡೀ ಊರೇ ಒಂದೆಡೆ ಸೇರಿತು. ಅಣ್ಣನನ್ನು ಹೆಗಲ ಮೇಲೆ ಎತ್ತಿಕೊಂಡು ಕುಣಿದೆವು. ಚಿಕ್ಕವರು, ದೊಡ್ಡವರು, ಎಲ್ಲರೂ ಒಟ್ಟಿಗೇ. ಸಿಹಿ ಹಂಚಿದೆವು. ಒಬ್ಬನ ಗೆಲುವು ಇಡೀ ಊರಿನ ಗೆಲುವಾಗಿತ್ತು. ಆಗ ನಮಗೆ ಅರ್ಥವಾಗಿತ್ತು, “ನಾವು” ಎಂಬ ಪದದ ನಿಜವಾದ ತಿರುಳು. ಆ ಒಂದೇ ಪದ ಒಂದಿಡೀ ಊರನ್ನು ಬಂಧಿಸಿತ್ತು.
ನಮಗೆ ದೊಡ್ಡ ಆಸೆಗಳಿರಲಿಲ್ಲ. “ಇದು ಬೇಡ, ಅದು ಬೇಕು” ಎಂಬ ಚಡಪಡಿಕೆಯೇ ಇರಲಿಲ್ಲ. ಇದ್ದದ್ದೊಂದೇ ಗುರಿ , ದಸರಾ !ಗೆಳೆಯರು! ಊರು, ಆ ಬೀದಿಗಳು! ಇಷ್ಟೇ ಸಾಕಾಗಿತ್ತು ಆ ಪುಟ್ಟ ಎದೆಗಳಿಗೆ. ಇಂದಿನ ಮಕ್ಕಳಿಗೆ mobile ಬೇಕು, video game ಬೇಕು. ಆದರೆ ನಮಗೆ ಒಂದು ಬೀದಿ ಸಾಕಿತ್ತು, ಒಂದು ಮಂಟಪ ಸಾಕಿತ್ತು, ಒಬ್ಬ ಗೆಳೆಯ ಸಾಕಾಗಿದ್ದ.
ಮಡಿಕೇರಿಯ ಒಂದೊಂದು ಬಡಾವಣೆ, ಒಂದೊಂದು ತಂಡ. ಪ್ರತಿ ಮಂಟಪದ ಹಿಂದೆ ಒಂದೊಂದು ಸೈನ್ಯ. ಶ್ರೀ ಪೇಟೆ ರಾಮಮಂದಿರ ಮಂಟಪದ ಹುಡುಗರು ಒಂದು ಕಡೆ. ದೇಚೂರು ಶ್ರೀರಾಮ ಮಂದಿರ ಮಂಟಪದ ಯುವ ಪಡೆ ಇನ್ನೊಂದು ಕಡೆ. ಶ್ರೀ ದಂಡಿನ ಮಾರಿಯಮ್ಮ ಮಂಟಪದ ಯುವಕರ ಗುಂಪು ಬೇರೊಂದು ಕಡೆ. ಶ್ರೀ ಕೋಟೆ ಮಾರಿಯಮ್ಮ ಮಂಟಪ, ಶ್ರೀ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಮಂಟಪ, ಶ್ರೀ ಕಾಂಚಿ ಕಾಮಾಕ್ಷಿಯಮ್ಮ (ಮುತ್ತು ಮಾರಿಯಮ್ಮ) ಮಂಟಪ, ಶ್ರೀ ಕೋದಂಡ ರಾಮಮಂದಿರ (ಚೌಕಿ) ಮಂಟಪ, ಶ್ರೀ ಕರವಾಲೆ ಭಗವತಿ ದೇವಾಲಯ ಮಂಟಪ, ಶ್ರೀ ಚೌಡೇಶ್ವರಿ ದೇವಾಲಯ (ಮಹಾಕಾವಳಿ) ಮಂಟಪ, ಶ್ರೀ ಬಿ.ಆರ್. ಅಂಬೇಡ್ಕರ್ ನಗರದ ಶ್ರೀ ಭಗವತಿ ದೇವಾಲಯ ಮಂಟಪ. ಹತ್ತು ಮಂಟಪಗಳು, ಹತ್ತು ಪಡೆಗಳು, ಹತ್ತು ಪ್ರತ್ಯೇಕ ಪ್ರಪಂಚಗಳು.

