
ಹಂಬಲಿಸುವಷ್ಟು ಬಡತನ…
ನೆರವಿನ ಹಸ್ತವೆಂದು ನಂಬುವಷ್ಟು ಮುಗ್ಧತೆ…
ತಂದೆಯ ವಯಸ್ಸಿನ ವ್ಯಕ್ತಿಯೊಬ್ಬನ ಮೇಲೆ ಇಡುವಷ್ಟು ವಿಶ್ವಾಸ…
ಆದರೆ ಆ ವಿಶ್ವಾಸಕ್ಕೆ ದ್ರೋಹವಾದಾಗ, ನೋವು ಅನುಭವಿಸಿದ್ದು ಕೇವಲ ಒಬ್ಬ ಬಾಲಕಿಯಲ್ಲ—ಇಡೀ ಸಮಾಜದ ಮನಸ್ಸು.
ಹಸಿವಿನಿಂದ ಕಂಗೆಟ್ಟ ಮುಗ್ಧ ಜೀವಿಯೊಬ್ಬಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ನಡೆದ ಲೈಂಗಿಕ ದೌರ್ಜನ್ಯದ ಘಟನೆ ಗೋಣಿಕೊಪ್ಪದ ಜನರನ್ನು ಬೆಚ್ಚಿಬೀಳಿಸಿತು. ಬಡತನದ ಬದುಕು, ಕುಟುಂಬದ ಸಂಕಷ್ಟ, ತಂದೆಯ ಮಧ್ಯೆ ವ್ಯಸನದಿಂದಾಗಿ ಎದುರಾದ ಅಸಹಾಯಕ ಪರಿಸ್ಥಿತಿ—ಇವೆಲ್ಲದರ ನಡುವೆ ಆ ಬಾಲಕಿ ಎದುರಿಸಿದ ನೋವು ಮನಸ್ಸನ್ನು ಕಲಕುವಂತದ್ದು.
ಆದರೆ ಆ ಕತ್ತಲೆಯ ನಡುವೆ ಒಂದು ಭರವಸೆಯ ಬೆಳಕು ಇತ್ತು—ಅದು ಪೊಲೀಸ್ ವ್ಯವಸ್ಥೆ.
ಘಟನೆ ನಡೆದ ಕೆಲವೇ ದಿನಗಳಲ್ಲಿ ಗೋಣಿಕೊಪ್ಪ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡ ರೀತಿ, ತನಿಖೆಗೆ ನೀಡಿದ ವೇಗ, ಆರೋಪಿಯ ಪತ್ತೆಗಾಗಿ ರೂಪಿಸಿದ ತಂಡಗಳ ಕಾರ್ಯಾಚರಣೆ—ಇವೆಲ್ಲವೂ ‘ಕಾನೂನು ಇನ್ನೂ ಜೀವಂತವಾಗಿದೆ’ ಎಂಬ ವಿಶ್ವಾಸವನ್ನು ಸಮಾಜದಲ್ಲಿ ಮೂಡಿಸಿದೆ.
ಕಾನೂನು ಬಡವನಿಗೊಂದು, ಶ್ರೀಮಂತನಿಗೊಂದು ಅಲ್ಲ. ತಪ್ಪು ಮಾಡಿದವನು ಯಾರೇ ಆಗಿರಲಿ, ಕಾನೂನಿನ ಮುಂದೆ ಉತ್ತರಿಸಲೇಬೇಕು. ಈ ಸತ್ಯವನ್ನು ಗೋಣಿಕೊಪ್ಪ ಪೊಲೀಸರು ಮತ್ತೊಮ್ಮೆ ತಮ್ಮ ಕಾರ್ಯದ ಮೂಲಕ ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇದು ಕೇವಲ ಒಬ್ಬ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸ್ ಕಾರ್ಯಾಚರಣೆಯಲ್ಲ.
ಅಸಹಾಯಕಳಾದ ಒಬ್ಬ ಬಾಲಕಿಯ ಹಿಂದೆ ಕಾನೂನು ನಿಂತಿದೆ ಎಂಬ ಸಂದೇಶ.
