ಆಗಸ್ಟ್ ಹದಿನಾಲ್ಕರ ಮಧ್ಯರಾತ್ರಿ. ಇಡೀ ದೇಶ ನಿದ್ದೆಯಲ್ಲಿ ಮುಳುಗಿತ್ತು, ಆದರೆ ದೆಹಲಿಯ ಆ ಸಂಸತ್ ಭವನದಲ್ಲಿ ಒಂದು ಹೊಸ ಸೂರ್ಯ ಹುಟ್ಟುತ್ತಿತ್ತು. ಗಡಿಯಾರದ ಮುಳ್ಳು ಹನ್ನೆರಡು ದಾಟುತ್ತಿದ್ದಂತೆ, ನೂರೈವತ್ತು ವರ್ಷಗಳ ಪರಕೀಯರ ದಾಸ್ಯದಿಂದ ಒಂದು ರಾಷ್ಟ್ರ ಮುಕ್ತವಾಯಿತು. ನಮಗೆ ಸ್ವಾತಂತ್ರ್ಯ ಬಂತು. ಆ ಒಂದು ಕ್ಷಣಕ್ಕಾಗಿ ಎಷ್ಟೋ ಜೀವಗಳು ಬಲಿದಾನವಾಗಿದ್ದವು. ಎಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ಗಲ್ಲಿಗೇರಿಸಿಕೊಂಡು ಕಣ್ಣೀರಿಟ್ಟಿದ್ದರು. ಎಷ್ಟೋ ಹೆಣ್ಣುಮಕ್ಕಳು ಗಂಡಂದಿರನ್ನು ಗುಂಡೇಟಿಗೆ ಬಲಿಕೊಟ್ಟಿದ್ದರು. ಭಗತ್ ಸಿಂಗ್, ರಾಜಗುರು, ಸುಖದೇವ್ ಇಪ್ಪತ್ತರ ಹರೆಯದಲ್ಲೇ ನೇಣಿಗೆ ಕೊರಳೊಡ್ಡಿದ್ದರು. ಮಹಾತ್ಮ ಗಾಂಧೀಜಿ ಅಹಿಂಸೆಯ ಹಾದಿಯಲ್ಲಿ ನಡೆದು ಇಡೀ ದೇಶವನ್ನೇ ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿದ್ದರು. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕುದುರೆಯ ಮೇಲೆ ಕುಳಿತೇ ಪ್ರಾಣ ಬಿಟ್ಟಿದ್ದಳು. ಸಂಗೊಳ್ಳಿ ರಾಯಣ್ಣ ಗಲ್ಲಿಗೇರುವ ಮುನ್ನ ಕೊನೆಯ ಬಾರಿ ತನ್ನ ನಾಡಿನ ಮಣ್ಣನ್ನು ಚುಂಬಿಸಿದ್ದ. ಈ ಎಲ್ಲಾ ಬಲಿದಾನಗಳ ಫಲವೇ ಆಗಸ್ಟ್ ಹದಿನೈದು.
ಇಂದು ಆ ದಿನಕ್ಕೆ ಎಪ್ಪತ್ತೊಂಬತ್ತು ವರ್ಷ. ಪ್ರತಿ ವರ್ಷದಂತೆ ಈ ವರ್ಷವೂ ಧ್ವಜಾರೋಹಣ ನಡೆಯುತ್ತದೆ, ಶಾಲಾ ಮಕ್ಕಳು ಸಿಹಿ ತಿನ್ನುತ್ತಾರೆ, ದೇಶಭಕ್ತಿ ಗೀತೆಗಳು ಮೊಳಗುತ್ತವೆ, ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತದೆ. ಆದರೆ ಈ ಬಾರಿ ಧ್ವಜ ಹಾರಿಸುವ ಮೊದಲು ನಾನು ಒಂದು ಕ್ಷಣ ನಿಂತು ಎದೆಗೆ ಕೈಯಿಟ್ಟು ಕೇಳಿಕೊಂಡೆ. ಇಂದು ತಿರುಗಿ ನೋಡಿದಾಗ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆಯೇ ಎಂದು ನೋಡಿದರೆ ಉತ್ತರ ಮಾತ್ರ ಶೂನ್ಯ!