ಪ್ರತಿ ಬಡಾವಣೆಗೂ ತನ್ನದೇ ಗರ್ವ, ತನ್ನದೇ ಮಂಟಪ, ತನ್ನದೇ ಕಥೆ. ಎಲ್ಲರೂ ಒಂದೇ ಸಮಯದಲ್ಲಿ enjoy ಮಾಡುತ್ತಿದ್ದರು. ಪ್ರತಿಯೊಬ್ಬರ ಎದೆಯಲ್ಲಿ ಒಂದು ಸಿಹಿ ಸ್ಪರ್ಧೆ “ನಮ್ಮ ಮಂಟಪವೇ ಶ್ರೇಷ್ಠ, ನಮ್ಮ ಬೀದಿಯೇ ರಾಜಬೀದಿ.”
ಆಗ ನಾನಿನ್ನೂ ಪುಟ್ಟ ಹುಡುಗ. ಶಾಲೆಗೆ ಚೀಲ ಹೊತ್ತು ಹೋಗುತ್ತಿದ್ದ ವಯಸ್ಸು. ಆದರೆ ದಸರೆಯ ಒಂಬತ್ತು ದಿನಗಳಲ್ಲಿ ಶಾಲೆ ನನಗೆ ಬೇಡ, ಪುಸ್ತಕ ಬೇಡ, ಗುರುಗಳ ಶಿಸ್ತು ಕೂಡಾ ಬೇಡ. ಬೇಕಾಗಿದ್ದದ್ದು ಒಂದೇ ಮಡಿಕೇರಿ! ಆ ಮಡಿಕೇರಿಯ light decoration, ಆ ಬೃಹತ್ ಮಂಟಪಗಳು, ಜನಸಾಗರ, ರಾತ್ರಿ ಇಡೀ ಮೊಳಗುವ Music , ವೊಲಗದ ಮಾಂತ್ರಿಕ ನಾದ!
ಸಂಜೆ ಬಸ್ಸು ಹತ್ತಿದೆ ಎಂದರೆ ಎದೆ ಡವಡವ! ಗೆಳೆಯರ ತಂಡದ ಜೊತೆ ಸೇರಿಕೊಂಡು ಹೊರಟರೆ ಮುಗಿಯಿತು, ಇನ್ನು ಬೆಳಗ್ಗಿನ ಜಾವದವರೆಗೆ ಮನೆಗೆ ಮರಳುವ ಪ್ರಶ್ನೆಯೇ ಇಲ್ಲ. Bus stand ಇಳಿಯುತ್ತಿದ್ದಂತೆಯೇ ಆ ವಾಸನೆ ಬಿಸಿ ಮಂಡಕ್ಕಿ, ಎಣ್ಣೆಯಲ್ಲಿ ಕರಿಯುತ್ತಿರುವ ಬಜ್ಜಿ, ಜಿಲೇಬಿಯ ಸಿಹಿ ಘಮ, ಕಟ್ಟಿಗೆ ಸುಟ್ಟ ಹೊಗೆ. ಒಂದೇ ಕ್ಷಣದಲ್ಲಿ ಮೂಗಿಗೆ ಒಂದು ಮಾದಕತೆ, ಕಾಲಿಗೆ ಒಂದು vibration! ಎದೆಗೆ ಒಂದು ಬಡಿತ!

ಬೀದಿ ತುಂಬಾ ಜನ, ಮೂಲೆಮೂಲೆಗೂ ಜನ. ಬೆಳಕಿನ ಸರಪಣಿ, ಹೂವಿನ ಅಲಂಕಾರ. ಇನ್ನೊಂದೆಡೆ ದೊಳ್ಳು ಕುಣಿತದ ಗಾಂಭೀರ್ಯದ ಶಬ್ದ, ಮತ್ತೊಂದೆಡೆ ಹುಲಿವೇಷದ ಘರ್ಜನೆ, ಮಗದೊಂದೆಡೆ ವೊಲಗದ ಸಂಗೀತ. ಎಲ್ಲಾ ಕಡೆಯಿಂದ ಶಬ್ದ, ಬೆಳಕು, ಬಣ್ಣ. ಚಿಕ್ಕ ಕಣ್ಣುಗಳಿಗೆ ಇಷ್ಟೆಲ್ಲ ಒಟ್ಟಿಗೆ ಕಾಣಿಸಿದರೆ ಏನಾಗುತ್ತದೆ ಗೊತ್ತಾ? ಆ ದೃಶ್ಯ ಜೀವಮಾನ ಪೂರ್ತಿ ಎದೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಸಾಯುವ ಘಳಿಗೆಯಲ್ಲಿಯೂ ಆ ದೃಶ್ಯ ಕಣ್ಮುಂದೆ ಬರುತ್ತದೆ.
