ಸ್ವಚ್ಛತೆಯಿಂದ ಸಮತೋಲನದವರೆಗೆ – ಪ್ರವಾದಿ ಮುಹಮ್ಮದ್ ಅವರ ಆರೋಗ್ಯ ಸೂತ್ರಗಳು

ಲೇಖಕರು: ಅಬ್ದುಲ್ ಕಬೀರ್ ಝುಹ್ರೀ ಹಾಕತ್ತೂರ್ | ವಿಭಾಗ: ಆಧ್ಯಾತ್ಮ ಲೋಕ

ಮಾನವನಿಗೆ ಅಲ್ಲಾಹನು ನೀಡಿರುವ ಅಮೂಲ್ಯ ಅನುಗ್ರಹಗಳಲ್ಲಿ ಆರೋಗ್ಯವು ಅತ್ಯಂತ ಮಹತ್ವದ್ದಾಗಿದೆ. ಆರೋಗ್ಯವಿದ್ದಾಗ ಮಾತ್ರ ನಾವು ದೈನಂದಿನ ಕೆಲಸಗಳನ್ನು ನಿರ್ವಹಿಸಲು, ಇಬಾದತ್ ಮಾಡಲು ಮತ್ತು ಸಮಾಜಕ್ಕೆ ಉಪಯುಕ್ತರಾಗಲು ಸಾಧ್ಯ. ನಮ್ಮ ಪ್ರೀತಿಯ ಪುಣ್ಯ ಪ್ರವಾದಿ ಮುಹಮ್ಮದ್ ಅವರು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಶತಮಾನಗಳ ಹಿಂದೆಯೇ ನೀಡಿದ ಪಾಠಗಳು ಇಂದಿಗೂ ಅಷ್ಟೇ ಪ್ರಸ್ತುತ, ಅಷ್ಟೇ ಅಮೂಲ್ಯ.

ಪ್ರವಾದಿ ಮುಹಮ್ಮದ್ಅ ವರು ಸ್ವಚ್ಛತೆಗೆ ವಿಶೇಷ ಮಹತ್ವ ನೀಡಿದರು. ದೇಹ, ಬಟ್ಟೆ, ಮನೆ ಮತ್ತು ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡುವುದೇ ಆರೋಗ್ಯದ ಮೊದಲ ಮೆಟ್ಟಿಲು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟರು. ಹಲ್ಲುಗಳ ಆರೈಕೆಗೆ ಮಿಸ್ವಾಕ್ ಬಳಸುವಂತೆ ಪ್ರೋತ್ಸಾಹಿಸಿದರು; ದಿನಕ್ಕೆ ಐದು ಬಾರಿ ವುಝೂ ಮಾಡುವ ಕ್ರಮ ಒಂದು ನಿರಂತರ ಶುದ್ಧತಾ ಶಿಸ್ತಾಗಿ ರೂಪುಗೊಂಡಿತು. ಮುಖ, ಕೈ, ಕಾಲುಗಳನ್ನು ಮತ್ತೆ ಮತ್ತೆ ತೊಳೆಯುವ ಈ ಅಭ್ಯಾಸ ಇಂದಿನ ದೃಷ್ಟಿಯಿಂದ ನೋಡಿದರೆ ಸೋಂಕುಗಳಿಂದ ರಕ್ಷಣೆ ನೀಡುವ ಸಹಜ ಕವಚ.