ಬಡತನದಲ್ಲಿರುವ ಕುಟುಂಬಕ್ಕೂ ನ್ಯಾಯ ಸಿಗುತ್ತದೆ ಎಂಬ ಭರವಸೆ.
ತಪ್ಪು ಮಾಡಿದವನು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ.
ಅದೇ ಕಾರಣಕ್ಕೆ ಗೋಣಿಕೊಪ್ಪ ಪೊಲೀಸರ ಈ ಕಾರ್ಯಾಚರಣೆ ವಿಶೇಷವಾಗಿ ಗಮನ ಸೆಳೆಯುತ್ತದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ಮಾರ್ಗದರ್ಶನದಲ್ಲಿ, ತಾಲೂಕು ಪೊಲೀಸ್ ಉಪಾಧೀಕ್ಷಕ ಮಹೇಶ್ ಕುಮಾರ್ ಅವರ ಸಲಹೆಯಂತೆ, ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್ ಅವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದರು. ಗೋಣಿಕೊಪ್ಪ ಠಾಣಾಧಿಕಾರಿ ಕಾಳೇಗೌಡ, ಅಪರಾಧ ವಿಭಾಗದ ಎಸ್ಐ ವೆಂಕಟೇಶ್ ಎಚ್.ಟಿ., ಎಎಸ್ಐ ಶ್ರೀನಿವಾಸ, ಹೆಡ್ ಕಾನ್ಸ್ಟೆಬಲ್ಗಳಾದ ಲೋಕೇಶ್, ಸತೀಶ್ ಹಾಗೂ ಸಿಬ್ಬಂದಿಗಳಾದ ಗಿರೀಶ್, ಮಹೇಂದ್ರ, ಭರತ್, ಮಹಾಂತೇಶ್, ಚಾಲಕ ಬಾಳಪ್ಪ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಎಂಟು ತಂಡಗಳದು ಒಂದೇ ಗುರಿಯಿಂದ ಆರೋಪಿಯ ಪತ್ತೆಯಾಗಿತ್ತು.
ಸಮಯವನ್ನು ವ್ಯರ್ಥ ಮಾಡದೆ, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಮಾಹಿತಿಗಳನ್ನು ಕಲೆಹಾಕಿ, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ತೋರಿದ ಚಾಕಚಕ್ಯತೆ ನಿಜಕ್ಕೂ ಪ್ರಶಂಸನೀಯ. ಮತ್ತು ಸೂಕ್ಷ್ಮ ಹಾಗೂ ಗಂಭೀರ ಪ್ರಕರಣದಲ್ಲಿ ಪೊಲೀಸರು ತೋರಿದ ಜವಾಬ್ದಾರಿತನ ನಿಜಕ್ಕೂ ಶ್ಲಾಘನೀಯ.
ಜನರಿಗೆ ಭಯ ಹುಟ್ಟಿಸುವುದು ಪೊಲೀಸರ ಶಕ್ತಿ ಅಲ್ಲ,
ಅಪರಾಧಿಗಳಿಗೆ ಕಾನೂನಿನ ಭಯ ಮೂಡಿಸುವುದೇ ಪೊಲೀಸರ ಶಕ್ತಿ.
ಬಡವನಿಗೆ ನ್ಯಾಯ ಸಿಗುವುದಿಲ್ಲ ಎಂಬ ಭಾವನೆ ಸಮಾಜದಲ್ಲಿ ಮೂಡಿದರೆ ಅದು ಕಾನೂನು ವ್ಯವಸ್ಥೆಯ ಮೇಲಿನ ದೊಡ್ಡ ಸೋಲು. ಆದರೆ, ಬಡ ಕುಟುಂಬದ ಸಂಕಷ್ಟದ ನಡುವೆಯೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತವಾಗಿ ಕಾರ್ಯಪ್ರವೃತ್ತರಾದ ರೀತಿ ಆ ಭಾವನೆಗೆ ತಕ್ಕ ಉತ್ತರ ನೀಡಿದೆ.