ಮಂಟಪ ಬರುತ್ತಿತ್ತು. ದೂರದಿಂದಲೇ ಆ ಬೃಹತ್ ಬೆಳಕಿನ ಪ್ರವಾಹ. ಜನ ಒಂದೆಡೆ ಒತ್ತೊತ್ತಾಗಿ ನಿಲ್ಲುತ್ತಿದ್ದರು. ನಾವು ಚಿಕ್ಕವರು, ದೊಡ್ಡವರ ಕಾಲಿನ ಸಂದಿಯಿಂದ ತೂರಿಕೊಂಡು ಮುಂದೆ ನುಗ್ಗುತ್ತಿದ್ದೆವು. ಮಂಟಪದ ಎದುರೇ ನಿಲ್ಲುತ್ತಿದ್ದೆವು. ಆ ಹದಿನೈದು ಅಡಿ ಎತ್ತರದ ವಿಗ್ರಹಗಳು, ಅಸುರರ ಸಂಹಾರ, ದೇವಿಯ ರೌದ್ರ ರೂಪ, ರಕ್ತದಂತೆ ಕೆಂಪಾದ ಬಾಯಿ!ಉರಿಯುತ್ತಿರುವ ಕಣ್ಣುಗಳು ! ನೋಡಿದರೆ ಎದೆ ನಡುಗುತ್ತಿತ್ತು. ಆದರೆ ಅದೇ ಕ್ಷಣ speaker ನಿಂದ ಜೋರಾಗಿ ಸಂಗೀತ. ಆಗ ಶುರುವಾಗುತ್ತಿತ್ತು ನಮ್ಮ ಸ್ವಂತ ಕಾರ್ಯಕ್ರಮ. ಕುಣಿತ, ಕುಣಿತ!

ನಾವು ಹುಡುಗರೆಲ್ಲ ಮಂಟಪದ ಮುಂದೆ ಹುಚ್ಚರಂತೆ ಕುಣಿಯುತ್ತಿದ್ದೆವು. ಕೈ ಎತ್ತಿ, ಗೆಳೆಯರ ಜೊತೆ ಗಟ್ಟಿಯಾಗಿ ಕೂಗಿ, ಶಿಳ್ಳೆ ಹೊಡೆದು, ಒಬ್ಬರನ್ನೊಬ್ಬರು ತಳ್ಳಿ, ನಗುತ್ತಾ ಕುಣಿಯುತ್ತಿದ್ದೆವು. ಆ ಗಳಿಗೆಯಲ್ಲಿ ನಾವು ರಾಜರುಗಳಾಗಿದ್ದೆವು. ನಮ್ಮ ಸಾಮ್ರಾಜ್ಯ ಆ ಬೀದಿಯೇ ಆಗಿತ್ತು. ನಮಗೆ ಯಾರೂ ಬೇಡ, ಯಾವ ನಿಯಮವೂ ಬೇಡ, ಯಾವ ದೊಡ್ಡವರ ಬುದ್ಧಿವಾದವೂ ಬೇಡ.
ಒಂದು ಮಂಟಪ ಮುಂದೆ ಹೋಗುತ್ತಿತ್ತು, ನಾವು ಇನ್ನೊಂದರ ಬಳಿಗೆ ಓಡುತ್ತಿದ್ದೆವು. ಕೋಟೆಯ ಮುಂದೆ ಬಂದಾಗ ಅಲ್ಲಿ ಕುಣಿತ, ಗದ್ದುಗೆಯ ಮುಂದೆ ಬಂದಾಗ ಅಲ್ಲಿ ಕುಣಿತ. ರಾಜ ಸೀಟಿನ ಮುಂದೆ ನಿಂತಾಗ, ಆ ಹಳೆಯ ಗತಕಾಲದ ಸಿಂಹಾಸನದ ಮುಂದೆ, ಚಿಕ್ಕ ಎದೆಯಲ್ಲಿ ಒಂದು ವಿಚಿತ್ರ thrill. ಇಲ್ಲಿ ಹಾಲೇರಿ ರಾಜರು ಕುಳಿತಿದ್ದರೇ? ನಾವಿಂದು ಕುಣಿಯುತ್ತಿರುವ ಈ ಜಾಗದಲ್ಲಿ ಒಬ್ಬ ರಾಜ ನಿಂತಿದ್ದನೇ? ಆ ಆಲೋಚನೆಯೇ ರೋಮಾಂಚನ. ಮತ್ತೆ ಕುಣಿತ, ಮತ್ತೆ ಕೂಗು, ಮತ್ತೆ ಗದ್ದಲ!