ಆಹಾರದ ವಿಷಯದಲ್ಲಿಯೂ ಅವರು ನೀಡಿದ ಸೂತ್ರ ಸರಳ ಆದರೆ ಆಳವಾದದ್ದು, ಹಲಾಲ್ ಮತ್ತು ಶುದ್ಧವಾದ ಆಹಾರವನ್ನೇ ಸೇವಿಸಬೇಕು, ಅತಿಯಾಗಿ ತಿನ್ನಬಾರದು. ಹೊಟ್ಟೆಯನ್ನು ಮೂರು ಭಾಗ ಮಾಡಿ ಒಂದು ಭಾಗ ಆಹಾರಕ್ಕೆ, ಒಂದು ನೀರಿಗೆ, ಇನ್ನೊಂದನ್ನು ಉಸಿರಿಗಾಗಿ ಬಿಡಬೇಕೆಂಬ ಅವರ ಬೋಧನೆ ಇಂದಿನ ಜೀವನಶೈಲಿ ರೋಗಗಳಿಗೆ ನೇರ ಉತ್ತರದಂತಿದೆ. ಕುರಾನ್ ಕೂಡ “ತಿನ್ನಿರಿ, ಕುಡಿಯಿರಿ; ಆದರೆ ಅತಿಯಾಗಿ ಮಾಡಬೇಡಿ ಎಂದು ಸ್ಪಷ್ಟವಾಗಿ ಎಚ್ಚರಿಸುತ್ತದೆ. ಇಂದಿನ ವಿಜ್ಞಾನವೂ ಈ ಸತ್ಯವನ್ನೇ ದೃಢಪಡಿಸಿದೆ. ಅತಿಯಾದ ಆಹಾರ ಸೇವನೆಯೇ ಬಹುತೇಕ ಆಧುನಿಕ ಕಾಯಿಲೆಗಳ ಮೂಲ.

ದೇಹಕ್ಕೆ ಸಮರ್ಪಕ ವಿಶ್ರಾಂತಿ ನೀಡುವುದನ್ನೂ ಪ್ರವಾದಿ ಮುಹಮ್ಮದ್ ಒತ್ತಿ ಹೇಳಿದರು. ಸಮಯಕ್ಕೆ ಸರಿಯಾಗಿ ನಿದ್ರಿಸುವುದು, ಮುಂಜಾನೆ ಎದ್ದೇಳುವುದು, ದೇಹದ ಅಗತ್ಯಗಳಿಗೆ ಗೌರವ ನೀಡುವುದು,ಇವು ಆರೋಗ್ಯಕರ ಜೀವನದ ಆಧಾರಸ್ತಂಭಗಳು. ಜೊತೆಗೆ ಬಿಲ್ಲುಗಾರಿಕೆ, ಕುದುರೆ ಸವಾರಿ, ಈಜು ಮುಂತಾದ ದೈಹಿಕ ಚಟುವಟಿಕೆಗಳಿಗೂ ಇಸ್ಲಾಂ ಪ್ರೋತ್ಸಾಹ ನೀಡುತ್ತದೆ. ಶಕ್ತಿಯನ್ನು ಆಲಸ್ಯದಲ್ಲಿ ಕಳೆಯದೆ ಒಳ್ಳೆಯ ಕಾರ್ಯಗಳಲ್ಲಿ ಬಳಸಬೇಕೆಂಬುದೇ ಅವರ ಸಂದೇಶ.

ದೇಹದಷ್ಟೇ ಮನಸ್ಸಿಗೂ ಆರೈಕೆ ಬೇಕು. ಈ ಸತ್ಯವನ್ನೂ ಪ್ರವಾದಿ ಮುಹಮ್ಮದ್ ಸ್ಪಷ್ಟವಾಗಿ ಬೋಧಿಸಿದರು. ಕೋಪವನ್ನು ನಿಯಂತ್ರಿಸುವುದು, ಇತರರನ್ನು ಕ್ಷಮಿಸುವುದು, ಮೃದು ಮಾತುಗಳನ್ನಾಡುವುದು, ದುಃಖಿತರಿಗೆ ಸಾಂತ್ವನ ನೀಡುವುದು , ಇವು ಬರೀ ಸದಾಚಾರವಲ್ಲ, ಮನಸ್ಸಿನ ಔಷಧವೂ ಹೌದು. “ಬಲಿಷ್ಠನೆಂದರೆ ಬೇರೊಬ್ಬರನ್ನು ಕುಸ್ತಿಯಲ್ಲಿ ಸೋಲಿಸುವವನಲ್ಲ; ಕೋಪ ಬಂದಾಗ ತನ್ನನ್ನೇ ನಿಯಂತ್ರಿಸಿಕೊಳ್ಳುವವನು” ಎಂಬ ಅವರ ಅಮರ ವಚನ ಇಂದಿನ ಒತ್ತಡ ಭರಿತ ಜಗತ್ತಿಗೆ ಎಷ್ಟು ಪ್ರಸ್ತುತ! ಅಲ್ಲಾಹನ ಸ್ಮರಣೆ, ದಿಕ್ರ್, ನಮಾಝ್ ,ಇವು ಆಧುನಿಕ ಮಾನಸಿಕ ಒತ್ತಡಗಳಿಗೆ ಸಹಜ ಚಿಕಿತ್ಸೆಗಳಾಗಿ ಕೆಲಸ ಮಾಡುತ್ತವೆ.