ಗಡಿಯಲ್ಲಿ ಸೈನಿಕ ದೇಶವನ್ನು ಕಾಯುತ್ತಿದ್ದರೆ, ಗಡಿಯೊಳಗೆ ಪೊಲೀಸರು ಸಮಾಜವನ್ನು ಕಾಯುತ್ತಿದ್ದಾರೆ. ತಮ್ಮ ವೈಯಕ್ತಿಕ ಬದುಕು, ಕುಟುಂಬದ ಸಮಯ, ನಿದ್ರೆ, ವಿಶ್ರಾಂತಿ ಯಾವುದನ್ನೂ ಲೆಕ್ಕಿಸದೆ 24 ಗಂಟೆಗಳೂ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯ ಪರಿಶ್ರಮವೇ ನಮ್ಮ ನೆಮ್ಮದಿಯ ಹಿಂದಿನ ಕಾಣದ ಶಕ್ತಿ.
*ಗೋಣಿಕೊಪ್ಪ ಪೊಲೀಸರ ಈ ಕಾರ್ಯಾಚರಣೆ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ನೀಡಿದೆ.
ಗೋಣಿಕೊಪ್ಪ ವೃತ್ತ ನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಪೊಲೀಸ್ ಠಾಣಾಧಿಕಾರಿ ಕಾಳೇಗೌಡ ಹಾಗೂ ಅಪರಾಧ ವಿಭಾಗದ ಎಸ್ಐ ವೆಂಕಟೇಶ್ ಅವರನ್ನು ಪ್ರಕರಣದ ತನಿಖೆಯ ಕುರಿತು ಮಾತನಾಡಿಸಿದಾಗ, ಅವರ ಮಾತುಗಳ ಹಿಂದಿನ ನೋವು ಸ್ಪಷ್ಟವಾಗಿ ಗೋಚರಿಸಿತು. ತೊಟ್ಟಿದ್ದದ್ದು ಖಾಕಿ,ಆದರೆ ಅದರೊಳಗೆ ಮಿಡಿದದ್ದು ನೋವಿಗೆ ಸ್ಪಂದಿಸುವ ಮಾನವೀಯ ಹೃದಯ. ‘ಹೀಗೊಂದು ಘಟನೆ ಗೋಣಿಕೊಪ್ಪದಲ್ಲಿ ನಡೆಯಬಾರದಿತ್ತು’ ಎಂಬ ವೇದನೆ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ಬಾಲಕಿಯ ಬದುಕಿನಲ್ಲಿ ನಡೆದ ನೋವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಆದರೆ ಆಕೆಯ ಪಾಲಿಗೆ ಕಾನೂನು ಇದೆ, ಪೊಲೀಸರು ಇದ್ದಾರೆ ಎಂಬ ಭರವಸೆ ಮೂಡಿಸುವುದು ನಮ್ಮ ಜವಾಬ್ದಾರಿ. ‘ನೀನು ಒಂಟಿಯಲ್ಲ; ಕಾನೂನು ನಿನ್ನೊಂದಿಗಿದೆ’ ಎಂಬ ವಿಶ್ವಾಸವನ್ನು ಆಕೆಯಲ್ಲಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ತಂಡ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದೆ ಎಂದು ಅವರು ಹೇಳಿದರು.
ಈ ಪ್ರಕರಣದ ತನಿಖೆಯ ಪ್ರತಿಯೊಂದು ಹಂತವೂ ಪೊಲೀಸರಿಗೆ ಸವಾಲಾಗಿತ್ತು. ಒಂದೆಡೆ ನೊಂದ ಬಾಲಕಿಗೆ ನ್ಯಾಯ ಒದಗಿಸುವ ಆತುರ, ಮತ್ತೊಂದೆಡೆ ಸಾಕ್ಷ್ಯಗಳನ್ನು ಕಲೆಹಾಕಿ ಆರೋಪಿಯ ವಿರುದ್ಧ ಕಾನೂನುಬದ್ಧವಾಗಿ ಪ್ರಕರಣವನ್ನು ಬಲಪಡಿಸುವ ಹೊಣೆ. ಇಡೀ ಬೆಳವಣಿಗೆ ಕೆಲವೊಮ್ಮೆ ಸಿನಿಮಾ ಕಥೆಯನ್ನೇ ಮೀರಿಸುವಂತಿತ್ತು. ಆದರೂ ತನಿಖೆಯ ವೇಗಕ್ಕಿಂತಲೂ ನ್ಯಾಯದ ನಿಖರತೆಗೆ ಪೊಲೀಸರು ಆದ್ಯತೆ ನೀಡಿದರು.