ರಾತ್ರಿ ಮುಂದೆ ಸಾಗುತ್ತಿತ್ತು, ನಮಗೆ ಗೊತ್ತೇ ಆಗುತ್ತಿರಲಿಲ್ಲ. Watch ನೋಡುವ ಯೋಚನೆಯೇ ಇಲ್ಲ. ಒಂದು ಮಂಟಪದ ಹಿಂದೆ ಮತ್ತೊಂದು, ಮತ್ತೊಂದರ ಹಿಂದೆ ಮಗದೊಂದು. ಹತ್ತು ಮಂಟಪಗಳು, ಹತ್ತು ಬಾರಿ ಕುಣಿತ, ಹತ್ತು ಬಾರಿ ಆ ದೇವಿಯ ಮುಂದೆ ಕೈ ಮುಗಿಯುವುದು, ಹತ್ತು ಬಾರಿ ಆ ಜನಸಾಗರದಲ್ಲಿ ಕಳೆದುಹೋಗಿ ಮತ್ತೆ ಗೆಳೆಯರನ್ನು ಹುಡುಕಿ ಸೇರಿಕೊಳ್ಳುವುದು.

ಹಸಿವು? ಇಲ್ಲ. ದಣಿವು? ಇಲ್ಲ. ನಿದ್ದೆ? ಎಂತಹ ನಿದ್ದೆ! ಆ ರಾತ್ರಿಗೊಂದು magic ಇತ್ತಲ್ಲ, ಅದು ನಮ್ಮ ದೇಹಕ್ಕೆ ಬೇರೆಯದೇ ಒಂದು energy ತುಂಬುತ್ತಿತ್ತು. ನಡುನಡುವೆ ಒಬ್ಬ ಗೆಳೆಯ “ನಂಗೆ ಬಜ್ಜಿ ಬೇಕು ಮಚ್ಚಾ” ಎಂದು ಕೂಗಿದಾಗ ಎಲ್ಲರೂ ಒಟ್ಟಿಗೆ ಬಜ್ಜಿ ಗಾಡಿಗೆ ಓಡುತ್ತಿದ್ದೆವು. ಬಿಸಿ ಬಜ್ಜಿ, ಮೇಲೆ ಚಟ್ನಿಪುಡಿ, ನಡುರಾತ್ರಿಯ ಆ ಸ್ವಾದ ಇಂದಿಗೂ ನಾಲಿಗೆಯ ತುದಿಯಲ್ಲಿಯೇ ಜೀವಂತ.!ಈಗ ಬರೆಯುತ್ತಿರುವಾಗಲೂ ಬಾಯಿ ನೀರೂರುತ್ತಿದೆ!
ಬೆಳಗ್ಗಿನ ಜಾವ ನಾಲ್ಕು ಗಂಟೆ. ಎಲ್ಲ ಮಂಟಪಗಳು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸೇರುತ್ತಿದ್ದವು. ಗಾಂಧಿ ಮೈದಾನದ ಕಡೆಗೆ ಆ ದೀರ್ಘ ಮೆರವಣಿಗೆ. ನಾವು ಕಣ್ಣು ಉಜ್ಜಿಕೊಂಡು ಹಿಂಬಾಲಿಸುತ್ತಿದ್ದೆವು. ಒಂದೇ ಒಂದು ಮಂಟಪವೂ miss ಆಗಬಾರದು, ಒಂದೇ ಒಂದು ಕುಣಿತವೂ miss ಆಗಬಾರದು. ಸೂರ್ಯ ಪೂರ್ವದಿಂದ ಇಣುಕುತ್ತಿದ್ದ ಹೊತ್ತಿಗೆ ಆ ಇಡೀ ಮೈದಾನ ಜನರಿಂದ ತುಂಬಿ ತುಳುಕುತ್ತಿತ್ತು. ಆ ದೃಶ್ಯ, ಆ ಬೆಳಕು, ಆ ಸಂತೃಪ್ತಿ! ಇಡೀ ಕೊಡಗಿನ ಆತ್ಮ ಒಂದೇ ಮೈದಾನದಲ್ಲಿ ವಿಶ್ರಮಿಸುತ್ತಿತ್ತು!