ರೋಗ ಬಂದಾಗ ಚಿಕಿತ್ಸೆ ಪಡೆಯುವುದನ್ನು ಇಸ್ಲಾಂ ಎಂದೂ ನಿರಾಕರಿಸಿಲ್ಲ. “ಅಲ್ಲಾಹನು ಪ್ರತಿ ರೋಗಕ್ಕೂ ಒಂದು ಔಷಧವನ್ನು ಇಳಿಸಿದ್ದಾನೆ” ಎಂದು ಪ್ರವಾದಿ ಮುಹಮ್ಮದ್ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನೂ ಗಮನಾರ್ಹವಾದದ್ದೆಂದರೆ, ಸಾಂಕ್ರಾಮಿಕ ರೋಗ ಹರಡುತ್ತಿರುವ ಪ್ರದೇಶಕ್ಕೆ ಹೋಗಬಾರದು, ಅಲ್ಲಿಂದ ಹೊರಬರಬಾರದು ಎಂಬ ಅವರ ಮಾರ್ಗದರ್ಶನ. ಶತಮಾನಗಳ ಹಿಂದೆಯೇ ತತ್ವವನ್ನು ಅವರು ಬೋಧಿಸಿದ್ದರು ಎಂಬುದು ಅಚ್ಚರಿಯ ಸಂಗತಿ.

ಕೊನೆಯದಾಗಿ ನಾವು ನೆನಪಿಡಬೇಕಾದದ್ದು ,ಆರೋಗ್ಯ ನಮ್ಮದಲ್ಲ, ಅದು ಅಲ್ಲಾಹನ ಅಮಾನತ್. ಅದನ್ನು ದುರುಪಯೋಗಪಡಿಸದೆ, ಇಬಾದತ್, ಜ್ಞಾನಾರ್ಜನೆ, ಕುಟುಂಬದ ಸೇವೆ ಮತ್ತು ಸಮಾಜದ ಒಳಿತಿಗಾಗಿ ವಿನಿಯೋಗಿಸುವುದೇ ನಮ್ಮ ನಿಜವಾದ ಜವಾಬ್ದಾರಿ. ಪುಣ್ಯ ಪ್ರವಾದಿ ಮುಹಮ್ಮದ್ ಅವರ ಆರೋಗ್ಯ ಪಾಠಗಳು ಬರೀ ರೋಗ ತಪ್ಪಿಸುವ ಸೂತ್ರಗಳಲ್ಲ; ಸ್ವಚ್ಛತೆ, ಸಮತೋಲಿತ ಆಹಾರ, ನಿಯಮಿತ ಜೀವನ, ಮಾನಸಿಕ ಶಾಂತಿ, ದೈಹಿಕ ಚಟುವಟಿಕೆ, ಸೂಕ್ತ ಚಿಕಿತ್ಸೆ ಮತ್ತು ಅಲ್ಲಾಹನ ಮೇಲಿನ ಭರವಸೆ, ಇವೆಲ್ಲವನ್ನೂ ಒಳಗೊಂಡ ಒಂದು ಸಮಗ್ರ ಜೀವನ ಪದ್ಧತಿ ಅವರು ನಮಗೆ ಬಿಟ್ಟುಹೋಗಿದ್ದಾರೆ. ಈ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ಮನುಷ್ಯರಾಗುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ಗೌರವ.

Leave a Comment

Your email address will not be published. Required fields are marked *

Scroll to Top