ಸ್ವಾತಂತ್ರ್ಯ ಎಂದರೆ ಬರೀ ಒಂದು ಧ್ವಜ ಹಾರಿಸುವುದಲ್ಲ. ಸ್ವಾತಂತ್ರ್ಯ ಎಂದರೆ ಒಬ್ಬ ರೈತ ತಾನು ಬೆಳೆದ ಬೆಳೆಗೆ ತಾನೇ ಬೆಲೆ ನಿಗದಿ ಮಾಡುವ ಹಕ್ಕು. ಆದರೆ ಇಂದಿಗೂ ಆ ರೈತ ದಲ್ಲಾಳಿಗಳ ಕೈಯಲ್ಲಿ ಬಂಧಿ. ಮಳೆ ಬಾರದಿದ್ದರೆ ಸಾಲ, ಮಳೆ ಜಾಸ್ತಿಯಾದರೂ ಸಾಲ. ಪ್ರತಿ ವರ್ಷ ಸಾವಿರಾರು ರೈತರು ಸಾಲದ ಸುಳಿಯಿಂದ ತಪ್ಪಿಸಿಕೊಳ್ಳಲಾಗದೆ ನೇಣಿಗೆ ಶರಣಾಗುತ್ತಾರೆ. ಅನ್ನ ಬೆಳೆಯುವವನೇ ಸ್ವತಂತ್ರನಲ್ಲದಿದ್ದರೆ, ಆ ಸ್ವಾತಂತ್ರ್ಯ ಯಾರಿಗಾಗಿ?
ಸ್ವಾತಂತ್ರ್ಯ ಎಂದರೆ ಹಸಿವಿನಿಂದ ಮುಕ್ತಿ ಕೂಡ. ಆದರೆ ಜಾಗತಿಕ ಹಸಿವು ಸೂಚ್ಯಂಕದಲ್ಲಿ ನೂರಿಪ್ಪತ್ತೇಳು ದೇಶಗಳ ಪೈಕಿ ನಮ್ಮ ದೇಶ ನೂರೆರಡನೇ ಸ್ಥಾನದಲ್ಲಿದೆ. ಸ್ವತಂತ್ರ ಭಾರತದ ಎಷ್ಟೋ ಮಕ್ಕಳು ಇಂದಿಗೂ ಹಸಿದ ಹೊಟ್ಟೆಯಲ್ಲೇ ಮಲಗುತ್ತಾರೆ. ಸ್ವಾತಂತ್ರ್ಯ ಎಂದರೆ ಭ್ರಷ್ಟಾಚಾರದಿಂದ ಮುಕ್ತಿ ಕೂಡ. ಆದರೆ ಭ್ರಷ್ಟಾಚಾರ ಸೂಚ್ಯಂಕದಲ್ಲಿ ನಮ್ಮ ದೇಶ ನೂರಎಂಬತ್ತು ದೇಶಗಳ ಪೈಕಿ ತೊಂಬತ್ತೊಂದನೇ ಸ್ಥಾನದಲ್ಲಿದೆ. ಒಂದು ಸಣ್ಣ ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಇಂದಿಗೂ ಜನಸಾಮಾನ್ಯ ಲಂಚ ಕೊಡಬೇಕಾದ ಅನಿವಾರ್ಯತೆ. ನಮ್ಮನ್ನಾಳಿದ ಬ್ರಿಟಿಷರ ಜಾಗದಲ್ಲಿ ಈಗ ನಮ್ಮದೇ ಜನರ ಭ್ರಷ್ಟ ಕೈಗಳು ನಮ್ಮನ್ನು ಸುಲಿಗೆ ಮಾಡುತ್ತಿವೆ ಎಂದರೆ ಇದನ್ನು ಸ್ವಾತಂತ್ರ್ಯ ಎಂದು ಕರೆಯುವುದೇ?