ಮನೆಗೆ ಬರುತ್ತಿದ್ದೆವು, ಆದರೆ ಸೀದಾ ಶಾಲೆಗೆ. ನಿದ್ದೆ ಇಲ್ಲದೆ ರಾತ್ರಿ ಇಡೀ ಕುಣಿದ ಮೇಲೆಯೂ ಶಾಲೆಗೆ ಹೋಗಬೇಕಿತ್ತು. ಬೆಂಚಿನ ಮೇಲೆ ಕೂತ ಕೂಡಲೇ ಕಣ್ಣು ಭಾರ. ಗುರುಗಳ ಪಾಠ ಎಲ್ಲೋ ದೂರದಿಂದ ಕೇಳಿಸುತ್ತಿತ್ತು. ಆದರೆ ಮನಸ್ಸು ಮಾತ್ರ ಇನ್ನೂ ಮಡಿಕೇರಿಯಲ್ಲಿಯೇ ನೆಲೆಸಿತ್ತು !ಮಂಟಪದ ಮುಂದೆ, ಗೆಳೆಯರ ಜೊತೆ, ಆ ಬೆಳಕಿನ ಮಧ್ಯದಲ್ಲಿ.

ಆದರೆ ನನಗೆ ಎಂದೂ ಒಂದು ಪ್ರಶ್ನೆ ಇತ್ತು !ಈ ಮಡಿಕೇರಿ ದಸರಾ ಇಷ್ಟೆಲ್ಲ ಹೇಗಾಯಿತು?
ಆ ಪ್ರಶ್ನೆ ನನ್ನನ್ನು ಬಿಡಲಿಲ್ಲ. ದೊಡ್ಡವನಾದ ಮೇಲೆ ಹಿರಿಯರನ್ನು ಕೇಳಿದೆ, ಪುಸ್ತಕಗಳನ್ನು ತಿರುವಿ ಹಾಕಿದೆ, ಹಳೆಯ ದಾಖಲೆಗಳನ್ನು ಜಾಲಾಡಿದೆ. ಸಿಕ್ಕಿತು ಒಂದು ಕಥೆ. ಎಂತಹ ಹೃದಯಸ್ಪರ್ಶಿ ಕಥೆ ಗೊತ್ತಾ, ಎದೆಯನ್ನು ಒದ್ದೆಯಾಗಿಸುವ ಕಥೆ!
ಅದು ಬಹಳ ಹಿಂದಿನ ಕಾಲ. ಮಡಿಕೇರಿಯಲ್ಲಿ ಒಂದು ಅಜ್ಞಾತ ರೋಗ ಹಬ್ಬಿತು. ಮನೆ ಮನೆಗಳಲ್ಲಿ ದೀಪ ಆರುತ್ತಿತ್ತು. ಅಮ್ಮಂದಿರ ಮಕ್ಕಳು ಜಾರುತ್ತಿದ್ದರು. ವೈದ್ಯರಿಲ್ಲ!ಔಷಧವಿಲ್ಲ!hospital ಇಲ್ಲ. ದೇವರ ಬಳಿ ಕೈ ಮುಗಿಯುವುದೊಂದೇ ಉಳಿದ ದಾರಿ.
ಆಗ ಹಾಲೇರಿ ವಂಶದ ಒಬ್ಬ ರಾಜ, ಇಕ್ಕೇರಿಯಿಂದ ಬಂದು ಕೊಡಗಿನ ನೆಲದಲ್ಲಿ ಬೇರೂರಿದ ಆ ರಾಜವಂಶದ ಆಳ್ವಿಕೆಯ ಸಮಯ, ಒಂದು ಐತಿಹಾಸಿಕ ನಿರ್ಧಾರ ಮಾಡಿದ. “ಮಾರಿಯಮ್ಮನ ಕರುಣೆಗಾಗಿ ಪ್ರಾರ್ಥಿಸೋಣ. ಅವಳೇ ರೋಗ ಕಳೆಯುತ್ತಾಳೆ.” ಆ ಒಂದೇ ನಿರ್ಧಾರದಿಂದ ಹುಟ್ಟಿತು ಇಂದಿನ ಮಡಿಕೇರಿ ದಸರಾ! ಒಂದು ಬೇಗುದಿಯಿಂದ ಹುಟ್ಟಿದ ಬೆಳಕು.