‘ಈ ಪ್ರಕರಣ ಕೇವಲ ಒಂದು ಪ್ರಕರಣವಲ್ಲ. ನೊಂದವರ ಪರವಾಗಿ ಪೊಲೀಸರು ನಿಂತಿದ್ದಾರೆ ಎಂಬ ನಂಬಿಕೆಯನ್ನು ಸಮಾಜದಲ್ಲಿ ಗಟ್ಟಿಗೊಳಿಸುವ ಜವಾಬ್ದಾರಿಯೂ ನಮ್ಮ ಮೇಲಿತ್ತು’ ಎಂಬ ಅಧಿಕಾರಿಗಳ ಮಾತು, ಖಾಕಿಯೊಳಗಿನ ಕರ್ತವ್ಯಪ್ರಜ್ಞೆ ಮತ್ತು ಮಾನವೀಯತೆಯನ್ನು ತೆರೆದಿಟ್ಟಿತು.
ಕಾನೂನು ಕಠಿಣವಾಗಿರಬೇಕು,ಆದರೆ ಅದನ್ನು ಜಾರಿಗೆ ತರುವ ಕೈಗಳಲ್ಲಿ ಮಾನವೀಯತೆ ಇರಬೇಕು. ಈ ಪ್ರಕರಣದಲ್ಲಿ ಗೋಣಿಕೊಪ್ಪ ಪೊಲೀಸರ ನಡೆ ಅದನ್ನೇ ನೆನಪಿಸಿತು. ನೊಂದವರ ಕಣ್ಣೀರನ್ನು ಒರೆಸಲು ಸಾಧ್ಯವಾಗದಿದ್ದರೂ, ಅವರ ಪಕ್ಕದಲ್ಲಿ ಕಾನೂನಿನ ಬಲವಾಗಿ ನಿಲ್ಲಬಹುದು ಎಂಬ ಭರವಸೆಯನ್ನು ಪೊಲೀಸರು ಮೂಡಿಸಿದ್ದಾರೆ. ಹೀಗಾಗಿ ಗೋಣಿಕೊಪ್ಪ ಪೊಲೀಸರ ತಂಡಕ್ಕೆ ಸಲಾಂ.ಹೃದಯಪೂರ್ವಕ ಅಭಿನಂದನೆಗಳು.
🖊️ಜಗದೀಶ್ ಜೋಡುಬೀಟಿ.
ಕವಿ, ಪತ್ರಕರ್ತ,

ಕಾಳೇಗೌಡ ಅವರಂತಹ ಪ್ರಾಮಾಣಿಕ ದಕ್ಷ ಅಧಿಕಾರಿ ಗೋಣಿಕೊಪ್ಪಕ್ಕೆ ಮಾತ್ರವಲ್ಲ. ಕೊಡಗಿಗೆ ಹೆಮ್ಮೆ…
ಅಭಿನಂದನೆಗಳು ಪೊಲೀಸ್ ತಂಡಕ್ಕೆ.
ನಿಮ್ಮ ಅನಿಸಿಕೆ ಅತ್ಯಂತ ಸೂಕ್ತವಾಗಿದೆ.
ಕಾಳೇಗೌಡ ಅವರಂತಹ ದಕ್ಷ ಅಧಿಕಾರಿಗಳು ಹಾಗೂ ಅವರ ತಂಡದ ಶ್ರಮ ಕೊಡಗು ಜಿಲ್ಲೆಯ ಸಾರ್ವಜನಿಕ ಭದ್ರತೆಗೆ ಮತ್ತು ಶಾಂತಿಗೆ ದೊಡ್ಡ ಕೊಡುಗೆ. ಅವರ ಉತ್ತಮ ಸೇವೆ ಹೀಗೆಯೇ ಮುಂದುವರಿಯಲಿ. ಇಡೀ ತಂಡಕ್ಕೆ ಗೌರವಪೂರ್ವಕ ಅಭಿನಂದನೆಗಳು.