ಆಗಸ್ಟ್ 19, ಇಂದು ವಿಶ್ವ ಛಾಯಾಗ್ರಾಹಕರ ದಿನ

ಕಂದಾ ದೇವಯ್ಯ, ಕೊಡಗು

ಹೌದು! ಒಂದು ಕಾಲವಿತ್ತು, ಅದು ಸಾವಿರದ ಒಂಬೈನೂರ ಎಂಬತ್ತನಾಲ್ಕರಿಂದ ತೊಂಬತ್ತರವರೆಗಿನ ಕಾಲಘಟ್ಟ. ನಾವೆಲ್ಲಾ ಗೆಳೆಯರು, ಅಂದರೆ ಚಂದ್ರಶೇಖರ್ ರೈ, ರತ್ನಕುಮಾರ್, ರಮೇಶ್, ರತ್ನಾಕರ್ ರೈ, ಸನ್ನಿ, ಜಯರಾಂ ನೆಲ್ಲಿತ್ತಾಯ, ಸೆಂದಿಲ್ ವೇಲು, ಕೆ.ಇ.ಬಿ. ಮಂಜು, ಪೂಣಚ್ಚ, ಸುಬ್ರಮಣಿ, ಯೋಗೀಶ್, ದಾದುಹೊನ್ನಪ್ಪ, ವೆಂಕಟೇಶ್ ರೈ, ಬಿ.ಎಲ್. ವಸಂತ, ನಾವೆಲ್ಲಾ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಇನ್ನಿತರ ರಜಾದಿನಗಳಲ್ಲಿ ಜಿಲ್ಲೆಯ, ರಾಜ್ಯದ ಬೇರೆ ಬೇರೆ ಕಡೆಗಳಿಗೆ ಪ್ರವಾಸ ಹೊರಡುತ್ತಿದ್ದೆವು. ಆಗ ನಮ್ಮೊಂದಿಗೆ ಫೋಟೋಗ್ರಾಫರ್ ಜಗನ್ನಿವಾಸ್, ರಾಮಕೃಷ್ಣ ಖಾಯಂ ಆಗಿ ಇರುತ್ತಿದ್ದರಲ್ಲದೆ, ಅವರೂ ಕೂಡ ನಮ್ಮ ಗೆಳೆಯರ ಸಾಲಿನಲ್ಲೇ ಇದ್ದವರಾದ್ದರಿಂದ, ನಾವು ಹೇಳಿದ ಹಾಗೆ ಅಥವಾ ಅವರ ನಿರ್ದೇಶನದಂತೆ ವಿವಿಧ ಭಂಗಿಗಳಲ್ಲಿ ಫೋಟೋ ತೆಗೆಸಿ ಸಂಭ್ರಮಿಸುತ್ತಿದ್ದೆವು. ಆ ಕಾಲದ ಸಿನಿ ಲೋಕದ ಪ್ರಖ್ಯಾತ ಛಾಯಾಗ್ರಾಹಕರಾದ ಬಾಲು ಮಹೇಂದ್ರ, ಮಧು ಅಂಬಟ್ ಅವರ ಹಾಗೆ ಫೋಟೋ ತೆಗೆಯುವಂತೆ ನಾವು ಇವರನ್ನು ತಮಾಷೆಗೆ ಎಂಬಂತೆ ಪ್ರೇರೇಪಿಸುತ್ತಿದ್ದೆವು. ಜಗನ್ನಿವಾಸನ ಸ್ಟೈಲ್ ಸ್ಟುಡಿಯೋ, ರಾಮಕೃಷ್ಣನ ಶಿಲ್ಪ ಸ್ಟುಡಿಯೋ ಯುವಜನತೆಯನ್ನು ಆಕರ್ಷಿಸುವ ಛಾಯಾಚಿತ್ರ ಕೇಂದ್ರಗಳಾಗಿದ್ದವು. ಕ್ರಮೇಣ ನವಾಜ್, ಜಾನ್ಸನ್ ರಂಥವರು ಉದಯೋನ್ಮುಖ ಛಾಯಾಗ್ರಾಹಕರಾಗಿ ಪ್ರವರ್ಧಮಾನಕ್ಕೆ ಬಂದರು. ಗೋಣಿಕೊಪ್ಪದ ಹಿರಿಯ ಛಾಯಾಗ್ರಾಹಕರಾದ ತಿರುಮಲ ಅವರ ಮಕ್ಕಳಾದ ದೀಪಕ್ ಕುಮಾರ್, ಶಿವಕುಮಾರ ರಂಥವರು ಕ್ಯಾಮರಾ ಹಿಡಿದು ತಂದೆಯ ವೃತ್ತಿಯನ್ನು ಮುಂದುವರೆಸತೊಡಗಿದರು. ಮತ್ತೊಂದು ಕಡೆ ಜಿಲ್ಲೆಯ ಹಿರಿಯ ಛಾಯಾಗ್ರಾಹಕ ಪೊನ್ನಂಪೇಟೆಯ ಶಿವಣ್ಣನವರು ಮೌನವಾಗಿ ತಮ್ಮ ಕಾಯಕವನ್ನು ಶ್ರದ್ಧೆಯಿಂದ ಮುಂದುವರೆಸುತ್ತಿದ್ದರು.