ಮಡಿಕೇರಿಯ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಾರಿಯಮ್ಮ ದೇವಿಯರು ನೆಲೆಸಿದ್ದಾರೆ ಎಂಬುದು ಜನನಂಬಿಕೆ. ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ ಇವರೇ ನಾಲ್ಕು ಶಕ್ತಿ ದೇವತೆಗಳು. ಜನ ಇವರನ್ನು “ಒಂದೇ ತಾಯಿಯ ನಾಲ್ಕು ಹೆಣ್ಣುಮಕ್ಕಳು” ಎಂದು ನಂಬುತ್ತಾರೆ. ನಾಲ್ಕು ಸಹೋದರಿಯರು, ಒಂದೇ ಊರಿನ ನಾಲ್ಕು ರಕ್ಷಕರು!

ನವರಾತ್ರಿಯ ಮೊದಲ ದಿನ, ನಾಲ್ಕು ದೇವಸ್ಥಾನಗಳ ಪೂಜಾರಿಗಳು ತಲೆಯ ಮೇಲೆ ಕರಗ ಕಟ್ಟುವ ಸಾಮಗ್ರಿ ಹೊತ್ತು ಪಂಪಿನಕೆರೆಗೆ ಹೋಗುತ್ತಾರೆ. ತಲೆ ಬೋಳಿಸಿಕೊಂಡ, ಹಳದಿ ಕಚ್ಚೆ ಉಟ್ಟ ಪೂಜಾರಿಗಳು ,ಒಂದು ಕೈಯಲ್ಲಿ ಚಾಕು, ಇನ್ನೊಂದರಲ್ಲಿ ಬೆತ್ತ. Jasmine, ಕನಕಾಂಬರ, ಸೇವಂತಿಗೆ ಹೂಗಳಿಂದ ಕರಗ ಕಟ್ಟುತ್ತಾರೆ. ವೊಲಗದ ಶಬ್ದ ಕೇಳಿದ ಜನ “ಕರಗ ಬಂತು” ಎಂದು ಮನೆಯಿಂದ ಹೊರ ಓಡುತ್ತಾರೆ. ಆ ದೃಶ್ಯ ನಿಜವಾಗಿಯೂ divine.
ನಲವತ್ತು ವರ್ಷಗಳ ಹಿಂದೆ ಇದ್ದದ್ದು ನಾಲ್ಕೇ ಮಂಟಪಗಳು. ಆದರೆ ಜನರ ಉತ್ಸಾಹ ಬೆಳೆದಂತೆ, ಕೊಡಗಿನ ಪ್ರತಿ ಬೀದಿಯೂ “ನಮ್ಮದೂ ಒಂದು ಮಂಟಪ ಇರಲಿ” ಎಂದು ಎದ್ದು ನಿಂತಿತು. ಇಂದು ಹತ್ತು ಮಂಟಪಗಳು. ಎಂಟರಿಂದ ಹದಿನೈದು ಅಡಿ ಎತ್ತರದ ವಿಗ್ರಹಗಳು, ಐವತ್ತರಿಂದ ನೂರು ಸ್ವಯಂಸೇವಕರ ಸಮಿತಿಗಳು, ಮೂರು ತಿಂಗಳ ಮುಂಚಿನಿಂದಲೇ ಸಿದ್ಧತೆ.
ಈಗ ಈ ಕ್ಷಣದಲ್ಲಿಯೂ, ಈ ಲೇಖನ ಬರೆಯುತ್ತಿರುವ ಈ ಘಳಿಗೆಯಲ್ಲಿಯೂ, ಮಡಿಕೇರಿ ಸರ್ಕಿಟ್ ಮಾರ್ಕೆಟ್ನ ಗಲ್ಲಿಗಳಲ್ಲಿ ಎಲ್ಲೋ ಒಂದು garage ನ ದೀಪ ಉರಿಯುತ್ತಿದೆ. ಬಿದಿರು ಕೊರೆಯುವ ಶಬ್ದ, ಬಣ್ಣ ಬಳಿಯುವ ಕುಂಚದ ಚಟಪಟ. ಹತ್ತಾರು ಜನ ಒಂದು ಮಂಟಪದ ಆಕಾರ ಕೊಡುತ್ತಿದ್ದಾರೆ. “ಈ ವರ್ಷ ಏನನ್ನಾದರೂ ಹೊಸತು ಮಾಡಬೇಕು ಮಚ್ಚಾ” ಎಂದು ಚಹದ ಲೋಟದ ಜೊತೆ ಮಾತನಾಡುತ್ತಿದ್ದಾರೆ. ಸೆಪ್ಟೆಂಬರ್ 22, ಇನ್ನು ಕೆಲವೇ ದಿನಗಳು! ಮಡಿಕೇರಿಯಲ್ಲಿ ನಿದ್ದೆ ಇಲ್ಲ, ಇಡೀ ಊರೇ ಜಾಗೃತ.