ಸ್ವಾತಂತ್ರ್ಯ ಎಂದರೆ ನಿರ್ಭಯವಾಗಿ ಮಾತನಾಡುವ ಹಕ್ಕು. ಆದರೆ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ನಮ್ಮ ದೇಶದ ಅಂಕ 2015ರಲ್ಲಿ ಇದ್ದ ಐವತ್ತೊಂಬತ್ತರಿಂದ ಇಂದು ಮೂವತ್ತೆರಡಕ್ಕೆ ಕುಸಿದಿದೆ. ಸತ್ಯ ಹೇಳುವ ಪತ್ರಕರ್ತನ ಧ್ವನಿಯನ್ನೇ ಅದುಮಿ ಹಾಕುವ ಪ್ರಯತ್ನಗಳು ಹೆಚ್ಚುತ್ತಿವೆ. ಸ್ವಾತಂತ್ರ್ಯ ಎಂದರೆ ಸಂತೋಷದಿಂದ ಬದುಕುವ ಹಕ್ಕು ಕೂಡ. ಆದರೆ ವಿಶ್ವ ಸಂತೋಷ ವರದಿಯಲ್ಲಿ ನಾವು ನೂರಹದಿನೆಂಟನೇ ಸ್ಥಾನದಲ್ಲಿದ್ದೇವೆ. ಆರ್ಥಿಕವಾಗಿ ಬೆಳೆಯುತ್ತಿರುವ ದೇಶ ಎಂದು ಜಗತ್ತಿನ ಮುಂದೆ ಎದೆ ತಟ್ಟಿಕೊಳ್ಳುತ್ತೇವೆ, ಆದರೆ ಆ ದೇಶದ ಜನರ ಮನಸ್ಸಿನಲ್ಲಿ ಸಂತೋಷವೇ ಇಲ್ಲ ಎಂದರೆ ಆ ಬೆಳವಣಿಗೆಗೆ ಏನು ಅರ್ಥ?
ಇವೆಲ್ಲಾ ಬರೀ ಅಂಕಿಅಂಶಗಳಲ್ಲ. ಇವು ನಮ್ಮ ಸುತ್ತಲಿನ ನಿಜ ಜೀವನದ ಕಥೆಗಳು. ಒಬ್ಬ ರೈತ ತನ್ನ ಬೆಳೆಗೆ ಸರಿಯಾದ ಬೆಲೆ ಸಿಗದೆ ಪರದಾಡುತ್ತಿದ್ದಾನೆ, ಒಬ್ಬ ಗರ್ಭಿಣಿ ಹೆಣ್ಣುಮಗಳು ಹೆರಿಗೆ ನೋವಿನಲ್ಲಿ ಆಸ್ಪತ್ರೆ ತಲುಪಲಾಗದೆ ದಾರಿಯಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾಳೆ, ಒಬ್ಬ ಪದವೀಧರ ಯುವಕ ಎಷ್ಟೋ ವರ್ಷಗಳಿಂದ ಕೆಲಸ ಹುಡುಕುತ್ತಾ ಅಲೆಯುತ್ತಿದ್ದಾನೆ, ಇದು ನಿಜವಾದ ಸ್ವಾತಂತ್ರ್ಯವೇ? ಹೆಣ್ಣುಮಕ್ಕಳು ರಾತ್ರಿ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡೆಯಲು ಹೆದರುವ ದೇಶದಲ್ಲಿ, ನಮಗೆ ಮೂಡಿ ಬರುವ ಪ್ರಶ್ನೆ ಇದು, ಸ್ವಾತಂತ್ರ್ಯವೇ?? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದಂತೆ ಎದೆ ಭಾರವಾಗುತ್ತದೆ.
ಆಗಸ್ಟ್ ಹದಿನಾಲ್ಕರ ಆ ಮಧ್ಯರಾತ್ರಿ ನಮಗೆ ಸಿಕ್ಕಿದ್ದು ಬರೀ ರಾಜಕೀಯ ಸ್ವಾತಂತ್ರ್ಯ. ಬ್ರಿಟಿಷರ ಆಡಳಿತದಿಂದ ಮುಕ್ತಿ. ಆದರೆ ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ, ಹಸಿವಿನಿಂದ ಮುಕ್ತಿ, ಭಯದಿಂದ ಮುಕ್ತಿ, ಭ್ರಷ್ಟಾಚಾರದಿಂದ ಮುಕ್ತಿ, ಇವೆಲ್ಲದರ ಹೋರಾಟ ಇನ್ನೂ ಮುಗಿದಿಲ್ಲ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕೇವಲ ಒಂದು ಧ್ವಜಕ್ಕಾಗಿ ಪ್ರಾಣ ಕೊಡಲಿಲ್ಲ. ಅವರು ಕನಸು ಕಂಡಿದ್ದು ಒಂದು ಎಲ್ಲರೂ ಸಮಾನರಾಗಿ, ಗೌರವದಿಂದ, ಹಸಿವಿಲ್ಲದೆ, ಭಯವಿಲ್ಲದೆ ಬದುಕುವ ದೇಶವನ್ನು. ಆ ಕನಸು ಇನ್ನೂ ಪೂರ್ಣವಾಗಿಲ್ಲ.