ರಜಾದಿನಗಳ ಪ್ರವಾಸದಲ್ಲಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣ, ಮೈಸೂರು, ಊಟಿ, ಕೊಡೈಕನಾಲ್, ಕೊಡಗಿನ ತಡಿಯಂಡಮೋಳ್ ಬೆಟ್ಟ, ಅಬ್ಬಿ ಜಲಪಾತ, ಇರ್ಪು, ನಾಗರಹೊಳೆ, ಕೇರಳದ ವಿವಿಧ ಕಡೆಗಳೆಲ್ಲಾ ಸುತ್ತಾಡುತ್ತಿದ್ದ ಸಮಯವದು. ಆ ಸಂದರ್ಭಗಳಲ್ಲಿ ಹಲವಾರು ಘಟನೆಗಳು, ಚೇತೋಹಾರಿ ಅನುಭವಗಳು!

ಅದು ಭಾದ್ರಪದ ಮಾಸದ ನಡುವಿನ ದಿನಗಳು. ಹೀಗಿರುವಾಗಲೇ ನಾವು ಮೂವರು ಕ್ಯಾಮರಾ ಹಿಡಿದು ಮಂಜಿನ ನಗರಿಯ ಆ ಜಲಪಾತ ನೋಡಲು ಹೋಗಿದ್ದೆವು. ಅಲ್ಲಿಂದ ಆರಂಭವಾದ ಎರಡು ವರ್ಷಗಳ ಪಯಣ, ಮುಂದೆ ಒಂದಿಡೀ ಕಾದಂಬರಿಗೆ ವಸ್ತುವಾಗಬಹುದಾದಂಥದ್ದು! ಎಲ್ಲಾ ಕೊಡಾಕ್ ಮತ್ತು ಕೋನಿಕಾ ಫಿಲ್ಮ್ ರೀಲ್‌ಗಳ ಪ್ರಭಾವ!

ನಾವೆಲ್ಲಾ ಒಂದು ಟ್ರಿಪ್ ಹೋಗಿಬಂದ ನಂತರ ಅಲ್ಲಿಯ ಫೋಟೋಗಳಿಗಾಗಿ ಕಾತರದಿಂದ ಕಾಯುತ್ತಿದ್ದೆವು, ಆದಷ್ಟು ಬೇಗನೇ ಕೊಡುವಂತೆ ಫೋಟೋಗ್ರಾಫರ್ ಮಿತ್ರರನ್ನು ಒತ್ತಾಯಿಸುತ್ತಿದ್ದೆವು. ಬಂದ ನಂತರ ಆ ಫೋಟೋಗಳನ್ನು ಕುತೂಹಲದಿಂದ ನೋಡುವುದೇ ಆ ಕಾಲದ, ಆ ಕ್ಷಣದ ರೋಮಾಂಚನ! ಆಗಿನ ಫೋಟೋಗಳನ್ನೆಲ್ಲಾ ನಾನು ಈಗಲೂ ಕಾಯ್ದಿರಿಸಿದ್ದೇನೆ.

ಅಲ್ಲಿಂದ ಇಲ್ಲಿಯವರೆಗೆ ಜೀವ ನದಿ ಕಾವೇರಿಯಲ್ಲಿ ಅದೆಷ್ಟೋ ನೀರು ಹರಿದಿದೆ, ಹೊಸ ನೀರು ಬಂದು ಹಳೆ ನೀರನ್ನು ಕೊಚ್ಚಿಕೊಂಡು ಹೋಗಿದೆ, ಬದಲಾವಣೆಯ ಹೊಸಗಾಳಿ ಬೀಸಿದೆ. ಕಾಲದ ಪಯಣದಲ್ಲಿ ತಂತ್ರಜ್ಞಾನಗಳು, ಹೊಸ ಆವಿಷ್ಕಾರಗಳು ಬಂದಿವೆ. ಈಗ ಡಿಜಿಟಲ್ ಕ್ಯಾಮೆರಾಗಳು, ಎಲ್ಲರ ಕೈಗಳಲ್ಲೂ ಜಂಗಮವಾಣಿ!

ಕಾಲ ಬದಲಾಗಿದೆ, ಮನುಷ್ಯನೂ ಬದಲಾಗಿದ್ದಾನೆ! ಅಥವಾ ಕಾಲಕ್ಕೆ ತಕ್ಕಂತೆ ಕೋಲ ಕಟ್ಟುತ್ತಿದ್ದಾನೆ! ಕಾಲ ಮತ್ತು ಕೋಲಗಳ ನಡುವೆ ಎಲ್ಲೆಲ್ಲಿಯೂ ಸಿ.ಸಿ. ಕ್ಯಾಮರಾಗಳು ಕಾವಲು ಕಾಯುತ್ತಿವೆ. ಬದಲಾವಣೆ ಜಗದ ನಿಯಮ, ಕಾಲಾಯ ತಸ್ಮೈ ನಮಃ.

ಕಂದಾ ದೇವಯ್ಯ, ಕೊಡಗು

Leave a Comment

Your email address will not be published. Required fields are marked *

Scroll to Top