1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷ ಕೆ.ಎಸ್. ಅಪ್ಪಚ್ಚು ಮೊಟ್ಟಮೊದಲಿಗೆ ದಸರಾ ಸಮಿತಿ ರಚಿಸಿದರು. ಆವರೆಗೆ ಬಿಡಿಬಿಡಿಯಾಗಿದ್ದದ್ದೆಲ್ಲ ಒಂದೇ ಸೂತ್ರದಡಿ ಬಂತು. ಅಂದಿನಿಂದ ಇಂದಿನವರೆಗೆ ಈ ಉತ್ಸವಕ್ಕೆ ಒಂದೇ ಮೂಲಗುಣ ಬದಲಾಗಿಲ್ಲ! ಇದು ಜನೋತ್ಸವ, ಜನರ ಉತ್ಸವ, ಸಾಮಾನ್ಯ ಜನರ ಎದೆಯಿಂದ ಎದ್ದ ಉತ್ಸವ.
ಮಡಿಕೇರಿ ದಸರಾ !ಇಲ್ಲಿ ಇರುವುದು ಕಾರ್ಮಿಕನ ಒರಟು ಕೈಗಳಿಂದ ಹುಟ್ಟಿದ ಕರಗ, ರೈತನ ಕೆಸರು ಕಾಲುಗಳ ಬೆವರಿನಿಂದ ಎದ್ದು ಬಂದ ಅಭಿಮಾನ.
ಇದು ಸಾಮಾನ್ಯ ಜನರ ಶ್ರಮ, ಶ್ರದ್ಧೆ, ನಂಬಿಕೆಯ ಉತ್ಸವ. ನೂರು ವರ್ಷಗಳ ಹಿಂದೆ ಒಬ್ಬ ರಾಜ ಶುರು ಮಾಡಿದ್ದನ್ನು ಇಂದು ಕೊಡಗಿನ ಪ್ರತಿ ಮನೆಯೂ ಹೊತ್ತಿ ಸಾಗಿಸುತ್ತಿದೆ! ಪೀಳಿಗೆಯಿಂದ ಪೀಳಿಗೆಗೆ, ತಲೆಮಾರಿನಿಂದ ತಲೆಮಾರಿಗೆ.
ಕೊಡಗಿನ ಮಳೆ ಒಂದು ತರಹದಲ್ಲಿ ಮನಸ್ಸಿಗೆ ತಣ್ಣಗೆ ಕೊಡುತ್ತದೆ. ಆದರೆ ಮಡಿಕೇರಿ ದಸರೆ ಕೊಡುವ ತಂಪು ಸಂಪೂರ್ಣ ಬೇರೆ. ಅದೊಂದು ಆತ್ಮದ ತಣ್ಣನೆ, ಎದೆಯ ಆಳದ ಶಾಂತಿ. ಹಳೆಯ ದೇವರ ವಿಗ್ರಹಗಳ ಮುಂದೆ ಏಕಾಗ್ರತೆಯಿಂದ, ಭಕ್ತಿಯಿಂದ ಕೈ ಮುಗಿದು ನಿಲ್ಲುವ ಆ ಭಕ್ತರ ಕಣ್ಣೀರೇ ಕೊಡಗಿನ ಜೀವಾತ್ಮ. ಅದೇ ಮಡಿಕೇರಿ ದಸರೆಯ ಹೃದಯ!
ಆ ರೋಗ ಎಂದೋ ಹೋಯಿತು, ಆ ರಾಜ ಎಂದೋ ಇತಿಹಾಸದ ಪುಟಗಳಲ್ಲಿ ಸೇರಿ ಹೋದ. ಆದರೆ ಆ ರೋಗದಿಂದ ಹುಟ್ಟಿದ ಪ್ರಾರ್ಥನೆ, ಆ ನಾಲ್ಕು ಸಹೋದರಿಯರ ಪೂಜೆ, ಇಂದಿಗೂ ಜೀವಂತ. ಬಹುಶಃ ಇದೇ ಇರಬಹುದು ಒಂದು ಜನಸಮುದಾಯ ತನ್ನ ದುಃಖವನ್ನು ಎತ್ತಿ ಆಚರಣೆಯಾಗಿ ಮಾಡಿಕೊಳ್ಳುವ ವಿಚಿತ್ರ ಕಲೆ, ನೋವನ್ನು ಹಬ್ಬವಾಗಿ ಬದಲಿಸಿಕೊಳ್ಳುವ ಕಲೆ, ಕಣ್ಣೀರನ್ನು ಬೆಳಕಾಗಿಸಿಕೊಳ್ಳುವ ಪವಿತ್ರ ಕಲೆ.