ಆದರೂ ನಾನು ನಿರಾಶನಲ್ಲ. ಏಕೆಂದರೆ ಈ ಪ್ರಶ್ನೆಗಳನ್ನು ಕೇಳುವ ಧೈರ್ಯವೇ ಸ್ವಾತಂತ್ರ್ಯದ ಮೊದಲ ಫಲ. ಗುಲಾಮಗಿರಿಯಲ್ಲಿ ಈ ಪ್ರಶ್ನೆ ಕೇಳಲೂ ಸಾಧ್ಯವಿರಲಿಲ್ಲ. ಇಂದು ನಾನು ಇದನ್ನು ಬರೆಯುತ್ತಿದ್ದೇನೆ ಎಂದರೆ, ನನ್ನ ಧ್ವನಿಯನ್ನು ಯಾರೂ ಅದುಮಿಡುತ್ತಿಲ್ಲ ಎಂದರೆ, ಅದೂ ಒಂದು ಸ್ವಾತಂತ್ರ್ಯವೇ. ಆ ಬಲಿದಾನಿಗಳ ಕನಸನ್ನು ಪೂರ್ಣಗೊಳಿಸುವ ಜವಾಬ್ದಾರಿ ಈಗ ನಮ್ಮ ಮೇಲಿದೆ. ಪ್ರತಿ ರೈತನಿಗೆ ನ್ಯಾಯಯುತ ಬೆಲೆ ಸಿಗುವಂತೆ, ಪ್ರತಿ ಮಗುವಿಗೆ ಹೊಟ್ಟೆ ತುಂಬುವಂತೆ, ಪ್ರತಿ ಹೆಣ್ಣುಮಗಳಿಗೆ ನಿರ್ಭಯ ಬದುಕು ಸಿಗುವಂತೆ, ಪ್ರತಿ ಪ್ರಜೆಗೆ ಭ್ರಷ್ಟಾಚಾರವಿಲ್ಲದ ಆಡಳಿತ ಸಿಗುವಂತೆ ಮಾಡುವುದೇ ನಿಜವಾದ ಸ್ವಾತಂತ್ರ್ಯ ದಿನಾಚರಣೆ.
ಈ ಬಾರಿ ಧ್ವಜ ಹಾರಿಸುವಾಗ ಬರೀ ಸಂಭ್ರಮಿಸುವುದು ಬೇಡ. ಆ ಬಲಿದಾನಿಗಳ ಎದುರು ನಿಂತು ಒಂದು ಪ್ರಮಾಣ ಮಾಡೋಣ. ರಾಜಕೀಯ ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೊಂಬತ್ತು ವರ್ಷವಾಯಿತು, ಇನ್ನಾದರೂ ಆ ಪೂರ್ಣ ಸ್ವಾತಂತ್ರ್ಯದ ಕನಸನ್ನು ನನಸು ಮಾಡುವ ಪ್ರಯತ್ನ ಶುರುವಾಗಲಿ. ಗಾಂಧೀಜಿ ಕಂಡ ರಾಮ ರಾಜ್ಯ ನನಸಾಗಲಿ. ಪೋಲಾಗುತ್ತಿರುವ ಯುವ ಶಕ್ತಿಯ ಸಮ್ಯೋಚಿತ ಬಳಕೆಯಾಗಲಿ. ಜೈ ಹಿಂದ್.
ಸಂತೋಷ್‌ಕುಮಾರ್ ತಂಗವೇಲು