ಈ ವರ್ಷವೂ ಸೆಪ್ಟೆಂಬರ್ 22 ರಿಂದ ಆ ದೀಪ ಮತ್ತೆ ಬೆಳಗುತ್ತಿದೆ. ಹೊಸ ಗೆಳೆಯರ ತಂಡಗಳು ಮತ್ತೆ ಕುಣಿಯುತ್ತವೆ, ಹೊಸ ಚಿಕ್ಕ ಕಣ್ಣುಗಳು ಆ ಬೆಳಕನ್ನು ಮೊದಲ ಬಾರಿ ನೋಡಿ ಬೆರಗಾಗುತ್ತವೆ, ಹೊಸ ನೆನಪುಗಳು ಹುಟ್ಟುತ್ತವೆ. ಮೂವತ್ತು ವರ್ಷಗಳ ನಂತರ ಅವರೂ ನನ್ನಂತೆಯೇ ಆ ರಾತ್ರಿಗಳನ್ನು ನೆನಪಿಸಿಕೊಂಡು, ಎದೆ ತುಂಬಿಕೊಂಡು, ಕಣ್ಣಂಚಲ್ಲಿ ನೀರು ತರಿಸಿಕೊಂಡು ಬರೆಯುತ್ತಾರೆ.
ಕೊಡಗು ಬದಲಾಗಬಹುದು, ಜನ ಬದಲಾಗಬಹುದು, technology ಬದಲಾಗಬಹುದು. ಆದರೆ ಆ ರಾತ್ರಿಗಳು ! ಆ ಮಂಟಪಗಳು! ಆ ಕರಗಗಳು, ವೊಲಗದ ನಾದ, ಹುಚ್ಚು ಕುಣಿತ, ಆಯುಧ ಪೂಜೆಯ ಸಿಂಗಾರಗೊಂಡ ಜೀಪುಗಳು ಮತ್ತು ಲಾರಿಗಳು, ಆ cycle race-ನ ಗೆಲುವಿನ ಸಂಭ್ರಮ, ಆ ಬಡಾವಣೆಯ ತಂಡಗಳ ಸಿಹಿ ಸ್ಪರ್ಧೆ! ಅವು ಎಂದೆಂದಿಗೂ ಮಡಿಕೇರಿಯ ಆತ್ಮದಲ್ಲಿ, ಕೊಡಗಿನ ಪ್ರತಿ ಕಂದನ ಎದೆಯಲ್ಲಿ ಬದುಕಿರುತ್ತವೆ.
ಕೊಡಗಿನ ಸರ್ವ ಬಂಧುಗಳಿಗೂ, ದಸರಾ ಊರಿಗೆ ಬರಲು ಚಿಂತಿಸುತ್ತಿರುವವರಿಗೂ, ಬರಲಾಗದೆ ದೂರ ಉಳಿದವರಿಗೂ ಒಂದೇ ಪ್ರಶ್ನೆ. ನಿಮ್ಮ ಎದೆಯಲ್ಲಿ ಇನ್ನೂ ಬದುಕಿರುವ ಆ ಮಡಿಕೇರಿ ದಸರೆಯ ಒಂದು ವಿಶೇಷ ನೆನಪು ಯಾವುದು? ಯಾವ ಮಂಟಪ ನಿಮ್ಮ ಮನಸ್ಸಿಗೆ ಇನ್ನೂ ಹತ್ತಿರ? ಯಾವ ಗೆಳೆಯನ ಜೊತೆ ನೀವು ಕುಣಿದದ್ದು ಎಂದೂ ಮರೆಯದ ಆ ಒಂದು ಅಪೂರ್ವ ರಾತ್ರಿ? ಯಾವ Area ತಂಡದಲ್ಲಿ ನೀವಿದ್ದಿರಿ?
Comment ನಲ್ಲಿ ಹಂಚಿಕೊಳ್ಳಿ. ಎಲ್ಲರ ಕಥೆ ಕೇಳೋಣ. ಈ ವರ್ಷದ ದಸರೆ ಎಲ್ಲರ ನೆನಪುಗಳಿಂದ ಮತ್ತೊಮ್ಮೆ ಜೀವಂತವಾಗಲಿ!
ಓಯಾಸಿಸ್. ಕಾವೇರಿಯ ದಡದಿಂದ, ಕನ್ನಡಿಗರ ಮನೆಮನೆಗೆ!

